ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನೆಹರೂ ಇಂದಿರಾಗೆ ಬರೆದ ಪತ್ರವನ್ನು ಅನಾವಶ್ಯಕವಾಗಿ ತುರುಕಿಸಲಾಗಿದೆ: ಬಿಜೆಪಿ

ಅಕ್ಷರ ಗಾತ್ರ

ಬೆಂಗಳೂರು: ಪಠ್ಯ ಪುಸ್ತಕ ಪರಿಷ್ಕರಣೆ ವಿಚಾರವಾಗಿ ಆಡಳಿತ ಪಕ್ಷ ಮತ್ತು ಕಾಂಗ್ರೆಸ್‌ ನಡುವೆ ವಾಕ್ಸಮರ ದಿನೇದಿನೆ ಕಾವೇರುತ್ತಿದೆ. ಕಾಂಗ್ರೆಸ್‌ ಸರ್ಕಾರವಿದ್ದಾಗ ಬರಗೂರು ರಾಮಚಂದ್ರಪ್ಪ ನೇತೃತ್ವದ ಸಮಿತಿಯಲ್ಲಿ ಯಾವ ವಿಷಯಗಳನ್ನು ಬಿಟ್ಟಿದ್ದಾರೆ ಎಂಬುದನ್ನು ಬಿಜೆಪಿ ಪಟ್ಟಿ ಮಾಡಿದೆ.

ಶಿಕ್ಷಣ ವಿರೋಧಿ ಕಾಂಗ್ರೆಸ್‌ ಎಂದು ಆರೋಪಿಸಿರುವ ಬಿಜೆಪಿ, ಜವಾಹರಲಾಲ್‌ ನೆಹರೂ ಅವರು ಮಗಳು ಇಂದಿರಾ ಗಾಂಧಿ ಅವರಿಗೆ ಬರೆದ ಪತ್ರವನ್ನು ಅನಾವಶ್ಯಕವಾಗಿ ತುರುಕಿಸಲಾಗಿದೆ. ಇದರ ಉದ್ದೇಶವೇನಿತ್ತು ಎಂದು ಪ್ರಶ್ನಿಸಿದೆ.

ಅಂಬೇಡ್ಕರ್‌ ಪಠ್ಯ ತಿರಸ್ಕಾರ, ನಾಡಪ್ರಭು ಕೆಂಪೇಗೌಡ ಪಠ್ಯಕ್ಕೆ ಜಾಗ ಇರಲಿಲ್ಲ, ನೇಗಿಲಯೋಗಿ ಪದ್ಯಕ್ಕೆ ಅವಕಾಶವಿಲ್ಲ, ಸಿಂಧೂ ನಾಗರಿಕತೆ ಪಾಠವೇ ಇಲ್ಲ. ಇವು ಕಾಂಗ್ರೆಸ್‌ ಸರ್ಕಾರ ನೇಮಿಸಿದ ಸಮಿತಿಯ ಸಾಧನೆ ಎಂದು ಬಿಜೆಪಿ ಟ್ವೀಟ್‌ ಮಾಡಿದೆ.

'ರಾಮಾಯಣದ ಬಗೆಗಿನ ಪಠ್ಯ ತೆಗೆದು ಇಸ್ಲಾಮಿಕ್ ಮತ್ತು ಸೂಫಿ ಪಂಥದ ಪಠ್ಯ ಸೇರಿಸಲಾಗಿತ್ತು. ಇಸ್ಲಾಂ ಮತ್ತು ಕ್ರೈಸ್ತ ಧರ್ಮದ ಬಗ್ಗೆ ವೈಭವೀಕರಣೆ ಮಾಡಲಾಗಿತ್ತು. ಸನಾತನ ಸಂಸ್ಕೃತಿಯ ಬಗ್ಗೆ ಕೀಳರಿಮೆ ಬರುವಂತಹ ಬರಹ ಸೇರ್ಪಡೆ ಮಾಡಲಾಗಿತ್ತು. ಇದೆಲ್ಲ ಮಾಡಿದ್ದು ಬಿಜೆಪಿ ನೇಮಿಸಿದ ಸಮಿತಿಯಲ್ಲ, ಕಾಂಗ್ರೆಸ್‌ ಸರ್ಕಾರ ನೇಮಿಸಿದ್ದ ಸಮಿತಿ' ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

'ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ಸಮಿತಿ 6ನೇ ತರಗತಿ ಸಮಾಜ ವಿಜ್ಞಾನ ಪಠ್ಯದಲ್ಲಿ ಮೈಸೂರು ಒಡೆಯರ್ ವಂಶಸ್ಥರ ಪಠ್ಯಕ್ಕೆ ಕತ್ತರಿ ಹಾಕಿತ್ತು. ಅದೇ ಸಮಿತಿ ಟಿಪ್ಪುವನ್ನು ವೈಭವೀಕರಿಸಿ, ಹೆಚ್ಚಿನ ಪುಟ ಸೇರಿಸಿತ್ತು. ಅಲ್ಪಸಂಖ್ಯಾತರ ಮತ ಓಲೈಕೆಗಾಗಿ ಮೈಸೂರು ರಾಜ ಮನೆತನಕ್ಕೆ ಅವಮಾನ ಮಾಡಿದ್ದು ನಿಜವಲ್ಲವೇ?' ಎಂದು ಬಿಜೆಪಿ ಪ್ರಶ್ನಿಸಿದೆ.

'ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಮೇಜರ್ ಉಣ್ಣಿಕೃಷ್ಣನ್ ಪಠ್ಯ ತಿರಸ್ಕರಿಸಿದರು. ಯೋಧರನ್ನು ಅತ್ಯಾಚಾರಿ ಎಂದು ಕಾಲೇಜಿನ ಪಠ್ಯ ಪುಸ್ತಕದಲ್ಲಿ ಬರೆದರು. ಭಾರತೀಯತೆಯನ್ನೇ ನಂಬದವರು. ಇದು ಸಿದ್ದರಾಮಯ್ಯ ಸರ್ಕಾರ ನೇಮಿಸಿದ ಬರಗೂರು ರಾಮಚಂದ್ರಪ್ಪ ಅವರ ಕಾರ್ಯವೈಖರಿ. ಈ ವಿಚಾರಗಳನ್ನು ಕಾಂಗ್ರೇಸ್ ಸರ್ಕಾರ ಒಪ್ಪಿದ್ದು ಹೇಗೆ?' ಎಂದು ಬಿಜೆಪಿ ಹರಿಹಾಯ್ದಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT