ಶುಕ್ರವಾರ, ಡಿಸೆಂಬರ್ 3, 2021
24 °C

ಸಿದ್ದರಾಮಯ್ಯನವರ ಮೌನ ತುಂಬಾ ಅಪಾಯಕಾರಿ: ಡಿಕೆಶಿಗೆ ಸಲಹೆ ನೀಡಿದ ಬಿಜೆಪಿ

ಪ್ರಜಾವಾಣಿ ವೆಬ್‌ ಡೆಸ್ಕ್‌‌ Updated:

ಅಕ್ಷರ ಗಾತ್ರ : | |

ಬೆಂಗಳೂರು: ವಿಧಾನ ಪರಿಷತ್‌ಗೆ ನಡೆಯುವ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಒಳಜಗಳ ಮತ್ತೊಮ್ಮೆ ಬಯಲಾಗಿದೆ ಎಂದು ಬಿಜೆಪಿ ಟೀಕಿಸಿದೆ.

ಈ ವಿಚಾರವಾಗಿ ಬುಧವಾರ ಸರಣಿ ಟ್ವೀಟ್‌ ಮಾಡಿರುವ ರಾಜ್ಯ ಬಿಜೆಪಿ, ‘ಅಭ್ಯರ್ಥಿ ಆಯ್ಕೆ, ಪ್ರಚಾರ ಸೇರಿದಂತೆ ಎಲ್ಲಾ ಪ್ರಕ್ರಿಯೆಗಳಿಂದಲೂ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ದೂರ ಉಳಿದಿದ್ದಾರೆ. ಏನಿದರರ್ಥ?‘ ಎಂದು ಪ್ರಶ್ನಿಸಿದೆ.

‘ಸಿದ್ದರಾಮಯ್ಯ ಹಾಗೂ ಡಿಕೆಶಿ ಕಾಂಗ್ರೆಸ್ ಪಕ್ಷದ ಎರಡು ಕಣ್ಣುಗಳು ಇದ್ದಂತೆ ಎಂದು ಪರಮೇಶ್ವರ್‌ ಅವರು ಇತ್ತೀಚೆಗೆ ಬಣ್ಣಿಸಿದ್ದರು. ಆದರೆ, ಪರಿಷತ್ ಚುನಾವಣೆ ಅಭ್ಯರ್ಥಿ ಆಯ್ಕೆಯ ವೇಳೆ ಈ ಎರಡು ಕಣ್ಣುಗಳ ದೃಷ್ಟಿ ಸಾಮರ್ಥ್ಯ ಬಯಲಾಗಿದೆ. ಡಿಕೆಶಿ ನೀಡಿದ ಪಟ್ಟಿಯ ಬಗ್ಗೆ ಸಿದ್ದರಾಮಯ್ಯ ದಿವ್ಯ‌ ಮೌನ ತಳೆದಿರುವುದೇಕೆ?‘ ಎಂದು ಬಿಜೆಪಿ ಟ್ವೀಟಿಸಿದೆ. 

‘ಪದಾಧಿಕಾರಿಗಳ ಪಟ್ಟಿ ಬಿಡುಗಡೆ ವಿಚಾರದಲ್ಲೂ ಡಿಕೆಶಿ ಹಾಗೂ ಸಿದ್ದರಾಮಯ್ಯ ಮಧ್ಯೆ ಯುದ್ಧ ನಡೆಯುತ್ತಿದೆ. ಆದರೆ, ಪರಿಷತ್ ಚುನಾವಣೆ ವಿಚಾರದಲ್ಲಿ ಬೇಸರಗೊಂಡಿರುವ ಸಿದ್ದರಾಮಯ್ಯ ಅವರೀಗ ಬೇರೆಯದೇ ಲೆಕ್ಕಾಚಾರದಲ್ಲಿ ತೊಡಗಿದಂತೆ ಕಾಣುತ್ತಿದೆ. ಸಿದ್ದರಾಮಯ್ಯನವರೇ, ನಿಮ್ಮ ಮೌನವು ಬೇರೇನೋ ಸೂಚಿಸುತ್ತಿರುವುದು ನಿಜವಲ್ಲವೇ?‘ ಎಂದು ಬಿಜೆಪಿ ವಾಗ್ದಾಳಿ ನಡೆಸಿದೆ.

‘ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್‌ ಅವರೇ, ಸಿದ್ದರಾಮಯ್ಯ ಅವರ ಮೌನ ತುಂಬಾ ಅಪಾಯಕಾರಿ. ಮುನಿಸಿಕೊಂಡಾಗಲೆಲ್ಲ ಪ್ರಕೃತಿ ಚಿಕಿತ್ಸೆಗೆ ತೆರಳುತ್ತಾರೆ. ಅಲ್ಲಿಂದ ಪ್ರಯೋಗಿಸುವ ರಾಜಕೀಯ ದಾಳ ಯಾರೆಲ್ಲರ ಬುಡ ಅಲ್ಲಾಡಿಸಿದೆ ಎಂಬುದು ನಿಮಗೆ ನೆನಪಿರಬಹುದಲ್ಲವೇ? ಕೆಪಿಸಿಸಿ ಅಧ್ಯಕ್ಷ ಪಟ್ಟವನ್ನು ಭದ್ರವಾಗಿ ಹಿಡಿದಿಟ್ಟುಕೊಳ್ಳಿ‘ ಎಂದು ಬಿಜೆಪಿ ತಿಳಿಸಿದೆ. 

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು