ಬುಧವಾರ, ಜುಲೈ 6, 2022
22 °C

ಸ್ವಾತಂತ್ರ್ಯ ಹೋರಾಟಗಾರರಿಗೆ ಅಪಮಾನ: ದೇಶದ್ರೋಹಕ್ಕೆ ಸಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಳಗಾವಿ(ಸುವರ್ಣ ವಿಧಾನಸೌಧ): ದೇಶ ಭಕ್ತರು, ಸ್ವಾತಂತ್ರ್ಯಕ್ಕಾಗಿ ಬಲಿದಾನ ಮಾಡಿದವರನ್ನು ಅಪಮಾನ ಮಾಡುವವರು ದೇಶ ದ್ರೋಹಿಗಳು, ಇವರನ್ನು ನಿರ್ದಾಕ್ಷಿಣ್ಯವಾಗಿ ಮಟ್ಟ ಹಾಕಬೇಕು ಎಂದು ವಿಧಾನಮಂಡಲದ ಎರಡೂ ಸದನಗಳಲ್ಲಿ ಪಕ್ಷ ಬೇಧ ಮರೆತು ಎಲ್ಲ ಸದಸ್ಯರು ಆಗ್ರಹಿಸಿದರು.

‘ಸಂಗೊಳ್ಳಿ ರಾಯಣ್ಣ, ಶಿವಾಜಿ, ರಾಣಿ ಚೆನ್ನಮ್ಮ ಎಲ್ಲರೂ ದೇಶಕ್ಕೆ ಸೇರಿದ ಆಸ್ತಿ ಮತ್ತು ನಮ್ಮೆಲ್ಲರಿಗೂ ಸ್ಫೂರ್ತಿ. ಅವರಿಗೆ ಅಪಮಾನ ಮಾಡುವವರನ್ನು ಸಹಿಸಬಾರದು. ಮುಂದೆಂದೂ ಇಂತಹ ಕಾರ್ಯವನ್ನು ಪುನರಾವರ್ತಿಸದಂತೆ ತಕ್ಕ ಪಾಠ ಕಲಿಸಬೇಕು’ ಎಂದೂ ಪ್ರತಿಪಾದಿಸಿದರು.

ಇತ್ತೀಚಿನ ಘಟನೆಗಳ ಬಗ್ಗೆ ಖಂಡನಾ ನಿರ್ಣಯವನ್ನು ಅಂಗೀಕರಿಸಿ ಪ್ರಧಾನಮಂತ್ರಿಯವರಿಗೆ ಕಳುಹಿಸಬೇಕು ಎಂದು ಸಲಹೆ ನೀಡಿದ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಈ ಪ್ರಕರಣಗಳಲ್ಲಿ ಗುಪ್ತಚರ ವೈಫಲ್ಯ ಎದ್ದು ಕಾಣುತ್ತದೆ ಎಂದರು.

ಗ್ರಾಮೀಣಾವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಮಾತನಾಡಿ, ರಾಯಣ್ಣ ಅವರ ಪ್ರತಿಮೆ ವಿರೂಪಗೊಳಿಸಿದ ಪುಂಡರನ್ನು ಗಡಿಪಾರು ಮಾಡುವುದಲ್ಲ, ಗುಂಡಿಕ್ಕಬೇಕು. ಇವರಿಗೆ ಬೇರೆ ಭಾಷೆ ಅರ್ಥವಾಗುವುದಿಲ್ಲ. ಹೇಡಿತನದ ಕೃತ್ಯಗಳನ್ನು ಮಾಡುವವರ ಹಿಂದೆ ಇರುವವರನ್ನು ಪತ್ತೆ ಮಾಡಿ. ಇವರು ಕನ್ನಡಿಗರ ಕೈಗೆ ಸಿಕ್ಕರೆ ಛಿಂದಿ ಛಿಂದಿ ಅಗುತ್ತಾರೆ ಎಂದು ಆಕ್ರೋಶ ಭರಿತರಾಗಿ ನುಡಿದರು. ಜೆಡಿಎಸ್‌ನ ಡಾ.ಕೆ. ಅನ್ನದಾನಿ, ಜೆಡಿಎಸ್‌ನ ಎ.ಟಿ.ರಾಮಸ್ವಾಮಿ, ಕಾಂಗ್ರೆಸ್‌ನ ಎಚ್.ಕೆ.ಪಾಟೀಲ ಮಾತನಾಡಿದರು.

ಮೇಲ್ಮನೆಯಲ್ಲಿ ವಿರೋಧಪಕ್ಷಗಳ ಸಭಾತ್ಯಾಗ
(ವಿಧಾನಪರಿಷತ್‌):
ಬೆಳಗಾವಿಯಲ್ಲಿ ಸಂಗೊಳ್ಳಿ ರಾಯಣ್ಣ ಪ್ರತಿಮೆಯನ್ನು ಭಗ್ನಗೊಳಿಸಿದ ಮತ್ತು ವಿವಿಧೆಡೆ ಕನ್ನಡ ಬಾವುಟ ಸುಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಧಾನ ಪರಿಷತ್‌ನಲ್ಲಿ ಸೋಮವಾರ ನಡೆದ ಚರ್ಚೆಗೆ ಗೃಹ ಸಚಿವ ಆರಗ ಜ್ಞಾನೇಂದ್ರ ನೀಡಿದ ಉತ್ತರವನ್ನು ಪ್ರತಿಭಟಿಸಿ ಕಾಂಗ್ರೆಸ್‌ ಹಾಗೂ ಜೆಡಿಎಸ್‌ ಸದಸ್ಯರು ಸಭಾತ್ಯಾಗ ನಡೆಸಿದರು.

ಜೆಡಿಎಸ್‌ನ ಕೆ.ಟಿ. ಶ್ರೀಕಂಠೇಗೌಡ ಈ ವಿಷಯದಲ್ಲಿ ನಿಲುವಳಿ ಸೂಚನೆ ಮಂಡನೆಗೆ ಅವಕಾಶ ಕೋರಿದರು. ಸಭಾಪತಿ ಬಸವರಾಜ ಹೊರಟ್ಟಿ ನಿಯಮ 68ರ ಅಡಿಯಲ್ಲಿ ಚರ್ಚೆಗೆ ಅನುಮತಿ ನೀಡಿದರು. 16 ಸದಸ್ಯರು ಮಾತನಾಡಿದರು. ಉತ್ತರ ನೀಡಿದ ಗೃಹ ಸಚಿವರು, ‘ದುಷ್ಕೃತ್ಯ ನಡೆಸಿರುವ ಕಿಡಿಗೇಡಿಗಳ ವಿರುದ್ಧ ದೇಶದ್ರೋಹ ಆಪಾದನೆಯಡಿ ಕ್ರಮ ಜರುಗಿಸುತ್ತೇವೆ’ ಎಂದರು. ಗೃಹ ಸಚಿವರ ಉತ್ತರಕ್ಕೆ ತೃಪ್ತರಾಗದ ಕಾಂಗ್ರೆಸ್‌ ಸದಸ್ಯರು, ‘ರಾಜ್ಯ ಒಬ್ಬ ಅಸಮರ್ಥ ಗೃಹ ಸಚಿವರ ಕೈಯಲ್ಲಿದೆ. ದುರ್ಬಲ ಗೃಹ ಸಚಿವರಿಂದ ರಾಜ್ಯದ ರಕ್ಷಣೆ ಸಾಧ್ಯವಿಲ್ಲ’ ಎಂದು ಟೀಕಿಸಿದರು.

ಸರ್ಕಾರದ ಉತ್ತರ ಸಮರ್ಪಕವಾಗಿಲ್ಲ ಎಂದು ಆಕ್ಷೇಪಿಸಿ ಕಾಂಗ್ರೆಸ್‌ ಸದಸ್ಯರು ಸಭಾತ್ಯಾಗ ನಡೆಸಿದರು. ಅದರ ಮರು ಕ್ಷಣದಲ್ಲೇ ಜೆಡಿಎಸ್‌ ಸದಸ್ಯರೂ ಸಭಾತ್ಯಾಗ ನಡೆಸಿದರು. ವಿಪಕ್ಷಗಳ ಸದಸ್ಯರ ಅನುಪಸ್ಥಿತಿಯಲ್ಲಿ ಮಹಾರಾಷ್ಟ್ರ ಏಕೀಕರಣ ಸಮಿತಿ ನಡವಳಿಕೆಯ ವಿರುದ್ಧ ಖಂಡನಾ ನಿರ್ಣಯ ಅಂಗೀಕರಿಸಲಾಯಿತು.

ಕನ್ನಡ ಬಾವುಟ ಧ್ವಂಸ
ಬಂಗಾರಪೇಟೆ (ಕೋಲಾರ):
ಪುನೀತ್ ರಾಜ್‌ಕುಮಾರ್ ಬಡಾವಣೆಯ ನಾಮಫಲಕ ಮತ್ತು ಅದಕ್ಕೆ ಅಳವಡಿಸಿದ್ದ ಕನ್ನಡ ಧ್ವಜವನ್ನು ಭಾನುವಾರ ರಾತ್ರಿ ಜೆಸಿಬಿ ಬಳಸಿ ಧ್ವಂಸಗೊಳಿಸಲಾಗಿದೆ.  

‘ಪುರಸಭೆ ಮಾಜಿ ಸದಸ್ಯ ಹಾಗೂ ರಿಯಲ್ ಎಸ್ಟೇಟ್ ಉದ್ಯಮಿ ಎಂ.ಸಿ.ಜೆ. ವೇಲುಮುರುಗನ್ ಕೆಲ ವರ್ಷದ ಹಿಂದೆ ಕಾಮಸಮುದ್ರ ಮುಖ್ಯರಸ್ತೆಯ ದೇಶಿಹಳ್ಳಿ ರೈಲ್ವೆ ಗೇಟ್ ಸಮೀಪ ಈ ಬಡಾವಣೆ ನಿರ್ಮಿಸಿದ್ದರು. ಈಗ ಅವರೇ ಬಡಾವಣೆ ನಾಮಫಲಕ ಮತ್ತು ಕನ್ನಡ ಧ್ವಜ ಧ್ವಂಸಗೊಳಿಸಿದ್ದಾರೆ’ ಎಂದು ಸ್ಥಳೀಯರು ಆರೋಪಿಸಿದ್ದಾರೆ. 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು