ಶನಿವಾರ, ಮೇ 21, 2022
24 °C
ರಾಜ್ಯ ಸಾಲದ ಸುಳಿಗೆ ಸಿಲುಕಲು ಕೇಂದ್ರವೇ ಕಾರಣ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಬಿಜೆಪಿ ಸರ್ಕಾರ ಡಕೋಟ ಎಕ್ಸ್‌ಪ್ರೆಸ್‌: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಬೆಂಗಳೂರು: ‘ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ರಾಜ್ಯ ಸರ್ಕಾರ ಡಕೋಟ ಎಕ್ಸ್‌ಪ್ರೆಸ್‌’ ಎಂದು ವಿಧಾನಸಭೆಯ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಲೇವಡಿ ಮಾಡಿದರು.

ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯದ ಮೇಲೆ ಬುಧ
ವಾರ ನಡೆದ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ‘ನಾನು ಮುಖ್ಯಮಂತ್ರಿಯಾಗಿದ್ದಾಗ ನಮ್ಮ ಸರ್ಕಾರ ಟೇಕ್ ಆಫ್ ಆಗಿಲ್ಲ, ಟೇಕ್ ಆಫ್ ಆಗಿಲ್ಲ ಎಂದು ವಿರೋಧ ಪಕ್ಷದ ನಾಯಕರಾಗಿದ್ದ ಜಗದೀಶ ಶೆಟ್ಟರ್‌ ಸದನದಲ್ಲಿ ಪದೇ ಪದೇ ಹೇಳಿದ್ದರು. ಈಗಿನ ಸರ್ಕಾರ ‘ಟೇಕ್ ಆಫ್’ ಅಲ್ಲ, ಸಂಪೂರ್ಣ ಆಫ್ ಆಗಿ ನಡುರಸ್ತೆಯಲ್ಲಿ ಕೆಟ್ಟು ನಿಂತಿದೆ’ ಎಂದು ವ್ಯಂಗ್ಯವಾಡಿದರು.

‘ಯಡಿಯೂರಪ್ಪ ಅವರಿಗೆ ಡ್ರೈವಿಂಗ್ ಮೊದಲೇ ಬರುವುದಿಲ್ಲ. ಜತೆಗೆ, ಅವರ ಪಕ್ಷದವರೇ ನಾಲ್ಕು ದಿಕ್ಕುಗಳಿಂದಲೂ ಕಾಲೆಳೆಯುತ್ತಾ ಕಾಟ ಕೊಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಬಸ್ ಮುಂದಕ್ಕೆ ಎಲ್ಲಿಗೆ ಹೋಗುವುದು? ಇಂತಹ ಸರ್ಕಾರವನ್ನು ರಿಪೇರಿ ಮಾಡಲು ಸಾಧ್ಯವಿಲ್ಲ, ಬದಲಿಸಬೇಕಿದೆ. ಆ ಕೆಲಸವನ್ನು ಜನರೇ ಮಾಡಲಿದ್ದಾರೆ’ ಎಂದರು.

‘ಅಕ್ರಮ ಡಿನೋಟಿಫಿಕೇಷನ್‌ಗೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಮುಖ್ಯಮಂತ್ರಿ ಯಡಿಯೂರಪ್ಪ ಹಾಗೂ ಸಚಿವ ಮುರುಗೇಶ ನಿರಾಣಿ ಅವರು ಸುಪ್ರೀಂ ಕೋರ್ಟ್‌ನಲ್ಲಿ ಸಲ್ಲಿಸಿದ್ದ ಅರ್ಜಿ ವಜಾಗೊಂಡಿದೆ. ಹೀಗಾಗಿ ಅಕ್ರಮ ಆರೋಪದ ತನಿಖೆ ಎದುರಿಸುತ್ತಿರುವ ವ್ಯಕ್ತಿ ಮುಖ್ಯಮಂತ್ರಿಯಾಗಿ ಮುಂದುವರೆಯಬೇಕೇ’ ಎಂದು ಅವರು ಪ್ರಶ್ನಿಸಿದರು. 

‘ರಾಜ್ಯಪಾಲರಿಂದ ಸರ್ಕಾರ ಮಾಡಿಸಿದ್ದ ಭಾಷಣದಲ್ಲಿ ಒಂದಷ್ಟು ಸುಳ್ಳಿನ ಕಂತೆಗಳಿವೆ. ಒಂದಷ್ಟು ತಪ್ಪು ಮಾಹಿತಿಗಳಿವೆ. ಜೊತೆಗೆ ಸರ್ಕಾರದ ಮಾನ ಉಳಿಸಿಕೊಳ್ಳಲು ನಿರ್ಲಜ್ಜವಾಗಿ ಹೇಳಿಕೊಂಡ ನಮ್ಮ ಸರ್ಕಾರದ ಸಾಧನೆಗಳಿವೆ. ಇದನ್ನು ಹೊರತುಪಡಿಸಿ ಸತ್ಯನೂ ಇಲ್ಲ, ಸತ್ವವೂ ಇಲ್ಲ’ ಎಂದು ಟೀಕಿಸಿದರು.

‘ಯಡಿಯೂರಪ್ಪನವರು ಅಧಿಕಾರಕ್ಕೆ ಬಂದು ಹದಿನೆಂಟು ತಿಂಗಳುಗಳಾಯಿತು. ತಮ್ಮ ಸರ್ಕಾರದ ಸಾಧನೆ ಏನು ಎಂಬುದನ್ನು ಒಂದು ಸಲ ಕನ್ನಡಿ ಮುಂದೆ ನಿಂತು ಆತ್ಮಾವಲೋಕನ ಮಾಡಿಕೊಳ್ಳಲಿ. ಅವರಿಗೆ ಆತ್ಮಸಾಕ್ಷಿ ಎಂಬುದು ಎಲ್ಲಾದರೂ ಉಳಿದಿದ್ದರೆ ಒಂದು ಕ್ಷಣ ಕೂಡಾ ಮುಖ್ಯಮಂತ್ರಿ ಕುರ್ಚಿ
ಯಲ್ಲಿ ಕೂರಲು ಸಾಧ್ಯವಿಲ್ಲ’ ಎಂದರು.

‘ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿಯೊಂದನ್ನು ಹೊರತುಪಡಿಸಿ ಉಳಿದ ಐದು ಕೃಷಿ ಸಂಬಂಧಿ ಕಾನೂನುಗಳ ಬಗ್ಗೆ ಬಿಜೆಪಿ ಪ್ರಣಾಳಿಕೆಯಲ್ಲಿ ಉಲ್ಲೇಖವೇ ಇಲ್ಲ. ಗೋಹತ್ಯೆ ನಿಷೇಧ ಕಾಯ್ದೆಗೆ ತಿದ್ದುಪಡಿ ಸಂಘ ಪರಿವಾರದ ಅಜೆಂಡಾ. ಇದು ಗೋವುಗಳ ರಕ್ಷಣೆಗಾಗಿ ತಂದಿರುವ ಕಾಯ್ದೆ ಖಂಡಿತ ಅಲ್ಲ, ಇದು ಗೋರಕ್ಷಣೆಯ ಹೆಸರಲ್ಲಿ ಗೂಂಡಾಗಿರಿ ನಡೆಸುವ ಬಿಜೆಪಿ ಕಾರ್ಯಕರ್ತರ ರಕ್ಷಣೆಗೆ ತಂದಿರುವ ಕಾಯ್ದೆ ಅಷ್ಟೇ’ ಎಂದು ಅವರು ಆರೋಪಿಸಿದರು.

₹90 ಸಾವಿರ ಕೋಟಿ ಸಾಲ: ಆರ್ಥಿಕವಾಗಿ ದುಸ್ಥಿತಿಯಲ್ಲಿರುವ ಸರ್ಕಾರ ಈ ಸಾಲಿನಲ್ಲಿ ₹90 ಸಾವಿರ ಕೋಟಿ ಸಾಲ ಮಾಡಬೇಕಾಗಿ ಬಂದಿದೆ. ಇದಕ್ಕೆ ಮುಖ್ಯ ಕಾರಣ ಕೇಂದ್ರದಿಂದ ಬರಬೇಕಾದ ಶೇ 40 ರಷ್ಟು ಹಣ ಬಂದಿಲ್ಲ. ಶೇ 24.25 ರಷ್ಟು ಅನುದಾನವೂ ಬಂದಿಲ್ಲ. ಹೀಗಾದರೆ ಅಭಿವೃದ್ಧಿ ಕಾಮಗಾರಿ ಹೇಗೆ ಕೈಗೊಳ್ಳಲು ಸಾಧ್ಯ ಎಂದು ಸಿದ್ದರಾಮಯ್ಯ ಪ್ರಶ್ನಿಸಿದರು.

ಇದಕ್ಕೆ ಪ್ರತಿಕ್ರಿಯಿಸಿದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಬಸವರಾಜಬೊಮ್ಮಾಯಿ, ಕೇಂದ್ರದಲ್ಲಿ ಎನ್‌ಡಿಎ ಸರ್ಕಾರ ಅಧಿಕಾರಕ್ಕೆ ಬಂದ ನಂತರ ರಾಜ್ಯಗಳಿಗೆ ಹಂಚಿಕೆ ಮಾಡುವ ಹಣದ ಪ್ರಮಾಣ ಹೆಚ್ಚಿಸಲಾಯಿತು. ಯುಪಿಎ ಅವಧಿಯಲ್ಲಿ ಶೇ 32 ರಷ್ಟು ಹಂಚಿಕೆ ಮಾಡುತ್ತಿದ್ದರೆ, ಎನ್‌ಡಿಎ ಅವಧಿಯಲ್ಲಿ ಆ ಪ್ರಮಾಣವನ್ನು ಶೇ 42 ಕ್ಕೆ ಹೆಚ್ಚಿಸಲಾಯಿತು. ಯುಪಿಎ ಅವಧಿಯ ಸೂತ್ರವನ್ನೇ ಅನುಸರಿಸಿದ್ದರೆ ರಾಜ್ಯಕ್ಕೆ ಇನ್ನೂ ಕಡಿಮೆ ಹಣ ಬರುತ್ತಿತ್ತು ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು