ಭಾನುವಾರ, ಜನವರಿ 24, 2021
17 °C
ಗ್ರಾಹಕರ ವ್ಯಾಜ್ಯ ಪರಿಹಾರ ವೇದಿಕೆಗಳ ಸುಧಾರಣೆ ತಕ್ಷಣದ ಅಗತ್ಯ– ಸಲಹೆ

ಬಾಕಿ ಪ್ರಕರಣಗಳ ಇತ್ಯರ್ಥಕ್ಕೆ ಬೇಕು 7 ವರ್ಷ

ಪ್ರವೀಣ್‌ ಕುಮಾರ್‌ ಪಿ.ವಿ. Updated:

ಅಕ್ಷರ ಗಾತ್ರ : | |

ಬೆಂಗಳೂರು: ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗವು ಇನ್ನು ಮುಂದೆ ಯಾವುದೇ ಮೇಲ್ಮನವಿಗಳನ್ನು ಅಥವಾ ದೂರು ಅರ್ಜಿ ಸ್ವೀಕರಿಸದೆ, 2018ರವರೆಗಿನ ಅರ್ಜಿಗಳನ್ನು ಮಾತ್ರ ವಿಚಾರಣೆ ನಡೆಸಿದರೂ, ಅವುಗಳನ್ನು ಇತ್ಯರ್ಥಪಡಿಸಲು ಕನಿಷ್ಠ ಪಕ್ಷ ಏಳು ವರ್ಷಗಳಾದರೂ ಬೇಕು. ಅಷ್ಟೊಂದು ಪ್ರಕರಣಗಳು ವಿಚಾರಣೆಗ ಬಾಕಿ ಇವೆ.

‘ವಿಧಿ’ ಕಾನೂನು ನೀತಿ ಕೇಂದ್ರವು ಭಾರತದಲ್ಲಿ ನ್ಯಾಯ ಲಭ್ಯತೆ ಮತ್ತು ವಿಳಂಬ ನಿವಾರಣೆ (ಜಲ್ದಿ) ಕಾರ್ಯಕ್ರಮದ ಅಂಗವಾಗಿ ನಡೆಸಿರುವ ಅಧ್ಯಯನ ಈ ಕುರಿತು ಬೆಳಕು ಚೆಲ್ಲಿದೆ.

‘ವಿಧಿ’ ಕೇಂದ್ರವು ಕರ್ನಾಟಕ ರಾಜ್ಯ ಗ್ರಾಹಕರ ವ್ಯಾಜ್ಯ ಪರಿಹಾರ ಆಯೋಗ ಹಾಗೂ ಬೆಂಗಳೂರಿನಲ್ಲಿರುವ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗಳ (ಬೆಂಗಳೂರು ನಗರ ಜಿಲ್ಲೆ, ಗ್ರಾಮಾಂತರ ಜಿಲ್ಲೆ ಹಾಗೂ ಇಲ್ಲಿನ ನಾಲ್ಕು ಹೆಚ್ಚುವರಿ ಘಟಕಗಳು) ಕಾರ್ಯವೈಖರಿ, ಕಾರ್ಯದೊತ್ತಡಗಳ ಸಮಗ್ರ ಅಧ್ಯಯನ ನಡೆಸಿದೆ. 2013ರಿಂದ 18ರವರೆಗಿನ ಅಂಕಿ–ಅಂಶಗಳನ್ನು ವಿಶ್ಲೇಷಣೆಗೆ ಒಳಪಡಿಸಿದೆ. ಅಧ್ಯಯನ ವರದಿಯನ್ನು ಸಂಸ್ಥೆ ಇತ್ತೀಚೆಗೆ ಬಿಡುಗಡೆಗೊಳಿಸಿದೆ.

‘2018ರವರೆಗೆ ರಾಜ್ಯ ಆಯೋಗದಲ್ಲಿ ದೂರು ಅರ್ಜಿಗಳು ಹಾಗೂ ಮೇಲ್ಮನವಿಗಳು ಸೇರಿ ಒಟ್ಟು 10,578 ಪ್ರಕರಣಗಳು ಇತ್ಯರ್ಥಕ್ಕೆ ಬಾಕಿ ಇದ್ದವು. ಈ ಬಾಕಿ ಪ್ರಕರಣಗಳ ಸ್ಥಿತಿ ಈಗಲೂ ಹಾಗೆಯೇ ಮುಂದುವರಿದಿದೆ. ಹೆಚ್ಚುವರಿ ಸಂಪನ್ಮೂಲಗಳನ್ನು ಒದಗಿಸದೇ ಇದ್ದರೆ ಈ ಕಾರ್ಯದೊತ್ತಡದ ಹೊರೆ ಇಳಿಸಿಕೊಳ್ಳಲು ಆಯೋಗಕ್ಕೆ ಸಾಧ್ಯವೇ ಇಲ್ಲ’ ಎನ್ನುತ್ತಾರೆ ಅಧ್ಯಯನದ ರೂವಾರಿ ಆದಿತ್ಯ ರಂಜನ್‌. ಅವರು ದೀಪಿಕಾ ಕೆನ್‌ಹಾಲ್‌ ಜೊತೆ ಸೇರಿ ಈ ಅಧ್ಯಯನ ನಡೆಸಿದ್ದಾರೆ.

ವಿಚಾರಣೆ ಮುಂದೂಡಿಕೆಯೇ ವ್ಯಾಜ್ಯಗಳ ಇತ್ಯರ್ಥ ವಿಳಂಬವಾಗುವುದಕ್ಕೆ ಪ್ರಮುಖ ಕಾರಣ. ವಾದ ಪ್ರತಿವಾದ ಆಲಿಸುವ ಸಂದರ್ಭದಲ್ಲಿ ಮುಂದೂಡಿಕೆ ಪ್ರಮಾಣಗಳು ಜಾಸ್ತಿ. ಆಯೋಗದಲ್ಲಿ ಪ್ರಕರಣವೊಂದನ್ನು ಈ ಹಂತದಲ್ಲಿ ಸರಾಸರಿ 15.9 ಬಾರಿ ಮುಂದೂಡಲಾಗಿದೆ. ಬೆಂಗಳೂರಿನಲ್ಲಿರುವ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಗಳಲ್ಲಿ ಸರಾಸರಿ 7.5 ಬಾರಿ ಮುಂದೂಡಲಾಗಿದೆ.

‘ವ್ಯಾಜ್ಯ ಪರಿಹಾರ ಪ್ರಕ್ರಿಯೆಯನ್ನು ಇನ್ನಷ್ಟು ದಕ್ಷವಾಗಿ ನಿರ್ವಹಿಸಲು ವಿಚಾರಣೆ ಮುಂದೂಡಿಕೆಗೆ ಕಡಿವಾಣ ಹಾಕಬೇಕಾದ ಅಗತ್ಯ ಇದೆ. ಬೆಂಗಳೂರಿನ ವೇದಿಕೆಗಳಲ್ಲಿ ದಾಖಲಾಗಿರುವ ಪ್ರಕರಣಗಳಲ್ಲಿ ವಸತಿ, ವಿಮೆ ಹಾಗೂ ಬ್ಯಾಂಕಿಂಗ್‌ ವಲಯಗಳಿಗೆ ಸಂಬಂಧಿಸಿದವುಗಳೇ ಜಾಸ್ತಿ. ಈ ವಲಯದ ವ್ಯಾಜ್ಯಗಳ ವಿಚಾರಣೆಗೆ ವಿಶೇಷ ಗಮನ ನೀಡಬೇಕು’ ಎಂದೂ ಅಧ್ಯಯನ ಶಿಫಾರಸು ಮಾಡಿದೆ.

ಆದೇಶ ಜಾರಿಯೂ ವಿಳಂಬ: ‘ಆದೇಶಗಳ ಜಾರಿಗಾಗಿ ಅನುಷ್ಠಾನ ಅರ್ಜಿಗಳ (ಇಎ) ವಿಲೇವಾರಿ ಶೇ 59.9ರಷ್ಟು ಬಾಕಿ ಇವೆ. ಇಂತಹ ಅರ್ಜಿಗಳು ಐದು ವರ್ಷಗಳ ಬಳಿಕವೂ ವಿಲೇ ಆಗದ ಉದಾಹರಣೆಗಳಿವೆ. ಆದೇಶಗಳನ್ನು ಪಡೆಯುವುದಕ್ಕೇ ಗ್ರಾಹಕರು ಸಾಕಷ್ಟು ಕಾದಿರುತ್ತಾರೆ. ಅವುಗಳ ಜಾರಿಗೆ ಮತ್ತಷ್ಟು ವಿಳಂಬ ಮಾಡುವುದು ಗ್ರಾಹಕರ ಹಕ್ಕುಗಳನ್ನು ಕಸಿದುಕೊಂಡಂತೆ’ ಎನ್ನುತ್ತಾರೆ ಆದಿತ್ಯ.

‘1986ರಲ್ಲೇ ಗ್ರಾಹಕರ ಹಕ್ಕುಗಳ ರಕ್ಷಣೆಗೆ ಕಾಯ್ದೆ ರೂಪುಗೊಂಡರೂ ಆ ಬಳಿಕದ ಮೂರೂವರೆ ದಶಕಗಳಲ್ಲೂ ಈ ಕಾಯ್ದೆಯ ಪರಿಣಾಮಕಾರಿ ಅನುಷ್ಠಾನಕ್ಕೆ ಇಡುವ ಅಡ್ಡಿ ಆತಂಕಗಳು ನಿವಾರಣೆಯಾಗಿಲ್ಲ. ವಿಚಾರಣಾ ವಿಧಾನಗಳಿಗೆ ಸಂಬಂಧಿಸಿದ ಅಡೆತಡೆಗಳು, ನ್ಯಾಯದಾನ ವ್ಯವಸ್ಥೆಯ ಅದಕ್ಷತೆ, ಭಾರಿ ಪ್ರಮಾಣದ ಪ್ರಕರಣಗಳು ವಿಚಾರಣೆಗೆ ಬಾಕಿ ಇರುವುದು, ವಿಚಾರಣೆ ವಿಳಂಬ, ಹುದ್ದೆಗಳು ಖಾಲಿ ಇರುವುದು ಈ ಕಾಯ್ದೆಯ ಆಶಯವನ್ನೇ ಬುಡಮೇಲು ಮಾಡಿವೆ’ ಎಂದು ಅವರು ಅಭಿಪ್ರಾಯಪಟ್ಟರು.

ಕಡಿಮೆಯಾಗಿಲ್ಲ ವಕೀಲರ ಮೇಲಿನ ಅವಲಂಬನೆ
ವೇದಿಕೆಗಳು ಜನರಿಗೆ ಸುಲಭದಲ್ಲಿ ಲಭ್ಯವಾಗುವಂತಿರಬೇಕು. ಗ್ರಾಹಕರು ಯಾರ ನೆರವೂ ಪಡೆಯದೆಯೇ ನೇರವಾಗಿ ವಿಚಾರಣೆಗೆ ಹಾಜರಾಗುವಂತಾಗಬೇಕು ಎಂಬುದು ಇವುಗಳ ರಚನೆಯ ಹಿಂದಿನ ಉದ್ದೇಶ. ಆದರೆ, ಬೆಂಗಳೂರಿನ ವೇದಿಕೆಗಳಲ್ಲಿ 2013ರಿಂದ 2017ರ ಅವಧಿಯಲ್ಲಿ ಬಂದಿರುವ ಅರ್ಜಿಗಳಲ್ಲಿ ಶೇ 7.2ರಷ್ಟರಲ್ಲಿ ಮಾತ್ರ ಗ್ರಾಹಕರು ನೇರವಾಗಿ ವಿಚಾರಣೆಗೆ ಹಾಜರಾಗಿದ್ದಾರೆ. ಮಿಕ್ಕೆಲ್ಲ ಪ್ರಕರಣಗಳಲ್ಲಿ ವಿಚಾರಣೆಗೆ ಹಾಜರಾಗಿದ್ದು ವಕೀಲರು.

ಯಾವ ಪ್ರಕರಣ ಎಷ್ಟೆಷ್ಟು?
(ರಾಜ್ಯ ಆಯೋಗದಲ್ಲಿ)
ವಿಮೆ  61.7%
ವಸತಿ 25.6%
ಬ್ಯಾಂಕಿಂಗ್‌  5.8%
ಇತರೆ  6.9%

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು