ಗುರುವಾರ , ಮೇ 13, 2021
40 °C
ಬೆಳಗಾವಿ ಲೋಕಸಭೆ ಕ್ಷೇತ್ರ, ಮಸ್ಕಿ, ಬಸವಕಲ್ಯಾಣ ವಿಧಾನಸಭೆ ಕ್ಷೇತ್ರ

ಉಪಚುನಾವಣೆ: ಮತದಾನದ ಉತ್ಸಾಹ ಕಸಿದ ಬಿಸಿಲು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ರಾಯಚೂರು/ಬೀದರ್‌: ತೀವ್ರ ಕುತೂಹಲ ಕೆರಳಿಸಿರುವ ವಿಧಾನಸಭಾ ಉಪ ಚುನಾವಣೆಯ ಮಸ್ಕಿ ಕ್ಷೇತ್ರದಲ್ಲಿ ಉತ್ತಮ ಮತದಾನವಾದರೆ, ಬಸವಕಲ್ಯಾಣದಲ್ಲಿ ಮತದಾರರಿಂದ ನೀರಸ ಪ್ರತಿಕ್ರಿಯೆ ವ್ಯಕ್ತವಾಯಿತು. ಬಿಸಿಲಿನಿಂದಾಗಿ ಎರಡೂ ಕಡೆಗಳಲ್ಲಿ ಸಂಜೆ ನಂತರವೇ ಮತದಾರರು ಹೆಚ್ಚಿನ ಪ್ರಮಾಣದಲ್ಲಿ ಮತಗಟ್ಟೆಗೆ ಬಂದರು.

ಕಾಂಗ್ರೆಸ್‌ ಅಭ್ಯರ್ಥಿ ಬಸನಗೌಡ ತುರ್ವಿಹಾಳ ಅವರು ತುರ್ವಿಹಾಳ ಪಟ್ಟಣದಲ್ಲಿ, 'ಹೋಮ್‌ ಐಸೋಲೇಷನ್‌‘ ನಲ್ಲಿರುವ ಬಿಜೆಪಿ ಅಭ್ಯರ್ಥಿ ಪ್ರತಾಪಗೌಡ ಪಾಟೀಲ ಅವರು ಸುರಕ್ಷತಾ ಸಾಧನ ಧರಿಸಿ ಹಕ್ಕು ಚಲಾಯಿಸಿದರು.

ಹಾಲಾಪುರ ಮತ್ತು ವಟಗಲ್‌ ಗ್ರಾಮಗಳ ಮತಗಟ್ಟೆಗಳಲ್ಲಿ ಚುನಾವಣಾ ನಿಯಮ ಉಲ್ಲಂಘನೆ ಕುರಿತು ಪ್ರಕರಣ ದಾಖಲಿಸಲು ಚುನಾವಣಾಧಿಕಾರಿ ಸೂಚಿಸಿದರು. ಮಸ್ಕಿ ಕ್ಷೇತ್ರದ ನಾಲ್ಕು ಗ್ರಾಮ ಪಂಚಾಯಿತಿಗಳ ವ್ಯಾಪ್ತಿಯ ರೈತರು ಎನ್‌ಆರ್‌ಬಿಸಿ 5ಎ ಕಾಲುವೆಗಾಗಿ 115 ದಿನಗಳಿಂದ ಹೋರಾಟ ನಡೆಸಿದ್ದು, ಇಲ್ಲಿ ಬಿಗಿ ಪೊಲೀಸ್‌ ಭದ್ರತೆ ನಿಯೋಜಿಸಲಾಗಿತ್ತು.

ಬಸವಕಲ್ಯಾಣ ಕ್ಷೇತ್ರದ ತ್ರಿಪುರಾಂತ ಗ್ರಾಮದಲ್ಲಿ ಹಣ ಹಂಚಿಕೆ ಆರೋಪ ಕೇಳಿ ಬಂದ ನಂತರ ಮತಗಗಟ್ಟೆಗಳ ವ್ಯಾಪ್ತಿಯಲ್ಲಿ ಪೊಲೀಸ್‌ ಬಂದೋಬಸ್ತ್‌ ಬಿಗಿಗೊಳಿಸಲಾಗಿತ್ತು. ಜಿಲ್ಲಾ ಚುನಾವಣಾ ಆಧಿಕಾರಿ ರಾಮಚಂದ್ರನ್‌ ಅವರು ಅಧಿಕಾರಿಗಳ ತಂಡದೊಂದಿಗೆ ವಿವಿಧ ಮತಗಟ್ಟೆಗಳಿಗೆ ಭೇಟಿ ನೀಡಿ ಪರಿಶೀಲಿಸಿದರು.

ಕಾಂಗ್ರೆಸ್ ಅಭ್ಯರ್ಥಿ ಮಾಲಾ ಬಿ.ನಾರಾಯಣರಾವ್, ಬಿಜೆಪಿ ಅಭ್ಯರ್ಥಿ ಶರಣು ಸಲಗರ, ಜೆಡಿಎಸ್ ಅಭ್ಯರ್ಥಿ ಯಸ್ರಬ್ ಅಲಿ ಖಾದ್ರಿ, ಪಕ್ಷೇತರ ಅಭ್ಯರ್ಥಿ ಮಲ್ಲಿಕಾರ್ಜುನ ಖೂಬಾ ಬಸವಕಲ್ಯಾಣದಲ್ಲಿ ಮತ ಚಲಾಯಿಸಿದರು.

ಮತಚಲಾವಣೆ ವಿಡಿಯೊ ಮಾಡಿದ: ಮಸ್ಕಿ ಕ್ಷೇತ್ರದ ವಟಗಲ್‌ ಗ್ರಾಮದಲ್ಲಿ ಮತದಾನ ಮಾಡಿದ್ದನ್ನು ಪಂಚಾಯಿತಿ ಸದಸ್ಯ ಬಸವರಾಜ ಚಲುವಾದಿ ವಿಡಿಯೊ ಮಾಡಿಕೊಂಡು ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದರು. ಇವರ ವಿರುದ್ಧ ಕವಿತಾಳ ಠಾಣೆಯಲ್ಲಿ ಅವರ ವಿರುದ್ಧ ಎಫ್‌ಐಆರ್‌ ದಾಖಲಿಸಲಾಗಿದೆ.

ಕೋವಿಡ್‌ ನಿಯಮ ಪಾಲನೆ: ಮತಗಟ್ಟೆ ಆವರಣಗಳಲ್ಲಿ ಕೋವಿಡ್‌ ನಿಯಮ ಪಾಲನೆಗೆ ಕ್ರಮ ಕೈಗೊಳ್ಳಲಾಗಿತ್ತು. ಕೆಲವೆಡೆ ಅಂತರ ಕಾಣಲಿಲ್ಲ. ಎಲ್ಲರೂ ಮಾಸ್ಕ್‌ ಧರಿಸಿದ್ದರು. ಮತದಾರರಿಗೆ ಥರ್ಮಲ್‌ ಪರೀಕ್ಷೆ ನಡೆಯಿತು.

ನೀರಸ ಮತದಾನ

ಬೆಳಗಾವಿ: ಲೋಕಸಭೆ ಕ್ಷೇತ್ರದ ಚುನಾವಣೆಗೆ 2,566 ಮತಗಟ್ಟೆಗಳನ್ನು ಸ್ಥಾಪಿಸಲಾಗಿತ್ತು. ಬಹುತೇಕ ಮತಗಟ್ಟೆಗಳಲ್ಲಿ ನೀರಸ ಮತದಾನ ನಡೆಯಿತು.

ಬಿಜೆಪಿಯ ಮಂಗಲಾ ಸುರೇಶ ಅಂಗಡಿ ನಗರದಲ್ಲಿ ಹಾಗೂ ಕಾಂಗ್ರೆಸ್‌ನ ಸತೀಶ ಜಾರಕಿಹೊಳಿ ಗೋಕಾಕದಲ್ಲಿ ಮತ ಚಲಾಯಿಸಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು. ಕೋವಿಡ್‌ನಿಂದ ಚೇತರಿಸಿಕೊಂಡಿರುವ ಗೋಕಾಕದ ಬಿಜೆಪಿ ಶಾಸಕ ರಮೇಶ ಜಾರಕಿಹೊಳಿ ಚುನಾವಣೆಗೆ ಎರಡು ದಿನಗಳ ಹಿಂದೆಯೇ ಅಂಚೆ ಮತಪತ್ರದ ಮೂಲಕ ಹಕ್ಕು ಚಲಾಯಿಸಿದ್ದರು. ಅವರ ಪುತ್ರ, ಕೆಎಂಎಫ್‌ ನಿರ್ದೇಶಕ ಅಮರನಾಥ ಜಾರಕಿಹೊಳಿ, ಕೋವಿಡ್ ದೃಢಪಟ್ಟಿದ್ದರಿಂದ ಪಿಪಿಇ ಕಿಟ್‌ ಧರಿಸಿ ಬಂದು ಮತದಾನ ಮಾಡಿದರು.

ಫಲಿತಾಂಶ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು