ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯದ 20 ಸಾವಿರ ಮರಗಳಿಗೆ ಆಪತ್ತು!

ರಾಜ್ಯದಲ್ಲಿ 72 ಗ್ರಾಮಗಳ ಮೂಲಕ ಹಾದುಹೋಗಲಿದೆ ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿ
Last Updated 8 ನವೆಂಬರ್ 2020, 23:35 IST
ಅಕ್ಷರ ಗಾತ್ರ

ಬೆಂಗಳೂರು: ಬೆಂಗಳೂರು– ಚೆನ್ನೈ ಎಕ್ಸ್‌ಪ್ರೆಸ್‌ ಹೆದ್ದಾರಿಯ ಮೊದಲ ಹಂತದ (71 ಕಿ.ಮೀ) ಕಾಮಗಾರಿಗೆ
ರಾಜ್ಯವು 20,748 ಮರಗಳನ್ನು ಕಳೆದುಕೊಳ್ಳಲಿದೆ. ಈ ಕಾಮಗಾರಿಯಿಂದ ಸುಮಾರು 30 ಸಾವಿರ ಮಂದಿಯ ಬದುಕಿನ ಮೇಲೆ ನೇರ ಪರಿಣಾಮ ಉಂಟಾಗಲಿದೆ.

ಒಟ್ಟು 330 ಕಿ.ಮೀ ಉದ್ದದ ಈ ಎಕ್ಸ್‌ಪ್ರೆಸ್‌ ಹೆದ್ದಾರಿಯನ್ನು ಮೂರು ಹಂತಗಳಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ.
ಅದರಲ್ಲಿ ಮೊದಲ ಹಂತವು ಬೆಂಗಳೂರಿನ ಅಂಚಿನಿಂದ ಆರಂಭವಾಗಿ ಮುಳಬಾಗಿಲು ಬೇತಮಂಗಲ ಬಳಿ ಕೊನೆಯಾಗಲಿದೆ.

ಈ ಹೆದ್ದಾರಿಯ ಕಾಮಗಾರಿಗೆ ಕೋಲಾರದ ಒಣ ಪ್ರದೇಶಗಳಲ್ಲೇ ಅತೀ ಹೆಚ್ಚು ಪ್ರಮಾಣದ (ಶೇ 85ರಷ್ಟು) ಹಸಿರನ್ನು ಕಳೆದುಕೊಳ್ಳಬೇಕಾಗುತ್ತದೆ.

ಕೋಲಾರದ ಪಾಲಿಗೆ ಶಾಪವೆಂದೇ ಪರಿಗಣಿಸಲಾದ ನೀಲಗಿರಿ ಮರಗಳನ್ನು ಕಳೆದುಕೊಳ್ಳುವುದರಿಂದ ಅಷ್ಟೇನೂ ನಷ್ಟವಾಗದು. ಆದರೆ, ಮಾವು, ತೆಂಗು, ಸಾಗುವಾನಿ, ಪೇರಳೆ, ಕಹಿಬೇವು, ಹುಣಸೆ ಮರಗಳನ್ನು ಕಳೆದುಕೊಳ್ಳುವುದರಿಂದ ಇಲ್ಲಿನ ಭೌಗೋಳಿಕತೆ ಹಾಗೂ ರೈತರ ಬದುಕಿನ ಮೇಲೂ ಪರಿಣಾಮ ನಿಶ್ಚಿತ.

ಮೊದಲ ಹಂತದಲ್ಲಿ ನಿರ್ಮಾಣವಾಗಲಿರುವ ಮಾರ್ಗವು ಒಟ್ಟು 72 ಗ್ರಾಮಗಳ ಮೂಲಕ ಹಾದು ಹೋಗುತ್ತದೆ. ಇದಕ್ಕಾಗಿ 1,890 ಎಕರೆ ಭೂಸ್ವಾಧೀನ ನಡೆಸಬೇಕಾಗಿದ್ದು, ಇದರಿಂದ 5,611 ಕುಟುಂಬಗಳ 28,055 ಮಂದಿಯ ಬದುಕಿನ ಮೇಲೆ ಪರಿಣಾಮ ಉಂಟಾಗಲಿದೆ. ಮಾರ್ಗವು ಹಾದು ಹೋಗುವ ಕಡೆ ನೆಲೆಸಿರುವ 344 ಕುಟುಂಬಗಳ 1,720 ಮಂದಿಗೆ ಪುನರ್ವಸತಿ ಕಲ್ಪಿಸಬೇಕಾಗುತ್ತದೆ.

ಭಾರತೀಯ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರವು 2018ರಲ್ಲೇ ಈ ಯೋಜನೆಗಾಗಿ ಪರಿಸರ ಅರಣ್ಯ ಮತ್ತು ಹವಾಮಾನ ವೈಪರೀತ್ಯ ಸಚಿವಾಲಯದಿಂದ ಅನುಮತಿ ಕೇಳಿತ್ತು. ಪ್ರಾಧಿಕಾರದ ಅಧಿಕಾರಿಗಳು ತಜ್ಞರ ಸಮಿತಿಯ ಶಿಫಾರಸಿನ ಮೇರೆಗೆ ಈ ಯೋಜನೆಯಿಂದ ಪರಿಸರದ ಮೇಲಾಗುವ ಪರಿಣಾಮದ ಬಗ್ಗೆ ಸಮಗ್ರ ವರದಿಯನ್ನು ಸಲ್ಲಿಸಿದ್ದಾರೆ.

ಬಹುಕಾಲದ ಬೇಡಿಕೆ: ಕೈಗಾರಿಕೆಗಳಲ್ಲಿ ಉತ್ಸಾಹ

ಈ ಎಕ್ಸ್‌ಪ್ರೆಸ್‌ ಹೆದ್ದಾರಿಯು ಕೆಜಿಎಫ್‌ನಲ್ಲಿರುವ ಕೈಗಾರಿಕೆಗಳ ಪುನಃಶ್ಚೇತನಕ್ಕೂ ದಾರಿ ಮಾಡಿಕೊಡಲಿದೆ. ಇದು ಇಲ್ಲಿನ ನಿವಾಸಿಗಳ ಬಹುಕಾಲದ ಬೇಡಿಕೆಯಾಗಿದೆ.

ಈ ಯೋಜನೆಯ ಕಾಮಗಾರಿಗಳಿಗೆ ಕಳೆದ ವಾರ ಟೆಂಡರ್‌ ಕರೆಯಲಾಗಿದೆ. ಎರಡೂ ರಾಜ್ಯಗಳ ಉದ್ಯಮಿಗಳು ಇದನ್ನು ಸ್ವಾಗತಿಸಿದ್ದಾರೆ.

ಈ ಎಕ್ಸ್‌ಪ್ರೆಸ್‌ ಹೆದ್ದಾರಿ ನಿರ್ಮಿಸಬೇಕು ಎಂಬ ಪ್ರಸ್ತಾಪವು ಸರ್ಕಾರವು ಚೆನ್ನೈ– ಬೆಂಗಳೂರು ಆರ್ಥಿಕ ಕಾರಿಡಾರ್‌ ಯೋಜನೆಯ ರೂಪುರೇಷೆ ಸಿದ್ಧಪಡಿಸುವುದಕ್ಕೆ ಸಾಕಷ್ಟು ಮುನ್ನವೇ ಚಾಲ್ತಿಯಲ್ಲಿತ್ತು.

‘ಕರ್ನಾಟಕ ಹಾಗೂ ತಮಿಳುನಾಡಿನಲ್ಲಿ ಅಭಿವೃದ್ಧಿ ಚಟುವಟಿಕೆಗಳಿಗೆ ಈ ಯೋಜನೆಯಿಂದ ಉತ್ತೇಜನ ಸಿಗಲಿದೆ’ ಎನ್ನುತ್ತಾರೆ ಭಾರತೀಯ ಕೈಗಾರಿಕೆಗಳ ಒಕ್ಕೂಟದ (ಸಿಐಐ) ಕರ್ನಾಟಕ ಚಾಪ್ಟರ್‌ನ ಸಂದೀಪ್‌ ಸಿಂಗ್‌. ಅವರು ಟಾಟಾ ಹಿಟಾಚಿ ಕನ್‌ಸ್ಟ್ರಕ್ಷನ್‌ ಮೆಷಿನರಿ ಲಿಮಿಟೆಡ್‌ ಸಂಸ್ಥೆಯ ಆಡಳಿತ ನಿರ್ದೇಶಕರೂ ಆಗಿದ್ದಾರೆ.

‘ಈ ಯೋಜನೆಯು ಕರ್ನಾಟಕ– ತಮಿಳುನಾಡು ಪ್ರದೇಶಗಳಲ್ಲಿ ಅಂತರ ಕೈಗಾರಿಕಾ ಚಟುವಟಿಕೆ ಹೆಚ್ಚಳಕ್ಕೆ ಕಾರಣವಾಗಲಿದೆ. ಜೊತೆಗೆ ಕರ್ನಾಟಕ ರಾಜ್ಯದ ಕೈಗಾರಿಕೆಗಳಿಗೆ ನೆರೆರಾಜ್ಯದ ಬಂದರುಗಳೊಂದಿಗೆ ಉತ್ತಮ ಸಂಪರ್ಕವನ್ನು ಒದಗಿಸಲಿದೆ. ಇದು ಬಹುಕಾಲದ ಬೇಡಿಕೆ. ಈ ಯೋಜನೆ ಕೊನೆಗೂ ಅನುಷ್ಠಾನಗೊಳ್ಳುತ್ತಿರುವುದು ನಿಜಕ್ಕೂ ಖುಷಿಕೊಟ್ಟಿದೆ’ ಎಂದು ಅವರು ತಿಳಿಸಿದರು.

ಅಂಕಿ ಅಂಶ

16,049 ಮರಗಳು

ಹೆದ್ದಾರಿ ಕಾಮಗಾರಿಗೆ ಕೋಲಾರ ಜಿಲ್ಲೆಯಲ್ಲಿ ತೆರವಾಗುವ ಮರಗಳು

9,805

ತೆರವಾಗುವ ತೋಟಗಾರಿಕಾ ಬೆಳೆಗಳ ಮರಗಳು

4,699

ಕಾಮಗಾರಿಗಾಗಿ ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ತೆರವಾಗುವ ಒಟ್ಟು ಮರಗಳು

2,837

ತೆರವಾಗುವ ತೋಟಗಾರಿಕಾ ಬೆಳೆಗಳ ಮರಗಳು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT