ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬೆಂಗಳೂರು ಸಾಹಿತ್ಯ ಉತ್ಸವದಲ್ಲಿ ‘ಅಪ್ಪು’ ವ್ಯಕ್ತಿತ್ವ ಬಣ್ಣನೆ

Last Updated 4 ಡಿಸೆಂಬರ್ 2022, 18:43 IST
ಅಕ್ಷರ ಗಾತ್ರ

ಬೆಂಗಳೂರು: ‘ವರನಟ ರಾಜ್‌ಕುಮಾರ್ ಬಳಿಕ ಚಲನಚಿತ್ರಗಳಲ್ಲಿ ಕೌಟುಂಬಿಕ ಮೌಲ್ಯಗಳನ್ನು ಮರುಸ್ಥಾಪಿಸಿದವರು ಪುನೀತ್ ರಾಜ್‌ಕುಮಾರ್. ಇದರಿಂದಾಗಿಯೇ ಅವರು ಎಲ್ಲಾ ವಯೋಮಾನದವರ ಅಚ್ಚುಮೆಚ್ಚಿನ ನಟರಾಗಿ ಕನ್ನಡ ಚಿತ್ರರಂಗದಲ್ಲಿ ಪ್ರಜ್ವಲಿಸಿದರು. ತೆರೆಯ ಆಚೆಗಿನ ಅವರ ಸರಳತೆ, ಸಾಮಾಜಿಕ ಕಾರ್ಯಗಳು ಸಾವಿನ ಬಳಿಕವೂ ಅವರನ್ನು ಜೀವಂತವಾಗಿಸಿದೆ.’

ಬೆಂಗಳೂರು ಸಾಹಿತ್ಯ ಉತ್ಸವದ 11ನೇ ಆವೃತ್ತಿಯಲ್ಲಿ ಹಮ್ಮಿಕೊಂಡ ‘ಮುಗ್ಧ ನಗುವೊಂದರ ಕಣ್ಮರೆ’ ಗೋಷ್ಠಿಯಲ್ಲಿ ಪುನೀತ್ ಜನಪ್ರಿಯತೆ ಕುರಿತು ಸಿನಿಮಾ ವಿಮರ್ಶಕ ಕೆ.ಪುಟ್ಟಸ್ವಾಮಿ ವಿಶ್ಲೇಷಿಸಿದ್ದು ಹೀಗೆ. ಪುನೀತ್ ರಾಜ್‌ಕುಮಾರ್ ಅವರ ನಿಧನದ ಬಳಿಕ ಅವರ ಬಗೆಗೆ ಬರೆದ ಲೇಖನಗಳ ಸಂಗ್ರಹವನ್ನುಎ.ಎಸ್. ಪ್ರಭಾಕರ ಸಂಪಾದಿಸಿದ್ದಾರೆ. ಈ ಕೃತಿಯ ಶೀರ್ಷಿಕೆಯಡಿ ನಡೆದ ಗೋಷ್ಠಿ, ಪುನೀತ್ ಅವರ ಚಿತ್ರಯಾನವನ್ನು ಮೆಲುಕುಹಾಕಿತು.

‘ಚಿತ್ರರಂಗದಲ್ಲಿ ರಾಜ್‌ಕುಮಾರ್ ಅವರು ಜನಪ್ರಿಯರಾಗಲು ಮುಖ್ಯ ಕಾರಣ ಆಯ್ದುಕೊಂಡ ಕೌಟುಂಬಿಕ ಪಾತ್ರಗಳು. ಸಹಜವಾದ ಅವರ ನಟನೆ ಕನ್ನಡಿಗರ ಬದುಕಿಗೆ ಹತ್ತಿರವಾಗಿತ್ತು. ಬಾಲನಟನಾಗಿ ಜನರ ಮೆಚ್ಚುಗೆಗೆ ಪಾತ್ರವಾಗಿದ್ದ ಪುನೀತ್, 13 ವರ್ಷಗಳ ಬಳಿಕ ಯುವನಟರಾಗಿ ಎರಡನೇ ಇನ್ಸಿಂಗ್ ಆರಂಭಿಸಿದರು. ಅವರ ಲವಲವಿಕೆಯ ಅಭಿನಯ ಹೊಸ ತಲೆಮಾರಿಗೆ ಹಿಡಿಸಿತು. ತಂದೆಯ ಹಾದಿಯನ್ನು ಅನುಸರಿಸಿದ ‘ಅಪ್ಪು’, ಕೌಟುಂಬಿಕ ಮೌಲ್ಯಗಳ ಚಿತ್ರಗಳಿಗೆ ಆದ್ಯತೆ ನೀಡಿದರು. ಇದರಿಂದಾಗಿ ಅವರು ಎಲ್ಲರಿಗೂ ಇಷ್ಟವಾಗುತ್ತಾ ಹೋದರು’ ಎಂದುಕೆ.ಪುಟ್ಟಸ್ವಾಮಿ ವ್ಯಾಖ್ಯಾನಿಸಿದರು.

‘ಮೂರು ಸಾವುಗಳು ಸಾರ್ವಜನಿಕ ಬದುಕಿನ ಮೇಲೆ ದೊಡ್ಡ ಪರಿಣಾಮ ಬೀರಿತು. ಶಂಕರ್‌ ನಾಗ್ ಹಾಗೂ ರಾಜ್‌ಕುಮಾರ್ ಅವರ ಸಾವು ಆಘಾತ ನೀಡುವ ಜತೆಗೆ ಜನರ ಜೀವನವನ್ನು ಪ್ರಭಾವಿಸಿತ್ತು. ಪುನೀತ್ ಅವರ ಮರಣ ಮೊದಲೆರಡು ಸಾವಿಗಿಂತ ಭೀಕರವಾಗಿತ್ತು. ಅವರ ಜನಪ್ರಿಯತೆ ಮರಣದ ನಂತರಊಹೆಗೂ ನಿಲುಕದಷ್ಟು ಹೆಚ್ಚಿತು. ಕನ್ನಡಿಗರು ಬಾಲ್ಯದಿಂದಲೂ ಅವರ ಬೆಳವಣಿಗೆಯನ್ನು ಹತ್ತಿರದಿಂದ ನೋಡುತ್ತಾ ಬಂದಿದ್ದರು. ಇದರಿಂದಾಗಿ ಜನಮಾನಸದಲ್ಲಿ ಅಚ್ಚಳಿಯದ ಸ್ಥಾನ ಪಡೆದರು’ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ಎ.ಎಸ್. ಪ್ರಭಾಕರ್, ‘ಪುನೀತ್ ಮೂರು ತಲೆಮಾರಿನ ನಟರ ಸ್ಪರ್ಧೆ ಎದುರಿಸಿದರು. ಕನ್ನಡಿಗರು ಕಪ್ಪು ವರ್ಣದ ನಟರನ್ನು ಒಪ್ಪಿಕೊಂಡಿರುವುದು ಕಡಿಮೆ. ರಾಜ್‌ಕುಮಾರ್ ಅವರ ಮಕ್ಕಳು ಅಷ್ಟು ಸುಂದರ ಆಗಿರದಿದ್ದರೂತಮ್ಮ ಪ್ರತಿಭೆ ಹಾಗೂ ಅಭಿನಯದ ಮೂಲಕ ಜನರ ಅಭಿರುಚಿ ಬದಲಾಯಿಸಿದರು.ಪುನೀತ್ ಅವರ ಜೀವನ ಸಾಮರಸ್ಯದ ಸಂಕೇತವಾಗಿದ್ದು, ಸಾರ್ವಜನಿಕ ಸಜ್ಜನಿಕೆಯನ್ನು ಬಿಟ್ಟು ಹೋಗಿದ್ದಾರೆ’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT