ಬುಧವಾರ, 31 ಮೇ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಆಟೊ ಚಾಲಕರ ಚದುರಿಸಲು ಲಘು ಲಾಠಿ ಪ್ರಹಾರ

ಬೈಕ್ ಟ್ಯಾಕ್ಸಿ ನಿಷೇಧಿಸಲು ಒತ್ತಾಯ: ರಸ್ತೆ ತಡೆ ನಡೆಸಿ ಸರ್ಕಾರದ ವಿರುದ್ಧ ಆಕ್ರೋಶ
Last Updated 20 ಮಾರ್ಚ್ 2023, 19:30 IST
ಅಕ್ಷರ ಗಾತ್ರ

ಬೆಂಗಳೂರು: ‘ರ್‍ಯಾಪಿಡೊ ಹಾಗೂ ಇತರೆ ಕಂಪನಿಗಳ ಬೈಕ್ ಟ್ಯಾಕ್ಸಿ ನಿಷೇಧಿಸಬೇಕು’ ಎಂದು ಆಗ್ರಹಿಸಿ, ಸೋಮವಾರ ಶೇಷಾದ್ರಿಪುರ ರಸ್ತೆ ಬಂದ್ ಮಾಡಿ ರಸ್ತೆತಡೆ ನಡೆಸಿದ ಆಟೊ ಚಾಲಕರ ಮೇಲೆ ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿ ಸ್ಥಳದಿಂದ ಚದುರಿಸಿದರು.

ಲಾಠಿ ಏಟಿನಿಂದ ಕೆಲವು ಆಟೊ ಚಾಲಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಕೆಲವರು ಓಡಿ ತಪ್ಪಿಸಿಕೊಂಡರು. ಓಡುವಾಗ ಬಿದ್ದು ಕೆಲವರು ಗಾಯಗೊಂಡರು.

ಬೈಕ್ ಟ್ಯಾಕ್ಸಿ ನಿಷೇಧಿಸಬೇಕು ಎಂದು ಆಗ್ರಹಿಸಿ ಆಟೊ ಚಾಲಕರ ಒಕ್ಕೂಟ ಹಾಗೂ ಓಲಾ-ಊಬರ್‌ ಚಾಲಕ ಹಾಗೂ ಮಾಲೀಕರ ಸಂಘವು ಪ್ರತಿಭಟನೆಗೆ ಕರೆ ನೀಡಿತ್ತು. ಕೆಲವು ನಿಲ್ದಾಣಗಳಲ್ಲಿ ಭಾನುವಾರ ಮಧ್ಯರಾತ್ರಿಯಿಂದಲೇ ಆಟೊ ಸಂಚಾರ ಸ್ಥಗಿತಗೊಳಿಸಲಾಗಿತ್ತು.

ವಿವಿಧ ಕಡೆಗಳಿಂದ ಸಿಟಿ ರೈಲ್ವೆ ನಿಲ್ದಾಣದ ಬಳಿಗೆ ದೊಡ್ಡ ಸಂಖ್ಯೆಯಲ್ಲಿ ಆಟೊ ಚಾಲಕರು ಬಂದರು. ಕಪ್ಪು ಬಾವುಟ ಹಿಡಿದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಮುತ್ತಿಗೆ ಹಾಕಲು ಚಾಲಕರು ಮುಂದಾದರು. ಪ್ರತಿಭಟನಕಾರರನ್ನು ಕೆ.ಆರ್‌.ವೃತ್ತದಲ್ಲೇ ತಡೆಯಲಾಯಿತು. ಇದರಿಂದ ಆಕ್ರೋಶಗೊಂಡ ಚಾಲಕರು ಘೋಷಣೆ ಕೂಗಿದರು. ಪೊಲೀಸರ ಜತೆಗೆ ಮಾತಿನ ಚಕಮಕಿ ನಡೆಯಿತು. ನಂತರ ಚಾಲಕರನ್ನು ವಶಕ್ಕೆ ಪಡೆದು, ಬಿಡುಗಡೆ ಮಾಡಲಾಯಿತು. ರಸ್ತೆತಡೆಯಿಂದ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡು ಸಾರ್ವಜನಿಕರು ಪರದಾಡಿದರು. ಬಸ್‌, ಕಾರುಗಳು ರಸ್ತೆಯಲ್ಲೇ ನಿಂತಿದ್ದವು.

ಮೆಜೆಸ್ಟಿಕ್‌, ಉಪ್ಪಾರಪೇಟೆ, ಎಂ.ಜಿ. ರಸ್ತೆ, ಗಾಂಧಿನಗರ, ರೇಸ್‌ಕೋರ್ಸ್‌, ಹೈಗ್ರೌಂಡ್ಸ್‌, ವಸಂತನಗರ, ವಿಧಾನಸೌಧ ಸುತ್ತಮುತ್ತ, ರಾಜ್‌ಕುಮಾರ್ ರಸ್ತೆ, ಕೆ.ಆರ್.ಮಾರುಕಟ್ಟೆ, ಶಿವಾಜಿನಗರದ ನಿಲ್ದಾಣಗಳಲ್ಲಿ ಆಟೊ ಸಂಚಾರ ಸಂಪೂರ್ಣ ಸ್ಥಗಿತಗೊಳಿಸಲಾಗಿತ್ತು.

ಪ್ರಯಾಣಿಕರ ಪರದಾಟ: ನಗರದ ಪ್ರಮುಖ ನಿಲ್ದಾಣಗಳಲ್ಲಿ ಆಟೊ ಸೇವೆ ಇರಲಿಲ್ಲ. ಇದರಿಂದ ದೂರದ ಊರುಗಳಿಂದ ನಗರಕ್ಕೆ ಬಂದವರು ತಮ್ಮ ಕೆಲಸ ಕಾರ್ಯಕ್ಕೆ ತೆರಳಲು ಪರದಾಡಿದರು. ಕೆಲವು ಬಡಾವಣೆಗಳಲ್ಲಿ ಆಟೊ ಸಂಚಾರ ಯಥಾಸ್ಥಿತಿಯಲ್ಲಿತ್ತು. ನಮಗೆ ಪ್ರತಿಭಟನೆಯ ಮಾಹಿತಿಯಿರದ ಕಾರಣಕ್ಕೆ ಆಟೊ ಓಡಿಸುತ್ತಿದ್ದೇವೆ ಎಂದು ಹೇಳಿದರು.

‘ವೈಟ್‌ ಬೋರ್ಡ್‌ನವರಿಗೆ ಬಾಡಿಗೆಗೆ ವಾಹನ ಓಡಿಸಲು ಅವಕಾಶವಿಲ್ಲ. ಆದರೆ, ಕಳೆದ ಮೂರು ವರ್ಷಗಳಿಂದ ಬೆಂಗಳೂರಿನಲ್ಲಿ ವೈಟ್‌ ಬೋರ್ಡ್‌ನವರು ಬಾಡಿಗೆ ಓಡಿಸುತ್ತಿದ್ದಾರೆ. ಸಾರಿಗೆ ಇಲಾಖೆಯವರಿಗೆ ಮಾಹಿತಿಯಿದ್ದರೂ ಕ್ರಮ ಕೈಗೊಳ್ಳುತ್ತಿಲ್ಲ. ರ್‍ಯಾಪಿಡೊ ಬೈಕ್ ಸಂಚಾರದಿಂದ ಜೀವನ ನಡೆಸಲು ಸಾಧ್ಯವಾಗುತ್ತಿಲ್ಲ’ ಎಂದು ಚಾಲಕರು ಅಳಲು ತೋಡಿಕೊಂಡರು.

‘ಆಟೊ ನಂಬಿ ಜೀವನ ನಡೆಸುತ್ತಿದ್ದೇವೆ. ರಸ್ತೆ ತೆರಿಗೆ ಪಾವತಿಸುತ್ತಿದ್ದೇವೆ. ಆದರೆ, ವೈಟ್‌ ಬೋರ್ಡ್‌ನವರಿಗೆ ಬಾಡಿಗೆ ಅವಕಾಶ ನೀಡಿ ನಮ್ಮ ಹೊಟ್ಟೆಯ ಮೇಲೆ ಹೊಡೆಯಲಾಗುತ್ತಿದೆ’ ಎಂದು ಆಕ್ರೋಶ ಹೊರಹಾಕಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ADVERTISEMENT
ADVERTISEMENT

ಇನ್ನಷ್ಟು ಸುದ್ದಿ

ಇನ್ನಷ್ಟು
ADVERTISEMENT
ADVERTISEMENT
ADVERTISEMENT
ಪ್ರಜಾವಾಣಿ ವಿಡಿಯೊ
ಸಿನಿಮಾ
ADVERTISEMENT