ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಪರಿಮಳ ಪಸರಿಸುವ ‘ಸುಗಂಧದ ಮನೆ’

Last Updated 22 ಅಕ್ಟೋಬರ್ 2020, 18:56 IST
ಅಕ್ಷರ ಗಾತ್ರ

ಬೆಂಗಳೂರಿನ ಮಹಾಲಕ್ಷ್ಮಿ ಬಡಾವಣೆಯಲ್ಲೊಂದು ‘ಸುಗಂಧದ ಮನೆ’ ಇದೆ. ಆ ಮನೆಯ ಆಸುಪಾಸಿನಲ್ಲಿ ಓಡಾಡುವ ಯಾರಿಗಾದರೂ, ಆ ಮನೆಯೊಳಗೆ ಹೋಗಿ ಬರಬೇಕು ಎನ್ನಿಸದೇ ಇರದು; ಕಾರಣ ಆ ಮನೆ ದಿನ-ರಾತ್ರಿ ಆ ಪರಿಸರದ ತುಂಬ ಪಸರಿಸುವ ಬಗೆಬಗೆಯ ಪರಿಮಳ.

ಈ ಘಮಲಿನ ಮನೆಯ ಒಡತಿ ಶರ್ಮಿಳಾ ಜೋಷಿ. ಅವರಿಗೀಗ ಎಪ್ಪತ್ತಾರು ವರ್ಷ. ಅದೆಂತಹ ಚೈತನ್ಯ, ಉತ್ಸಾಹ. ಇದೆಲ್ಲ ಹೇಗೆ? ಅಂತ ಕಾರಣ ಕೇಳಿದ್ದಕ್ಕೆ ಅವರು ಕೈತೋರಿಸಿದ್ದು ಅಲ್ಲೇ ಮೇಜಿನ ಮೇಲೆ ಒಪ್ಪ-ಓರಣವಾಗಿ ಜೋಡಿಸಿಟ್ಟ ಸುಗಂಧದ್ರವ್ಯಗಳ ಕಡೆಗೆ. ‘ಅವುಗಳು ಹೊರಸೂಸುವ ಸುಮಧುರ ಪರಿಮಳವೇ ನನ್ನ ಜೀವನೋತ್ಸಾಹದ ಗುಟ್ಟು‘ ಎಂದರು.

ನಾವು (ಸುಗಂಧದ್ರವ್ಯ ಬೆಳೆಗಳ ಕೋರ್ಸಿಗೆ ನೋಂದಾಯಿಸಿದ್ದ ವಿದ್ಯಾರ್ಥಿಗಳು) ಅಂದು ಅವರ ಮನೆಯ ದಾರಿಯಲ್ಲಿದ್ದೆವು. ಇಷ್ಟಕ್ಕೂ, ನಮ್ಮನ್ನು ರಸ್ತೆಯಿಂದಲೇ ಸ್ವಾಗತಿಸಿದ್ದು ಜೋಷಿಯವರಲ್ಲ, ಅವರ ಮನೆಯಾಚೆಗೂ ಹೊರಹೊಮ್ಮುತ್ತಿದ್ದ ನಿಂಬೆಹುಲ್ಲಿನ ಸುಗಂಧದ ಎಣ್ಣೆಯ ಘಮ. ಮನೆಯೊಳಗೆ ಹೋದಾಗ ಮಾತಿಗೆ ಮೊದಲು ತಾವೇ ಭಟ್ಟಿ ಇಳಿಸಿದ್ದ ತಣ್ಣನೆಯ ‘ಗುಲಾಬ್ ಜಲ್’ ಕೈಗಿತ್ತು, ‘ಮುಖಕ್ಕೆ ಸವರಿಕೊಳ್ಳಿ. ಬಿಸಿಲಿನಲ್ಲಿ ಬಂದಿದ್ದೀರಿ’ ಎನ್ನುತ್ತಾ, ‘ನೈಸರ್ಗಿಕ ಸುಂಗಂಧ ಲೋಕ‘ಕ್ಕೆ ಆಹ್ವಾನಿಸಿದರು.

ಮನೆಯೊಳಗೆ ಪ್ರವೇಶಿಸುತ್ತಿದ್ದಂತೆ, ‘ಇದು ನೋಡಿ, ಅಲ್ಲ ಅಲ್ಲ.. ಆಘ್ರಾಣಿಸಿ, ಲಾವಂಚದೆಣ್ಣೆ; ಮತ್ತೆ ಇದು ಶ್ರೀಗಂಧದ್ದು; ಮಗದೊಂದು ತನ್ನೆಡೆಗೆ ಸೆಳೆಯುವ ಮಲ್ಲಿಗೆಯದ್ದು; ಇನ್ನೊಂದು ನಿಮ್ಮನ್ನೇ ಮರೆಸಿಬಿಡುವ ಪಚೋಲಿಯದ್ದು; ಪರಿಮಳಗಳಿಂದ ಪರಮಾನಂದ, ಹಾಗೇ ತುಸು ಹೊತ್ತು ಅನುಭವಿಸಿ‘ ಎನ್ನುತ್ತಾ, ಒಂದೊಂದೇ ಸುಗಂಧದೆಣ್ಣೆ ತೋರಿಸುತ್ತಾ, ವಿವರಣೆ ನೀಡತೊಡಗಿದರು ಶರ್ಮಿಳಾ ಮೇಡಂ. ಅವರು ನಡೆಸುತ್ತಿರುವ ‘ಸ್ವಾತಿ ಅರೋಮಾಸ್’ ನಲ್ಲಿ, ಸುಗಂಧದೆಣ್ಣೆಗಳು, ಘಮ್ಮೆನುವ ಅಂಟು, ಬಗೆ ಬಗೆಯ ಪರಿಮಳ ಸೂಸುವ ಸಾಬೂನು, ಗಂಧದಕಡ್ಡಿ, ಅತ್ತರ್‌.... ಹೀಗೆ ಹತ್ತು ಹಲವು ಇವೆ.

ಶರ್ಮಿಳಾ ಅವರಿಗಿರುವ ನೈಸರ್ಗಿಕ ಪರಿಮಳಗಳೆಡಗಿನ ಆಸಕ್ತಿ ಬೆರಗು ಮೂಡಿಸುತ್ತದೆ. ಅವರು ದಶಕಗಳಿಂದ ಈ ನೈಸರ್ಗಿಕ ಸುಗಂಧದ್ರವ್ಯಗಳನ್ನು ‘ಆರೋಮಾ ಥೆರಪಿ’ಯಲ್ಲಿ ಬಳಸುತ್ತಿದ್ದಾರೆ. ಅದೊಂದು ಪರ್ಯಾಯ ಚಿಕಿತ್ಸಾ ಪದ್ಧತಿ. ಅಷ್ಟೇ ಅಲ್ಲ, ಪೂರಕ ಚಿಕಿತ್ಸೆಯೂ ಹೌದು. ಸಾಂಪ್ರದಾಯಿಕ ಚಿಕಿತ್ಸೆಯೊಂದಿಗೆ ಚೆನ್ನಾಗಿ ಹೊಂದುತ್ತದೆ. ಮನೆಗೆ ಬಂದವರಿಗೆಲ್ಲ ಸುಗಂಧ ಸಸ್ಯಗಳ ತೈಲದಿಂದ ದೊರೆಯುವ ಚಿಕಿತ್ಸೆ ಬಗ್ಗೆ ವಿವರಿಸುತ್ತಾರೆ. ‘ನೋಡಿ, ಈ ಲ್ಯಾವೆಂಡರ್ ಸಣ್ಣ-ಪುಟ್ಟ ಗಾಯಗಳಿಗೆ ಅದೆಷ್ಟು ಹಿತ; ಚಕ್ಕೆ ಎಣ್ಣೆ ನಿಮ್ಮ ಆಲಸ್ಯವನ್ನು ದೂರ ಮಾಡುತ್ತದೆ; ಜಪಾನೀ ಪುದಿನಾದ ತೈಲ ತಲೆನೋವಿಗೆ ದಿವ್ಯೌಷಧಿ; ಖಿನ್ನತೆಗೆ ರೋಸ್ ಮೇರಿ ಸುಗಂಧದೆಣ್ಣೆ ರಾಮಬಾಣ; ಹೆಂಗಸರ ಕೆಲ ಸಮಸ್ಯೆಗಳಿಗೆ ಪನ್ನೀರುಪತ್ರೆಯ ತೈಲ; ಗಂಡಸರಿಗೆ ಪುನುಗಿನೆಣ್ಣೆ‘– ಎನ್ನುತ್ತಾ ಹತ್ತು ಹಲವು ಉದಾಹರಣೆಗಳನ್ನು ಹೇಳುತ್ತಲೇ ಹೋಗುತ್ತಾರೆ ಜೋಷಿಯವರು.

ಅಂದು ಅದಮ್ಯ ಉತ್ಸಾಹದ ಹಿರಿಯ ಜೀವ ನಮ್ಮನ್ನು ಸುಗಂಧಲೋಕದಲ್ಲಿ ತೇಲುವಂತೆ ಮಾಡಿ, ನಮಗೆ ಅನಿವರ್ಚನೀಯ ಆನಂದವನ್ನುಂಟು ಮಾಡಿತು. ಅವರ ಜ್ಞಾನಾನುಭವಗಳನ್ನು ನಾವು ಮುಂದಕ್ಕೆ ಒಯ್ಯಬೇಕೆನ್ನುವುದು ಅವರ ಆಶಯ. ಮಾಹಿತಿಗೆ ಶರ್ಮಿಳಾ ಅವರ ಸಂಪರ್ಕ 98458 43420. ಸುಗಂಧ ಸಸ್ಯಗಳ ಕೃಷಿಕುರಿತ ಮಾಹಿತಿಗಾಗಿ 9480557634ಗೆ ಸಂಪರ್ಕಿಸಬಹುದು.

ಸುಗಂಧದ್ರವ್ಯ ಸಸ್ಯಗಳನ್ನು ನೋಡಲು, ಬೆಂಗಳೂರಿನ ಜಿಕೆವಿಕೆ ಆವರಣದಲ್ಲಿರುವ ತೋಟಗಾರಿಕೆ ಕಾಲೇಜು ಅಥವಾ ವಿಭಾಗಕ್ಕೆ ಭೇಟಿ ನೀಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT