ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪದೋನ್ನತಿಗೆ ಬಿ.ಇಡಿ ಕಡ್ಡಾಯ: ವಿರೋಧ

Last Updated 19 ಡಿಸೆಂಬರ್ 2020, 13:38 IST
ಅಕ್ಷರ ಗಾತ್ರ

ಬೆಂಗಳೂರು: ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ ನೇಮಕಗೊಂಡಿರುವ ಬೋಧಕ ಸಿಬ್ಬಂದಿ ಕೂಡ ಬಿ.ಇಡಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದುವುದು ಕಡ್ಡಾಯ ಎಂದು ಪದವಿಪೂರ್ವ ಶಿಕ್ಷಣ ಇಲಾಖೆ ಆದೇಶಿಸಿರುವುದಕ್ಕೆ ರಾಜ್ಯ ಅನುದಾನಿತ ಶಾಲಾ–ಕಾಲೇಜುಗಳ ಬೋಧಕ ಮತ್ತು ಬೋಧಕೇತರ ಸಂಘಟನೆಗಳ ಒಕ್ಕೂಟ ವಿರೋಧ ವ್ಯಕ್ತಪಡಿಸಿದೆ.

‘ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 2008ರ ಫೆಬ್ರುವರಿ 4ರ ನಂತರ ನೇಮಕಗೊಂಡು ಅನುದಾನಕ್ಕೆ ಒಳಪಟ್ಟ ಬೋಧಕ ಸಿಬ್ಬಂದಿಯು ನಾಲ್ಕು ವರ್ಷಗಳಲ್ಲಿ ಬಿ.ಇಡಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದಬೇಕು ಎಂದು ಆದೇಶಿಸಲಾಗಿದೆ. ಆದರೆ, ಸರ್ಕಾರದಿಂದ ನೇರವಾಗಿ ನೇಮಕಗೊಂಡವರಿಗೆ ವೇತನಸಹಿತ ರಜೆ ನೀಡಿ ಬಿ.ಇಡಿ ಪಡೆಯಲು ಅವಕಾಶ ಕೊಡಲಾಗಿತ್ತು. ಆದರೆ, ಈ ಸೌಲಭ್ಯವನ್ನು ಅನುದಾನಿತ ಉಪನ್ಯಾಸಕರಿಗೆ ನೀಡಿರಲಿಲ್ಲ. ಅನುದಾನಿತ ಉಪನ್ಯಾಸಕರಲ್ಲಿ ಅನೇಕರಿಗೆ ಬಿ.ಇಡಿ ಪದವಿ ಪಡೆಯುವುದು ಸಾಧ್ಯವಾಗಿಲ್ಲ’ ಎಂದು ಒಕ್ಕೂಟದ ಅಧ್ಯಕ್ಷ ಎಂ.ಪಿ. ಕರಬಸಪ್ಪ ಹೇಳಿದರು.

‘ಕೆಲವು ಸಿಬ್ಬಂದಿ ಈಗಾಗಲೇ 10 ವರ್ಷಗಳ ಸೇವೆ ಪೂರೈಸಿದ್ದು, ಕಾಲಮಿತಿ ಬಡ್ತಿಗೆ ಪ್ರಸ್ತಾವ ಸಲ್ಲಿಸಿದ್ದಾರೆ. ಈಗಾಗಲೇ ಹಲವರು ಈ ಸೌಲಭ್ಯವನ್ನೂ ಪಡೆದಿದ್ದಾರೆ. ಪದವಿಪೂರ್ವ ಶಿಕ್ಷಣ ಇಲಾಖೆಯ ಹೊಸ ಆದೇಶ ಜಾರಿ ಮಾಡಿದರೆ ಅನೇಕ ಉಪನ್ಯಾಸಕರು ಬಡ್ತಿಯಿಂದ ವಂಚಿತರಾಗಲಿದ್ದಾರೆ. ಸರ್ಕಾರ ಕೂಡಲೇ ಈ ಆದೇಶ ಹಿಂಪಡೆಯಬೇಕು’ ಎಂದು ಅವರು ಒತ್ತಾಯಿಸಿದರು.

ಆದೇಶಕ್ಕೆ ಏನು ಕಾರಣ?
ಖಾಸಗಿ ಅನುದಾನಿತ ಪದವಿಪೂರ್ವ ಕಾಲೇಜುಗಳಲ್ಲಿ 10 ವರ್ಷ ಸೇವೆ ಸಲ್ಲಿಸಿ ಪದೋನ್ನತಿ ಇಲ್ಲದೆ ಅದೇ ಹುದ್ದೆಯಲ್ಲಿ ಮುಂದುವರಿಯುತ್ತಿರುವ ಬೋಧಕ ಸಿಬ್ಬಂದಿಗೆ ಆಯಾ ಕಾಲೇಜುಗಳ ಆಡಳಿತ ಮಂಡಳಿ ಕಾಲಮಿತಿ ಬಡ್ತಿ ಮಂಜೂರು ಮಾಡಿದೆ. ಇದನ್ನು ಅನುಮೋದಿಸುವಂತೆ ಕೋರಿ ಆಯಾ ಜಿಲ್ಲಾ ಉಪನಿರ್ದೇಶಕರಿಂದ ನಿರ್ದೇಶನಾಲಯಕ್ಕೆ ಪ್ರಸ್ತಾವಗಳೂ ಸಲ್ಲಿಕೆಯಾಗಿವೆ. ಆದರೆ, ಬಹುತೇಕ ಉಪನ್ಯಾಸಕರು ಬಿ.ಇಡಿ ವಿದ್ಯಾರ್ಹತೆ ಹೊಂದಿಲ್ಲದಿರುವುದು ಪತ್ತೆ ಹಚ್ಚಿರುವ ಇಲಾಖೆಯು, ಈಗ ಇದ್ದಕ್ಕಿದ್ದಂತೆ ಬಿ.ಇಡಿ ಪದವಿ ಕಡ್ಡಾಯ ಮಾಡಿ ಆದೇಶ ಹೊರಡಿಸಿದೆ ಎಂದು ಉಪನ್ಯಾಸಕರು ದೂರಿದ್ದಾರೆ.

ಆದೇಶದಲ್ಲಿ ಮತ್ತೇನಿದೆ?
ಈ ಉಪನ್ಯಾಸಕರು ನಾಲ್ಕು ವರ್ಷಗಳೊಳಗೆ ಬಿ.ಇಡಿ ಅಥವಾ ತತ್ಸಮಾನ ವಿದ್ಯಾರ್ಹತೆ ಹೊಂದದಿದ್ದಲ್ಲಿ ಅಂಥವರನ್ನು ಸೇವೆಯಿಂದ ವಿಮುಕ್ತಿಗೊಳಿಸುವಂತೆಯೂ ಆದೇಶಿಸಿದೆ. ಸರ್ಕಾರದ ಸೂಚನೆ ಪಾಲಿಸದ ಜಿಲ್ಲಾ ಉಪನಿರ್ದೇಶಕರ ವಿರುದ್ಧ ನಿಯಮಾನುಸಾರ ಸೂಕ್ತ ಕ್ರಮ ಜರುಗಿಸಲಾಗುವುದು ಎಂದೂ ಇಲಾಖೆ ಎಚ್ಚರಿಕೆ ನೀಡಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT