ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಹಾರದ ಸ್ಥಿತಿ ಇಡೀ ದೇಶಕ್ಕೆ ಬರಲಿದೆ: ರೈತ ನಾಯಕರ ಆತಂಕ

ಹುತಾತ್ಮ ರೈರಿಗೆ ಶ್ರದ್ಧಾಂಜಲಿ ಸಮರ್ಪಣೆ
Last Updated 19 ಮಾರ್ಚ್ 2021, 20:19 IST
ಅಕ್ಷರ ಗಾತ್ರ

ಬೆಂಗಳೂರು: ‘ಕೇಂದ್ರ ಸರ್ಕಾರದ ಹೊಸ ಕೃಷಿ ಕಾನೂನುಗಳನ್ನು ಒಪ್ಪಿಕೊಂಡರೆ ಬಿಹಾರದ ಸ್ಥಿತಿ ಇಡೀ ದೇಶಕ್ಕೆ ಬರಲಿದೆ’ ಎಂದು ರಾಷ್ಟ್ರೀಯ ಕಿಸಾನ್ ಮಹಾ ಸಂಘದ ಪ್ರಧಾನ ಸಂಚಾಲಕ ಶಿವಕುಮಾರ್ ಕಕ್ಕಾಜಿ ಆತಂಕ ವ್ಯಕ್ತಪಡಿಸಿದರು.

ದಲಿತ, ಕಾರ್ಮಿಕ ಮತ್ತು ರೈತ ಸಂಘಟನೆಗಳ ಐಕ್ಯ ಹೋರಾಟ, ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಷ್ಟ್ರೀಯ ಕಿಸಾನ್ ಸಂಘಟನೆ, ಪ್ರಜಾ ಪರಿವರ್ತನಾ ವೇದಿಕೆಯಿಂದ ಆಯೋಜಿಸಿದ್ದ ಹುತಾತ್ಮ ರೈತರ ಶ್ರದ್ಧಾಂಜಲಿ ಸಮರ್ಪಣಾ ಸಮಾವೇಶದಲ್ಲಿ ಅವರು ಮಾತನಾಡಿದರು.

‘ಎಪಿಎಂಸಿ ತಿದ್ದುಪಡಿ ಕಾಯ್ದೆಯನ್ನು ಬಿಹಾರದಲ್ಲಿ 2006ರಲ್ಲೇ ಜಾರಿಗೆ ತರಲಾಗಿದೆ. ತುಂಡು ಭೂಮಿ ಹೊಂದಿದ್ದ ರೈತರು ಈಗ ಭೂಮಿ ಇಲ್ಲದೆ ಕೂಲಿ ಕಾರ್ಮಿಕರಾಗಿ ದೇಶದೆಲ್ಲೆಡೆ ಉದ್ಯೋಗ ಹುಡುಕಿಕೊಂಡು ಅಲೆದಾಡುತ್ತಿದ್ದಾರೆ. ಮಧ್ಯಪ್ರದೇಶದಲ್ಲಿ ಹೊಸ ಕಾಯ್ದೆ ಜಾರಿಗೆ ಬಂದ ಬಳಿಕ ಅಲ್ಲಿದ್ದ 289 ಎಪಿಎಂಸಿಗಳಲ್ಲಿ 47 ಎಪಿಎಂಸಿಗಳು ಮುಚ್ಚಲ್ಪಟ್ಟಿವೆ. ಉಳಿದವುಗಳಲ್ಲಿ ಶೇ 50ರಷ್ಟು ಮುಚ್ಚುವ ಹಂತಕ್ಕೆ ಬಂದಿವೆ’ ಎಂದರು.

ಹೊಸ ಕಾಯ್ದೆಗಳ ಅನುಷ್ಠಾನಕ್ಕೆ ಅವಕಾಶ ನೀಡಿದರೆ ಇದೇ ಸ್ಥಿತಿ ಇಡೀ ದೇಶಕ್ಕೆ ಬರಲಿದೆ. ಮೂರು ಕೃಷಿ ಕಾಯ್ದೆ ವಿರೋಧಿಸಿ ಮತ್ತು ಕನಿಷ್ಠ ಬೆಂಬಲ ಬೆಲೆ ನೀತಿಗೆ ಕಾನೂನಿನ ಮಾನ್ಯತೆ ನೀಡಬೇಕು ಎಂದು ಒತ್ತಾಯಿಸಿ ದೇಶದಾದ್ಯಂತ ಹೋರಾಟ ಗಟ್ಟಿಗೊಳ್ಳಬೇಕಿದೆ. ಈ ಹೋರಾಟಕ್ಕೆ ದಕ್ಷಿಣದ ರಾಜ್ಯಗಳೂ ಬೆಂಬಲ ನೀಡಬೇಕು ಎಂದು ಕೋರಿದರು.

ರಾಷ್ಟ್ರೀಯ ಕಿಸಾನ್ ಮಜ್ದೂರ್ ಮಹಾ ಸಂಘದ ಯುವ ಘಟಕದ ಅಧ್ಯಕ್ಷ ಅಭಿಮನ್ಯು ಕೊಹ್ರಾ ಮಾತನಾಡಿ, ‘ಮುಕ್ತ ಮಾರುಕಟ್ಟೆಗೆ ತೆರೆದುಕೊಂಡ ಬಳಿಕ ಹಲವು ದೇಶಗಳಲ್ಲಿ ರೈತರ ಸ್ಥಿತಿ ಚಿಂತಾಜನಕವಾಗಿದೆ. ಸಾಕಷ್ಟು ಸಬ್ಸಿಡಿ ನೀಡಿದರೂ ಅಮೆರಿಕದಲ್ಲಿ ರೈತರ ಆತ್ಮಹತ್ಯೆ ಹೆಚ್ಚಾಗುತ್ತಲೇ ಇದೆ’ ಎಂದರು.

‘ಕನಿಷ್ಠ ಬೆಂಬಲ ಬೆಲೆ ಮತ್ತು ರೈತರಿಗೆ ಸಬ್ಸಿಡಿ ನೀಡುವ ಪ್ರಮಾಣವನ್ನು ಕಡಿಮೆ ಮಾಡಬೇಕು ಎಂದು ವಿಶ್ವ ವಾಣಿಜ್ಯ ಸಂಸ್ಥೆಯು (ಡಬ್ಲ್ಯೂಟಿಒ) ಭಾರತದ ಮೇಲೆ ಒತ್ತಡ ಹೇರುತ್ತಲೇ ಬಂದಿದೆ. ಭಾರತ ಆಹಾರ ನಿಗಮಕ್ಕೆ(ಎಫ್‌ಸಿಐ) ನೀಡುತ್ತಿದ್ದ ಸಬ್ಸಿಡಿ ಪ್ರಮಾಣವನ್ನು ಬಿಜೆಪಿ ಸರ್ಕಾರ ಕ್ರಮೇಣ ಕಡಿಮೆ ಮಾಡುತ್ತಾ ಬಂದಿದೆ. ಈಗ ನಷ್ಟದಲ್ಲಿದೆ ಎಂಬ ಕಾರಣ ನೀಡಿ ಖಾಸಗಿಯವರಿಗೆ ವಹಿಸಲು ಹೊರಟಿದೆ’ ಎಂದು ಹೇಳಿದರು.

ಸಂಯುಕ್ತ ಕಿಸಾನ್ ಮೋರ್ಚಾ ಸಂಚಾಲಕ ಮುಖೇಶ್‌ಚಂದ್ರ ಶರ್ಮಾ,ರಾಷ್ಟ್ರೀಯ ಕಿಸಾನ್ ಮೋರ್ಚಾದ ಸದಸ್ಯ ಜಂಗ್‌ಜಿತ್ ಸಿಂಗ್, ಪ್ರಜಾ ಪರಿವರ್ತನ ವೇದಿಕೆ ಅಧ್ಯಕ್ಷ ಬಿ. ಗೋಪಾಲ್, ಸಾಮೂಹಿಕ ನಾಯಕತ್ವ ರೈತ ಸಂಘದ ಚುಕ್ಕಿ ನಂಜುಂಡಸ್ವಾಮಿ, ಐಕ್ಯ ಹೋರಾಟದ ಸಂಯೋಜಕ ಪ್ರಕಾಶ್ ಕಮ್ಮರಡಿ, ಕರ್ನಾಟಕ ರಾಜ್ಯ ರೈತ ಸಂಘದ ವಿ.ಆರ್. ನಾರಾಯಣ ರೆಡ್ಡಿ ಮಾತನಾಡಿದರು.

ಹುತಾತ್ಮ ರೈತರ ಕುಟುಂಬಕ್ಕೆ ನೆರವು

‘ದಹಲಿ ಗಡಿಗಳಲ್ಲಿ ಪ್ರತಿಭಟನೆ ನಡೆಯುತ್ತಿರುವ ಸಂದರ್ಭದಲ್ಲೇ 307 ರೈತರು ಹುತಾತ್ಮರಾಗಿದ್ದಾರೆ. ಅವರ ಕುಟುಂಬಗಳಿಗೆ ನೆರವಾಗುವುದು ನಮ್ಮೆಲ್ಲರ ಕರ್ತವ್ಯ’ ಎಂದು ರಾಜ್ಯ ಕಬ್ಬು ಬೆಳೆಗಾರರ ಸಂಘದ ಅಧ್ಯಕ್ಷ ಕುರುಬೂರು ಶಾಂತಕುಮಾರ್ ಹೇಳಿದರು.

‘ಭಾರತದಲ್ಲಿ ಸುಮಾರ 80 ಕೋಟಿ ರೈತರಿದ್ದಾರೆ. ಪ್ರತಿಯೊಬ್ಬ ರೈತ ಕನಿಷ್ಠ ₹10 ನೀಡಿದರೆ ₹800 ಕೋಟಿ ಸಂಗ್ರಹವಾಗುತ್ತದೆ. ಈ ಹಣದಲ್ಲಿ ಹುತಾತ್ಮ ರೈತರ ಕುಟುಂಬಗಳಿಗೆ ಸಹಾಯ ಮಾಡಲು ಸಾಧ್ಯ’ ಎಂದು ಹೇಳಿದರು.

‘ಮೋದಿ ರೈತ ವಿರೋಧಿ ನಿಲುವು’

ಬೆಂಗಳೂರು: ‘ಕೇಂದ್ರದ ಕೃಷಿ ಕಾಯ್ದೆಗಳನ್ನು ವಿರೋಧಿಸಿ ರೈತರು ನಡೆಸುತ್ತಿರುವ ಪ್ರತಿಭಟನೆ ಐದನೇ ತಿಂಗಳಿಗೆ ಕಾಲಿಡುತ್ತಿದೆ. ಹೀಗಿದ್ದರೂ ಪ್ರಧಾನಿ ನರೇಂದ್ರ ಮೋದಿ ನಮ್ಮೊಂದಿಗೆ ಮಾತುಕತೆಗೆ ಬಂದಿಲ್ಲ. ಇದು ಅವರ ರೈತ ವಿರೋಧಿ ನಿಲುವಿಗೆ ಸಾಕ್ಷಿ. ಅವರಿಗೆ ತಕ್ಕ ಪಾಠ ಕಲಿಸಬೇಕು. ಇದಕ್ಕಾಗಿ ಪಶ್ಚಿಮ ಬಂಗಾಳ ಮತ್ತು ಕೇರಳ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿಯನ್ನು ಸೋಲಿಸುವಂತೆ ಅಲ್ಲಿನ ರೈತರಿಗೆ ಕರೆ ನೀಡಿದ್ದೇವೆ’ ಎಂದು ರಾಷ್ಟ್ರೀಯ ಕಿಸಾನ್‌ ಮಹಾ ಸಂಘದ ಪ್ರಧಾನ ಸಂಚಾಲಕ ಶಿವಕುಮಾರ್‌ ಕಕ್ಕಾಜಿ ಹೇಳಿದರು.

ಕರ್ನಾಟಕ ರಾಜ್ಯ ರೈತ ಸಂಘ, ರಾಜ್ಯ ಕಬ್ಬು ಬೆಳೆಗಾರರ ಸಂಘ, ರಾಷ್ಟ್ರೀಯ ಕಿಸಾನ್‌ ಸಂಘಟನೆ ಶುಕ್ರವಾರ ಆಯೋಜಿಸಿದ್ದ ಜಂಟಿ ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿದರು.

‘ಕೇಂದ್ರದ ರೈತ ವಿರೋಧಿ ನಿಲುವನ್ನು ಖಂಡಿಸಿ ಇದೇ 26ರಂದು ಭಾರತ ಬಂದ್‌ ನಡೆಸಲಾಗುತ್ತಿದೆ. ಇದಕ್ಕೆ ಎಲ್ಲ ರಾಜ್ಯಗಳ ರೈತ, ಕಾರ್ಮಿಕ ಹಾಗೂ ಇತರ ಸಂಘಟನೆಗಳು ಸಹಕಾರ ನೀಡಬೇಕು’ ಎಂದರು.

‘ಪಶ್ಚಿಮ ಬಂಗಾಳ ಮತ್ತು ಕೇರಳ ಪ್ರವಾಸ ಕೈಗೊಂಡು ಅಲ್ಲಿನ ರೈತರಲ್ಲಿ ಜಾಗೃತಿ ಮೂಡಿಸಲಾಗಿದೆ. ಈಗಾಗಲೇ ಎಂಟು ರಾಜ್ಯಗಳಲ್ಲಿ ಕಿಸಾನ್‌ ಮಹಾ ಪಂಚಾಯಿತಿ ನಡೆಸಲಾಗಿದೆ. ಇತರ ರಾಜ್ಯಗಳಿಗೂ ಇದನ್ನು ವಿಸ್ತರಿಸಲಾಗುತ್ತದೆ. ಕಾಯ್ದೆಗಳನ್ನು ಹಿಂಪಡೆಯುವವರೆಗೂ ನಮ್ಮ ಹೋರಾಟ ಮುಂದುವರಿಯುತ್ತದೆ’ ಎಂದು ತಿಳಿಸಿದರು.

ಕುರುಬೂರು ಶಾಂತಕುಮಾರ್‌, ‘ಸಂಯುಕ್ತ ಕಿಸಾನ್‌ ಮೋರ್ಚಾ ಅಡಿಯಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಲ್ಲಿ ಕಿಸಾನ್‌ ಮಹಾ ಪಂಚಾಯಿತಿ ನಡೆಸಲು ತೀರ್ಮಾನಿಸಲಾಗಿದೆ’ ಎಂದರು.

‘ಪಶ್ಚಿಮ ಬಂಗಾಳದಲ್ಲಿ ಅನೇಕ ಮಹಾ ಪಂಚಾಯಿತಿಗಳನ್ನು ನಡೆಸಿದ್ದು ಇದಕ್ಕೆ ರೈತರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳಿಗೆ ಮತ ಹಾಕದಿರಲು ಅಲ್ಲಿನ ರೈತರು ನಿರ್ಧರಿಸಿದ್ದಾರೆ’ ಎಂದು ರಾಷ್ಟ್ರೀಯ ಕಿಸಾನ್‌ ಮಜ್ದೂರ್‌ ಮಹಾ ಸಂಘದ ಯುವ ಘಟಕದ ಅಧ್ಯಕ್ಷ ಅಭಿಮನ್ಯು ಕೊಹರಾ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT