ಸೋಮವಾರ, ಜನವರಿ 24, 2022
21 °C

ಕೋವಿಡ್ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚಳ: ಬೆಳಗಾವಿ ಅಧಿವೇಶನದ ಮೇಲೆ ಕರಿನೆರಳು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ರಾಜ್ಯದ ವಿವಿಧೆಡೆ ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳ ಸಂಖ್ಯೆ ಹೆಚ್ಚುತ್ತಿರುವಾಗಲೇ ಡಿಸೆಂಬರ್‌ 13ರಿಂದ 24ರವರೆಗೆ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ವಿಧಾನಮಂಡಲದ ಚಳಿಗಾಲದ ಅಧಿವೇಶನ ನಿಗದಿಯಾಗಿರುವುದು ಶಾಸಕರು, ಅಧಿಕಾರಿಗಳು ಮತ್ತು ಸಿಬ್ಬಂದಿಯಲ್ಲಿ ಕಳವಳಕ್ಕೆ ಕಾರಣವಾಗಿದೆ.

ಅಧಿವೇಶನಕ್ಕಾಗಿ ಶಾಸಕರು, ಸರ್ಕಾರದ ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿ ಮತ್ತು ಮಾಧ್ಯಮ ಪ್ರತಿನಿಧಿಗಳೂ ಸೇರಿದಂತೆ ಬೃಹತ್‌ ಸಂಖ್ಯೆಯ ಜನರು ವಿಧಾನಮಂಡಲ ಅಧಿವೇಶನದಲ್ಲಿ ಪಾಲ್ಗೊಳ್ಳಲಿದ್ದಾರೆ. ಇಂತಹ ಸನ್ನಿವೇಶದಲ್ಲಿ ಬೆಳಗಾವಿಗೆ ಜನರು ದೊಡ್ಡ ಸಂಖ್ಯೆಯಲ್ಲಿ ಪ್ರಯಾಣಿಸುವುದು ಮತ್ತು ಸಮಾವೇಶಗೊಳ್ಳುವುದು ಮತ್ತೊಂದು ಬೃಹತ್‌ ಕೋವಿಡ್‌ ಸೋಂಕಿನ ವಲಯ ಸೃಷ್ಟಿಗೆ ಕಾರಣವಾಗಬಹುದು ಎಂಬ ಆತಂಕ ಸರ್ಕಾರದೊಳಗೇ ವ್ಯಕ್ತವಾಗುತ್ತಿದೆ.

‘ಮುಂದಿನ ವಾರದ ವೇಳೆಗೆ ಕೋವಿಡ್‌ ಸೋಂಕಿನ ಹೊಸ ಪ್ರಕರಣಗಳ ದೃಢಪ್ರಮಾಣ ದರ ಹೇಗಿರಲಿದೆ ಎಂಬುದರ ಆಧಾರದಲ್ಲಿ ಬೆಳಗಾವಿಯಲ್ಲಿ ಅಧಿವೇಶನ ನಡೆಸಬೇಕೆ? ಬೇಡವೆ? ಎಂಬುದನ್ನು ನಿರ್ಧರಿಸುವ ಸಾಧ್ಯತೆ ಇದೆ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಈ ಬಗ್ಗೆ ಪುನರ್‌ ಪರಿಶೀಲನೆ ನಡೆಸುವ ಸಂಭವವಿದೆ’ ಎಂದು ಮೂಲಗಳು ತಿಳಿಸಿವೆ.

‘ಬೆಂಗಳೂರಿನ ವಿಧಾನಸೌಧದಲ್ಲಿ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಭಾಂಗಣಗಳಲ್ಲಿ ಶಾಸಕರ ಆಸನಗಳ ನಡುವೆ ಗಾಜಿನ ತಡೆ ಅಳವಡಿಸಲಾಗಿದೆ. ಕೋವಿಡ್‌ ಹರಡುವುದನ್ನು ತಡೆಯಲು ಈ ಕ್ರಮ ಕೈಗೊಳ್ಳಲಾಗಿದೆ. ಬೆಳಗಾವಿ ಸುವರ್ಣ ವಿಧಾನಸೌಧದಲ್ಲಿ ಅಂತಹ ವ್ಯವಸ್ಥೆ ಇಲ್ಲ. ಇಂತಹ ಸನ್ನಿವೇಶದಲ್ಲಿ ಅಲ್ಲಿ ಅಧಿವೇಶನ ನಡೆಸುವುದು ಅಪಾಯಕಾರಿ’ ಎನ್ನುತ್ತವೆ ವಿಧಾನಸಭೆ ಮತ್ತು ವಿಧಾನ ಪರಿಷತ್‌ ಸಚಿವಾಲಯದ ಮೂಲಗಳು.

‘ಬೆಂಗಳೂರಿನಲ್ಲೇ ಅಧಿವೇಶನ ನಡೆದರೆ ಹೆಚ್ಚಿನವರು ತಮ್ಮ ಮನೆಗಳಿಂದಲೇ ಸದನಕ್ಕೆ ಬರುತ್ತಾರೆ. ಇದರಿಂದ ಆರೋಗ್ಯದ ದೃಷ್ಟಿಯಿಂದ ಯಾವುದೇ ಅಪಾಯ ಇರುವುದಿಲ್ಲ. ಆದರೆ, ಈ ವಿಚಾರದಲ್ಲಿ ಸರ್ಕಾರ ಅಂತಿಮ ನಿರ್ಧಾರ ಕೈಗೊಂಡು, ಅದಕ್ಕೆ ರಾಜ್ಯಪಾಲರ ಅನುಮೋದನೆ ಪಡೆಯಬೇಕಾಗುತ್ತದೆ’ ಎಂದು ಮೂಲಗಳು ಹೇಳಿವೆ.

ಮೂರು ವರ್ಷಗಳ ಬಳಿಕ ಬೆಳಗಾವಿಯಲ್ಲಿ ಅಧಿವೇಶನ ನಡೆಸಲು ಸರ್ಕಾರ ಮುಂದಾಗಿದೆ. ಸಿದ್ಧತೆ ಕುರಿತು ಪರಿಶೀಲಿಸಲು ವಿಧಾನಸಭೆಯ ಅಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮುಂದಿನ ವಾರ ಬೆಳಗಾವಿಗೆ ಭೇಟಿನೀಡುವ ಸಾಧ್ಯತೆ ಇದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು