ಭಾನುವಾರ, ಜುಲೈ 3, 2022
27 °C

ಮೇಕೆದಾಟು ಪಾದಯಾತ್ರೆ ಮೂಲಕ ಕೊರೊನಾ ಹಬ್ಬಿಸಿದ್ದೇ ಕಾಂಗ್ರೆಸ್ ಸಾಧನೆ: ಬಿಜೆಪಿ

ಪ್ರಜಾವಾಣಿ ವೆಬ್ ಡೆಸ್ಕ್ Updated:

ಅಕ್ಷರ ಗಾತ್ರ : | |

ಬೆಂಗಳೂರು: ಮೇಕೆದಾಟು ಯೋಜನೆ ಅನುಷ್ಠಾನಕ್ಕೆ ಒತ್ತಾಯಿಸಿ ಕಾಂಗ್ರೆಸ್ ನಡೆಸಿದ ಪಾದಯಾತ್ರೆಯ ವಿರುದ್ಧ ಕಿಡಿಕಾರಿರುವ ಬಿಜೆಪಿ, ಪಾದಯಾತ್ರೆಯ ಮೊದಲ ಹಂತದಲ್ಲಿ ಕೊರೊನಾ ಹಬ್ಬಿಸಿದ್ದು ಮತ್ತು ಎರಡನೇ ಹಂತದಲ್ಲಿ ಸಂಚಾರ ದಟ್ಟಣೆ ಉಂಟುಮಾಡಿದ್ದು ಕಾಂಗ್ರೆಸ್‌ನ ಎರಡು ‌ಪ್ರಮುಖ ಸಾಧನೆಗಳಾಗಿವೆ ಎಂದು ವ್ಯಂಗ್ಯವಾಡಿದೆ.

 

ಕಾಂಗ್ರೆಸ್ ಪ್ರತಿಭಟನೆಗೆ ಸಂಬಂಧಿಸಿದಂತೆ #ಸುಳ್ಳುಜಾತ್ರೆ ಟ್ಯಾಗ್‌ ಬಳಸಿ ಸರಣಿ ಟ್ವೀಟ್‌ಗಳನ್ನು ಮಾಡಿರುವ ಬಿಜೆಪಿ, 'ಆಹಾ! ತೋರಿಕೆಯ ನಾಟಕ ಚೆನ್ನಾಗಿದೆ. ಇದು ಬರೀ ಕೆಮರಾ ಕಣ್ಣಿಗಾಗಿ ಜೊತೆಯಾದ ಕ್ಷಣವಷ್ಟೇ. ಒಳಗೊಳಗೆ ಒಬ್ಬರನ್ನೊಬ್ಬರು ಹಣಿಯಲು ತಂತ್ರ ಹೆಣೆಯುತ್ತಿದ್ದಾರೆ. ಒಂದು ವೇಳೆ ಇದೇ ವೇದಿಕೆಯಲ್ಲಿ ಮುಂದಿನ ಚುನಾವಣೆಗೆ ಸಿಎಂ ಅಭ್ಯರ್ಥಿ ಹೆಸರು ಘೋಷಣೆಯಾಗಿದ್ದರೆ, ಜೊತೆಯಾಗಿರುವ ʼಕೈʼಗಳು ಕೋವಿಡ್‌ ನಿಯಮ ಪಾಲಿಸುತ್ತಿದ್ದವು!' ಎಂದಿದೆ. ಆ ಮೂಲಕ ಕಾಂಗ್ರೆಸ್‌ನಲ್ಲಿ ನಾಯಕತ್ವಕ್ಕಾಗಿ ನಾಯಕರ ನಡುವೆ ಹೋರಾಟ ನಡೆಯುತ್ತಿದೆ ಎಂದು ಕಾಲೆಳೆದಿದೆ.

ಕಾಂಗ್ರೆಸ್–ಜೆಡಿಎಸ್ ಸಮ್ಮಿಶ್ರ ಸರ್ಕಾರ ಪತನವಾದ ಸಂದರ್ಭವನ್ನು ಮತ್ತೊಂದು ಟ್ವೀಟ್‌ನಲ್ಲಿ ನೆನಪಿಸಿರುವ ಬಿಜೆಪಿ, 'ಮನೆಯೊಂದು, ನೂರು ಬಾಗಿಲು ಆಗಿರುವ ಕಾಂಗ್ರೆಸ್‌ ಈಗ ಒಗ್ಗಟ್ಟಿನ ಮಂತ್ರ ಜಪಿಸುತ್ತಿದೆ. ಈ ಒಗ್ಗಟ್ಟು ತೋರಿಕೆಯದ್ದೆಂದು ಸ್ವತಃ ಅದೇ ಪಕ್ಷದವರಿಗೂ ತಿಳಿದಿದೆ. ಈ ಹಿಂದೆ ಸಾಲಾಗಿ ಕೈ ಎತ್ತಿದ್ದವರಲ್ಲಿ ಸಿದ್ದರಾಮಯ್ಯ ಕೂಡಾ ಒಬ್ಬರು. ಕೊನೆಗೆ ಶಾಂತಿವನದಲ್ಲಿ ಸರ್ಕಾರ ಉರುಳಿಸುವ ಬಗ್ಗೆ ಮಾತನಾಡಿ ಅಶಾಂತಿ ಸೃಷ್ಟಿಸಿದರು' ಎಂದು ಹೇಳಿದೆ.

'ಮೇಕೆದಾಟು ಎಂಬ ಪ್ರಹಸನದಲ್ಲಿ ಹೆಚ್ಚು ಸದ್ದು ಮಾಡಿದವರು ಎಂಬ ಪ್ರಶ್ನೆಗೆ ಖಂಡಿತವಾಗಿಯೂ ಡಿ.ಕೆ.ಶಿವಕುಮಾರ್ ಅಥವಾ ಸಿದ್ದರಾಮಯ್ಯ ಅವರು ಉತ್ತರ ಆಗಲಾರರು. #ಕಾಂಗ್ರೆಸ್‌ಟ್ರಾಫಿಕ್‌ಬಾಂಬ್‌ನಿಂದಾಗಿ ಹೆಚ್ಚು ಸದ್ದು ಮಾಡಿದ್ದು ಬೆಂಗಳೂರು ವಾಹನ ಸವಾರರು' ಎನ್ನುವ ಮೂಲಕ ಸಂಚಾರ ದಟ್ಟಣೆಗೆ ಕಾಂಗ್ರೆಸ್‌ ನಡೆಸಿದ ಪಾದಯಾತ್ರೆಯೇ ಕಾರಣ ಎಂದು ಆರೋಪಿಸಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು