ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಡಿಎ: ನೂರಾರು ಕೋಟಿ ಅಕ್ರಮ ಪತ್ತೆ

ಎಸಿಬಿಯ 75 ಸಿಬ್ಬಂದಿ ಇದ್ದ ತಂಡದ ದಾಳಿ, ನೂರಾರು ಕಡತಗಳ ವಶ
Last Updated 19 ನವೆಂಬರ್ 2021, 22:38 IST
ಅಕ್ಷರ ಗಾತ್ರ

ಬೆಂಗಳೂರು: ನಿವೇಶನ ಹಂಚಿಕೆ, ಭೂಸ್ವಾಧೀನ ಮತ್ತು ಜಮೀನು ಮಾಲೀಕರಿಗೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ ನಡೆಯುತ್ತಿರುವ ದೂರುಗಳನ್ನು ಆಧರಿಸಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರದ (ಬಿಡಿಎ) ಕೇಂದ್ರ ಕಚೇರಿ ಮೇಲೆ ಶುಕ್ರವಾರ ಸಂಜೆ ದಿಢೀರ್‌ ದಾಳಿಮಾಡಿ, ಶೋಧ ನಡೆಸಿದ ಭ್ರಷ್ಟಾಚಾರ ನಿಗ್ರಹ ದಳ(ಎಸಿಬಿ), ನೂರಾರು ಕೋಟಿ ರೂಪಾಯಿ ಮೌಲ್ಯದ ಅಕ್ರಮಗಳನ್ನು ಪತ್ತೆಮಾಡಿದೆ.

ಎಸಿಬಿ ಬೆಂಗಳೂರು ನಗರ ಘಟಕದ ಕಚೇರಿಯಲ್ಲಿ ಬಿಡಿಎ ಅಧಿಕಾರಿಗಳ ವಿರುದ್ಧ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು ಕಾರ್ಯಾಚರಣೆ ನಡೆಸಲಾಗಿದೆ. ಬಿಡಿಎ ಕೇಂದ್ರ ಕಚೇರಿಯಲ್ಲಿರುವ ನಾಲ್ವರು ಉಪ ಕಾರ್ಯದರ್ಶಿಗಳು, ಭೂಸ್ವಾಧೀನ ವಿಭಾಗದ ಐವರು ಹಿರಿಯ ಅಧಿಕಾರಿಗಳು ಸೇರಿದಂತೆ 30ಕ್ಕೂ ಹೆಚ್ಚು ಕಚೇರಿಗಳಲ್ಲಿ ಏಕಕಾಲಕ್ಕೆ ಶೋಧ ನಡೆಸಲಾಗಿದೆ. ನಿವೇಶನ ಹಂಚಿಕೆ, ಭೂಸ್ವಾಧೀನ ಮತ್ತು ಪರಿಹಾರ ವಿತರಣೆಯಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ನೂರಾರು ಕಡತಗಳನ್ನು ತನಿಖಾ ತಂಡ ವಶಕ್ಕೆ ಪಡೆದಿದೆ.

ಪ್ರಾಧಿಕಾರದಿಂದ ನಗರದ ವಿವಿಧೆಡೆ ನಿರ್ಮಿಸಿರುವ ಬಡಾವಣೆಗಳಲ್ಲಿ ಅರ್ಹತೆ ಇಲ್ಲದಿದ್ದರೂ ಕೆಲವರಿಗೆ ನಾಗರಿಕ ಮೂಲಸೌಲಭ್ಯಕ್ಕೆ ಕಾಯ್ದಿರಿಸಿದ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಕಂಡುಬಂದಿದೆ. ಕೆಲವು ಖಾಸಗಿ ಸಂಘಗಳ ಪದಾಧಿಕಾರಿಗಳ ಜತೆ ಶಾಮೀಲಾಗಿರುವ ಬಿಡಿಎ ಅಧಿಕಾರಿಗಳು ಅಕ್ರಮವಾಗಿ ನಿವೇಶನಗಳನ್ನು ಹಂಚಿಕೆ ಮಾಡಿರುವುದು ಕಂಡುಬಂದಿದೆ ಎಂದು ಎಸಿಬಿ ಅಧಿಕಾರಿಗಳು ತಿಳಿಸಿದ್ದಾರೆ.

ಕೆಲವು ಪ್ರಕರಣಗಳಲ್ಲಿ ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿ ಆದೇಶ ಹೊರಡಿಸಿರುವುದು ಪತ್ತೆಯಾಗಿದೆ. ಅನರ್ಹರಿಗೆ ಬಿಡಿಎ ನಿವೇಶನಗಳನ್ನು ಹಂಚಿಕೆ ಮಾಡಿರುವುದು, ಫಲಾನುಭವಿಗಳು ಪಾವತಿಸಿದ ಹಣವನ್ನು ಪ್ರಾಧಿಕಾರದ ಬ್ಯಾಂಕ್‌ ಖಾತೆಗೆ ವರ್ಗಾಯಿಸದೇ ದುರ್ಬಳಕೆ ಮಾಡಿಕೊಂಡಿರುವುದಕ್ಕೆ ಸಾಕ್ಷ್ಯಗಳು ಲಭ್ಯವಾಗಿವೆ ಎಂದು ಮೂಲಗಳು ತಿಳಿಸಿವೆ.

‘ಶೋಧನೆಯ ವೇಳೆ ಹಲವು ಕಡತಗಳನ್ನು ವಶಕ್ಕೆ ಪಡೆಯಲಾಗಿದೆ. ನೂರಾರು ಕೋಟಿ ರೂಪಾಯಿ ಮೊತ್ತದ ಅವ್ಯವಹಾರ ನಡೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದ್ದು, ದಾಖಲಾತಿ ಮತ್ತು ಮಾಹಿತಿಗಳ ಸಂಗ್ರಹ ಮುಂದುವರಿದಿದೆ’ ಎಂದು ಎಸಿಬಿ ಹಿರಿಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಚೇರಿಗಳ ಬಾಗಿಲಿಗೆ ಮೊಹರು: ಎಸಿಬಿ ಬೆಂಗಳೂರು ನಗರ ಎಸ್‌ಪಿ ಜಿ.ಎಚ್‌. ಯತೀಶ್‌ ಚಂದ್ರ, ಆಡಳಿತ ವಿಭಾಗದ ಎಸ್‌ಪಿ ಅಬ್ದುಲ್‌ ಅಹದ್‌ ಮತ್ತು ಕೇಂದ್ರ ಸ್ಥಾನದ ಎಸ್‌ಪಿ ಉಮಾ ಪ್ರಶಾಂತ್‌ ಕಾರ್ಯಾಚರಣೆಯ ನೇತೃತ್ವ ವಹಿಸಿದ್ದರು. ಐವರು ಡಿವೈಎಸ್‌ಪಿಗಳು, 12 ಇನ್‌ಸ್ಪೆಕ್ಟರ್‌ಗಳು ಮತ್ತು 50ಕ್ಕೂ ಹೆಚ್ಚು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.

ದಾಳಿಯ ಸಂದರ್ಭದಲ್ಲಿ ಬಿಡಿಎ ಕಚೇರಿಯ ಎಲ್ಲ ಪ್ರವೇಶ ದ್ವಾರಗಳನ್ನು ಮುಚ್ಚಲಾಗಿತ್ತು. ಸಾರ್ವಜನಿಕರನ್ನು ತಪಾಸಣೆ ನಡೆಸಿ ಹೊರಕ್ಕೆ ಬಿಡಲಾಯಿತು. ಶೋಧ ಇನ್ನೂ ಪೂರ್ಣಗೊಂಡಿಲ್ಲ. ದಾಳಿ ಮಾಡಲಾದ ಎಲ್ಲ ಕಚೇರಿಗಳ ಬಾಗಿಲಿಗೆ ಶುಕ್ರವಾರ ರಾತ್ರಿ ಮೊಹರು ಮಾಡಲಾಗಿದೆ. ಶನಿವಾರ ಬೆಳಿಗ್ಗೆ ಮೊಹರು ತೆರೆದು ಮತ್ತೆ ಶೋಧ ಮುಂದುವರಿಸಲಾಗುವುದು ಎಂದು ತನಿಖಾ ಸಂಸ್ಥೆಯ ಮೂಲಗಳು ಹೇಳಿವೆ.

ಅಕ್ರಮವಾಗಿ 34 ನಿವೇಶನ ಹಂಚಿಕೆ

ಬೆಂಗಳೂರು ಪೂರ್ವ ತಾಲ್ಲೂಕಿನ ಕೆ.ಆರ್‌.ಪುರ ಹೋಬಳಿಯ ಕೆ. ನಾರಾಯಣಪುರ ಗ್ರಾಮದಲ್ಲಿ ಟ್ರಿನಿಟಿ ವಿಲೇಜ್‌ ಫ್ಲ್ಯಾಟ್‌ ಓನರ್ಸ್‌ ಅಸೋಸಿಯೇಷನ್‌ ಸದಸ್ಯರಿಗೆ ಅರ್ಹತೆ ಇಲ್ಲದಿದ್ದರೂ ಅಕ್ರಮವಾಗಿ 34 ನಿವೇಶನಗಳನ್ನು ಬಿಡಿಎ ಹಂಚಿಕೆ ಮಾಡಿರುವುದನ್ನು ಎಸಿಬಿ ಪತ್ತೆಮಾಡಿದೆ.

‘ಬಿಡಿಎ ಅಧಿಕಾರಿಗಳು ಮತ್ತು ಸಂಘದ ಸದಸ್ಯರು ಶಾಮೀಲಾಗಿ ಅಕ್ರಮ ನಡೆಸಿರುವುದಕ್ಕೆ ದಾಖಲೆಗಳು ಲಭ್ಯವಾಗಿವೆ. ಇದರಿಂದ ಬಿಡಿಎಗೆ ಹತ್ತಾರು ಕೋಟಿ ರೂಪಾಯಿ ನಷ್ಟವಾಗಿದೆ. ಒಂದೇ ನಿವೇಶನವನ್ನು ಇಬ್ಬರಿಗೆ ಹಂಚಿಕೆ ಮಾಡಿ, ಅಕ್ರಮ ಎಸಗಿರುವ ಹಲವು ಪ್ರಕರಣಗಳ ದಾಖಲೆಗಳನ್ನು ವಶಕ್ಕೆ ಪಡೆಯಲಾಗಿದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT