ಗುರುವಾರ , ಫೆಬ್ರವರಿ 9, 2023
29 °C

Bengaluru Tech Summit | 20 ನೂತನ ನವೋದ್ಯಮ ಉತ್ಪನ್ನಗಳ ಬಿಡುಗಡೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಬೆಂಗಳೂರು ಟೆಕ್‌ ಸಮ್ಮಿಟ್‌’ ಸಮಾವೇಶದ ಎರಡನೆಯ ದಿನವಾದ ಗುರುವಾರ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಡಾ.ಸಿ. ಎನ್. ಅಶ್ವತ್ಥನಾರಾಯಣ ಅವರು ಅಗ್ರಿಟೆಕ್‌, ಮೆಡ್‌ಟೆಕ್‌, ಎಜ್ಯುಟೆಕ್‌ ಮುಂತಾದ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ವಿವಿಧ ನವೋದ್ಯಮಗಳು ಅಭಿವೃದ್ಧಿಪಡಿಸಿರುವ 20 ನೂತನ ಉತ್ಪನ್ನಗಳನ್ನು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವರು, ‘2025ರ ಒಳಗೆ ಬೆಂಗಳೂರಿನಲ್ಲಿ 20 ಸಾವಿರ ನವೋದ್ಯಮಗಳನ್ನು ಹೊಂದುವ ಗುರಿ ಇರಿಸಿಕೊಳ್ಳಲಾಗಿತ್ತು. ಆದರೆ, ಈಗಾಗಲೇ ನಮ್ಮಲ್ಲಿ 22 ಸಾವಿರಕ್ಕೂ ಹೆಚ್ಚು ನವೋದ್ಯಮಗಳಿವೆ. ಬೆಂಗಳೂರಿನಲ್ಲಿರುವ ವಿಜ್ಞಾನ ಮತ್ತು ತಂತ್ರಜ್ಞಾನ ಪರಿಸರವೇ ಇದಕ್ಕೆ ಕಾರಣವಾಗಿದೆ. ವೆಂಚರ್ ಕ್ಯಾಪಿಟಲ್‌ ಕ್ಷೇತ್ರದಲ್ಲಿ ನಮ್ಮ ನಗರವು ಇಡೀ ಜಗತ್ತಿನಲ್ಲೇ 5ನೇ ಸ್ಥಾನದಲ್ಲಿದೆ’ ಎಂದರು.

‘ನೂತನ ಉತ್ಪನ್ನಗಳನ್ನು ಅಭಿವೃದ್ಧಿಪಡಿಸಿರುವ ನವೋದ್ಯಮಗಳಲ್ಲಿ ಹೆಚ್ಚಿನವು ಸರ್ಕಾರದ ವಿವಿಧ ಇನ್‌ಕ್ಯುಬೇಷನ್‌ ಕೇಂದ್ರಗಳ ಮಾರ್ಗದರ್ಶನ ಮತ್ತು ನೆರವು ಪಡೆದುಕೊಂಡಿವೆ. ಈ ನಿಟ್ಟಿನಲ್ಲಿ ನಮ್ಮ ಕೆ-ಟೆಕ್‌ ನಾವೀನ್ಯತಾ ಹಬ್‌ಗಳು, ಉತ್ಕೃಷ್ಟತಾ ಕೇಂದ್ರಗಳು, ಟೆಕ್ನಾಲಜಿ ಬಿಜಿನೆಸ್‌ ಪರಿಪೋಷಣಾ ಕೇಂದ್ರಗಳು, ಸಿ-ಕ್ಯಾಂಪ್‌, ಭಾರತೀಯ ವಿಜ್ಞಾನ ಸಂಸ್ಥೆ, ನಾಸ್ಕಾಂ ಮತ್ತು ಐಎಎಂಎಐ ರೀತಿಯ ಸಂಸ್ಥೆಗಳು ಮಹತ್ವದ ಪಾತ್ರ ವಹಿಸಿರುವುದು ಶ್ಲಾಘನೀಯ’ ಎಂದು ಬಣ್ಣಿಸಿದರು.

‘ಈ ನೂತನ ಉತ್ಪನ್ನಗಳನ್ನು ಸಿದ್ಧಪಡಿಸಿರುವ 20 ನವೋದ್ಯಮಗಳಲ್ಲಿ ಮೂರು ಕಂಪನಿಗಳನ್ನು ಮಹಿಳೆಯರೇ ಮುನ್ನಡೆಸುತ್ತಿರುವುದು ಶ್ಲಾಘನೀಯ ಸಂಗತಿಯಾಗಿದೆ’ ಎಂದು ಅವರು ಹೇಳಿದರು.

‘ಬಿಡುಗಡೆಯಾಗಿರುವ ಉತ್ಪನ್ನಗಳಲ್ಲಿ ಕ್ಲೀನ್‌ಟೆಕ್‌, ಕೃತಕ ಬುದ್ಧಿಮತ್ತೆ, ಐಓಟಿ, ಬ್ಲಾಕ್‌ಚೈನ್‌, ಸೈಬರ್‌ ಸೆಕ್ಯುರಿಟಿ, ವಿದ್ಯುತ್‌ ಚಾಲಿತ ವಾಹನ ಮತ್ತು ಇಎಸ್‌ಡಿಎಂ ವಲಯಗಳಿಗೆ ಸೇರಿದ ಉತ್ಪನ್ನಗಳಿವೆ’ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು