ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನ ಮಂಡಲ | ಗುದ್ದಾಟದೆಡೆ ಕೈ–ಕಮಲ ‘ಕಲಿ’ಗಳ ನಡೆ

ಈಶ್ವರಪ್ಪ ವಿರುದ್ಧ ನಿಲುವಳಿ ಸೂಚನೆ ಮಂಡನೆ l ಸದನದಲ್ಲಿ ತೋಳೇರಿಸಿದ ಸಚಿವರು, ಶಾಸಕರು
Last Updated 16 ಫೆಬ್ರುವರಿ 2022, 20:04 IST
ಅಕ್ಷರ ಗಾತ್ರ

ಬೆಂಗಳೂರು: ರಾಷ್ಟ್ರಧ್ವಜದ ಕುರಿತು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್‌.ಈಶ್ವರಪ್ಪ ಇತ್ತೀಚೆಗೆ ನೀಡಿದ ಹೇಳಿಕೆಯು ವಿಧಾನಮಂಡಲದ ಎರಡೂ ಸದನಗಳಲ್ಲಿ ಬುಧವಾರ ಭಾರೀ ಗದ್ದಲ ಮತ್ತು ಕೋಲಾಹಲಕ್ಕೆ ಕಾರಣವಾಯಿತು. ವಿಧಾನಸಭೆಯಲ್ಲಿ ಸಚಿವ ಈಶ್ವರಪ್ಪ ಮತ್ತು ಕಾಂಗ್ರೆಸ್‌ ಶಾಸಕ ಡಿ.ಕೆ.ಶಿವಕುಮಾರ್‌ ನಡುವಿನ ಮಾತಿನ ಜಟಾಪಟಿ ವೈಯಕ್ತಿಕ ಮಟ್ಟಕ್ಕೆ ಇಳಿದು ರೋಷಾವೇಶದಿಂದ ಪರಸ್ಪರ ತೋಳೇರಿಸಿಕೊಂಡು ಹೊಡೆದಾಟಕ್ಕೆ ಮುಂದಾಗಿದ್ದೂ ನಡೆದುಹೋಯಿತು.

ವಿಧಾನಪರಿಷತ್ತಿನಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಸದಸ್ಯರ ನಡುವೆ ಬಿರುಸಿನ ವಾಗ್ವಾದದಿಂದಾಗಿ ಇಡೀ ದಿನ ಕಲಾಪ ನಡೆಯಲಿಲ್ಲ. ಈ ವಿಷಯದ ಬಗ್ಗೆ ನಿಲುವಳಿ ಸೂಚನೆ ಮಂಡಿಸಲು ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್‌ ಅವರಿಗೆ ಸಭಾಪತಿ ಬಸವರಾಜ ಹೊರಟ್ಟಿ ಅವಕಾಶ ನೀಡಲಿಲ್ಲ. ಕಾಂಗ್ರೆಸ್‌ ಸದಸ್ಯರು ಸಭಾಪತಿ ಪೀಠದ ಮುಂದೆ ಎರಡು ಬಾರಿ ಧರಣಿ ನಡೆಸಿದ್ದರಿಂದ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

‘ಕೆಂಪುಕೋಟೆಯಲ್ಲಿ ಕೇಸರಿ ಧ್ವಜ ಹಾರಿಸುತ್ತೇವೆ’ ಎಂಬುದಾಗಿ ಈಶ್ವರಪ್ಪ ನೀಡಿದ ಹೇಳಿಕೆ ವಿರುದ್ಧ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿಧಾನಸಭೆಯಲ್ಲಿ ನಿಲುವಳಿ ಸೂಚನೆ ಮಂಡಿಸಿದರು.

‘ಇದು ನಿಲುವಳಿ ಸೂಚನೆಯ ವ್ಯಾಪ್ತಿಗೆ ಬರುವುದಿಲ್ಲ’ ಎಂದು ಕಾನೂನು ಸಚಿವ ಜೆ.ಸಿ.ಮಾಧುಸ್ವಾಮಿ ಪ್ರತಿಪಾದಿಸಿದರು. ಆಗ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಈ ಬಗ್ಗೆ ಈಶ್ವರಪ್ಪ ಹೇಳಿಕೆ ನೀಡುತ್ತಾರೆ ಎಂದು ಪ್ರಕಟಿಸಿದರು. ‘ನಾವು ವಿಷಯದ ಬಗ್ಗೆ ಇನ್ನೂ ಚರ್ಚೆಯನ್ನೇ ಮಾಡಿಲ್ಲ’ ಎಂದು ಸಿದ್ದರಾಮಯ್ಯ ಹೇಳಿದರು.

ಆಗ ಸಿದ್ದರಾಮಯ್ಯ ಬಳಿಗೆ ಬಂದ ಶಿವಕುಮಾರ್‌, ‘ನಿಲುವಳಿ ಸೂಚನೆಯ ವ್ಯಾಪ್ತಿಗೆ ಈ ವಿಚಾರ ಬರುತ್ತಿಲ್ಲ ಎಂದು ಸಚಿವರು ಹೇಳುತ್ತಿದ್ದಾರಲ್ಲ. ಈಶ್ವರಪ್ಪಗೆ ಈಗ ಮಾತನಾಡಲು ಬಿಡಬೇಡಿ’ ಎಂದು ಹೇಳಿ ತಮ್ಮ ಸ್ಥಾನದತ್ತ ನಿರ್ಗಮಿಸಿದರು. ಈ ವೇಳೆ, ಶಿವಕುಮಾರ್ ಅವರನ್ನು ಉದ್ದೇಶಿಸಿ, ‘ನೀನೇನು ಹೇಳುವುದು. ಇದು ನಿನ್ನ ಅಪ್ಪನ ಮನೆಯ ಆಸ್ತಿಯಾ’ ಎಂದು ಈಶ್ವರಪ್ಪ ಏರಿದ ಧ್ವನಿಯಲ್ಲಿ ಹೇಳಿದರು. ಈ ಮಾತಿನಿಂದ ಕುಪಿತಗೊಂಡ ಶಿವಕುಮಾರ್, ‘ತಾಕತ್ತಿದ್ದರೆ ಮುಟ್ಟು’ ಎಂದು ಅಬ್ಬರಿಸುತ್ತಾ ತಾವು ನಿಂತ ಜಾಗದಿಂದಲೇ ಆಡಳಿತ ಪಕ್ಷದವರತ್ತ ನುಗ್ಗಲು ಮುಂದಾದರು.

ತಾಕತ್ತಿದ್ದರೆ ಮುಟ್ಟಿ:
ಕಾಂಗ್ರೆಸ್‌ನ ಬೈರತಿ ಸುರೇಶ್‌ ಸೇರಿದಂತೆ ಹಲವು ಸದಸ್ಯರು ಆಕ್ರೋಶದಿಂದ ಓಡಿ ಬಂದು ವಿಧಾನಸಭಾಧ್ಯಕ್ಷರ ಪೀಠದ ಮುಂಭಾಗದಲ್ಲಿ ಜಮಾಯಿಸಿದರು. ಸಚಿವ ಸಿ.ಸಿ.ಪಾಟೀಲ, ಎಂ.ಪಿ.ರೇಣುಕಾಚಾರ್ಯ ಸೇರಿದಂತೆ ಆಡಳಿತ ಪಕ್ಷದ ಕೆಲವು ಸದಸ್ಯರು ಸಹ ತೋಳೆರೆಸಿಕೊಂಡು ಬಂದು ‘ತಾಕತ್ತಿದ್ದರೆ ಮುಟ್ಟಿ’ ಎಂದು ಪ್ರತಿ ಸವಾಲು ಹಾಕಿದರು.

ಈ ವೇಳೆ ಶಿವಕುಮಾರ್ ಅವರನ್ನು ರಾಮಲಿಂಗಾರೆಡ್ಡಿ, ಎಚ್‌.ಕೆ.ಪಾಟೀಲ ಮತ್ತಿತರರು ಸಮಾಧಾನಪಡಿಸಲು ಯತ್ನಿಸಿದರು. ಕೋಪದಿಂದಲೇ ಕುದಿಯುತ್ತಿದ್ದ ಶಿವಕುಮಾರ್ ಅವರು ಈಶ್ವರಪ್ಪ ಕುಳಿತ ಸ್ಥಳಕ್ಕೆ ನುಗ್ಗಿದರು. ಈಶ್ವರಪ್ಪ ಸಹ ‘ಬಾ ಬಾ ಮುಟ್ಟು’ ಎಂದು ಮುನ್ನುಗಿದರು. ಪರಸ್ಪರರು ಏಕವಚನದಿಂದ ಬೈದಾಡಿಕೊಂಡರು.

ಇದರಿಂದ ಸದನದಲ್ಲಿ ಗದ್ದಲದ ವಾತಾವರಣ ಸೃಷ್ಟಿಯಾಯಿತು. ಈ ಮಧ್ಯೆ, ವಿಧಾನಸಭಾಧ್ಯಕ್ಷರು ಮೈಕ್‌ ಬಂದ್‌ ಮಾಡಿಸಿದರು. ಎರಡು ಪಕ್ಷದ ಸದಸ್ಯರ ಜಟಾಪಟಿ ತೀವ್ರಗೊಳ್ಳುತ್ತಿದ್ದಂತೆ ಸಭಾಧ್ಯಕ್ಷರು ಕಲಾಪವನ್ನು ಮಧ್ಯಾಹ್ನ 3 ಗಂಟೆಗೆ ಮುಂದೂಡಿದರು.

ಆ ಬಳಿಕವೂ ಎರಡು ಪಕ್ಷದ ಸದಸ್ಯರ ವಾಕ್ಸಮರ ಮುಂದುವರಿಯಿತು. ‘ನಮಗೆ ಹೊಡೆಯಿರಿ’ ಎಂದು ಸವಾಲು–ಪ್ರತಿ ಸವಾಲು ಹಾಕಿದರು. ಶಿವಕುಮಾರ್ ಅವರನ್ನು ಕಾಂಗ್ರೆಸ್‌ ಸದಸ್ಯರು ಹಾಗೂ ಈಶ್ವರಪ್ಪ ಅವರನ್ನು ಬಿಜೆಪಿ ಸದಸ್ಯರು ಸಮಾಧಾನಪಡಿಸಿ ದೂರ ಕರೆದುಕೊಂಡು ಹೋದರು. ಆ ನಂತರವೂ ಕಾಂಗ್ರೆಸ್‌ ಸದಸ್ಯರು, ‘ದೇಶದ್ರೋಹಿ ಈಶ್ವರಪ್ಪ ಅವರನ್ನು ಸಂಪುಟದಿಂದ ವಜಾ ಮಾಡಬೇಕು’ ಎಂದು ಘೋಷಣೆ ಕೂಗಿದರು.

ಭೋಜನ ವಿರಾಮದ ಬಳಿಕ ಸಂಜೆ 4 ಕ್ಕೆ ಸಮಾವೇಶಗೊಂಡಾಗ, ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರಿಸಿದರು. ‘ರಾಷ್ಟ್ರಧ್ವಜದ ಕುರಿತು ಸಚಿವ ಈಶ್ವರಪ್ಪ ಅವರು ನೀಡಿರುವ ಹೇಳಿಕೆಯನ್ನು ವಿರೋಧಿಸಿ ನಿಲುವಳಿ ಸೂಚನೆಯಡಿ ವಿಷಯ ಪ್ರಸ್ತಾಪಿಸಲು ಅವಕಾಶವಿಲ್ಲ’ ಎಂದು ಸಭಾಧ್ಯಕ್ಷ ಕಾಗೇರಿ
ಕೊನೆಯಲ್ಲಿ ರೂಲಿಂಗ್‌ ನೀಡಿದರು. ಧರಣಿ ಮತ್ತು ಗದ್ದಲ ಮುಂದುವರಿದಾಗ ಕಲಾಪವನ್ನು ಗುರುವಾರಕ್ಕೆ ಮುಂದೂಡಲಾಯಿತು.

ರಾಷ್ಟ್ರಧ್ವಜ ಹಿಡಿದು ಪ್ರತಿಭಟನೆ

ವಿಧಾನಸಭೆಯಲ್ಲಿ ಬುಧವಾರ ಮಧ್ಯಾಹ್ನ ಕಾಂಗ್ರೆಸ್‌ ಶಾಸಕರು ರಾಷ್ಟ್ರಧ್ವಜಗಳನ್ನು ಹಿಡಿದು ಪ್ರತಿಭಟನೆ ನಡೆಸಿದ ಬಗ್ಗೆ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಮತ್ತು ಮುಖ್ಯಮಂತ್ರಿ ಬೊಮ್ಮಾಯಿ ತೀವ್ರ ಆಕ್ರೋಶ ವ್ಯಕ್ತಪಡಿಸಿದರು.

ಭೋಜನ ವಿರಾಮದ ಬಳಿಕ ಸದನ ಸಮಾವೇಶಗೊಂಡಾಗ, ಕಾಂಗ್ರೆಸ್‌ ಸದಸ್ಯರು ತಮ್ಮ ಜತೆ ರಾಷ್ಟ್ರ ಧ್ವಜವನ್ನು ಹಿಡಿದು ಬಂದಿದ್ದರು. ಸಭಾಧ್ಯಕ್ಷರ ಪೀಠದ ಮುಂದೆ ಜಮಾಯಿಸಿ ರಾಷ್ಟ್ರಧ್ವಜವನ್ನು ಪ್ರದರ್ಶಿಸಿ ಧಿಕ್ಕಾರ ಕೂಗಿದರು. ಆಡಳಿತ ಪಕ್ಷದ ವಿರುದ್ಧ ಘೋಷಣೆಗಳನ್ನು ಹಾಕುತ್ತಲೇ, ಧ್ವಜಗಳನ್ನು ಮೇಲಕ್ಕೂ ಕೆಳಕ್ಕೂ ಆಡಿಸಲಾರಂಭಿಸಿದರು. ಇದರಿಂದ ಬೇಸರಗೊಂಡ ಕಾಗೇರಿ, ‘ರಾಷ್ಟ್ರಧ್ವಜವನ್ನು ಗೌರವದಿಂದ ಕಾಣಬೇಕು. ಪ್ರತಿಭಟನೆ ಎಂದು ರಾಷ್ಟ್ರಧ್ವಜವನ್ನು ಬೇಕಾಬಿಟ್ಟಿ ಬಳಸುವುದು ಸರಿಯಲ್ಲ. ಶಾಸಕರು ಧ್ವಜ ಸಂಹಿತೆಯ ಪ್ರಕಾರವೇ ನಡೆದುಕೊಳ್ಳಬೇಕು’ ಎಂದು ಹೇಳಿದರು.

‘ಈಶ್ವರಪ್ಪ ರಾಜೀನಾಮೆಗೆ ಗಡುವು’

ಗುರುವಾರ ಬೆಳಿಗ್ಗೆ 11 ಕ್ಕೆ ಮುನ್ನ ಸಚಿವ ಕೆ.ಎಸ್‌.ಈಶ್ವರಪ್ಪ ಅವರನ್ನು ಸಂಪುಟದಿಂದ ಕೈಬಿಡಬೇಕು. ಅವರ ಮೇಲೆ ದೇಶದ್ರೋಹದ ಪ್ರಕರಣ ದಾಖಲಿಸಬೇಕು. ಸಂಪುಟದಿಂದ ಕೈಬಿಡದೇ ಇದ್ದರೆ ಸದನದ ಒಳಗೆ ಮತ್ತು ಹೊರಗೆ ಹೋರಾಟ ನಡೆಸಲಾಗುವುದು. ಸಂವಿಧಾನ ರಕ್ಷಣೆ ಮಾಡಬೇಕಿರುವುದು ರಾಜ್ಯಪಾಲರ ಜವಾಬ್ದಾರಿ. ಅವರು ಮುಖ್ಯಮಂತ್ರಿಯವರಿಗೆ ಹೇಳಿ ಈಶ್ವರಪ್ಪ ಅವರನ್ನು ಸಚಿವ ಸ್ಥಾನದಿಂದ ವಜಾ ಮಾಡಲು ನಿರ್ದೇಶನ ನೀಡಬೇಕಿತ್ತು. ಒಂದು ವೇಳೆ ಈಶ್ವರಪ್ಪ ಕ್ಷಮೆ ಕೇಳಿದರೂ ನಾವು ಹೋರಾಟದಿಂದ ಹಿಂದೆ ಸರಿಯುವುದಿಲ್ಲ.

- ಸಿದ್ದರಾಮಯ್ಯ,ವಿರೋಧಪಕ್ಷದ ನಾಯಕ

ಕಾಂಗ್ರೆಸ್‌ನಿಂದ ದಾರಿ ತಪ್ಪಿಸುವ ಕೆಲಸ: ಬೊಮ್ಮಾಯಿ

ಕೇಸರಿ ಧ್ವಜವನ್ನು 100–500 ವರ್ಷಗಳ ನಂತರ ಹಾರಿಸಲು ಸಾಧ್ಯವಾಗಬಹುದು ಎಂದು ಈಶ್ವರಪ್ಪ ಹೇಳಿದ್ದಾರೆ. ಈಗ ರಾಷ್ಟ್ರಧ್ವಜವನ್ನು ಒಪ್ಪಿಕೊಂಡಿದ್ದು, ಎಲ್ಲರೂ ಗೌರವ ನೀಡಬೇಕು ಎಂದೂ ಅವರು ಹೇಳಿದ್ದಾರೆ. ಆದರೆ, ಕಾಂಗ್ರೆಸ್‌ ಪಕ್ಷ ಅವರ ಹೇಳಿಕೆಯ ಆಯ್ದ ಭಾಗಗಳನ್ನು ಮಾತ್ರ ಉಲ್ಲೇಖಿಸಿ ಜನರ ಮತ್ತು ಸದನದ ದಾರಿ ತಪ್ಪಿಸುವ ಕೆಲಸ ನಡೆಸಿದೆ. ಸಚಿವರ ಹೇಳಿಕೆಯಲ್ಲಿ ಕಾನೂನಾತ್ಮಕವಾಗಿ ಯಾವುದೇ ಉಲ್ಲಂಘನೆಯಾಗಿಲ್ಲ. ಇಲ್ಲ ಸಲ್ಲದ ವಿಚಾರಗಳನ್ನು ಪ್ರಸ್ತಾಪಿಸುತ್ತಿರುವುದು ಕಾಂಗ್ರೆಸ್‌ನ ರಾಜಕೀಯ ದಿವಾಳಿತನಕ್ಕೆ ಸಾಕ್ಷಿ.

-ಬಸವರಾಜ ಬೊಮ್ಮಾಯಿ, ಮುಖ್ಯಮಂತ್ರಿ

ಹೇಳಿಕೆಯ ದುರುಪಯೋಗ: ಈಶ್ವರಪ್ಪ

100 ರಿಂದ 500 ವರ್ಷಗಳ ಬಳಿಕ ಕೇಸರಿ ಧ್ವಜ ಹಾರಬಹುದು ಎಂದು ಹೇಳಿದ್ದೆ. ಆದರೆ, ನನ್ನ ಹೇಳಿಕೆಯನ್ನು ಕಾಂಗ್ರೆಸ್‌ನವರು ದುರುಪಯೋಗಪಡಿಸಿಕೊಂಡಿದ್ದಾರೆ. ಡಿ.ಕೆ. ಶಿವಕುಮಾರ್‌ ಜೈಲಿಗೆ ಹೋಗಿ ಬಂದವರು. ಈಗ ಜಾಮೀನಿನ ಮೇಲೆ ಹೊರಗೆ ಇದ್ದಾರೆ. ರಾಜ್ಯವನ್ನು ಲೂಟಿ ಹೊಡೆದವರು. ಅವರ ಅಪ್ಪ ದೇಶದ್ರೋಹಿ. ನನ್ನ ಹೇಳಿಕೆಯನ್ನು ತಿರುಚಿದ ಅವನನ್ನೇ ಬಂಧಿಸಬೇಕು.

-ಕೆ.ಎಸ್‌.ಈಶ್ವರಪ್ಪ, ಗ್ರಾಮೀಣಾಭಿವೃದ್ಧಿ ಸಚಿವ

ದೇಶದ್ರೋಹ ಪ್ರಕರಣ ದಾಖಲಿಸಿ: ಡಿಕೆಶಿ

ಸಚಿವ ಕೆ.ಎಸ್‌. ಈಶ್ವರಪ್ಪ ವಿರುದ್ಧ ದೇಶದ್ರೋಹದ ಪ್ರಕರಣ ಇಷ್ಟರಲ್ಲೇ ದಾಖಲಿಸಿಕೊಳ್ಳಬೇಕಿತ್ತು. ಸಂಪುಟದಿಂದ ವಜಾಗೊಳಿಸಲು ರಾಜ್ಯಪಾಲರು ಮುಖ್ಯಮಂತ್ರಿಯವರಿಗೆ ಸೂಚಿಸಬೇಕಿತ್ತು. ಮುಖ್ಯಕಾರ್ಯದರ್ಶಿ ಆಗಲಿ, ಪೊಲೀಸ್‌ ಮಹಾ ನಿರ್ದೇಶಕರಾಗಲಿ ಸ್ವಯಂ ಪ್ರೇರಿತರಾಗಿ ಅವರ ವಿರುದ್ಧ ದೇಶದ್ರೋಹ ಪ್ರಕರಣ ದಾಖಲಿಸಬೇಕಿತ್ತು. ಇದ್ಯಾವುದೂ ಆಗಿಲ್ಲ ಎಂದರೆ ಏನರ್ಥ? ನಾವು–ನೀವು ಸೇರಿ ಇಂತಹ ದೇಶದ್ರೋಹಿಗಳ ವಿರುದ್ಧ ಹೋರಾಟ ಮಾಡಬೇಕು.

-ಡಿ.ಕೆ.ಶಿವಕುಮಾರ್‌, ಕಾಂಗ್ರೆಸ್ ಶಾಸಕ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT