ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರ್ಕಾರಿ ಶಾಲೆಗೆ ಮೆರುಗು ನೀಡಿದ ‘ನರೇಗಾ’: ₹ 42 ಲಕ್ಷ ವೆಚ್ಚದಲ್ಲಿ ಸೌಕರ್ಯ

₹ 42 ಲಕ್ಷ ವೆಚ್ಚದಲ್ಲಿ ಸುಸಜ್ಜಿತ ಸೌಕರ್ಯ, ಕಂಗೊಳಿಸುತ್ತಿರುವ ಶಿಂದೋಗಿಯ ಪ್ರೌಢಶಾಲೆ
Last Updated 22 ಜನವರಿ 2023, 21:28 IST
ಅಕ್ಷರ ಗಾತ್ರ

ಬೆಳಗಾವಿ: ಜಿಲ್ಲೆಯ ಸವದತ್ತಿ ತಾಲ್ಲೂಕಿನ ಶಿಂದೋಗಿಯ ಸರ್ಕಾರಿ ಪ್ರೌಢಶಾಲೆಗೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ (ನರೇಗಾ) ಯೋಜನೆ ಮೆರುಗು ನೀಡಿದೆ.

2007ರಲ್ಲಿ ಸ್ಥಾಪನೆಯಾಗಿರುವ ಶಾಲೆಯಲ್ಲಿ 8ರಿಂದ 10ನೇ ತರಗತಿಯಲ್ಲಿ 336 ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಕೆಲವೇ ವರ್ಷಗಳ ಹಿಂದೆ ಇಲ್ಲಿ ಕನಿಷ್ಠ ಮೂಲಸೌಕರ್ಯವೂ ಇರಲಿಲ್ಲ. ಇದು ಮಕ್ಕಳ ಕಲಿಕೆ ಮೇಲೂ ವ್ಯತಿರಿಕ್ತ ಪರಿಣಾಮ ಬೀರಿತ್ತು. ಆದರೆ, ನರೇಗಾ ಯೋಜನೆಯಡಿ ₹46 ಲಕ್ಷ ವೆಚ್ಚದಲ್ಲಿ ಕಳೆದ ವರ್ಷ ಕೈಗೊಂಡ ಅಭಿವೃದ್ಧಿ ಕೆಲಸಗಳು ಶಾಲೆಯ ಚಿತ್ರಣವನ್ನೇ ಬದಲಿಸಿವೆ.

ಏನೇನು ಅಭಿವೃದ್ಧಿ?: ₹5 ಲಕ್ಷ ವೆಚ್ಚದಲ್ಲಿ ಆಟದ ಮೈದಾನ ನಿರ್ಮಿಸಲಾಗಿದೆ. ಇದು ಓಟದ ಟ್ರ್ಯಾಕ್‌, ವಾಲಿಬಾಲ್‌, ಕಬಡ್ಡಿ, ಕೊಕ್ಕೋ, ಥ್ರೋಬಾಲ್‌ ಅಂಕಣ ಹೊಂದಿದ್ದು, ವಿದ್ಯಾರ್ಥಿಗಳಿಗೆ ಕ್ರೀಡೆಯಲ್ಲಿ ಆಸಕ್ತಿ ಬೆಳೆಸುತ್ತಿದೆ. 250 ಮಕ್ಕಳು ಏಕಕಾಲಕ್ಕೆ ಕುಳಿತುಕೊಂಡು ಊಟ ಮಾಡಲು ಅನುಕೂಲವಾಗುವಂತೆ ₹10 ಲಕ್ಷ ವೆಚ್ಚದಲ್ಲಿ ಭೋಜನಾಲಯ ನಿರ್ಮಿಸಲಾಗಿದೆ.

ಶುಚಿತ್ವಕ್ಕೆ ಒತ್ತು ನೀಡಲು ₹4.30 ಲಕ್ಷದಲ್ಲಿ ಎರಡು ಹೈಟೆಕ್‌ ಶೌಚಗೃಹ ನಿರ್ಮಿಸಲಾಗುತ್ತಿದೆ. ₹15 ಲಕ್ಷ ವೆಚ್ಚದಲ್ಲಿ ಇಡೀ ಶಾಲೆ ಆವರಣದಲ್ಲಿ ಪೇವರ್ಸ್‌ ಅಳವಡಿಸಲಾಗಿದೆ. ₹9 ಲಕ್ಷದಲ್ಲಿ ಆವರಣ ಗೋಡೆ ನಿರ್ಮಿಸಿದ್ದರಿಂದ ಕಿಡಿಗೇಡಿಗಳು ಅಕ್ರಮವಾಗಿ ಶಾಲೆಗೆ ನುಗ್ಗುವುದು ತಪ್ಪಿದೆ. ₹2.10 ಲಕ್ಷ ವೆಚ್ಚದಲ್ಲಿ ಗೇಟ್‌ ಅಳವಡಿಸಲಾಗಿದ್ದು, ₹76 ಸಾವಿರ ವೆಚ್ಚದಲ್ಲಿ ಮಳೆ ನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಲಾಗಿದೆ. ಇಡೀ ಶಾಲೆಗೆ ಸುಣ್ಣ–ಬಣ್ಣ ಬಳಿದು, ‘ನರೇಗಾ’ ಮಾಹಿತಿಯನ್ನು ಗೋಡೆಗಳ ಮೇಲೆ ಬರೆಸಲಾಗಿದೆ. ಈ ಹಿಂದೆ ಹಲವು ಸಮಸ್ಯೆಗಳಿಂದ ಬಳಲುತ್ತಿದ್ದ ಶಾಲೆಯೀಗ ಸುಸಜ್ಜಿತ ಸೌಕರ್ಯಗಳೊಂದಿಗೆ ವಿದ್ಯಾರ್ಥಿಗಳನ್ನು ಸೆಳೆಯುತ್ತಿದೆ.

ಸದ್ಯ 12 ತರಗತಿ ಕೊಠಡಿಗಳಿದ್ದು, 10 ಶಿಕ್ಷಕರು ಕೆಲಸ ಮಾಡುತ್ತಿದ್ದಾರೆ. ಪ್ರೊಜೆಕ್ಟರ್‌ ಬಳಸಿ ವಿವಿಧ ವಿಷಯಗಳನ್ನು ಪರಿಣಾಮಕಾರಿಯಾಗಿ ಬೋಧಿಸಲಾಗುತ್ತಿದೆ. ಪಠ್ಯ ಮತ್ತು ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳು ಉತ್ತಮ ಸಾಧನೆ ತೋರುತ್ತಿದ್ದಾರೆ. 2021–22ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಶಾಲೆ ಶೇ 92 ಫಲಿತಾಂಶ ದಾಖಲಿಸಿದೆ.

ದಾನಿಗಳ ನೆರವು

ತಮ್ಮೂರಿನ ಶಾಲೆ ಅಭಿವೃದ್ಧಿಗೆ ದಾನಿಗಳೂ ಕೈಜೋಡಿಸಿದ್ದಾರೆ. ವಿವಿಧ ಪರಿಕರಗಳನ್ನು ಕಾಣಿಕೆ
ಯಾಗಿ ನೀಡುವ ಜತೆಗೆ, ಧ್ವನಿವರ್ಧಕ ವ್ಯವಸ್ಥೆ ಮಾಡಿಸಿದ್ದಾರೆ. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ‍ಪ್ರಯೋಗಾಲಯ, ಓದುವ ಕೊಠಡಿ, ಸಭಾಂಗಣ ನಿರ್ಮಿಸಲಾಗಿದೆ. ಜಲ ಬವಣೆ ತಲೆದೋರಬಾರದೆಂದು ಸ್ಥಳೀಯ ಗ್ರಾಮ ಪಂಚಾಯಿತಿಯವರು ಕೊಳವೆಬಾವಿ ಕೊರೆಯಿಸಿದ್ದಾರೆ.

***

ನರೇಗಾ ಯೋಜನೆ ನಮ್ಮ ಶಾಲೆಗೆ ಹೊಸ ಹೊಳಪು ಕೊಟ್ಟಿದೆ. ಭೌತಿಕ ಸೌಕರ್ಯಗಳು ಹೆಚ್ಚಿದ್ದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಸಾಧ್ಯವಾಗಿದೆ

- ಬಸವರಾಜ ಅಂಗಡಿ, ಮುಖ್ಯಶಿಕ್ಷಕ

ಮೇಲಾಧಿಕಾರಿಗಳ ಮಾರ್ಗದರ್ಶನದಲ್ಲಿ ಸವದತ್ತಿ ತಾಲ್ಲೂಕಿನ ಎಲ್ಲ ಸರ್ಕಾರಿ ಶಾಲೆಗಳನ್ನು ನರೇಗಾ ಯೋಜನೆಯಡಿ ಅಭಿವೃದ್ಧಿಪಡಿಸುತ್ತಿದ್ದೇವೆ. ಮಕ್ಕಳಿಗೆ ವಿವಿಧ ಸೌಕರ್ಯ ಕಲ್ಪಿಸುತ್ತಿದ್ದೇವೆ

- ಯಶವಂತಕುಮಾರ್‌, ಕಾರ್ಯನಿರ್ವಾಹಕ ಅಧಿಕಾರಿ, ಸವದತ್ತಿ ತಾ.ಪಂ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT