ಬುಧವಾರ, ಸೆಪ್ಟೆಂಬರ್ 29, 2021
19 °C
ವಾರ್ಡ್‌ಗಳ ಮರುವಿಂಗಡಣೆಯಾಗಿ ಎರಡೂವರೆ ತಿಂಗಳಲ್ಲೇ ವಾರ್ಡ್‌ಗಳ ಸಂಖ್ಯೆ 225ಕ್ಕೆ ಹೆಚ್ಚಿಸಲು ಸಿದ್ಧತೆ

ವಾರ್ಡ್‌ ಹೆಚ್ಚಳದ ಹಿಂದೆ ಬಿಬಿಎಂಪಿ ಚುನಾವಣೆ ಮುಂದೂಡುವ ತಂತ್ರ?

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: 2011ರ ಜನಗಣತಿ ಆಧಾರದಲ್ಲಿ ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಯ ಅಂತಿಮ ಅಧಿಸೂಚನೆ ಪ್ರಕಟವಾದ ಎರಡೂವರೆ ತಿಂಗಳಲ್ಲೇ ವಾರ್ಡ್‌ಗಳ ಸಂಖ್ಯೆಯನ್ನು 198ರಿಂದ 225ಕ್ಕೆ ಹೆಚ್ಚಿಸಲು ಸಚಿವ ಸಂಪುಟ ಸಭೆಯು ತೀರ್ಮಾನಿಸಿದೆ. ಮರುವಿಂಗಡಣೆಗೊಂಡ ವಾರ್ಡ್‌ಗಳ ಮತದಾರರ ಪಟ್ಟಿ ಪರಿಷ್ಕರಣೆ ನಡೆಯುತ್ತಿರುವ ನಡುವೆಯೇ ಸಂಪುಟ ಈ ತೀರ್ಮಾನ ಕೈಗೊಂಡಿದೆ. ಇದು ಚುನಾವಣೆ ಮುಂದೂಡುವ ತಂತ್ರ ಎಂಬ ಟೀಕೆ ವ್ಯಕ್ತವಾಗಿದೆ.

ಸ್ಥಳೀಯ ಸಂಸ್ಥೆಗಳನ್ನು ಬಲಪಡಿಸುವ ಉದ್ದೇಶದಿಂದಲೇ ಸಂವಿಧಾನಕ್ಕೆ 74ನೇ ತಿದ್ದುಪಡಿ ತರಲಾಗಿದೆ. ಸ್ಥಳೀಯ ಸಂಸ್ಥೆಗಳ ಚುನಾಯಿತ ಕೌನ್ಸಿಲ್‌ ಅವಧಿ ಪೂರ್ಣಗೊಳ್ಳುವ ಮೊದಲೇ ಅವುಗಳಿಗೆ ಚುನಾವಣೆ ನಡೆಸಬೇಕು. ತಳಹಂತದಲ್ಲೂ ಪ್ರಜಾಪ್ರಭುತ್ವದ ವ್ಯವಸ್ಥೆಯಲ್ಲಿ ನಿರಂತರತೆಯನ್ನು ಕಾಪಾಡಬೇಕು ಎಂದು ಈ ತಿದ್ದುಪಡಿಯಲ್ಲಿ ಸ್ಪಷ್ಟಪಡಿಸಲಾಗಿದೆ. ಆದರೆ, ಸರ್ಕಾರಗಳಿಗೆ ಇದು ಬೇಕಿಲ್ಲ. ಚುನಾವಣೆ ಮುಂದೂಡಲು ಏನಾದರೂ ಕಾರಣ ಹುಡುಕುವ ಚಾಳಿ ಹಿಂದಿನಿಂದಲೂ ನಡೆದುಕೊಂಡು ಬಂದಿದೆ ಎಂದು ನಗರ ಯೋಜನಾ ತಜ್ಞರು ಟೀಕಿಸಿದ್ದಾರೆ.

2008ರಲ್ಲೂ ಬಿಜೆಪಿ ಸರ್ಕಾರದ ಆಡಳಿತವಿದ್ದಾಗ ಎರಡು ವರ್ಷಗಳ ಕಾಲ ಬಿಬಿಎಂಪಿಗೆ ಚುನಾವಣೆ ನಡೆದಿರಲಿಲ್ಲ. ಬಳಿಕ ಹೈಕೋರ್ಟ್‌ ಮಧ್ಯಪ್ರವೇಶದ ಬಳಿಕ 2010ರಲ್ಲಿ ಚುನಾವಣೆ ನಡೆಸಲಾಯಿತು. 2015ರಲ್ಲೂ ಕೌನ್ಸಿಲ್ ಅವಧಿ ಮುಗಿಯುವ ಮುನ್ನ ಚುನಾವಣೆ ನಡೆಯಲಿಲ್ಲ. ಆಗಲೂ ಐದು ತಿಂಗಳು ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು.

‘ಶಾಸಕರಿಗೆ ಹಾಗೂ ಸರ್ಕಾರಕ್ಕೆ ಬಿಬಿಎಂಪಿ ಚುನಾವಣೆ ಸಮಯಕ್ಕೆ ಸರಿಯಾಗಿ ನಡೆಯುವುದು ಬೇಕಿಲ್ಲ. ಬಿಬಿಎಂಪಿ ಸದಸ್ಯರು ಇಲ್ಲದಿದ್ದರೆ, ಅಧಿಕಾರ ಅವರ ಬಳಿಯೇ ಕೇಂದ್ರೀಕೃತವಾಗಿರುತ್ತದೆ. ವಾರ್ಡ್‌ಗಳಿಗೆ ಸಂಬಂಧಿಸಿದ ಎಲ್ಲ ತೀರ್ಮಾನಗಳನ್ನು ಶಾಸಕರೇ ತೆಗೆದುಕೊಳ್ಳುತ್ತಾರೆ. ಆಡಳಿತಾಧಿಕಾರಿಗೆ ಒತ್ತಡ ಹೇರಿ ತಮಗೆ ಬೇಕಾದ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಾರೆ. ಈ ಕಾರಣಕ್ಕಾಗಿಯೇ ಚುನಾವಣೆ ತಡೆಯಲು ಏನಾದರೂ ಕುಂಟು ನೆಪ ಸೃಷ್ಟಿಸುತ್ತಾರೆ’ ಎಂದು ಬಿಬಿಎಂಪಿಯ ಹಿರಿಯ ಸದಸ್ಯರೊಬ್ಬರು ದೂರಿದರು. ಚುನಾವಣೆಯನ್ನು ಕನಿಷ್ಠ ಒಂದರಿಂದ ಎರಡು ವರ್ಷ ಮುಂದೂಡಲು ಸರ್ಕಾರ ಹುನ್ನಾರ ನಡೆಸಿದೆ ಎಂದೂ ಕಿಡಿಕಾರಿದರು.

ತುರ್ತೇನಿತ್ತು?

2020ರ ಮಾರ್ಚ್‌ನಲ್ಲಿ ನಡೆದ ವಿಧಾನಮಂಡಲದ ಅಧಿವೇಶನದಲ್ಲಿ ‘ಬಿಬಿಎಂಪಿ ಮಸೂದೆ 2020’ ಮಸೂದೆಯನ್ನು ಸರ್ಕಾರ ಮಂಡಿಸಿತ್ತು. ಇದಕ್ಕೆ ಪಕ್ಷಾತೀತವಾಗಿ ವಿರೋಧ ವ್ಯಕ್ತವಾಗಿದ್ದರಿಂದ ಮಸೂದೆಯ ಪರಾಮರ್ಶೆಗಾಗಿ ಶಾಸಕ ಎಸ್‌.ರಘು ಅಧ್ಯಕ್ಷತೆಯಲ್ಲಿ ಜಂಟಿ ಸಲಹಾ ಸದನ ಸಮಿತಿಯನ್ನು ಆಗಸ್ಟ್‌ನಲ್ಲಿ ರಚಿಸಲಾಗಿದೆ. ಈ ಸಮಿತಿ ಇನ್ನೂ ವರದಿ ನೀಡಿಲ್ಲ. ಅಷ್ಟರಲ್ಲೇ ಸಂಪುಟ ಸಭೆಯಲ್ಲಿ ವಾರ್ಡ್‌ಗಳ ಸಂಖ್ಯೆಯನ್ನು ತರಾತುರಿಯಲ್ಲಿ 225ಕ್ಕೆ ಹೆಚ್ಚಿಸುವ ತುರ್ತು ಅಗತ್ಯವೇನಿತ್ತು ಎಂದು ಪ್ರಶ್ನಿಸುತ್ತಿದ್ದಾರೆ ನಾಗರಿಕ ಸಂಘಟನೆಗಳ ಪ್ರಮುಖರು.

ಸರ್ಕಾರವು ಬಿಬಿಎಂಪಿ ವಾರ್ಡ್‌ಗಳ ಮರುವಿಂಗಡಣೆಗೆ ಮಾ.2ರಂದು ಕರಡು ಅಧಿಸೂಚನೆ ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಹಾಗೂ ಆಕ್ಷೇಪಣೆಗಳನ್ನು ಆಹ್ವಾನಿಸಿತ್ತು. ಬಳಿಕ ಜೂನ್‌ 23ರಂದು ಅಂತಿಮ ಅಧಿಸೂಚನೆ ಪ್ರಕಟಿಸಿತ್ತು. ಸೆಪ್ಟೆಂಬರ್‌ 10ಕ್ಕೆ ಈಗಿನ ಬಿಬಿಎಂಪಿ ಕೌನ್ಸಿಲ್‌ ಅವಧಿ ಮುಕ್ತಾಯವಾಗಲಿದೆ. ಚುನಾವಣೆ ನಡೆಸಲು ಮರುವಿಂಗಡಣೆಗೊಂಡ ವಾರ್ಡ್‌ಗಳ ಮತದಾರರ ಪಟ್ಟಿಯನ್ನು ಸಿದ್ಧಪಡಿಸುವಂತೆ ರಾಜ್ಯ ಚುನಾವಣಾ ಆಯೋಗವು ಬಿಬಿಎಂಪಿಗೆ ಸೂಚನೆ ನೀಡಿತ್ತು. ಬಿಬಿಎಂಪಿಯು ಮತದಾರರ ಪಟ್ಟಿ ಪರಿಷ್ಕರಣೆಯನ್ನು ಈಗಾಗಲೇ ಆರಂಭಿಸಿದೆ. ಬಿಬಿಎಂಪಿ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಮತದಾರರ ಪಟ್ಟಿಯನ್ನು ಅಂತಿಮಗೊಳಿಸುವ ಪ್ರಕ್ರಿಯೆಯಲ್ಲಿ ತೊಡಗಿದ್ದಾರೆ.

‘ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಹೆಚ್ಚಿಸುವ ತುರ್ತು ಅಗತ್ಯ ಇರುತ್ತಿದ್ದರೆ ಈ ಕಾರ್ಯವನ್ನು ಮೊದಲೇ ಮಾಡಬಹುದಿತ್ತು. ವಾರ್ಡ್‌ಗಳ ಮರುವಿಂಗಡಣೆಯ ಕಸರತ್ತು ನಡೆಸುವ ಅಗತ್ಯವೇ ಇರಲಿಲ್ಲ. ಬಿಬಿಎಂಪಿ ಚುನಾಯಿತ ಕೌನ್ಸಿಲ್‌ ಅವಧಿ ಮುಕ್ತಾಯಕ್ಕೆ ಇನ್ನೇನು ವಾರ ಬಾಕಿ ಉಳಿದಿದೆ ಎನ್ನುವಾಗ ಈ ತೀರ್ಮಾನಕ್ಕೆ ಮುಂದಾಗಿರುವುದರ ಉದ್ದೇಶ ಚುನಾವಣೆ ಮುಂದೂಡುವುದೇ ಆಗಿದೆ’ ಎಂದು ಸಿಟಿಜನ್ಸ್‌ ಆ್ಯಕ್ಷನ್‌ ಫೋರಂನ ಎನ್‌.ಎಸ್‌.ಮುಕುಂದ್‌ ಅಭಿಪ್ರಾಯಪಟ್ಟರು.

ಕೆಎಂಸಿ ಕಾಯ್ದೆಯ ಪ್ರಕಾರ ರಾಜ್ಯದ ಯಾವುದೇ ಮಹಾನಗರ ಪಾಲಿಕೆಗಳ ಸದಸ್ಯರ ಗರಿಷ್ಠ ಸಂಖ್ಯೆ 200 ಮೀರುವಂತಿಲ್ಲ. ಸದ್ಯದ ಪರಿಸ್ಥಿತಿಯಲ್ಲಂತೂ ಕೆಎಂಸಿ ಕಾಯ್ದೆ ತಿದ್ದುಪಡಿಯಾಗದೇ ಪಾಲಿಕೆಯ ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಹೆಚ್ಚಿಸಲು ಅವಕಾಶವಿಲ್ಲ.

 ‘ಚುನಾವಣಾ ಆಯೋಗದ ಸಲಹೆ ಪಡೆದು ತೀರ್ಮಾನ’

‘ಸರ್ಕಾರ ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸುವ ಬಗ್ಗೆ ತೀರ್ಮಾನ ಕೈಗೊಂಡಿರುವ ಬಗ್ಗೆ ಅಧಿಕೃತವಾಗಿ ಮಾಹಿತಿ ಬಂದಿಲ್ಲ. ಒಂದು ವೇಳೆ ಸರ್ಕಾರದಿಂದ ಈ ಕುರಿತ ಆದೇಶ ಬಂದರೆ, ವಾರ್ಡ್‌ವಾರು ಮತದಾರರ ಪಟ್ಟಿ ಪರಿಷ್ಕರಿಸಬೇಕೇ ಬೇಡವೇ ಎಂಬ ಬಗ್ಗೆ ರಾಜ್ಯ ಚುನಾವಣಾ ಆಯೋಗದ ಸಲಹೆ ಪಡೆದು ತೀರ್ಮಾನ ಕೈಗೊಳ್ಳುತ್ತೇವೆ’ ಎಂದು ಬಿಬಿಎಂಪಿ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ‘ಪ್ರಜಾವಾಣಿ’ಗೆ ತಿಳಿಸಿದರು.

 ‘ಜಂಟಿ ಸಲಹಾ ಸಮಿತಿ ವರದಿ ಸಿದ್ಧವಾಗಿಲ್ಲ’

ಪಾಲಿಕೆಯ ವ್ಯಾಪ್ತಿಯನ್ನು ಈಗಿನಷ್ಟೇ ಉಳಿಸಿಕೊಂಡು ವಾರ್ಡ್‌ಗಳ ಸಂಖ್ಯೆಯನ್ನು 225ಕ್ಕೆ ಹೆಚ್ಚಿಸುವ ಅಂಶ ಬಿಬಿಎಂಪಿ ಮಸೂದೆಯಲ್ಲೂ ಇದೆ. ವಾರ್ಡ್‌ಗಳ ಸಂಖ್ಯೆ ಹೆಚ್ಚಾದಷ್ಟೂ ಅಧಿಕಾರ ವಿಕೇಂದ್ರೀಕರಣವಾಗಲಿದೆ. ಮೇಯರ್‌, ಉಪಮೇಯರ್‌ ಹಾಗೂ ಪಾಲಿಕೆ ಸದಸ್ಯರಿಗೆ ಹೆಚ್ಚಿನ ಅಧಿಕಾರ ನೀಡುವ, ವಾರ್ಡ್‌ ಸಮಿತಿ, ವಲಯ ಸಮಿತಿಗಳನ್ನು ಬಲಪಡಿಸುವ ಮೂಲಕ ಬೆಂಗಳೂರಿನ ಸಮಗ್ರ ಅಭಿವೃದ್ಧಿಗೆ ಒತ್ತುಕೊಡುವ ನಿಟ್ಟಿನಲ್ಲಿ ಸಮಿತಿ ಚರ್ಚಿಸುತ್ತಿದೆ. ಸಮಿತಿಯ ವರದಿ ಇನ್ನೂ ಸಿದ್ಧವಾಗಿಲ್ಲ. ಸಮಿತಿ ಶುಕ್ರವಾರ ಸಭೆ ಸೇರಲಿದೆ.

– ಎಸ್‌.ರಘು, ಬಿಬಿಎಂಪಿ ಮಸೂದೆ 2020 ಜಂಟಿ ಸಲಹಾ ಸಮಿತಿ ಅಧ್ಯಕ್ಷ

 

ತಜ್ಞರು ಏನನ್ನುತ್ತಾರೆ?

‘ಸಂಖ್ಯೆ ಹೆಚ್ಚಿಸಿದರೆ ಸಾಲದು ಸಶಕ್ತಗೊಳಿಸಬೇಕು’

ಬಿಬಿಎಂಪಿ ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸಿದರೆ ಸಾಲದು. ಇದರಿಂದ ಒಂದಷ್ಟು ರಾಜಕೀಯ ನಿರುದ್ಯೋಗಿಗಳಿಗೆ ಪುನರ್ವಸತಿ ಸಿಗಬಹುದು ಅಷ್ಟೇ. ಹೆಚ್ಚಿನ ಅಧಿಕಾರ ಹಾಗೂ ಹೆಚ್ಚು ಆರ್ಥಿಕ ಬೆಂಬಲ ಒದಗಿಸುವ ಮೂಲಕ ಬಿಬಿಎಂಪಿಯನ್ನು ಸಶಕ್ತಗೊಳಿಸುವ ಕೆಲಸ ಮೊದಲು ಆಗಬೇಕಿದೆ. ಈ ತೀರ್ಮಾನ ಬಿಬಿಎಂಪಿ ಚುನಾವಣೆ ಮುಂದೂಡುವ ತಂತ್ರ.

– ಶ್ರೀನಿವಾಸ ಅಲವಿಲ್ಲಿ, ಸಿಟಿಜನ್ಸ್‌ ಫಾರ್‌ ಬೆಂಗಳೂರು

 

‘ಜನಪರ ಕಾಳಜಿ ಕಾಣಿಸುತ್ತಿಲ್ಲ’

ಸರ್ಕಾರ ವಾರ್ಡ್‌ಗಳ ಸಂಖ್ಯೆ ಹೆಚ್ಚಿಸಲು ಮುಂದಾಗಿರುವುದು ಜನರ ಮೇಲಿನ ಕಾಳಜಿಯಿಂದಲ್ಲ. ಇದರ ಹಿಂದೆ ರಾಜಕೀಯ ಹಿತಾಸಕ್ತಿ ಮಾತ್ರ ತೋರುತ್ತಿದೆ. ವಾರ್ಡ್‌ಗಳ ಸಂಖ್ಯೆಯನ್ನು ಹೆಚ್ಚಿಸುವ ನಿಜವಾದ ಕಾಳಜಿ ಇದ್ದಿದ್ದರೆ ಸರ್ಕಾರ ಈ ಬಗ್ಗೆ ಸಮಗ್ರ ವರದಿಯನ್ನು ಜನರ ಮುಂದಿಟ್ಟು ಅವರ ಅಭಿಪ್ರಾಯ ಪಡೆದು ತೀರ್ಮಾನ ಕೈಗೊಳ್ಳಬೇಕು. ಮುಕ್ತ ಸಂವಾದಕ್ಕೆ ಅವಕಾಶ ಕಲ್ಪಿಸಬೇಕು

– ಎನ್‌.ಎಸ್‌.ಮುಕುಂದ್‌, ಸಿಟಿಜನ್ಸ್‌ ಆ್ಯಕ್ಷನ್ ಫೋರಮ್‌

 

 ‘ಈ ತೀರ್ಮಾನ ಈಗೇಕೆ’

‘ಸರ್ಕಾರ ಬಿಬಿಎಂಪಿ ಮಸೂದೆ 2020 ಅನ್ನು ಜಂಟಿ ಸಲಹಾ ಸಮಿತಿಯ ಪರಿಶೀಲನೆಗೆ ಒಪ್ಪಿಸಿದೆ. ಅವರು ಸಂಬಂಧಪಟ್ಟವರಿಂದ ಸಲಹೆಗಳನ್ನು ಪಡೆದು ವರದಿ ನೀಡಬೇಕು. ವಾರ್ಡ್‌ಗಳ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸಿ ಎಂಬ ಸಲಹೆಯೂ ವ್ಯಕ್ತವಾಗಬಹುದು. ಅದರ ಕರಡನ್ನು ಪ್ರಕಟಿಸಿ ಸಾರ್ವಜನಿಕರಿಂದ ಸಲಹೆ ಮತ್ತು ಆಕ್ಷೇಪಣೆಗಳನ್ನು ಪಡೆಯಬೇಕಾಗುತ್ತದೆ. ಈ ಎಲ್ಲ ಪ್ರಕ್ರಿಯೆಗಳಿಗೆ ಕನಿಷ್ಠ ಆರು ತಿಂಗಳುಗಳ ಕಾಲಾವಕಾಶ ಬೇಕೇಬೇಕು. ಈ ನಡುವೆ ಸಂಪುಟ ಈ ರೀತಿ ತೀರ್ಮಾನ ಕೈಗೊಂಡಿದ್ದೇಕೆ ಎಂಬುದು ಅರ್ಥವಾಗುತ್ತಿಲ್ಲ.

– ವಿ.ರವಿಚಂದರ್‌, ನಗರ ಯೋಜನಾ ತಜ್ಞ 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು