ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಳ್ಳಾರಿ: ಎರಡನೇ ದಿನವೂ ಕುಂದದ ಉತ್ಸಾಹ

ಹೊರವಲಯದ ಸಂಗನಕಲ್‌ ಸಮೀಪದಿಂದ ಮೋಕಾವರೆಗೆ ಯಾತ್ರೆ l ಮಹಿಳಾ ಕೃಷಿ ಕಾರ್ಮಿಕರ ಜತೆ ಮಾತುಕತೆ
Last Updated 16 ಅಕ್ಟೋಬರ್ 2022, 20:44 IST
ಅಕ್ಷರ ಗಾತ್ರ

ಬಳ್ಳಾರಿ: ಕಾಂಗ್ರೆಸ್‌ ಮುಖಂಡ ರಾಹುಲ್‌ ಗಾಂಧಿ ಕೈಗೊಂಡಿರುವ ‘ಭಾರತ್‌ ಜೋಡೊ ಯಾತ್ರೆ’ಗೆ ಜಿಲ್ಲೆಯಲ್ಲಿ ಭಾನುವಾರವೂ ಬೆಂಬಲ ವ್ಯಕ್ತವಾಯಿತು. ಜನರು ಅತ್ಯುತ್ಸಾಹದಿಂದ ಪಾದಯಾತ್ರೆಯಲ್ಲಿ ಪಾಲ್ಗೊಂಡರು.

ಶನಿವಾರ ರಾತ್ರಿ ಸಂಗನಕಲ್‌ನಲ್ಲಿ ತಂಗಿದ್ದ ರಾಹುಲ್‌ ಗಾಂಧಿ ಪೂರ್ವ ನಿಗದಿಯಂತೆ ಬೆಳಿಗ್ಗೆ 6.30ಕ್ಕೆ ಸರಿಯಾಗಿ ಪಾದಯಾತ್ರೆ ಆರಂಭಿಸಿದರು. ಮಹಾ ರಾಷ್ಟ್ರ, ಆಂದ್ರಪ್ರದೇಶ , ಮಧ್ಯ ಪ್ರದೇಶ, ರಾಜಸ್ತಾನ, ದೆಹಲಿ ಸೇರಿದಂತೆ ವಿವಿಧ ರಾಜ್ಯಗಳಿಂದ ಬಂದಿರುವ ಯಾತ್ರಿಗಳು ಅವರ ಜತೆ ಹೆಜ್ಜೆ ಹಾಕಿದರು.

ಎಂದಿನಂತೆ 2 ಸುತ್ತಿನ ಭದ್ರತೆಯಲ್ಲಿ ರಾಹುಲ್‌ ಮುನ್ನಡೆದರು. ಅವರ ಪಕ್ಕದಲ್ಲಿ ವಿಧಾನಪರಿಷತ್‌ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌, ರಾಜ್ಯದ ಉಸ್ತುವಾರಿ ರಣದೀಪ್‌ ಸುರ್ಜೆವಾಲ, ಶಾಸಕ ನಾಗೇಂದ್ರ ಇದ್ದರು. ಕೊಂಚ ಹೊತ್ತಿನ ಬಳಿಕ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌, ರಾಜ್ಯಸಭಾ ಸದಸ್ಯ ಎಲ್‌. ಹನುಮಂತಯ್ಯ ಸೇರಿಕೊಂಡರು. ಕಾಂಗ್ರೆಸ್‌ ಮುಖಂಡ ದಿಗ್ವಿಜಯ್‌ ಸಿಂಗ್‌ ಅನತಿ ದೂರದಲ್ಲಿ ನಡೆಯುತ್ತಿದ್ದರು.

ಪಾದಯಾತ್ರೆಗೆ ಶನಿವಾರದಷ್ಟು ರಂಗಿರದಿದ್ದರೂ ಉತ್ಸಾಹ ಕುಂದಿರಲಿಲ್ಲ. ಅತ್ಯಂತ ಕಡಿಮೆ ಸಂಖ್ಯೆಯಲ್ಲಿ ಕಲಾ ತಂಡಗಳು ಯಾತ್ರೆಯಲ್ಲಿದ್ದವು. ರಾಹುಲ್‌ ಎಂದಿನಂತೆ ಅಕ್ಕಪಕ್ಕದವರ ಜತೆ ಮಾತನಾಡುತ್ತಾ ಬಿರುಸಿನಿಂದ ಸಾಗುತ್ತಿದ್ದರು. ರಸ್ತೆಯ ಇಕ್ಕೆಲ್ಲಗಳಲ್ಲೂ ನಿಂತಿದ್ದ ಜನರತ್ತ ಕೈ ಬೀಸುತ್ತಿದ್ದರು. ಜನರೂ ತಮ್ಮ ನಾಯಕನನ್ನು ನೋಡಲು ಕಾಯುತ್ತಿದ್ದರು.

ರಾಹುಲ್‌ ರಸ್ತೆ ಬದಿಯಲ್ಲಿ ಚಹಾ ಕುಡಿದರು. ಬಿಸ್ಕತ್‌ ತಿಂದರು. ಅವರನ್ನು ಭೇಟಿಯಾಗಬೇಕೆಂಬ ಹಂಬಲದಿಂದ ಎರಡು ದಿನಗಳಿಂದಲೂ ಪ್ರಯತ್ನಿಸುತ್ತಿದ್ದ ಮಹಿಳೆಯೊಬ್ಬರಿಗೆ ಯಾತ್ರೆಯಲ್ಲಿದ್ದ ಯೋಗೇಂದ್ರ ಯಾದವ್‌ ನೆರವಾದರು. ರಾಹುಲ್‌ ಅವರನ್ನು ಭೇಟಿ ಮಾಡಿಸಿದರು.

ಮೋಕಾ ಬಳಿ ರಾಹುಲ್ ಮಹಿಳಾ ಕೃಷಿ ಕಾರ್ಮಿಕರ ಜತೆ ಮಾತನಾಡಿದರು. ಗೃಹ ರಕ್ಷಕ ದಳದ ಸಿಬ್ಬಂದಿ ಕೈ ಕುಲುಕಿ ಕುಶಲೋಪರಿ ವಿಚಾರಿಸಿದರು. ಪಾದ ಯಾತ್ರೆ ಸಮಯದಲ್ಲಿ ತುಂತುರು ಮಳೆ ಆರಂಭವಾಯಿತು.

ರಾಹುಲ್‌ ಗಾಂಧಿ ಸಂಜೆಯೂ ಸುಮಾರು ಒಂದು ಗಂಟೆ ಪಾದಯಾತ್ರೆ ಮಾಡಿದರು. ಪಕ್ಷದ ಮುಖಂಡ ಕಮಲ್‌ನಾಥ್‌ ಅವರ ಜತೆಯಲ್ಲಿದ್ದರು. ಸಂಗನಕಲ್‌ಗೆ ಹಿಂತಿರುಗಿ ಕನ್ವೆನ್‌ಷನ್‌ ಹಾಲ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ.

ಸೋಮವಾರ ಅಖಿಲ ಭಾರತ ಕಾಂಗ್ರೆಸ್‌ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಲಿದ್ದು, ರಾಹುಲ್‌ ಮತ್ತು ಪಕ್ಷದ ಉಳಿದ ಮತದಾರರಿಗೆ ಇಲ್ಲೇ ಮತದಾನ ಮಾಡಲು ವ್ಯವಸ್ಥೆ ಮಾಡಲಾಗಿದೆ. ಈ ಕಾರಣಕ್ಕೆ ಪಾದಯಾತ್ರೆಯನ್ನು ದಿನದ ಮಟ್ಟಿಗೆ ಸ್ಥಗಿತ
ಗೊಳಿಸಲಾಗಿದೆ ಎಂದು ಪಕ್ಷದ ಮೂಲಗಳು ತಿಳಿಸಿವೆ.

ವಿದ್ಯುತ್‌ ಸ್ಪರ್ಶ; ನಾಲ್ವರಿಗೆ ಗಾಯ

ಪಾದಯಾತ್ರೆ ವೇಳೆ ವಿದ್ಯುತ್‌ ಸ್ಪರ್ಶವಾಗಿ ನಾಲ್ವರಿಗೆ ಸುಟ್ಟ ಗಾಯಗಳಾಗಿದ್ದು, ಮೋಕಾ ಆಸ್ಪತ್ರೆಗೆ ಸೇರಿಸಲಾಗಿದೆ. ಹೊಸ ಮೋಕಾ ಬಳಿ ಭಾನುವಾರ ರಾಷ್ಟ್ರಧ್ವಜ ಹಿಡಿದು ಹೊರಟಿದ್ದಾಗ ಈ ಘಟನೆ ಸಂಭವಿಸಿತು. ಧ್ವಜ ಹಾಕಿದ್ದ ಕಬ್ಬಿಣದ ಪೈಪ್‌ ವಿದ್ಯುತ್‌ ತಂತಿಗೆ ತಗುಲಿತು.

ಮೋಕಾ ಗ್ರಾಮ ಪಂಚಾಯಿತಿ ಅಧ್ಯ‌ಕ್ಷ ರಾಮಣ್ಣ, ಗಡೇಕಲ್‌ ದೊಡ್ಡಪ್ಪ, ಸಂತೋಷ್‌ ಕುಮಾರ್‌ ಹಾಗೂ ಎ. ಪಂಪಾಪತಿ ಗಾಯಗೊಂಡರು.

ಬಳಿಕ ರಾಹುಲ್ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುಗಳ ಆರೋಗ್ಯ ವಿಚಾರಿಸಿದರು. ಚಿಕಿತ್ಸೆ ವೆಚ್ಚ ಭರಿಸುವುದಾಗಿ ಹೇಳಿದರು. ಗಾಯಾಳುಗಳಿಗೆ ತಲಾ ₹1 ಲಕ್ಷ ನೀಡಲಾಗುವುದು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದರೆ ಬೆಂಗಳೂರಿಗೆ ಕಳುಹಿಸುವ ವ್ಯವಸ್ಥೆ ಮಾಡುವಂತೆ ರಾಹುಲ್‌ ತಿಳಿಸಿದ್ದಾಗಿ ಶಾಸಕ ನಾಗೇಂದ್ರ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT