ಮಂಗಳವಾರ, ಆಗಸ್ಟ್ 16, 2022
29 °C
ಅಪ್ಪ ಎಂಪಿ, ಮಗ ಎಂಎಲ್‌ಎ, ಅಣ್ಣ ಎಂಎಲ್‌ಎ ತಮ್ಮ ಎಂಎಲ್‌ಸಿ

PV Web Exclusive| ಕುಟುಂಬ ಕೊಳದೊಳಗೆ ‘ಕರ್ನಾಟಕ ಕಮಲ’

ಎಂ. ನವೀನ್ ಕುಮಾರ್ Updated:

ಅಕ್ಷರ ಗಾತ್ರ : | |

Prajavani

ಕುಟುಂಬ ರಾಜಕಾರಣವನ್ನು ಟೀಕಿಸುವ, ಅದೊಂದು ಕೇಡು ಎಂದು ಹೀಗಳೆಯುವ ಬಿಜೆಪಿ ಕುಟುಂಬ ರಾಜಕಾರಣದಿಂದ ಹೊರತಾಗಿದೆಯೇ? ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಕುಟುಂಬ ರಾಜಕಾರಣ ಇಲ್ಲವೆ, ಇದ್ದರೆ ಎಷ್ಟರಮಟ್ಟಿಗಿದೆ ಎಂದು ನೋಡಿದರೆ ‘ಕುಟುಂಬ ಕೊಳದೊಳಗೆ ಕರ್ನಾಟಕ ಕಮಲ’ವಿರುವುದು ಸ್ಪಷ್ಟವಾಗುತ್ತದೆ

‘ಕುಟುಂಬಗಳ ಹಿಡಿತದಲ್ಲಿರುವ ಪಕ್ಷಗಳು ಪ್ರಜಾಪ್ರಭುತ್ವಕ್ಕೆ ದೊಡ್ಡ ಅಪಾಯ. ದುರದೃಷ್ಟ ಎಂದರೆ ರಾಷ್ಟ್ರೀಯ ಪಕ್ಷವೂಂದು ಕುಟುಂಬದ ಹಿಡಿತದಲ್ಲಿದೆ’ ಎಂದು ಪ್ರಧಾನಿ ನರೇಂದ್ರ ಮೋದಿ ಇತ್ತೀಚೆಗೆ ಟೀಕಿಸಿದ್ದರು. ಬಿಹಾರದ ಆರ್‌ಜೆಡಿ ಹಾಗೂ ಕಾಂಗ್ರೆಸ್‌ ಪಕ್ಷವನ್ನು ಅವರು ಗುರಿಯಾಗಿಸಿ ವಾಗ್ದಾಳಿ ನಡೆಸಿದ್ದರು.

‘ವಂಶ ರಾಜಕಾರಣ ಕೇವಲ ಅಧಿಕಾರವನ್ನು ಮಾತ್ರವಲ್ಲ, ಭ್ರಷ್ಟಾಚಾರವನ್ನೂ ಸಹ ಒಂದು ಪೀಳಿಗೆಯಿಂದ ಪೀಳಿಗೆಗೆ ವರ್ಗಾಯಿಸುತ್ತದೆ’ ಎಂದು ಇನ್ನೊಂದು ಸಂದರ್ಭದಲ್ಲಿ ಮೋದಿ ಆತಂಕ ವ್ಯಕ್ತಪಡಿಸಿದ್ದರು.

‘ಕಾಂಗ್ರೆಸ್ ಹಾಗೂ ಎನ್‌ಸಿ‍ಪಿ ಪಕ್ಷಗಳು ಅವರ ಕುಟುಂಬದ ಹಿತ ಕಾಪಾಡಲು ಕೆಲಸ ಮಾಡುತ್ತಿವೆ’ ಎಂದು ಕೇಂದ್ರ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದರು. ಅಷ್ಟಕ್ಕೂ ಕಾಂಗ್ರೆಸ್ ಕುಟುಂಬ ರಾಜಕಾರಣದ ಬಗ್ಗೆ ಟೀಕಿಸದ ಬಿಜೆಪಿ ನಾಯಕರು ಯಾರಿದ್ದಾರೆ! ಆಗಾಗ್ಗೆ, ಅವಕಾಶ ಸಿಕ್ಕಾಗಲೆಲ್ಲ, ಮತ್ತೆ ಮತ್ತೆ ತಿವಿಯುತ್ತಲೇ ಇರುತ್ತಾರೆ. ಬಲವಾಗಿರುವ ಹಾಗೂ ಕುಟುಂಬದ ಹಿಡಿತದಲ್ಲಿರುವ ಪ್ರಾದೇಶಿಕ ಪಕ್ಷಗಳನ್ನು ಹಣಿಯಲು ಬಿಜೆಪಿ ಬಳಸುವ ಬ್ರಹ್ಮಾಸ್ತ್ರ ‘ಕುಟುಂಬ ರಾಜಕಾರಣ’ ಬಳಸುತ್ತದೆ.

ರಾಜನ ಮಗ ಮಾತ್ರ ರಾಜನಾಗಬಾರದು; ಸಾಮಾನ್ಯ ವ್ಯಕ್ತಿಗೂ ಅತ್ಯುನ್ನತ ಹುದ್ದೆ ಏರಲು ಅವಕಾಶ ಇರಬೇಕು ಎಂಬುದು ಪ್ರಜಾಪ್ರಭುತ್ವದ ಮೂಲ ಆಶಯಗಳಲ್ಲೊಂದು. ಪ್ರಜಾಪ್ರಭುತ್ವ ರಾಷ್ಟ್ರದಲ್ಲಿ ಕುಟುಂಬ ರಾಜಕಾರಣ ವಿರೋಧಭಾಸ ಎಂಬುದು ಪ್ರಜಾಪ್ರಭುತ್ವವಾದಿಗಳ ಅಂಬೋಣ. ಜವಾಹರ್‌ಲಾಲ್‌ ನೆಹರೂ ಅವರಿಂದ ಆರಂಭಿಸಿ, ರಾಹುಲ್ ಗಾಂಧಿವರೆಗೆ ಕಾಂಗ್ರೆಸ್‌ನ ಕುಟುಂಬ ರಾಜಕಾರಣ ನಡೆದುಕೊಂಡು ಬಂದಿದೆ. ಈಗ ಅದೇ ಹೊರಲಾರದ ಭಾರವಾಗಿ ಪರಿಣಮಿಸಿದೆ ಎಂದು ವಿಶ್ಲೇಷಿಸಲಾಗುತ್ತದೆ.

ಕುಟುಂಬ ರಾಜಕಾರಣವನ್ನು ಟೀಕಿಸುವ, ಅದೊಂದು ಕೇಡು ಎಂದು ಹೀಗಳೆಯುವ ಬಿಜೆಪಿ ಕುಟುಂಬ ರಾಜಕಾರಣದಿಂದ ಹೊರತಾಗಿದೆಯೇ? ಕರ್ನಾಟಕ ರಾಜ್ಯದಲ್ಲಿ ಬಿಜೆಪಿ ಕುಟುಂಬ ರಾಜಕಾರಣ ಇಲ್ಲವೆ, ಇದ್ದರೆ ಎಷ್ಟರಮಟ್ಟಿಗಿದೆ ಎಂದು ನೋಡಿದರೆ ‘ಕುಟುಂಬ ಕೊಳದೊಳಗೆ ಕರ್ನಾಟಕ ಕಮಲ’ವಿರುವುದು ಸ್ಪಷ್ಟವಾಗುತ್ತದೆ. ಬಿಜೆಪಿ ಮುಂಚೂಣಿ ನಾಯಕರ ಕುಟುಂಬದ ಎರಡನೇ ಪೀಳಿಗೆ ಈಗಾಗಲೇ ಅಧಿಕಾರ ರಾಜಕಾರಣದಲ್ಲಿ ಸಕ್ರಿಯವಾಗಿದೆ.

ಬಿಜೆಪಿ ಕುಟುಂಬ ರಾಜಕಾರಣದ ಬಗ್ಗೆ ಮಾತನಾಡುವಾಗ ಮೊದಲು ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಅವರಿಂದಲೇ ಆರಂಭಿಸಬೇಕಾಗುತ್ತದೆ. ಯಡಿಯೂರಪ್ಪ ಅವರಿಲ್ಲದ ಬಿಜೆಪಿಯನ್ನು ಊಹಿಸಿಕೊಳ್ಳಲಾಗದು. ದಕ್ಷಿಣ ಭಾರತದಲ್ಲಿ ಬಿಜೆಪಿಯ ‘ಭಾಗ್ಯದ ಬಾಗಿಲು’ ತೆರೆದವರು ಎಂದು ಅವರದ್ದೇ ಪಕ್ಷದವರು ಹಾಡಿ ಹೊಗಳುತ್ತಾರೆ. ಶಿವಮೊಗ್ಗ ಜಿಲ್ಲೆ ಶಿಕಾರಿಪುರ ವಿಧಾನಸಭಾ ಕ್ಷೇತ್ರದಿಂದ ಬಿಎಸ್‌ವೈ ಆಯ್ಕೆಯಾಗಿದ್ದಾರೆ. ಶಿವಮೊಗ್ಗ ಲೋಕಸಭಾ ಕ್ಷೇತ್ರದ ಸಂಸದ ಅವರ ಮಗ ಬಿ.ವೈ. ರಾಘವೇಂದ್ರ!

ಇನ್ನೊಬ್ಬ ಪುತ್ರ ಬಿ.ವೈ. ವಿಜಯೇಂದ್ರ ಬಿಜೆಪಿ ರಾಜ್ಯ ಘಟಕದ ಉಪಾಧ್ಯಕ್ಷ. ಮೈಸೂರಿನ ವರುಣಾ ಕ್ಷೇತ್ರದಿಂದ ಕಳೆದ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಪ್ರಯತ್ನಿಸಿದ್ದರು. ಆ ನಂತರ ಹಲವು ಉಪ ಚುನಾವಣೆಗಳ ಸಂದರ್ಭದಲ್ಲಿ ಅವರ ಹೆಸರು ಕೇಳಿ ಬಂದಿತ್ತು. ಬಸವಕಲ್ಯಾಣದ ಉಪ ಚುನಾವಣೆಯಲ್ಲಿ ಸ್ಪರ್ಧಿಸುತ್ತಾರೆ, ಮುಖ್ಯಮಂತ್ರಿ ಕುರ್ಚಿಗೇ ಟವೆಲ್ ಹಾಕಿದ್ದಾರೆ ಎಂಬ ಸುದ್ದಿ ಇತ್ತೀಚೆಗೆ ಹರಿದಾಡಿತ್ತು. ಕೇಡರ್‌ ಬೇಸ್ಡ್‌ ಪಾರ್ಟಿ ಎಂದು ಬಿಜೆಪಿ ನಾಯಕರು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ. ಆದರೆ ರಾಜ್ಯ ಬಿಜೆಪಿಯ ಅಧಿಕಾರ ರಾಜಕಾರಣ ಬಿಎಸ್‌ವೈ ಕುಟುಂಬದ ಸುತ್ತಲೇ ಗಿರಕಿ ಹೊಡೆಯುತ್ತಿದೆ.

ಬಿಜೆಪಿಯ ಹಿರಿಯ ನಾಯಕ ಸಚಿವ ಕೆ.ಎಸ್. ಈಶ್ವರಪ್ಪ ಅವರು ಶಿವಮೊಗ್ಗ ಕ್ಷೇತ್ರದ ಶಾಸಕ. ಅವರ ಮಗ ಕಾಂತೇಶ ಜಿಲ್ಲಾ ಪಂಚಾಯಿತಿ ಸದಸ್ಯ. ರಾಣೆಬೆನ್ನೂರು ಉಪ ಚುನಾವಣೆ ಸಂದರ್ಭದಲ್ಲಿ ಇನ್ನೇನು ಕಾಂತೇಶ ಅವರಿಗೆ ಟಿಕೆಟ್ ಸಿಕ್ಕೇಬಿಟ್ಟಿತು ಎಂಬಂತೆ ಪ್ರಚಾರ ನಡೆದಿತ್ತು. ಕುರುಬ ಸಮುದಾಯದ ಮತಗಳು ನಿರ್ಣಾಯಕವಾಗಿರುವ ಆ ಕ್ಷೇತ್ರದ ಮೇಲೆ ಈಗಲೂ ಕಾಂತೇಶ ಕಣ್ಣಿಟ್ಟಿದ್ದಾರೆ ಎನ್ನಲಾಗುತ್ತಿದೆ.

ತಂದೆ ಎಂಪಿ, ಮಗ ಎಂಎಲ್‌ಎ ಆಗಿರುವ ಇನ್ನೊಂದು ಉದಾಹರಣೆ ಎಂದರೆ ಉದಾಸಿ ಕುಟುಂಬ. ಹಿರಿಯ ರಾಜಕಾರಣಿ ಸಿ.ಎಂ ಉದಾಸಿ ಹಾವೇರಿ ಜಿಲ್ಲೆ ಹಾನಗಲ್ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಅವರ ಮಗ ಶಿವಕುಮಾರ ಉದಾಸಿ ಹಾವೇರಿ ಸಂಸದ.

ಅಪ್ಪ ಎಂಪಿ, ಮಗ ಎಂಎಲ್‌ಎ ಉದಾಹರಣೆ ಇಲ್ಲಿಗೇ ನಿಲ್ಲುವುದಿಲ್ಲ. ಕಲಬುರ್ಗಿ ಲೋಕಸಭಾ ಕ್ಷೇತ್ರದಿಂದ ಉಮೇಶ್ ಜಾಧವ್ ಅವರು ಆಯ್ಕೆಯಾಗಿದ್ದಾರೆ. ಅವರ ಪುತ್ರ ಅವಿನಾಶ್ ಜಾಧವ್ ಕಲಬುರ್ಗಿ ಜಿಲ್ಲೆಯ ಚಿಂಚೋಳಿ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದಾರೆ. ತುಮಕೂರು ಜಿಲ್ಲೆಯಲ್ಲಿಯೂ ಒಂದೇ ಕುಟುಂಬದ ಸಂಸದ ಹಾಗೂ ಶಾಸಕ ಇದ್ದಾರೆ. ಜಿ.ಎಸ್‌. ಬಸವರಾಜು ಅವರು ಅಲ್ಲಿನ ಲೋಕಸಭಾ ಸದಸ್ಯರಾದರೆ, ಅವರ ಮಗ ಜ್ಯೋತಿಗಣೇಶ್ ತುಮಕೂರು ನಗರ ಶಾಸಕ.

ಪತಿ ಎಂಪಿ, ಪತ್ನಿ ಎಂಎಲ್‌ಎ

ಅಣ್ಣಾ ಸಾಹೇಬ ಜೊಲ್ಲೆ ಅವರು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಸಂಸದ, ಅವರ ಪತ್ನಿ ಶಶಿಕಲಾ ಜೊಲ್ಲೆ ನಿಪ್ಪಾಣಿ ವಿಧಾನಸಭಾ ಕ್ಷೇತ್ರದಿಂದ ಆಯ್ಕೆಯಾಗಿದ್ದಾರೆ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಸಚಿವೆ ಅವರು.

ವಿ. ಶ್ರೀನಿವಾಸ ಪ್ರಸಾದ್ ಅವರು ಚಾಮರಾಜನಗರದ ಲೋಕಸಭಾ ಕ್ಷೇತ್ರದಿಂದ ಗೆದ್ದಿದ್ದಾರೆ. ಇದೇ ಜಿಲ್ಲೆಯ ನಂಜನಗೂಡು ಕ್ಷೇತ್ರದ ಶಾಸಕ ಹರ್ಷವರ್ಧನ ಶ್ರೀನಿವಾಸ ಪ್ರಸಾದ್ ಅವರ ಅಳಿಯ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿಸೂರ್ಯ, ಅವರ ಚಿಕ್ಕಪ್ಪ ರವಿಸುಬ್ರಹ್ಮಣ್ಯ ಬೆಂಗಳೂರಿನ ಬಸವನಗುಡಿ ಕ್ಷೇತ್ರದ ಶಾಸಕ.

ಬಿಜೆಪಿ ಲಕ್ಷಾಂತರ ಕಾರ್ಯಕರ್ತರಿರುವ ಪಕ್ಷ ಎಂದು ಕೈಗಾರಿಕಾ ಸಚಿವ ಜಗದೀಶ ಶೆಟ್ಟರ್ ಅವರು ಆಗಾಗ್ಗೆ ಭಾಷಣದಲ್ಲಿ ಹೇಳುತ್ತಿರುತ್ತಾರೆ. ಶೆಟ್ಟರ್ ಹುಬ್ಬಳ್ಳಿ– ಧಾರವಾಡ ಸೆಂಟ್ರಲ್ ಕ್ಷೇತ್ರದ ಶಾಸಕ. ಅವರ ಸಹೋದರ ಪ್ರದೀಪ ಶೆಟ್ಟರ್ ವಿಧಾನಪರಿಷತ್ ಸದಸ್ಯ!

ಜಲಸಂಪನ್ಮೂಲ ಸಚಿವ ರಮೇಶ ಜಾರಕಿಹೊಳಿ ಗೋಕಾಕ್‌ ಕ್ಷೇತ್ರದಿಂದ ಹಾಗೂ ಅವರ ಸಹೋದರ ಶಾಸಕ ಬಾಲಚಂದ್ರ ಜಾರಕಿಹೊಳಿ ಅರಭಾವಿ ಕ್ಷೇತ್ರದಿಂದ ಶಾಸಕರಾಗಿ ಆಯ್ಕೆಯಾಗಿದ್ದಾರೆ. ಉಪ ಮುಖ್ಯಮಂತ್ರಿ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಬಿಜೆಪಿ ಯುವ ಮೋರ್ಚಾ ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ.

ಹುಕ್ಕೇರಿ ಕ್ಷೇತ್ರದ ಶಾಸಕ ಉಮೇಶ ಕತ್ತಿ, ಬಿಜೆಪಿಯ ಹಿರಿಯ ನಾಯಕರಲ್ಲೊಬ್ಬರು. ಅವರ ಪುತ್ರ ನಿಖಿಲ್ ಕತ್ತಿ ಅಮ್ಮಣಗಿ ಜಿಲ್ಲಾ ಪಂಚಾಯಿತಿ ಕ್ಷೇತ್ರದ ಸದಸ್ಯ. ಉಮೇಶ ಕತ್ತಿ ಅವರ ಸಹೋದರ ರಮೇಶ ಕತ್ತಿ ಮಾಜಿ ಸಂಸದ. ಕೇಂದ್ರ ಸಚಿವರಾಗಿದ್ದ ಸುರೇಶ ಅಂಗಡಿ ನಿಧನದಿಂದ ತೆರವಾಗಿರುವ ಬೆಳಗಾವಿ ಲೋಕಸಭಾ ಕ್ಷೇತ್ರದ ಉಪ ಚುನಾವಣೆಯ ಟಿಕೆಟ್ ಆಕಾಂಕ್ಷಿಗಳಲ್ಲಿ ರಮೇಶ ಕತ್ತಿ ಒಬ್ಬರು.

ಬಾಗಲಕೋಟೆ ಜಿಲ್ಲೆಯ ಬೀಳಗಿ ಮತ ಕ್ಷೇತ್ರದ ಶಾಸಕ ಮುರುಗೇಶ ನಿರಾಣಿ. ಅವರ ಸಹೋದರ ಹನಮಂತ ನಿರಾಣಿ ವಿಧಾನಪರಿಷತ್ ಸದಸ್ಯ.

ಬಳ್ಳಾರಿ ಜಿಲ್ಲೆ ಎಂದರೆ ರೆಡ್ಡಿ ಕುಟುಂಬದ್ದೇ ಪಾರುಪತ್ಯ. ಪಕ್ಕದ ಚಿತ್ರದುರ್ಗ, ದಾವಣಗೆರೆ, ಕೊಪ್ಪಳ ಜಿಲ್ಲೆಯಲ್ಲಿಯೂ ಭಾರಿ ಪ್ರಭಾವ ಹೊಂದಿದ್ದಾರೆ. ಜಿ. ಸೋಮಶೇಖರ ರೆಡ್ಡಿ ಬಳ್ಳಾರಿ ಶಾಸಕರಾದರೆ, ಅವರ ಸಹೋದರ ಜಿ. ಕರುಣಾಕರ ರೆಡ್ಡಿ ದಾವಣಗೆರೆ ಜಿಲ್ಲೆ ಹರಪನಹಳ್ಳಿ ವಿಧಾನಸಭಾ ಕ್ಷೇತ್ರದ ಪ್ರತಿನಿಧಿ. ಬಿಜೆಪಿಯಿಂದ ವಿಧಾನಪರಿಷತ್ ಸದಸ್ಯರಾಗಿದ್ದ ಗಾಲಿ ಜನಾರ್ದನ ರೆಡ್ಡಿ ಸಚಿವರಾಗಿ ಸಹ ಕೆಲಸ ಮಾಡಿದ್ದರು. ಈಗ ಅವರು ತೆರೆ ಮರೆಯ ರಾಜಕಾರಣ ಮಾಡುತ್ತಿದ್ದಾರೆ.

ವಾಲ್ಮೀಕಿ ಜನಾಂಗದ ಪ್ರಭಾವಿ ನಾಯಕ, ಜನಾರ್ದನ ರೆಡ್ಡಿ ಆಪ್ತಮಿತ್ರ ಶ್ರೀರಾಮುಲು ಅವರು ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ಕ್ಷೇತ್ರದ ಶಾಸಕ. ಅವರ ಸಹೋದರಿ ಜೆ. ಶಾಂತಾ ಮಾಜಿ ಸಂಸದೆ. ಅಳಿಯ ಕಂಪ್ಲಿ ಸುರೇಶ ಸಹ ಮಾಜಿ ಶಾಸಕ. ಇಬ್ಬರೂ ಬಿಜೆಪಿ ಟಿಕೆಟ್‌ನಿಂದ ಗೆದ್ದಿದ್ದರು. ಮಡಿಕೇರಿ ಶಾಸಕ ಅಪ್ಪಚ್ಚು ರಂಜನ್ ಅವರ ಸಹೋದರ ಸುನಿಲ್ ಸುಬ್ರಮಣಿ ಅವರು ವಿಧಾನಪರಿಷತ್ ಸದಸ್ಯ.

ಸಿಎಂ ಮಕ್ಕಳೂ ಇದ್ದಾರೆ

ಹಾಲಿ ಸಿಎಂ ಯಡಿಯೂರಪ್ಪ ಸೇರಿದಂತೆ ಮೂರು ಮಂದಿ ಸಿಎಂ ಮಕ್ಕಳು ಅಧಿಕಾರ ರಾಜಕಾರಣದಲ್ಲಿದ್ದಾರೆ. ಗೃಹ ಸಚಿವ ಶಿಗ್ಗಾವಿ ಕ್ಷೇತ್ರದ ಶಾಸಕ ಬಸವರಾಜ ಬೊಮ್ಮಾಯಿ ಅವರು ಮಾಜಿ ಮುಖ್ಯಮಂತ್ರಿ ದಿ. ಎಸ್‌.ಆರ್. ಬೊಮ್ಮಾಯಿ (ಜನತಾ ಪಕ್ಷದಲ್ಲಿ ಸಿಎಂ ಆಗಿದ್ದರು) ಪುತ್ರ. ಸೊರಬ ಕ್ಷೇತ್ರದ ಶಾಸಕ ಕುಮಾರ್ ಬಂಗಾರಪ್ಪ ಅವರು ಎಸ್. ಬಂಗಾರಪ್ಪ (ಕಾಂಗ್ರೆಸ್‌ನಿಂದ ಸಿಎಂ ಆಗಿದ್ದರು) ಅವರ ಪುತ್ರ.

ಕರ್ನಾಟಕದಲ್ಲಿ ಬಿಜೆಪಿ ಬೆಳೆಯುತ್ತಿರುವಷ್ಟೇ ವೇಗವಾಗಿ ಕುಟುಂಬ ರಾಜಕಾರಣವೂ ಬೆಳೆಯುತ್ತಿದೆಯೇ? ಅಥವಾ ಕುಟುಂಬ ರಾಜಕಾರಣವೇ ಬಿಜೆಪಿ ವೇಗವಾಗಿ ಬೆಳೆಯಲು ಕಾರಣವೆ? ಪ್ರಶ್ನೆ ಸರಳ, ಉತ್ತರವೂ ಕಠಿಣವಿಲ್ಲ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು