ಶುಕ್ರವಾರ, ಮೇ 20, 2022
25 °C
ಸಕಲ ‘ಹತಾರ’ ಬಳಸಲು ಕಾಂಗ್ರೆಸ್ ಅಣಿ: ಮತಾಂತರ ನಿಷೇಧ ಅಸ್ತ್ರ ಹಿಡಿದ ಬಿಜೆಪಿ

ಬೆಳಗಾವಿ: ಕಲಾಪವೋ ಕದನವೋ

ವೈ.ಗ. ಜಗದೀಶ್‌ Updated:

ಅಕ್ಷರ ಗಾತ್ರ : | |

Prajavani

ಬೆಳಗಾವಿ: ಸರ್ಕಾರಿ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 40ರಷ್ಟು ಲಂಚ, ಪ್ರಭಾವಿ ರಾಜಕಾರಣಿಗಳ ಮಕ್ಕಳು ಹಾಗೂ ಹಿರಿಯ ಅಧಿಕಾರಿಗಳು ಭಾಗಿಯಾಗಿದ್ದಾರೆಂದು ಆಪಾದಿಸಲಾಗಿರುವ ಬಿಟ್ ಕಾಯಿನ್ ಹಗರಣವನ್ನು ಮುಂದಿಟ್ಟು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ವಿರೋಧ ಪಕ್ಷ ಕಾಂಗ್ರೆಸ್ ಅಣಿಯಾಗಿದ್ದರೆ, ಇದೇ ಅಸ್ತ್ರಗಳನ್ನು ಎದುರಾಳಿಯತ್ತ ಎಸೆದು ವಿರೋಧ ಪಕ್ಷದ ಬಾಯಿ ಮುಚ್ಚಿಸಲು ಆಡಳಿತಾರೂಢ ಬಿಜೆಪಿ ಸಜ್ಜಾಗಿದೆ.

ಸೋಮವಾರ ಆರಂಭವಾಗುವ ಅಧಿವೇಶನದಲ್ಲಿ ಕಾಂಗ್ರೆಸ್‌ನ ಸಂಭಾವ್ಯ ದಾಳಿಯನ್ನು ಎದುರಿಸಲು ಮತಾಂತರ ನಿಷೇಧ ಮಸೂದೆ ಮಂಡಿಸಿ, ಚರ್ಚೆಯ ದಿಕ್ಕನ್ನೇ ಬದಲಾಯಿಸಲು ಆಡಳಿತ ಪಕ್ಷ ಆಲೋಚಿಸಿದೆ. 10 ದಿನಗಳ ಕಲಾಪವೋ– ಕದನವೋ ಎಂಬ ಕುತೂಹಲವಂತೂ ರಾಜಕೀಯ ಪಡಸಾಲೆಯಲ್ಲಿದೆ.

ಕೋವಿಡ್ ಕಾರಣದಿಂದಾಗಿ ಹಿಂದಿನ ಎರಡು ವರ್ಷ ಇಲ್ಲಿ ಅಧಿವೇಶನ ನಡೆದಿರಲಿಲ್ಲ. ಹೀಗಾಗಿ, ಈ ಭಾಗದ ಜನರು ಹಾಗೂ ಸಂಘಟನೆಗಳವರಿಗೆ ತಮ್ಮ ಕೂಗನ್ನು ಸರ್ಕಾರಕ್ಕೆ ಮುಟ್ಟಿಸುವ ಅವಕಾಶ ಲಭಿಸಿದ್ದು, ಅದನ್ನು ಸಮರ್ಥವಾಗಿ ಬಳಸಿಕೊಳ್ಳಲು ಹೋರಾಟಗಾರರು ತಯಾರಿ ನಡೆಸಿದ್ದಾರೆ. ಸದನದ ಹೊರಗೆ ಕದನವನ್ನು ನಡೆಸಿ, ಸರ್ಕಾರದ ಗಮನಸೆಳೆಯುವ ಯತ್ನಕ್ಕೆ ಚಳವಳಿಗಾರರು ಮುಂದಡಿ ಇಟ್ಟಿದ್ದಾರೆ.

ಈ ಬಾರಿಯ ಮತ್ತೊಂದು ವಿಶೇಷವೆಂದರೆ ಎಂಟು ವರ್ಷಗಳ ಬಳಿ ಉತ್ತರ ಕರ್ನಾಟಕವನ್ನು ಪ್ರತಿನಿಧಿಸುವರೊಬ್ಬರು ಮುಖ್ಯಮಂತ್ರಿಯಾಗಿದ್ದು, ಈ ಭಾಗದ ಆಶೋತ್ತರವನ್ನು ಅವರ ಮುಂದೆ ಮಂಡಿಸಿ, ತಮ್ಮ ಬೇಡಿಕೆ ಈಡೇರಿಸಿಕೊಳ್ಳಬೇಕೆಂಬ ತವಕ ಜನಪ್ರತಿನಿಧಿಗಳು ಹಾಗೂ ಜನರಲ್ಲಿ ಮೂಡಿದೆ. ಏಕೆಂದರೆ 2012ರಲ್ಲಿ ಮುಖ್ಯಮಂತ್ರಿಯಾಗಿದ್ದ ಜಗದೀಶ್ ಶೆಟ್ಟರ್ ಅವರ ಬಳಿಕ ಅದೇ ಧಾರವಾಡ ಸೀಮೆಯಲ್ಲಿ ಬೆಳೆದ ಬಸವರಾಜ ಬೊಮ್ಮಾಯಿ ಆಡಳಿತ ಚುಕ್ಕಾಣಿ ಹಿಡಿದಿದ್ದಾರೆ. ಅವರು ಮುಖ್ಯಮಂತ್ರಿಯಾದ ಬಳಿಕ ಇಲ್ಲಿ ನಡೆಯುತ್ತಿರುವ ಮೊದಲ ಅಧಿವೇಶನ ಇದಾಗಿದೆ. ಈ ಭಾಗದ ಪ್ರತಿನಿಧಿಯಾಗಿ ಇತ್ತಲಿನ ಸೀಮೆಯ ಕೂಗಿಗೆ ಕಿವಿಗೊಟ್ಟು, ಸ್ಪಂದಿಸುವ ಸವಾಲು ಬೊಮ್ಮಾಯಿ ಎದುರು ಇದೆ.

ಕಾಂಗ್ರೆಸ್ ಕೈಯಲ್ಲಿ ಪ್ರಬಲಾಸ್ತ್ರ: 2023ರಲ್ಲಿ ಮುಖಾಮುಖಿಯಾಗಲಿರುವ ವಿಧಾನಸಭೆ ಚುನಾವಣೆಯ ಕಾವು ಈಗಿನಿಂದಲೇ ಶುರುವಾಗಿದ್ದು, ಸರ್ಕಾರದ ತಪ್ಪು ಹೆಜ್ಜೆಗಳನ್ನು ಮುಂದಿಟ್ಟು ಜನರ ವಿಶ್ವಾಸ ಗಳಿಸುವ ತಯಾರಿಯನ್ನು ಕಾಂಗ್ರೆಸ್ ನಡೆಸಲಾರಂಭಿಸಿದೆ.

ಕಲಾಪದ ಅವಧಿಯನ್ನು ಅದಕ್ಕೆ ಮೀಸಲಿಟ್ಟು ಸರ್ಕಾರದ ಲೋಪದೋಷಗಳನ್ನು ಜನರ ಮುಂದೆ ತೆರೆದಿಡಲು ಈ ಬಾರಿ ಅನೇಕ ಹತಾರಗಳು ಕಾಂಗ್ರೆಸ್‌ ಕೈಗೆ ಸಿಕ್ಕಿವೆ. ಸರ್ಕಾರದ ಕಾಮಗಾರಿಗಳ ಗುತ್ತಿಗೆಯಲ್ಲಿ ಶೇ 40ರಷ್ಟು ಲಂಚ ಪಡೆಯಲಾಗುತ್ತಿದೆ ಎಂದು ಪ್ರಧಾನಿ ಕಚೇರಿಗೆ ತಲುಪಿರುವ ಗುತ್ತಿಗೆದಾರರ ಸಂಘದ ದೂರನ್ನು ಮುಂದಿಟ್ಟುಕೊಂಡು ಸರ್ಕಾರವನ್ನು ಅಡಕತ್ತರಿಗೆ ದೂಡಲು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅಣಿಯಾಗಿದ್ದಾರೆ. ಬಹುಕೋಟಿ ಹಣ ಅಕ್ರಮವಾಗಿ ವರ್ಗಾವಣೆಯಾಗಿದೆ ಎನ್ನಲಾಗುತ್ತಿರುವ ಬಿಟ್ ಕಾಯಿನ್ ಹಗರಣದ ದೂರು ಪ್ರಧಾನಿ ಕಚೇರಿಗೆ ತಲುಪಿದ್ದು, ಈ ವಿಷಯವನ್ನು ಸರ್ಕಾರವನ್ನು ಹಣಿಯುವ ಅಸ್ತ್ರವಾಗಿ ಬಳಸಲು ಕಾಂಗ್ರೆಸ್‌ ಸಜ್ಜುಗೊಂಡಿದೆ.

ಇದರ ಜತೆಗೆ ಕೋವಿಡ್ ಅವಧಿಯಲ್ಲಿನ ಖರೀದಿ ಅಕ್ರಮ ಕುರಿತು ಸಾರ್ವಜನಿಕ ಲೆಕ್ಕ ಪತ್ರ ಸಮಿತಿಯ ವರದಿಯು ಸದನದಲ್ಲಿ ಮಂಡನೆಯಾಗುವ ಸಂಭವ ಇದೆ. ಅದನ್ನು ಕೂಡ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸುವ ಸಾಧನವಾಗಿ ಬಳಸಲು ಪ್ರತಿಪಕ್ಷ ಸಿದ್ಧತೆ ನಡೆಸಿದೆ. ಮಳೆಹಾನಿಗೆ ಸ್ಪಂದಿಸದೇ ಇರುವುದು, ಕೋವಿಡ್ ಕಾಲದ ಸಾವು ನೋವುಗಳು ಚರ್ಚೆಯ ಮುನ್ನೆಲೆಗೆ ಬರಲಿವೆ. ಕೇಂದ್ರ ಸರ್ಕಾರವು ಕೃಷಿ ಕಾಯ್ದೆಯನ್ನು ವಾಪಸ್ ಪಡೆದಂತೆ ರಾಜ್ಯದಲ್ಲೂ ಪಡೆಯಬೇಕು ಎಂಬ ಬೇಡಿಕೆಯೂ ಅಧಿವೇಶನದ ಪ್ರಮುಖ ವಿಷಯವಾಗುವ ಸಾಧ್ಯತೆ ಇದೆ.

ಆಡಳಿತ ಪಕ್ಷದ ಪ್ರತ್ಯಸ್ತ್ರ: ಮಳೆಹಾನಿಯಿಂದ ನಷ್ಟಕ್ಕೆ ಒಳಗಾದವರಿಗೆ ತಕ್ಷಣದಲ್ಲೇ ಪರಿಹಾರ ಒದಗಿಸಿರುವ ಸರ್ಕಾರ, ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಆರು ತಿಂಗಳು, ವರ್ಷ ಕಳೆದರೂ ಪರಿಹಾರ ಸಿಕ್ಕುತ್ತಿರಲಿಲ್ಲ ಎಂಬ ವಾದ ಮುಂದಿಟ್ಟು ವಿರೋಧ ಪಕ್ಷವನ್ನು ಮಣಿಸುವ ಅಸ್ತ್ರವನ್ನೂ ಇಟ್ಟುಕೊಂಡಿದೆ.

‘ಶೇ 40ರಷ್ಟು ಲಂಚದ ಆರೋಪಕ್ಕೆ ಯಾವುದೇ ಸಾಕ್ಷ್ಯವಿಲ್ಲ; ಅದು ರಾಜಕೀಯ ಪ್ರೇರಿತ ಎಂದು ಮುಖ್ಯಮಂತ್ರಿ ಬೊಮ್ಮಾಯಿ ಈಗಾಗಲೇ ಪ್ರತಿಪಾದಿಸಿದ್ದಾರೆ. ಇದನ್ನೇ ಪ್ರತ್ಯುತ್ತರವಾಗಿ ಬಳಸಲು ಆಡಳಿತ ಪಕ್ಷ ಆಲೋಚಿಸಿದ್ದು, ಕಾಂಗ್ರೆಸ್ ಸರ್ಕಾರದ ಅವಧಿಯ ಹಗರಣಗಳನ್ನು ಮುಂದೆ ಮಾಡಿ ಎದುರಾಳಿಗಳ ದಾಳಿಯನ್ನು ಬದಿಗಟ್ಟುವ ಯತ್ನ ನಡೆಸಲಾಗುವುದು. ಕಾಂಗ್ರೆಸ್ ಅವಧಿಯಲ್ಲೇ ಅಂತರರಾಷ್ಟ್ರೀಯ ಹ್ಯಾಕರ್‌ ಶ್ರೀಕೃಷ್ಣನನ್ನು ವಶಕ್ಕೆ ಪಡೆಯಲಾಗಿತ್ತು. ಬಿಟ್‌ ಕಾಯಿನ್ ಹಗರಣ ಕೂಡಾ ಆಗಲೇ ನಡೆದಿದ್ದು, ಆ ಪಕ್ಷದ ನಾಯಕರ ಮಕ್ಕಳೇ ಭಾಗಿಯಾಗಿದ್ದಾರೆ ಎಂಬ ದಾಖಲೆಯನ್ನು ಮುಂದಿಟ್ಟು ವಿರೋಧ ಪಕ್ಷದ ವಾದವನ್ನು ಮಣಿಸಲಾಗುವುದು‘ ಎಂದು ಬಿಜೆಪಿ ನಾಯಕರೊಬ್ಬರು ಹೇಳಿದರು.

ಉ–ಕ ವಿಷಯ ಚರ್ಚೆಗೆ ಎರಡು ದಿನ: ಪರಿಶೀಲನೆ
ಬೆಳಗಾವಿ:
ಸೋಮವಾರದಿಂದ ಆರಂಭವಾಗಲಿರುವ ವಿಧಾನಸಭಾ ಅಧಿವೇಶನದಲ್ಲಿ ಉತ್ತರ ಕರ್ನಾಟಕ ಭಾಗದ ವಿಷಯಗಳ ಕುರಿತ ಚರ್ಚೆಗೆ 2 ದಿನ ಮೀಸಲಿಡಬೇಕು ಎಂಬ ಮನವಿಯನ್ನು ಪರಿಶೀಲಿಸುವುದಾಗಿ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು.

ಸುದ್ದಿಗಾರರ ಜತೆಗೆ ಭಾನುವಾರ ಮಾತನಾಡಿದ ಅವರು, ‘ಈ ಕುರಿತು ಹಲವು ಸದಸ್ಯರು ಮನವಿ ಮಾಡಿದ್ದಾರೆ. ಕಲಾಪ ಸಲಹಾ ಸಮಿತಿ ಸಭೆಯಲ್ಲಿ ಈ ಬಗ್ಗೆ ಚರ್ಚಿಸುತ್ತೇನೆ. ಇದಕ್ಕೆ ಅವಕಾಶ ಮಾಡಿಕೊಡುವ ಸಾಧ್ಯತೆಗಳ ಬಗ್ಗೆಯೂ ಪರಿಶೀಲಿಸುತ್ತೇನೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು