ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ ಶ್ರೀಕೃಷ್ಣ ಪರಾರಿ

ಡ್ರಗ್ಸ್ ಪ್ರಕರಣದಲ್ಲಿ ಜಾಮೀನು ಪಡೆದಿದ್ದ ಆರೋಪಿ
Last Updated 12 ಡಿಸೆಂಬರ್ 2021, 2:01 IST
ಅಕ್ಷರ ಗಾತ್ರ

ಬೆಂಗಳೂರು: ಬಿಟ್ ಕಾಯಿನ್ ಹಗರಣದ ಪ್ರಮುಖ ಸೂತ್ರಧಾರ, ಅಂತರರಾಷ್ಟ್ರೀಯ ಹ್ಯಾಕರ್ ಶ್ರೀಕೃಷ್ಣ ಅಲಿಯಾಸ್ ಶ್ರೀಕಿ (26) ರಾಜ್ಯದಿಂದ ಪರಾರಿಯಾಗಿರುವ ಮಾಹಿತಿ ಪೊಲೀಸ್‌ ಮೂಲಗಳಿಂದ ಲಭ್ಯವಾಗಿದೆ.

ಜೀವನಬಿಮಾನಗರ ಠಾಣೆಯಲ್ಲಿ ದಾಖಲಾಗಿದ್ದ ಡ್ರಗ್ಸ್ ಪ್ರಕರಣದ ಆರೋಪಿಯೂ ಆಗಿರುವ ಶ್ರೀಕೃಷ್ಣ, ನ್ಯಾಯಾಲಯದ ಜಾಮೀನು ಮೇಲೆ ಮೂರು ವಾರಗಳ ಹಿಂದೆಯಷ್ಟೇ ಜೈಲಿನಿಂದ ಬಿಡುಗಡೆ ಆಗಿದ್ದ. ಷರತ್ತಿನ ಪ್ರಕಾರ ತನಿಖಾಧಿಕಾರಿ ಎದುರು ವಿಚಾರಣೆಗೆ ಹಾಜರಾಗಬೇಕಿತ್ತು. ಆದರೆ ಆತ ಹಾಜರಾಗದೇ ರಾಜ್ಯವನ್ನೇ ತೊರೆದಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.

‘ಮಾದಕ ವಸ್ತು ಸೇವಿಸಿ ಹೋಟೆಲೊಂದರ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದ ಆರೋಪದಡಿ ಶ್ರೀಕೃಷ್ಣ ಹಾಗೂ ಉದ್ಯಮಿಯೊಬ್ಬರ ಮಗ ವಿಷ್ಣು ಭಟ್‌ನನ್ನು ನವೆಂಬರ್‌ 5ರಂದು ಬಂಧಿಸಲಾಗಿತ್ತು. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿದ್ದ ಶ್ರೀಕೃಷ್ಣ, ಜಾಮೀನು ಪಡೆದು ಹೊರಬಂದ ನಂತರ ತಲೆಮರೆಸಿಕೊಂಡಿದ್ದಾನೆ. ಜಾಮೀನು ಷರತ್ತಿನಂತೆ ತನಿಖಾಧಿಕಾರಿ ವಿಚಾರಣೆಗೂ ಆತ ಬಂದಿಲ್ಲ.ಹೀಗಾಗಿ, ಶ್ರೀಕೃಷ್ಣನ ಜಾಮೀನು ರದ್ದುಪಡಿಸುವಂತೆ ಕೋರಿ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಲು ಸಿದ್ಧತೆ ನಡೆಸಿದ್ದೇವೆ’ ’ ಎಂದು ಮೂಲಗಳು ಹೇಳಿವೆ.

ತಂದೆ ಭೇಟಿ ಬಳಿಕ ಸುಳಿವಿಲ್ಲ: ‘ಜೈಲಿನಿಂದ ಬಿಡುಗಡೆಯಾಗಿದ್ದ ಶ್ರೀಕೃಷ್ಣ, ತಂದೆ ರಮೇಶ್ ಅವರನ್ನು ಮೊದಲಿಗೆ ಭೇಟಿಯಾಗಿದ್ದ. ಅವರ ಜೊತೆ ಹೆಬ್ಬಾಳದ ಆಸ್ಪತ್ರೆಯೊಂದಕ್ಕೆ ತೆರಳಿದ್ದ. ಮರುದಿನದಿಂದಲೇ ಆತನ ಸುಳಿವಿಲ್ಲ’ ಎಂದು ಮೂಲಗಳು ಮಾಹಿತಿ ನೀಡಿವೆ.

‘ಬಿಟ್‌ ಕಾಯಿನ್ ಹಗರಣದ ಸಕಲ ಮಾಹಿತಿ ಇರುವ ಶ್ರೀಕೃಷ್ಣನ ಜೀವಕ್ಕೆ ಅಪಾಯವಿರುವುದಾಗಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹಾಗೂ ಇತರರು ದೂರಿದ್ದರು. ಇದೇ ಕಾರಣಕ್ಕೆ ಆತನ ಹಾಗೂ ಕುಟುಂಬಕ್ಕೆ ಭದ್ರತೆ ನೀಡಲು ಇನ್‌ಸ್ಪೆಕ್ಟರ್‌ ನೇತೃತ್ವದ ತಂಡವನ್ನು ನಿಯೋಜಿಸಲಾಗಿತ್ತು. ಇನ್‌ಸ್ಪೆಕ್ಟರ್‌ ಅವರ ಸಂಪರ್ಕಕ್ಕೂ ಶ್ರೀಕೃಷ್ಣ ಸಿಕ್ಕಿಲ್ಲ’ ಎಂದು ಮೂಲಗಳು ಹೇಳಿವೆ.

ಉತ್ತರ ಭಾರತದಲ್ಲಿ ಸುತ್ತಾಟ ?

'ಬೆಂಗಳೂರಿನ ಹೋಟೆಲೊಂದರಲ್ಲಿ ಎರಡು ದಿನ ಉಳಿದಿದ್ದ ಶ್ರೀಕೃಷ್ಣ, ಪರಿಚಯಸ್ಥರ ಸಹಾಯದಿಂದ ದೆಹಲಿಗೆ ಹೋಗಿರುವ ಮಾಹಿತಿ ಲಭ್ಯವಾಗಿತ್ತು. ಕೆಲದಿನ ದೆಹಲಿಯಲ್ಲಿದ್ದ ಆತ, ಅಲ್ಲಿಂದ ಉತ್ತರ ಭಾರತದ ಹಲವು ರಾಜ್ಯಗಳಲ್ಲಿ ಸುತ್ತಾಡುತ್ತಿರುವ ಮಾಹಿತಿ ಇದೆ’ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT