ಸೋಮವಾರ, ನವೆಂಬರ್ 29, 2021
20 °C
ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿಕೆ

dnp ಸಂಭವನೀಯ ಅಭ್ಯರ್ಥಿಗಳ ಪಟ್ಟಿ ಇಂದು ಅಂತಿಮ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ಸಿಂದಗಿ ಮತ್ತು ಹಾನಗಲ್‌ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿಯ ಸಂಭವನೀಯ ಅಭ್ಯರ್ಥಿಗಳ ಕುರಿತು ಭಾನುವಾರ ನಡೆಯುವ ಪಕ್ಷದ ರಾಜ್ಯ ಪ್ರಮುಖರ ಸಮಿತಿ (ಕೋರ್‌ ಕಮಿಟಿ) ಸಭೆಯಲ್ಲಿ ಚರ್ಚಿಸಿ, ವರಿಷ್ಠರಿಗೆ ಶಿಫಾರಸು ಕಳುಹಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಮಾಜಿ ಮುಖ್ಯಮಂತ್ರಿ ಎಸ್‌.ಎಂ. ಕೃಷ್ಣ ಅವರ ನಿವಾಸಕ್ಕೆ ಶನಿವಾರ ಭೇಟಿನೀಡಿ ಮೈಸೂರು ದಸರಾ ಉದ್ಘಾಟನೆಗೆ ಅಧಿಕೃತ ಆಹ್ವಾನ ನೀಡಿದ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅವರು, ‘ಸಿಂದಗಿ ಮತ್ತು ಹಾನಗಲ್‌ ಕ್ಷೇತ್ರಗಳಲ್ಲಿ ಈಗಾಗಲೇ ಪಕ್ಷದ ಸ್ಥಳೀಯ ಕಾರ್ಯಕರ್ತರ ಸಭೆ ನಡೆಸಿ, ಅಭಿಪ್ರಾಯ ಸಂಗ್ರಹಿಸಲಾಗಿದೆ. ಅಲ್ಲಿಂದ ಬಂದಿರುವ ವರದಿಗಳ ಕುರಿತು ಪ್ರಮುಖರ ಸಮಿತಿ ಚರ್ಚಿಸಲಿದೆ. ಸಭೆಯ ಬಳಿಕ ಸಂಭವನೀಯ ಅಭ್ಯರ್ಥಿಗಳ ಪಟ್ಟಿಯನ್ನು ಬಿಜೆಪಿ ರಾಷ್ಟ್ರೀಯ ಘಟಕಕ್ಕೆ ರವಾನಿಸಲಾಗುವುದುʼ ಎಂದರು.

ಕೆಲವು ಸಚಿವರು ಮತ್ತು ಪಕ್ಷದ ಪದಾಧಿಕಾರಿಗಳಲ್ಲಿ ಕೆಲವರನ್ನು ಚುನಾವಣಾ ಉಸ್ತುವಾರಿಗಳನ್ನಾಗಿ ನೇಮಿಸಲಾಗುವುದು. ಈ ಬಗ್ಗೆಯೂ ಪ್ರಮುಖರ ಸಮಿತಿಯ ಸಭೆಯಲ್ಲಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸಂವಿಧಾನ ಕ್ಲಬ್‌ ಸ್ಥಾಪನೆಗೆ ತೀರ್ಮಾನ: ಸಂವಿಧಾನ ಕ್ಲಬ್‌ (ಕಾನ್‌ಸ್ಟಿಟ್ಯೂಷನ್‌ ಕ್ಲಬ್‌) ಸ್ಥಾಪಿಸುವ ಪ್ರಸ್ತಾವ ಹತ್ತು ವರ್ಷಗಳಿಂದಲೂ ಬಾಕಿ ಇತ್ತು. ಎಲ್ಲ ಪಕ್ಷಗಳ ನಾಯಕರ ಜತೆಗೂ ಈ ಕುರಿತು ಚರ್ಚಿಸಲಾಗಿತ್ತು. ಈಗ ಕ್ಲಬ್‌ ಸ್ಥಾಪನೆಗೆ ನಿರ್ಧಾರ ಕೈಗೊಳ್ಳಲಾಗಿದೆ ಎಂದು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

ತಕ್ಷಣದಲ್ಲೇ ಕ್ಲಬ್‌ ಆರಂಭವಾಗುವುದಿಲ್ಲ. ಹತ್ತು ವರ್ಷಗಳಿಂದಲೂ ಬಾಕಿ ಇರುವ ಪ್ರಸ್ತಾವದ ಕುರಿತು ಚರ್ಚಿಸಿ, ತೀರ್ಮಾನಕ್ಕೆ ಬರಲಾಗಿದೆ. ವಿರೋಧ ಪಕ್ಷದ ನಾಯಕರು ಸೇರಿದಂತೆ ಎಲ್ಲ ಪಕ್ಷಗಳ ನಾಯಕರ ಜತೆಗೂ ಈ ಕುರಿತು ಚರ್ಚಿಸಲಾಗಿದೆ ಎಂದರು.

ಆತ್ಮಹತ್ಯೆ ಪರಿಹಾರವಲ್ಲ: ಹೆಚ್ಚುತ್ತಿರುವ ಆತ್ಮಹತ್ಯೆ ತಡೆ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ಮುಖ್ಯಮಂತ್ರಿ, ‘ತಾತ್ಕಾಲಿಕವಾಗಿ ನಮ್ಮನ್ನು ಕಾಡುವ ಸಮಸ್ಯೆಗಳಿಗೆ ಆತ್ಮಹತ್ಯೆ ಪರಿಹಾರವಲ್ಲ. ಕುಟುಂಬದ ಜತೆ ಒಟ್ಟಾಗಿ ನಿಂತು ಸಮಸ್ಯೆಗಳನ್ನು ಎದುರಿಸಬೇಕು. ಆತ್ಮಹತ್ಯೆಗಳನ್ನು ತಡೆಯಲು ಸರ್ಕಾರ, ಸಮಾಜ, ಶಿಕ್ಷಣ ಸಂಸ್ಥೆಗಳು ಎಲ್ಲರೂ ಒಗ್ಗೂಡಿ ಪ್ರಯತ್ನಿಸಬೇಕಿದೆʼ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.