ಶನಿವಾರ, ಅಕ್ಟೋಬರ್ 1, 2022
20 °C

ನಾವು ಬೀದಿಗೆ ಇಳಿದ ನಂತರ ಬದಲಾವಣೆ ಗಾಳಿ: ಬಿ.ಎಸ್‌.ಯಡಿಯೂರಪ್ಪ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘2023ರ ವಿಧಾನಸಭಾ ಚುನಾವಣೆಯನ್ನು ಸಾಮೂಹಿಕ ನಾಯಕತ್ವದಲ್ಲಿ ಎದುರಿಸುತ್ತೇವೆ. ನಾವು ಬೀದಿಗೆ ಇಳಿದ ನಂತರ ಬದಲಾವಣೆಯ ಬಿರುಗಾಳಿ ಬೀಸಲಿದೆ’ ಎಂದು ಬಿಜೆಪಿಯ ರಾಷ್ಟ್ರೀಯ ಸಂಸದೀಯ ಮಂಡಳಿ ಸದಸ್ಯರಾಗಿ ನೇಮಕಗೊಂಡ ಶಾಸಕ ಬಿ.ಎಸ್‌.ಯಡಿಯೂರಪ್ಪ ವಿಶ್ವಾಸ ವ್ಯಕ್ತಪಡಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ನಾನಾಗಲಿ, ಬೊಮ್ಮಾಯಿ ಆಗಲಿ, ಏಕ ನಾಯಕತ್ವದಿಂದ ಕೆಲಸ ಆಗುವುದಿಲ್ಲ. ಸಾಮೂಹಿಕ ಪ್ರಯತ್ನ ಬೇಕೆಬೇಕು’ ಎಂದು ಹೇಳಿದರು.

‘ಸಿದ್ದರಾಮೋತ್ಸವ ಬಗ್ಗೆ ನಾವು ಗಾಬರಿಯಾಗಿಲ್ಲ. ನಮ್ಮ ಸಾಮೂಹಿಕ ನಾಯಕತ್ವ ಬೀದಿಗೆ ಇಳಿದ ಮೇಲೆ ಏನಾಗುತ್ತದೆ ಎಂಬುದನ್ನು ನೀವೇ ನೋಡುತ್ತೀರಿ. ನಮ್ಮ ಸರ್ಕಾರಗಳ ಜನಪರ ಕಾರ್ಯಕ್ರಮವೇ ನಮ್ಮ ಬಂಡವಾಳ. ಚುನಾವಣೆಯಲ್ಲಿ 135 ಸೀಟುಗಳನ್ನು ಗೆಲ್ಲುವುದು ನಮ್ಮ ಗುರಿ’ ಎಂದು ಯಡಿಯೂರಪ್ಪ ಹೇಳಿದರು.

‘ರಾಜಕಾರಣ ಮತ್ತು ಸಾರ್ವಜನಿಕ ಜೀವನವನ್ನು ನಿವೃತ್ತಿಯ ಕ್ಷೇತ್ರವೆಂದು ನಾನು ಭಾವಿಸಿಲ್ಲ. ಇದು ವರಿಷ್ಠರಿಗೂ ಗೊತ್ತು. ಕ್ರಿಯಾಶೀಲ ಕಾರ್ಯಕರ್ತರನ್ನು ಪಕ್ಷ ಕೈಬಿಡುವುದಿಲ್ಲ ಎಂಬುದಕ್ಕೆ ನನ್ನದೇ ಉದಾಹರಣೆ ಇದೆ. ಹೈಕಮಾಂಡ್‌ ಕೊಟ್ಟಿರುವ ಜವಾಬ್ದಾರಿಯನ್ನು ಸಮರ್ಥವಾಗಿ ನಿಭಾಯಿಸುವುದರ ಜತೆಗೆ ರಾಜ್ಯದಲ್ಲಿ ಯಾವುದೇ ಕಾರಣಕ್ಕೂ ಬೇರೆ ಪಕ್ಷ ಅಧಿಕಾರಕ್ಕೆ ಬರಲು ಬಿಡುವುದಿಲ್ಲ’ ಎಂದರು.

‘ವರಿಷ್ಠರು ನೀಡಿರುವ ದೊಡ್ಡ ಜವಾಬ್ದಾರಿಯನ್ನು ವಿನಮ್ರತೆಯಿಂದಲೇ ಸ್ವೀಕರಿಸಿದ್ದೇನೆ. ಇದನ್ನು ನಿರೀಕ್ಷಿಸಿರಲಿಲ್ಲ. ರಾಜ್ಯದ ಎಲ್ಲ ನಾಯಕರ ಜತೆ ಒಗ್ಗಟ್ಟಿನಿಂದ ಪ್ರವಾಸ ಮಾಡಿ ಪಕ್ಷವನ್ನು ಅಧಿಕಾರಕ್ಕೆ ತರುವುದಷ್ಟೇ ನಮ್ಮ ಏಕೈಕ ಗುರಿ. ಅದನ್ನು ಮಾಡಿಯೇ ತೀರುತ್ತೇವೆ. ಮುಖ್ಯಮಂತ್ರಿ ಆಗುವ ಹಗಲು ಕನಸು ಕಾಣುವವರು ಕಾಣುತ್ತಲೇ ಇರಲಿ, ನಮ್ಮ ಅಭ್ಯಂತರವೇನೂ ಇಲ್ಲ’ ಎಂದು ಅವರು ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಅವರ ಕಾಲೆಳೆದರು.

‘ದೂರವಾಣಿ ಮೂಲಕ ಮಾತನಾಡಿದ ಪ್ರಧಾನಿ ಮೋದಿ ಮತ್ತು ಪಕ್ಷದ ಅಧ್ಯಕ್ಷ ಜೆ.ಪಿ.ನಡ್ಡಾ ರಾಜ್ಯದಲ್ಲಿ ಮತ್ತು ದಕ್ಷಿಣ ಭಾರತದಲ್ಲಿ ಓಡಾಡಿ ಪಕ್ಷಕ್ಕೆ ಶಕ್ತಿ ತುಂಬಲು ಸಲಹೆ ನೀಡಿದ್ದಾರೆ’ ಎಂದರು.

ಅಭಿನಂದನೆಗೆ ಭಾರಿ ಸಂದಣಿ: ನೇಮಕದ ಆದೇಶ ಹೊರ ಬೀಳುತ್ತಿದ್ದಂತೆ ಪಕ್ಷದ ನಾಯಕರು, ಶಾಸಕರು ಮತ್ತು ಸಚಿವರು ಯಡಿಯೂರಪ್ಪ ಅವರ ಮನೆಗೆ ಧಾವಿಸಿ ಅಭಿನಂದನೆ ಸಲ್ಲಿಸಿದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ, ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು