ಭಾನುವಾರ, ಆಗಸ್ಟ್ 14, 2022
21 °C
ಅರುಣ್‌ ಸಿಂಗ್ ಭೇಟಿಯಾದ ಬಿ.ಎಸ್‌. ಯಡಿಯೂರಪ್ಪ

ಸಂಪುಟ ಕಗ್ಗಂಟು: ಮಾಹಿತಿ ಪಡೆದ ರಾಜ್ಯ ಉಸ್ತುವಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು/ಬೆಳಗಾವಿ: ಸಚಿವ ಸಂಪುಟ ವಿಸ್ತರಣೆ ಕಗ್ಗಂಟು ಬಗೆಹರಿಸುವ ನಿಟ್ಟಿನಲ್ಲಿ ಶುಕ್ರವಾರ ರಾತ್ರಿ   ಬೆಳಗಾವಿಯಲ್ಲಿ ನಡೆದ ರಾಜ್ಯ ಬಿಜೆಪಿ ಪ್ರಮುಖರ ಸಮಿತಿ ಸಭೆಯಲ್ಲಿ ಗಂಭೀರ ಚರ್ಚೆ ನಡೆದಿದ್ದು,  ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಅವರು ಈ ಅಭಿಪ್ರಾಯ ಪಡೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಉಸ್ತುವಾರಿಯಾಗಿ ನೇಮಕಗೊಂಡ ಬಳಿಕ ಅರುಣ್‌ ಸಿಂಗ್ ಸಮ್ಮುಖದಲ್ಲಿ ನಡೆದ ಪ್ರಮುಖರ ಸಮಿತಿಯ ಮೊದಲ ಸಭೆ ಇದಾಗಿದೆ.

ಸಂಪುಟ ವಿಸ್ತರಣೆಗೆ ವಲಸಿಗರು ಮತ್ತು ಪಕ್ಷದ ಮೂಲ ಶಾಸಕರಿಂದ ಇರುವ ಒತ್ತಡ, ಕೇಂದ್ರದ ವರಿಷ್ಠರಿಂದ ಅನುಮತಿ ಸಿಗದಿರುವುದರಿಂದ ಎದುರಿಸುತ್ತಿರುವ ಇಕ್ಕಟ್ಟಿನ ಬಗ್ಗೆಯೂ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ  ಸಭೆಯಲ್ಲಿ ವಿವರಿಸಿದರು.

ರಾಜ್ಯದಲ್ಲಿ ಇತ್ತೀಚೆಗೆ ನಡೆದ ವಿಧಾನಸಭೆ ಉಪಚುನಾವಣೆ ಮತ್ತು ವಿಧಾನಪರಿಷತ್‌ ಚುನಾವಣೆಯಲ್ಲಿ ಪಕ್ಷ ಜಯಭೇರಿ ಭಾರಿಸಿದ ಬಗ್ಗೆ ಅರುಣ್‌ ಸಿಂಗ್  ಮೆಚ್ಚುಗೆ ವ್ಯಕ್ತಪಡಿಸಿದರು. ಮುಂದೆ ಸಾಲಾಗಿ ಬರುವ ಎರಡು ವಿಧಾನಸಭೆ ಮತ್ತು ಒಂದು ಲೋಕಸಭೆ ಉಪಚುನಾವಣೆ, ಗ್ರಾಮಪಂಚಾಯತ್‌ ಚುನಾವಣೆ ಮತ್ತು ಬಿಬಿಎಂಪಿ ಚುನಾವಣೆಯಲ್ಲೂ ಅಂತಹದ್ದೇ ನಿರ್ವಹಣೆ ತೋರಿಸಬೇಕು. ಅದಕ್ಕೆ ಒಗ್ಗಟ್ಟಿನ ಪ್ರಯತ್ನ ಅಗತ್ಯ ಎಂದು ಅವರು ಪ್ರತಿಪಾದಿಸಿದರು.

ಪ್ರತ್ಯೇಕ ಸಭೆ: ಅರುಣ್ ಸಿಂಗ್  ಜತೆ ಯಡಿಯೂರಪ್ಪ ಅವರು ಪ್ರಮುಖರ ಸಭೆಗಿಂತ ಮೊದಲೇ ಭೇಟಿಯಾಗಿ ಸಂಪುಟ ವಿಸ್ತರಣೆ  ಮತ್ತು ಇತರ ವಿಷಯಗಳ ಕುರಿತಂತೆ ಪ್ರತ್ಯೇಕವಾಗಿ ಭೇಟಿ ಮಾಡಿ ಮಾತುಕತೆ ನಡೆಸಿದರು.

ಸಂಪುಟ ವಿಸ್ತರಣೆ ಮಾಡಬೇಕಾದ ಅನಿವಾರ್ಯ ಮತ್ತು ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ಕಾಂಗ್ರೆಸ್‌ ಮತ್ತು ಜೆಡಿಎಸ್‌ ತೊರೆದು ಬಂದವರಲ್ಲಿ ಸ್ಥಾನ ನೀಡಬೇಕಾದ ಬಗ್ಗೆ ಅನಿವಾರ್ಯದ ಬಗ್ಗೆ ಯಡಿಯೂರಪ್ಪ ಅವರು ಮನವರಿಕೆ ಮಾಡುವ ಯತ್ನ ನಡೆಸಿದರು ಎಂದು ಮೂಲಗಳು ತಿಳಿಸಿವೆ.

ಕಾವೇರಲಿರುವ ಕಾರ್ಯಕಾರಿಣಿ

ಪಕ್ಷದ ಆಂತರಿಕ ವಿದ್ಯಮಾನಗಳ ಬಗ್ಗೆ ರಾಜ್ಯ ಕಾರ್ಯಕಾರಿಣಿ ಸಭೆಯಲ್ಲಿ ಚರ್ಚೆ ನಡೆಯಲಿದೆ. ನಿಗಮ– ಮಂಡಳಿಗಳಿಗೆ ಅಧ್ಯಕ್ಷರ ನೇಮಕ ಬಗ್ಗೆಯೂ ಕಾರ್ಯಕಾರಿಣಿಯ ಆಹ್ವಾನಿತರಲ್ಲಿ ಪ್ರಶ್ನೆಗಳನ್ನು ಎತ್ತಲು ಸಿದ್ಧತೆ ನಡೆಸಿದ್ದಾರೆ ಎಂದು ಮೂಲಗಳು ಹೇಳಿವೆ.

ಪಕ್ಷದ ಮೂಲ ಹಾಗೂ ಹಿರಿಯ ಶಾಸಕರನ್ನು ಕಡೆಗಣಿಸಿ ಚುನಾವಣೆಯಲ್ಲಿ ಗೆಲ್ಲದವರಿಗೆ ಸಚಿವ ಸ್ಥಾನ ನೀಡುವ ಬಗ್ಗೆ ಶಾಸಕರಲ್ಲಿ ಭಾರಿ ಆಕ್ರೋಶವಿದೆ. ಈ ಕುರಿತಂತೆ ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ಎಂ.‍ಪಿ.ರೇಣುಕಾಚಾರ್ಯ ತಮ್ಮ ಸಿಟ್ಟು ಹೊರಹಾಕಿದ್ದಾರೆ.

ಪಕ್ಷದಲ್ಲಿ ‘ಮೂಲ’ ಮತ್ತು ‘ವಲಸಿಗರು’ ಎಂದು ಎರಡು ಗುಂಪುಗಳಾಗಿ ರಾಜಕೀಯ ಚಟುವಟಿಕೆ ನಡೆಸುತ್ತಿರುವುದಕ್ಕೆ ಆಕ್ಷೇಪ ವ್ಯಕ್ತಪಡಿಸಿ ನಳಿನ್‌ ಕುಮಾರ್‌ ಕಟೀಲ್‌ ಅವರಿಗೆ ಪತ್ರ ಬರೆದಿರುವ ಮುಖ್ಯಸಚೇತಕ ಸುನಿಲ್‌ ಕುಮಾರ್‌ ಪತ್ರ ಬರೆದಿದ್ದಾರೆ. ನಿಗಮ, ಮಂಡಳಿಗಳ ನೇಮಕಾತಿ ಮತ್ತು ಸಚಿವ ಸಂಪುಟ ವಿಸ್ತರಣೆ ಕುರಿತು ಶಾಸಕರ ಅಭಿಪ್ರಾಯವನ್ನು ನೇರವಾಗಿ ಮತ್ತು ಮುಕ್ತವಾಗಿ ಆಲಿಸಬೇಕು ಎಂದು ಸುನಿಲ್ ಒತ್ತಾಯಿಸಿದ್ದರು.

ಪ್ರಮುಖರ ಸಭೆಯಲ್ಲಿ ಹಾಜರಿದ್ದವರು

ಮುಖ್ಯಮಂತ್ರಿ ಯಡಿಯೂರಪ್ಪ, ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್ ಕುಮಾರ್ ಕಟೀಲ್, ಉಪಮುಖ್ಯಮಂತ್ರಿ ಗೋವಿಂದ ಕಾರಜೋಳ, ಕೇಂದ್ರ ಸಚಿವ ಪ್ರಲ್ಹಾದಜೋಷಿ, ಹಿರಿಯ ಸಚಿವರಾದ ಕೆ.ಎಸ್‌.ಈಶ್ವರಪ್ಪ, ಜಗದೀಶ ಶೆಟ್ಟರ್‌, ಆರ್‌.ಅಶೋಕ, ಪಕ್ಷದ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ರಾಜ್ಯ ಉಪಾಧ್ಯಕ್ಷ ಅರವಿಂದ ಲಿಂಬಾವಳಿ ಸಭೆಯಲ್ಲಿ ಇದ್ದರು. ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ಸಂಸದ ಶಿವಕುಮಾರ್‌ ಉದಾಸಿ ಹಾಜರಿರಲಿಲ್ಲ.

***

ಸಚಿವ ಸಂಪುಟ ವಿಸ್ತರಣೆ ಕುರಿತ ಸಂದೇಶದ ಬಗೆಗೆ ಏನನ್ನೂ ಬಹಿರಂಗಪಡಿಸಲಾಗದು. ಮುಖ್ಯಮಂತ್ರಿ ಯಡಿಯೂರಪ್ಪ ಅವರೊಂದಿಗೆ ಆಂತರಿಕವಾಗಿ ಚರ್ಚಿಸುವೆ

-ಅರುಣ್ ಸಿಂಗ್ ,ರಾಜ್ಯ ಬಿಜೆಪಿ ಉಸ್ತುವಾರಿ

***

ಅರುಣ್ ಸಿಂಗ್ ಅವರು ಇದೇ ಮೊದಲ ಬಾರಿಗೆ ಕರ್ನಾಟಕಕ್ಕೆ ಬಂದಿದ್ದಾರೆ. ಅವರು ತಂದಿರುವ ಸಂದೇಶ ಆಧರಿಸಿ ಸಚಿವ ಸಂಪುಟ ವಿಸ್ತರಣೆ ಬಗ್ಗೆ ನಿರ್ಧರಿಸುತ್ತೇನೆ

-ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು