ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಾಶಿ ಯಾತ್ರೆಗೆ ಭಾರತ್‌ ಗೌರವ್‌ ರೈಲು: ಸಚಿವೆ ಶಶಿಕಲಾ ಜೊಲ್ಲೆ ಪರಿಶೀಲನೆ

Last Updated 12 ಜುಲೈ 2022, 5:51 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಿಂದ ಕಾಶಿ ಯಾತ್ರೆಗೆ ಭಾರತ್‌ ಗೌರವ್‌ ರೈಲು ಯೋಜನೆ ಪ್ರಾರಂಭ ಆಗಲಿದೆ ಎಂದು ಸಚಿವೆ ಶಶಿಕಲಾ ಜೊಲ್ಲೆ ತಿಳಿಸಿದರು.

ಬೈಯ್ಯಪ್ಪನಹಳ್ಳಿಯ ಸರ್‌. ಎಂ ವಿಶ್ವೇಶ್ವರಯ್ಯ ರೈಲು ನಿಲ್ದಾಣದಲ್ಲಿ ಕಾಶಿ ಯಾತ್ರೆಗೆ ಕಾಯ್ದಿರಿಸಿರುವ ರೈಲು ಪರಿಶೀಲಿಸಿ ಅವರು ಮಾತನಾಡಿದರು.

ಕಾಶಿಯಾತ್ರೆಗೆ ಯಾತ್ರಾರ್ಥಿಗಳನ್ನು ಕರೆದೊಯ್ಯಲು ಭಾರತ್‌ ಗೌರವ್‌ ರೈಲು ಸಿದ್ಧಪಡಿಸಲು ಅನುಮತಿ ನೀಡಿದ್ದು, ಶ್ರಾವಣ ಮಾಸದ ಕೊನೆಯ ವಾರದಲ್ಲಿ ಯಾತ್ರೆ ಪ್ರಾರಂಭ ಆಗಲಿದೆ. ಪುಣ್ಯ ಕ್ಷೇತ್ರಗಳಿಗೆ ಕಡಿಮೆ ಖರ್ಚಿನಲ್ಲಿ ಪ್ರವಾಸ ಕೈಗೊಳ್ಳಲು ಅನುಕೂಲ ಆಗುವಂತೆ ಪ್ಯಾಕೇಜ್‌ ರೂಪಿಸುವ ನಿಟ್ಟಿನಲ್ಲಿ ಮುಜರಾಯಿ ಇಲಾಖೆ ಮಹತ್ವದ ಹೆಜ್ಜೆ ಇಟ್ಟಿದೆ. ಭಾರತ್‌ ಗೌರವ್‌ ರೈಲು ಯೋಜನೆ ಅಡಿಯಲ್ಲಿ ರಾಜ್ಯ ಮುಜರಾಯಿ ಇಲಾಖೆಯ ವತಿಯಿಂದ ರೈಲನ್ನು ಬಾಡಿಗೆಗೆ ಪಡೆದು ಕಾಶಿಗೆ ಓಡಿಸಲು ಎಲ್ಲ ರೀತಿಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ರಿಯಾಯಿತಿ ದರದಲ್ಲಿ 7 ದಿನಗಳ ಪ್ರವಾಸ ಕಾರ್ಯಕ್ರಮ ಏರ್ಪಡಿಸಲಾಗಿದೆ. ಇದಕ್ಕೆ ₹ 1 ಕೋಟಿ ಭೌತಿಕ ಬ್ಯಾಂಕ್‌ ಗ್ಯಾರಂಟಿ ನೀಡಿ ರೈಲನ್ನು ಬಾಡಿಗೆಗೆ ತೆಗೆದುಕೊಳ್ಳಲಾಗಿದೆ ಎಂದು ಹೇಳಿದರು.

ಬೆಂಗಳೂರು-ವಾರಾಣಸಿ-ಅಯೋಧ್ಯೆ-ಪ್ರಯಾಗರಾಜ್‌ ಮಾರ್ಗದಲ್ಲಿ ರೈಲು 7 ದಿನಗಳಲ್ಲಿ 4,161 ಕಿ.ಮೀ ಸಂಚರಿಸಲಿದೆ. 14 ಬೋಗಿಗಳನ್ನು ಈ ರೈಲು ಒಳಗೊಂಡಿದೆ. 11 ಬೋಗಿಗಳನ್ನು ಪ್ರಯಾಣಿಕರ ಪ್ರವಾಸಕ್ಕೆ ಅಣಿ ಮಾಡಲಾಗುತ್ತಿದೆ. 3 ಟಯರ್‌ ಎಸಿಯ ವ್ಯವಸ್ಥೆ ಇರಲಿದೆ. ಒಂದು ಬೋಗಿಯನ್ನು ದೇವಸ್ಥಾನವಾಗಿ ಪರಿವರ್ತಿಸಿ ಯಾತ್ರಾರ್ಥಿಗಳ ಭಜನೆಗೆ ಅವಕಾಶ ನೀಡಲಾಗುವುದು ಎಂದರು.

ಆಹಾರ, ನೀರು, ವಸತಿ, ಸ್ಥಳೀಯ ಸಾರಿಗೆ ಮತ್ತು ಇತರೆ ಸೌಕರ್ಯಗಳಿಗೆ ರೈಲ್ವೆಯ ಅಧೀನ ಸಂಸ್ಥೆಯ ಜೊತೆ ಐಆರ್‌ಸಿಟಿಸಿ ಜೊತೆಗೆ ಒಪ್ಪಂದ ಮಾಡಿಕೊಳ್ಳಲಾಗುವುದು. 7 ದಿನಗಳ ಪ್ರವಾಸಕ್ಕೆ ಪ್ರತಿ ಯಾತ್ರಾರ್ಥಿಗೆ ಅಂದಾಜು ₹ 15 ಸಾವಿರ ವೆಚ್ಚ ಆಗಲಿದೆ. ಇದರಲ್ಲಿ₹ 5 ಸಾವಿರ ಸಹಾಯಧನ ನೀಡಲಾಗುವುದು ಎಂದು ತಿಳಿಸಿದರು.

ಮುಜರಾಯಿ ಇಲಾಖೆಯ ಆಯುಕ್ತೆ ರೋಹಿಣಿ ಸಿಂಧೂರಿ, ಸೌತ್‌ ವೆಸ್ಟರ್ನ್‌ ರೈಲ್ವೆಯ ಚೀಫ್‌ ಕಮರ್ಷಿಯಲ್‌ ಮ್ಯಾನೇಜರ್‌ ಡಾ.ಅನೂಪ್‌ ದಯಾನಂದ್‌ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT