ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸಂಪುಟ ಪುನರ್‌ರಚನೆ ಬಿಜೆಪಿ ವರಿಷ್ಠರ ಒಲವು: ಬೊಮ್ಮಾಯಿ ಸ್ಥಾನ ಅಬಾಧಿತ?

8–10 ಸಚಿವರು ಹೊರಕ್ಕೆ
Last Updated 4 ಜನವರಿ 2022, 20:30 IST
ಅಕ್ಷರ ಗಾತ್ರ

ಬೆಂಗಳೂರು: ವಿಧಾನಸಭೆ ಚುನಾವಣೆಗೆ ತಯಾರಿ ಮತ್ತು ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸುವ ಮೂಲಕ ಸರ್ಕಾರದ ವರ್ಚಸ್ಸು ಹೆಚ್ಚಿಸಲು ಮುಂದಾಗಿರುವ ಬಿಜೆಪಿ ವರಿಷ್ಠರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಸಚಿವ ಸಂಪುಟದ 8 ರಿಂದ 10 ಮಂದಿ ಸಚಿವರನ್ನು ಕೈಬಿಟ್ಟು ಹೊಸಬರನ್ನು ಸೇರಿಸಿಕೊಳ್ಳುವತ್ತ ಮುಂದಡಿ ಇಟ್ಟಿದ್ದಾರೆ.

‘ಗುಜರಾತ್‌ ಮತ್ತು ಉತ್ತರಪ್ರದೇಶದಲ್ಲಿ ನಡೆಸಿರುವ ಪ್ರಯೋಗವನ್ನು ರಾಜ್ಯದಲ್ಲೂ ನಡೆಸುವ ಬಗ್ಗೆ ವರಿಷ್ಠರು ಒಲವು ಹೊಂದಿದ್ದಾರೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

2023ರ ವಿಧಾನಸಭಾ ಚುನಾವಣೆಗೆ ಸಜ್ಜಾಗಲು ಮತ್ತು ಪರಿಣಾಮಕಾರಿ ಆಡಳಿತ ನಡೆಸುವ ಮೂಲಕ ಜನರ ಮನಸ್ಸನ್ನು ಗೆಲ್ಲಲು ಈ ಪ್ರಯೋಗ ಸಹಾಯಕವಾಗಲಿದೆ.

ಸಂಪುಟ ಪುನಾರಚನೆಯತ್ತ ವರಿಷ್ಠರು ಗಂಭೀರವಾಗಿ ಆಲೋಚನೆ ನಡೆಸಿರುವುದರಿಂದ, ಮುಖ್ಯಮಂತ್ರಿ ಬೊಮ್ಮಾಯಿ ಅವರ ಸ್ಥಾನ ಮುಂದಿನ ಚುನಾವಣೆವರೆಗೂ ಭದ್ರವಾದಂತಾಗಿದೆ ಎಂದೂ ಮೂಲಗಳು ವಿವರಿಸಿವೆ. ಕೆಲಸ ಮಾಡದೇ ನಿಷ್ಕ್ರಿಯವಾಗಿರುವ, ಪಕ್ಷದ ಬೆಳವಣಿಗೆಗೆ ಸಹಾಯಕವಲ್ಲದ ಕೆಲವು ಸಚಿವರ ಹೆಸರುಗಳನ್ನು ಪಟ್ಟಿ ಮಾಡಲಾಗಿದೆ. ಅವರಲ್ಲಿ ಕೆಲವು ಹಿರಿಯ ಸಚಿವರೂ ಇದ್ದಾರೆ. ಮುಖ್ಯಮಂತ್ರಿ ವಿರುದ್ಧವೇ ಅಪಪ್ರಚಾರ ಹುಟ್ಟು ಹಾಕುತ್ತಿದ್ದಾರೆ ಎನ್ನಲಾದವರ ಹೆಸರೂ ಕೈಬಿಡುವ ಸಚಿವರ ಪಟ್ಟಿಯಲ್ಲಿ ಸೇರಿದೆ ಎಂದು ಮೂಲಗಳು ಹೇಳಿವೆ.

ಇವರಲ್ಲಿ ಒಬ್ಬ ಸಚಿವರಂತೂ ಬೆಳಗಾವಿ ವಿಧಾನಮಂಡಲ ಅಧಿವೇಶನದಲ್ಲಿ ತಮ್ಮ ಪರ ಶಾಸಕರ ಬೆಂಬಲ ಕ್ರೋಡೀಕರಿಸಲು ಯತ್ನಿಸಿದ್ದರು. ಮುಖ್ಯಮಂತ್ರಿ ಬದಲಾವಣೆ ಪ್ರಸ್ತಾವ ಬಂದರೆ, ತಮ್ಮನ್ನು ಬೆಂಬಲಿಸಬೇಕು ಎಂಬ ಮನವಿಯನ್ನು ಕೆಲವು ಶಾಸಕರ ಮುಂದಿಟ್ಟಿದ್ದರು. ಮುಖ್ಯಮಂತ್ರಿ ಬೊಮ್ಮಾಯಿ ಅವರು ಈ ವಿಷಯವನ್ನು ವರಿಷ್ಠರ ಗಮನಕ್ಕೂ ತಂದಿದ್ದು, ಪಕ್ಷದ ಉಸ್ತುವಾರಿ ಅರುಣ್‌ಸಿಂಗ್‌ ಈ ವಿಚಾರವಾಗಿ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬಹುತೇಕ ಸಚಿವರು ಮತ್ತು ಶಾಸಕರು ಸರ್ಕಾರ ಮಾಡಿರುವ ಉತ್ತಮ ಕೆಲಸಗಳನ್ನು ಬಿಂಬಿಸಿ ಜನರ ಮನಗೆಲ್ಲುವತ್ತ ಲಕ್ಷ್ಯ ಹರಿಸಿಲ್ಲ. ಕೇವಲ ಸ್ವಹಿತಾಸಕ್ತಿಯ ಚಟುವಟಿಕೆಗಳು ಮತ್ತು ಇತರ ಪಕ್ಷಗಳ ನಾಯಕರ ಜತೆ ಹೊಂದಾಣಿಕೆ ರಾಜಕೀಯ ಮಾಡುತ್ತಿರುವುದು ವರಿಷ್ಠರಲ್ಲಿ ಅಸಮಾಧಾನ ಮೂಡಿಸಿದೆ. ಇತ್ತೀಚೆಗೆ ನಡೆದ ವಿಧಾನಪರಿಷತ್‌ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಪಕ್ಷದ ನಿರ್ವಹಣೆ ಕಳಪೆಯಾಗಿದ್ದು, ಇದೇ ರೀತಿಯಲ್ಲಿ ಮುಂದುವರಿದರೆ ಚುನಾವಣೆ ಎದುರಿಸುವುದು ಕಷ್ಟವಾಗಬಹುದು ಎಂಬ ಚರ್ಚೆಯೂ ಪಕ್ಷದಲ್ಲಿ ನಡೆದಿದೆ.

ಸಂಪುಟಕ್ಕೆ ಹೊಸ ಸಚಿವರ ಸೇರ್ಪಡೆ ಸಂದರ್ಭದಲ್ಲಿ ಯುವಕರು ಮತ್ತು ಹೆಚ್ಚು ಕ್ರಿಯಾಶೀಲರಾದವರಿಗೆ ಆದ್ಯತೆ ನೀಡುವ ಸಾಧ್ಯತೆ ಇದೆ. ಪಕ್ಷದ ವರ್ಚಸ್ಸು ಹೆಚ್ಚಿಸುವುದರ ಜತೆಗೆ ಜಾತಿ, ಪ್ರಾದೇಶಿಕ ಸಮತೋಲನಕ್ಕೂ ಒತ್ತು ನೀಡಲಾಗುವುದು. ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರಿಗೂ ಈ ಬಾರಿ ಮಣೆ ಹಾಕುವ ಸಾಧ್ಯತೆ ಇದೆ. ಯತ್ನಾಳ ಅವರನ್ನು ತೆಗೆದುಕೊಂಡರೆ, ಮುರುಗೇಶ್‌ ನಿರಾಣಿ ಅವರನ್ನು ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ ಎಂದೂ ಹೇಳಲಾಗುತ್ತಿದೆ.

17–18ಕ್ಕೆ ಅಮಿತ್ ಶಾ ರಾಜ್ಯಕ್ಕೆ ಭೇಟಿ

ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಇದೇ 17–18ರಂದು ಕರ್ನಾಟಕಕ್ಕೆ ಭೇಟಿ ನೀಡುವ ಸಾಧ್ಯತೆ ಇದೆ.

‘ಇದೇ 7ರಿಂದ ನಡೆಯಲಿರುವ ಬಿಜೆಪಿ ಚಿಂತನಾ ಸಭೆಯಲ್ಲಿ ಶಾ ಅವರು ಭಾಗಿಯಾಗಲಿದ್ದಾರೆ ಎಂಬ ಮಾಹಿತಿ ಮೊದಲು ಬಂದಿತ್ತು. ಅವರ ಭೇಟಿಯ ಬಗ್ಗೆ ಗೃಹ ಸಚಿವಾಲಯ ಅಥವಾ ಪಕ್ಷಕ್ಕೆ ಯಾವುದೇ ಅಧಿಕೃತ ಮಾಹಿತಿ ಬಂದಿಲ್ಲ. ಅವರ ಭೇಟಿ ಮುಂದೂಡಿಕೆಯಾಗಿದೆ. ರಾಜ್ಯಕ್ಕೆ ಬರಲಿರುವ ಅವರು, ಪಕ್ಷದ ಪ್ರಮುಖರು, ಸಚಿವರ ಜತೆ ಚರ್ಚೆ ನಡೆಸಲಿದ್ದಾರೆ. ಅದಾದ ಬಳಿಕವೇ ಸಂಪುಟ ಪುನಾರಚನೆಯಾಗುವ ಸಂಭವ ಇದೆ’ ಎಂದು ಬಿಜೆಪಿ ಮೂಲಗಳು ಹೇಳಿವೆ.

ಸಂಘಟನೆಯಲ್ಲೂ ಬದಲಾವಣೆ

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ನಳಿನ್‌ ಕುಮಾರ್‌ ಕಟೀಲ್ ಮೂರು ವರ್ಷಗಳ ಅವಧಿ ಆಗಸ್ಟ್‌ ವೇಳೆಗೆ ಪೂರ್ಣಗೊಳ್ಳಲಿದೆ. ಆ ಹೊತ್ತಿಗೆ ಹೊಸ ಅಧ್ಯಕ್ಷರನ್ನು ನೇಮಕ ಮಾಡುವ ಚಿಂತನೆ ನಡೆದಿದೆ.

ಅಲ್ಲದೆ, ಪಕ್ಷದಲ್ಲಿ ಒಂದೆರೆಡು ಮೋರ್ಚಾಗಳನ್ನು ಬಿಟ್ಟು, ಉಳಿದ ಮೋರ್ಚಾ, ಘಟಕಗಳು ಕ್ರಿಯಾಶೀಲವಾಗಿಲ್ಲ. ರಾಜ್ಯ ಮತ್ತು ಜಿಲ್ಲಾ ಮಟ್ಟದ ಸಂಘಟನೆಯನ್ನು ಆಮೂಲಾಗ್ರವಾಗಿ ಬದಲಾಯಿಸುವ ಸಾಧ್ಯತೆ ಇದೆ ಎಂದು ಮೂಲಗಳು ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT