ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಭಾಷಾಂಧರ ಕೃತ್ಯವನ್ನು ಕೋಮು ಸಂಘರ್ಷಕ್ಕೆ ತಿರುಗಿಸಲು ಸಿದ್ದರಾಮಯ್ಯ ಯತ್ನ: ಬಿಜೆಪಿ

Last Updated 18 ಡಿಸೆಂಬರ್ 2021, 10:31 IST
ಅಕ್ಷರ ಗಾತ್ರ

ಬೆಳಗಾವಿಯಲ್ಲಿ: ಬೆಳಗಾವಿಯಲ್ಲಿ ಭಾಷಾಂಧರು ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗೆ ಅಪಮಾನ ಮಾಡಿರುವುದನ್ನು ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರು ಕೋಮು ಸಂಘರ್ಷಕ್ಕೆ ಪರಿವರ್ತಿಸಲು ಪ್ರಯತ್ನಿಸುತ್ತಿದ್ದಾರೆ ಎಂದು ಬಿಜೆಪಿ ಆರೋಪಿಸಿದೆ.

ಈ ಬಗ್ಗೆ ಟ್ವೀಟ್‌ ಮಾಡಿರುವ ಬಿಜೆಪಿ, ‘ಬೆಳಗಾವಿಯಲ್ಲಿ ಪುಂಡರು ಶಾಂತಿ-ಸೌಹಾರ್ದತೆ‌ ಕದಡುವ ಪ್ರಯತ್ನ ನಡೆಸುತ್ತಿದ್ದಾರೆ. ಎಲ್ಲರೂ ಸಂಯಮ ಹಾಗೂ ಶಾಂತಿ ಕಾಪಾಡುವುದಕ್ಕೆ ಆದ್ಯತೆ ‌ನೀಡುತ್ತಿದ್ದಾರೆ. ಆದರೆ ಸಿದ್ದರಾಮಯ್ಯ ಅವರು ಮಾತ್ರ ಮೊಸರಿನಲ್ಲೂ ಕಲ್ಲು ಹುಡುಕುತ್ತಿದ್ದಾರೆ. ಭಾಷಾಂಧರು ನಡೆಸಿದ ಕೃತ್ಯವನ್ನು ಕೋಮು ಸಂಘರ್ಷಕ್ಕೆ ಪರಿವರ್ತಿಸಲು ಸಿದ್ದರಾಮಯ್ಯ ಯತ್ನಿಸುತ್ತಿದ್ದಾರೆ. ಎಲ್ಲದರಲ್ಲೂ ರಾಜಕೀಯ ಹುಡುಕುವುದೇ ಸಿದ್ದರಾಮಯ್ಯ ಅವರ ಚಾಳಿ. ಎಲ್ಲದಕ್ಕೂ ಸಂದರ್ಭ, ಪ್ರಜ್ಞೆ ಎನ್ನುವುದಿರುತ್ತದೆ. ಬೆಳಗಾವಿಯಲ್ಲಿ ದುಷ್ಕರ್ಮಿಗಳು ನಡೆಸಿದ ಪುಂಡಾಟವನ್ನು ಕೋಮು ದ್ವೇಷಕ್ಕೆ ಪರಿವರ್ತಿಸುವ ಇರಾದೆ ಏಕೆ? ನೆರಮನೆಗೆ ಬೆಂಕಿ ಬಿದ್ದಾಗ ಚಳಿ ಕಾಯಿಸಿಕೊಳ್ಳಲು ಹೊರಟ ನಿಮ್ಮ ದುಷ್ಟಬುದ್ಧಿಗೆ ಧಿಕ್ಕಾರ,’ ಎಂದು ಬಿಜೆಪಿ ಹೇಳಿದೆ.

‘ಬೆಳಗಾವಿಯಲ್ಲಿ ಕಿಡಿಗೇಡಿಗಳು ನಡೆಸಿದ ಅಹಿತಕರ ಕೃತ್ಯ ಖಂಡನೀಯವಾದುದು. ಸಂಗೊಳ್ಳಿ ರಾಯಣ್ಣ ಹಾಗೂ ಛತ್ರಪತಿ ಶಿವಾಜಿ ಪ್ರತಿಮೆಗೆ ಅಪಮಾನ ಎಸಗಿದ್ದನ್ನು ಯಾರೂ ಸಹಿಸಲು ಸಾಧ್ಯವಿಲ್ಲ. ಬೆಳಗಾವಿ ಕರ್ನಾಟಕದ ಅವಿಭಾಜ್ಯ ಅಂಗ. ಭಾಷಾ ಸಾಮರಸ್ಯಕ್ಕೆ ಧಕ್ಕೆ ತಂದವರ ವಿರುದ್ಧ ಸರ್ಕಾರ ದಿಟ್ಟ ಕ್ರಮ ಕೈಗೊಳ್ಳಲಿದೆ,’ ಎಂದು ತಿಳಿಸಿದೆ.

ಬೆಳಗಾವಿಯ ಅನಗೋಳದ ಕನಕದಾಸ ಕಾಲೊನಿಯಲ್ಲಿ ಪ್ರತಿಷ್ಠಾಪಿಸಲಾಗಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಶನಿವಾರ ಬೆಳಗಿನ ಜಾವ 3ರ ಸುಮಾರಿನಲ್ಲಿ ದುಷ್ಕರ್ಮಿಗಳು ಭಗ್ನಗೊಳಿಸಿದ್ದರು. ‌ಮುಖದ ಭಾಗವನ್ನು ವಿರೂಪಗೊಳಿಸಲಾಗಿತ್ತು. ಪ್ರತಿಮೆಯಲ್ಲಿದ್ದ ಖಡ್ಗವನ್ನು ಕಿತ್ತು ಹಾಕಿ ಅಪಮಾನಿಸಲಾಗಿತ್ತು.

ಘಟನೆ ಖಂಡಿಸಿದ್ದ ಸಿದ್ದರಾಮಯ್ಯ ಟ್ವೀಟ್‌ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದರು.

ಬೆಳಗಾವಿಯಲ್ಲಿರುವ ಕರ್ನಾಟಕದ ಅಭಿಮಾನ ಮೂರ್ತಿ ವೀರ ಸಂಗೊಳ್ಳಿ ರಾಯಣ್ಣನ ಪ್ರತಿಮೆಯನ್ನು ಕೆಡವಿ, ವಿರೂಪಗೊಳಿಸಿದ ಎಂಇಎಸ್ ಪುಂಡರ ಕಿಡಿಗೇಡಿ ಕೃತ್ಯ ಖಂಡನೀಯ. ಮುಖ್ಯಮಂತ್ರಿಗಳು ಈ ಗೂಂಡಾಗಳನ್ನು ತಕ್ಷಣ ಬಂಧಿಸಿ ಜೈಲಿಗಟ್ಟುವಂತೆ ಪೊಲೀಸರಿಗೆ‌ ಆದೇಶ ನೀಡಬೇಕು ಎಂದು ಹೇಳಿದ್ದರು.

ಜತೆಗೆ, ಬೊಮ್ಮಾಯಿ ಅವರೇ ಇದಕ್ಕೆಲ್ಲ 'ಕ್ರಿಯೆಗೆ ಪ್ರತಿಕ್ರಿಯೆ' ಎಂಬ ಮೊಂಡುವಾದ ಮಂಡಿಸಬೇಡಿ. ಕಾನೂನಿನ ಕ್ರಮ ಇಂತಹ ಪುಂಡರಿಗೆ ಕಠಿಣ ಸಂದೇಶವಾಗಲಿ. ಇದೇ ವೇಳೆ ಕನ್ನಡ ಬಂಧುಗಳು ಆವೇಶಕ್ಕೆ ಒಳಗಾಗದೆ,‌‌‌ ಸಂಯಮದಿಂದ ಶಾಂತಿ-ಸೌಹಾರ್ದತೆ ಕಾಪಾಡಿಕೊಂಡು‌ ಬರಬೇಕೆಂದು‌ ಮನವಿ ಮಾಡುತ್ತೇನೆ,‘ ಎಂದು ಸಿದ್ದರಾಮಯ್ಯ ತಿಳಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT