ಮಂಗಳವಾರ, 19 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಳೆದ ಚುನಾವಣೆಯ ಈ 7 ತಪ್ಪುಗಳನ್ನು ಪುನರಾವರ್ತಿಸದಿರಲು ಬಿಜೆಪಿ ತೀರ್ಮಾನ

Last Updated 7 ಫೆಬ್ರುವರಿ 2023, 2:03 IST
ಅಕ್ಷರ ಗಾತ್ರ

ಬೆಂಗಳೂರು: ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತದಿಂದ ವಂಚಿತರಾಗಲು 7 ಕಾರಣ ಗುರುತಿಸಿರುವ ಬಿಜೆಪಿ, ಈ ಬಾರಿ ಅದೇ ತಪ್ಪು ಪುನರಾವರ್ತನೆ ಆಗದಿರುವಂತೆ ಜಾಗ್ರತೆವಹಿಸಿ ಕಠಿಣ ಕ್ರಮ ತೆಗೆದುಕೊಳ್ಳಲು ತೀರ್ಮಾನಿಸಿದೆ. ‘ಮುಖ್ಯವಾಗಿ ಜೆಡಿಎಸ್ ಜತೆ ಒಳ ಒಪ್ಪಂದ ಮಾಡಿಕೊಳ್ಳಬಾರದು. ‘ಸ್ನೇಹ’ದ ಕಾರಣಗಳಿಗಾಗಿ ವಿರೋಧಿ ಪಕ್ಷಗಳಲ್ಲಿರುವ ಪ್ರಮುಖ ನಾಯಕರ ಗೆಲುವಿಗಾಗಿ ರಾಜೀ ಮಾಡಿಕೊಳ್ಳುವುದನ್ನು ಬಿಡಬೇಕು. ಯಾವುದೇ ನಾಯಕರಾದರೂ ಸರಿ ಅವರ ವಿರುದ್ಧ ಕಠಿಣ ಸ್ಪರ್ಧೆ ಒಡ್ಡಿ ಪರಾಭವಗೊಳಿಸಲೇಬೇಕು ಎಂಬ ಸೂಚನೆ ವರಿಷ್ಠರು ನೀಡಿದ್ದಾರೆ’ ಎಂದು ಮೂಲಗಳು ಹೇಳಿವೆ.

ಕಾರಣಗಳೇನು?
1. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬೆಂಗಳೂರು, ಬೆಳಗಾವಿ, ಬಳ್ಳಾರಿ, ವಿಜಯಪುರ (ಬಿಜಾಪುರ), ಬೀದರ್‌ ಜಿಲ್ಲೆಗಳಲ್ಲಿ ಚುನಾವಣೆ ಸರಿಯಾಗಿ ನಿರ್ವಹಿಸದ ಕಾರಣ, ಆ ಜಿಲ್ಲೆಗಳಲ್ಲಿ ಬಿಜೆಪಿ ಗೆಲ್ಲಬಹುದಾಗಿದ್ದ ಹಲವು ಸ್ಥಾನಗಳನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಹೊಂದಾಣಿಕೆ ರಾಜಕಾರಣ ಮತ್ತು ಸಂಘಟನೆಗಳು ಹೆಚ್ಚು ಆಸಕ್ತಿ ವಹಿಸದ ಕಾರಣ ಪಕ್ಷದ ಅಭ್ಯರ್ಥಿಗಳಿಗೆ ಸೋಲುಂಟಾಯಿತು.

2. ಎಂಟ ರಿಂದ ಹತ್ತು ಕ್ಷೇತ್ರಗಳಲ್ಲಿ ಗೆಲ್ಲಬಹುದಾದ ಅಭ್ಯರ್ಥಿಗಳನ್ನು ಕಣಕ್ಕೆ ಇಳಿಸುವ ಬದಲು ಕೆಲವು ನಾಯಕರು ವಿವಿಧ ಕಾರಣಗಳಿಗೆ ತಮಗೆ ಬೇಕಾದವರನ್ನು ಅಭ್ಯರ್ಥಿಗಳನ್ನಾಗಿ ಕಣಕ್ಕೆ ಇಳಿಸಿದರು. ಇದರಿಂದ ಟಿಕೆಟ್‌ ಸಿಗದವರು ಮತ್ತು ಪಕ್ಷದ ಕಾರ್ಯಕರ್ತರು ಸರಿಯಾಗಿ ಕೆಲಸ ಮಾಡಲಿಲ್ಲ.

3. ಕೆಲವರಿಗೆ ಕೊನೆ ಕ್ಷಣದಲ್ಲಿ ‘ಬಿ’ ಫಾರ್ಮ್‌ ಕೊಟ್ಟಿದ್ದರಿಂದ ಸಾಕಷ್ಟು ಅಭ್ಯರ್ಥಿಗಳಿಗೆ ತಯಾರಿ ಮಾಡಿಕೊಳ್ಳಲು ಸಾಧ್ಯವಾಗಲಿಲ್ಲ. ಒಂದು ತಿಂಗಳಿಗೂ ಮೊದಲೇ ಟಿಕೆಟ್‌ ಖಚಿತ ಪಡಿಸಿದ್ದರೆ, ಹೆಚ್ಚು ವ್ಯವಸ್ಥಿತವಾಗಿ ಪ್ರಚಾರ ನಡೆಸಲು ಸಾಧ್ಯವಾಗುತ್ತಿತ್ತು.

4. ಸಂಸದ ಅನಂತ ಕುಮಾರ್‌ ಹೆಗಡೆ ಅವರು ಸಂವಿಧಾನದ ಕುರಿತು ನೀಡಿದ ಹೇಳಿಕೆಯನ್ನು ತನಗೆ ಬೇಕಾದಂತೆ ಕಾಂಗ್ರೆಸ್‌ ಪಕ್ಷವು ತಿರುಚಿ ಪರಿಶಿಷ್ಟ ಜಾತಿಯವರೇ ಹೆಚ್ಚಾಗಿರುವ ಸುಮಾರು 60 ವರ್ಷ ಕ್ಷೇತ್ರಗಳಲ್ಲಿ ಪ್ರಚಾರ ನಡೆಸಿತು. ಇದು ಬಿಜೆಪಿಗೆ ಹೊಡೆತ ನೀಡಿತು.

5. ಪಕ್ಷದ ಅಭ್ಯರ್ಥಿಗಳ ಖರ್ಚಿಗಾಗಿ ನೀಡಿದ ಹಣ ಸಮರ್ಪಕವಾಗಿ ನಿರ್ವಹಣೆ ಆಗಲಿಲ್ಲ.

6. ಹಳೇ ಮೈಸೂರು ಮತ್ತು ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಹೆಚ್ಚು ಪ್ರಯತ್ನ ಹಾಕಲಿಲ್ಲ. ಅಲ್ಲಿ ಹೆಚ್ಚಿನ ಪ್ರಯತ್ನ ಹಾಕಿದ್ದರೆ ಇನ್ನೂ ಕೆಲವು ಕ್ಷೇತ್ರಗಳನ್ನು ಗೆಲ್ಲಬಹುದಿತ್ತು. ಸುಮಾರು ಕ್ಷೇತ್ರಗಳಲ್ಲಿ 500 ರಿಂದ 1500 ಮತಗಳ ಅಂತರದಲ್ಲಿ ಸೋಲಬೇಕಾಯಿತು.

7. ಜೆಡಿಎಸ್‌ ಜತೆ ಹಲವು ಕ್ಷೇತ್ರಗಳಲ್ಲಿ ಹೊಂದಾಣಿಕೆ ಮಾಡಿಕೊಂಡಿದ್ದು ಹಿನ್ನಡೆಯಾಯಿತು. ಆರಂಭದಲ್ಲಿ ಜೆಡಿಎಸ್‌ ವಿರುದ್ಧ ಧೋರಣೆ ತಳೆಯಲಾಗಿತ್ತು. ಸರ್ಕಾರ ರಚಿಸಲು ಜೆಡಿಎಸ್‌ ನೆರವು ಬೇಕಾಗಬಹುದು ಎಂದು ಭಾವಿಸಿದ ಜೆಡಿಎಸ್‌ ಜತೆ ಒಲವು ತೋರಿತು. ಪ್ರಧಾನಿ ಮೋದಿಯವರು ಎಚ್‌.ಡಿ.ದೇವೇಗೌಡರನ್ನು ಹೊಗಳಿ ಹೇಳಿಕೆಯನ್ನೂ ನೀಡಿದ್ದರು. ಆದರೆ, ಚುನಾವಣೆ ಬಳಿಕ ಜೆಡಿಎಸ್ ಕಾಂಗ್ರೆಸ್‌ ಪಕ್ಷದ ತೆಕ್ಕೆಗೆ ಜಾರಿತು.

ಇವೆಲ್ಲ ಅಂಶವನ್ನು ಮನಗಂಡಿರುವ ಬಿಜೆಪಿ ಈ ಬಾರಿ ಯಾವುದೇ ಕಾರಣಕ್ಕೂ ಯಾವುದೇ ಪಕ್ಷ, ನಾಯಕರ ಜತೆ ಒಳ ಒಪ್ಪಂದ ಮಾಡಬಾರದು. ಪಕ್ಷದ ನೆಲೆ ಇಲ್ಲದ ಕಡೆಗಳಲ್ಲೂ ಪ್ರಭಾವಿ ಅಭ್ಯರ್ಥಿಗಳನ್ನು ಕಣಕ್ಕಿಳಿಸಿ ಜೆಡಿಎಸ್‌– ಕಾಂಗ್ರೆಸ್‌ ಅಭ್ಯರ್ಥಿಗಳನ್ನು ಮಣಿಸಲು ಮಾನಸಿಕವಾಗಿ ಸಿದ್ಧವಾಗಿದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT