ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ‘ಸಾರಥ್ಯ’ಕ್ಕೆ ಶೋಭಾ– ರವಿ ಪೈಪೋಟಿ

ಮಹಿಳೆಯರ ಮತ ಸೆಳೆಯಲು ಶೋಭಾ ಪರ ಒಲವು?
Last Updated 5 ಏಪ್ರಿಲ್ 2022, 19:31 IST
ಅಕ್ಷರ ಗಾತ್ರ

ಬೆಂಗಳೂರು: 2023ರ ವಿಧಾನಸಭಾ ಚುನಾವಣೆಗೆ ಬಿಜೆಪಿ ಭರ್ಜರಿ ಸಿದ್ಧತೆ ನಡೆಸುತ್ತಿರುವ ಬೆನ್ನಲ್ಲೇ ಪಕ್ಷದ ರಾಜ್ಯ ಘಟಕದ ಅಧ್ಯಕ್ಷರ ಬದಲಾವಣೆ ವಿಚಾರವೂ ಮುನ್ನೆಲೆಗೆ ಬಂದಿದೆ. ಅಧ್ಯಕ್ಷರ ಹುದ್ದೆಗೆ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಮತ್ತು ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಮಧ್ಯೆ ಪೈಪೋಟಿ ಏರ್ಪಟ್ಟಿದೆ.

ನಳಿನ್‌ ಕುಮಾರ್‌ ಕಟೀಲ್ ಅವರ ಅವಧಿ ಇದೇ ಆಗಸ್ಟ್‌ ತಿಂಗಳಿಗೆ ಮುಗಿಯಲಿದೆ. ಚುನಾವಣೆಯಲ್ಲಿ ಎಲ್ಲ ನಾಯಕರನ್ನು ಒಗ್ಗೂಡಿಸಿಕೊಂಡು ಹೋಗುವ, ಜನರನ್ನು ಪ್ರಖರ ಮಾತುಗಾರಿಕೆಯಿಂದ ಸೆಳೆಯಬಲ್ಲ ಮತ್ತು ಕಠಿಣ ಪರಿಶ್ರಮ ಹಾಕುವ ನಾಯಕರ ಹುಡುಕಾಟ ನಡೆಸಿದ್ದು, ಈ ಇಬ್ಬರು ನಾಯಕರ ಹೆಸರು ಪರಿಶೀಲನೆಯಲ್ಲಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಇತ್ತೀಚೆಗೆ ಉತ್ತರಪ್ರದೇಶವೂ ಸೇರಿದಂತೆ ಹಲವು ರಾಜ್ಯಗಳ ಚುನಾವಣೆಗಳಲ್ಲಿ ಮಹಿಳಾ ಮತದಾರರುಬಿಜೆಪಿಗೆ ಕೈ ಹಿಡಿದಿರುವುದರಿಂದ ಕರ್ನಾಟಕದಲ್ಲೂ ಈ ಪ್ರಯೋಗ ಮುಂದುವರಿಸಲು ಸಿದ್ಧತೆ ನಡೆಸಿದೆ. ಇಂತಹ ಸಂದರ್ಭದಲ್ಲಿ ಮಹಿಳಾ ಅಧ್ಯಕ್ಷರಿದ್ದರೆ ಹೆಚ್ಚು ಅನುಕೂಲ ಆಗಬಹುದು ಎಂಬುದು ಪಕ್ಷದ ಲೆಕ್ಕಾಚಾರ. ಶೋಭಾ ಅವರು ಉತ್ತರ ಪ್ರದೇಶ ಚುನಾವಣೆಯಲ್ಲಿ ಉಸ್ತುವಾರಿಯಾಗಿಯೂ ಕಾರ್ಯ ನಿರ್ವಹಿಸಿದ್ದರು.

ಸಿ.ಟಿ.ರವಿ ಅವರು ತಮಿಳುನಾಡು ಮತ್ತು ಗೋವಾದಲ್ಲಿ ನಡೆದ ವಿಧಾನಸಭಾ ಚುನಾವಣೆಯಲ್ಲಿ ಉಸ್ತುವಾರಿಯಾಗಿದ್ದರು. ಅಧ್ಯಕ್ಷ ಹುದ್ದೆಗೆ ಇವರು ಹೆಸರೂ ಮುಂಚೂಣಿಯಲ್ಲಿದೆ. ಅಲ್ಲದೆ, ಎಸ್‌ಸಿ– ಎಸ್‌ಟಿ, ಹಿಂದುಳಿದ ವರ್ಗದಲ್ಲೂ ಹುಡುಕಾಟ ನಡೆಸಲಾಗಿದೆ. ಅಂತಿಮವಾಗಿ ಶೋಭಾ ಅಥವಾ ರವಿ ಅವರಲ್ಲಿ ಒಬ್ಬರು ಆಯ್ಕೆಯಾಗುವ ಸಾಧ್ಯತೆ ಹೆಚ್ಚು ಎಂದು ಮೂಲಗಳು ಖಚಿತಪಡಿಸಿವೆ.

ಸಂಘಟನೆಗೆ ತಾಕೀತು: ಗೃಹ ಸಚಿವ ಅಮಿತ್‌ ಶಾ ಅವರು ಪಕ್ಷದ ಪ್ರಮುಖರ ಸಭೆಯಲ್ಲಿ (ಕೋರ್‌ ಕಮಿಟಿ) ಹಳೇ ಮೈಸೂರು ಭಾಗದಲ್ಲಿ ಸಂಘಟನೆಗೆ ಒತ್ತು ನೀಡದಿರುವ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ‘ಹಳೆ ಮೈಸೂರು ಭಾಗದಲ್ಲಿ ಪಕ್ಷವನ್ನು ಸದೃಢಗೊಳಿಸಲು ಸಂಘಟನಾತ್ಮಕವಾಗಿ ಏನೆಲ್ಲಾ ಕ್ರಮ ತೆಗೆದುಕೊಂಡಿದ್ದೀರಿ ತಿಳಿಸಿ’ ಎಂದು ಅವರು ನಾಯಕರಿಗೆ ಪ್ರಶ್ನೆ ಹಾಕಿದರು.

ಯಾವುದೇ ನಾಯಕರಿಂದಲೂ ಸ್ಪಷ್ಟ ಉತ್ತರ ಬಾರದಿದ್ದಾಗ, ‘ನಾನು ಎಲ್ಲವನ್ನು ಗಮನಿಸಿದ್ದೇನೆ. ಹಳೆ ಮೈಸೂರು ಭಾಗದಲ್ಲಿ ಪಕ್ಷದ ಸಂಘಟನೆಗೆ ಒತ್ತು ನೀಡಿಲ್ಲ.ಅವಧಿಪೂರ್ವ ಮಾತ್ರವಲ್ಲ, ನಿಗದಿತ ಅವಧಿಯಲ್ಲಿ ಚುನಾವಣೆ ಎದುರಾದರೂ ಅಲ್ಲಿ ಸಂಘಟನೆ ಶಕ್ತಿ ಶಾಲಿಯಾಗಿಲ್ಲ. ಈ ಭಾಗದಲ್ಲಿ ಪಕ್ಷವನ್ನು ಬಲಪಡಿಸಲು ಕಾರ್ಯತಂತ್ರಗಳನ್ನು ರೂಪಿಸಿಕೊಂಡು ಆದಷ್ಟು ಬೇಗ ತನ್ನಿ’ ಎಂದು ಅವರು ತಾಕೀತು ಮಾಡಿದ್ದಾರೆ ಎಂದು ಮೂಲಗಳು ಹೇಳಿವೆ.

ವಿಧಾನಸಭಾ ಚುನಾವಣೆ ವೇಳೆ ಹಳೆ ಮೈಸೂರು ಭಾಗದ ಕೆಲವು ಜಿಲ್ಲೆಗಳ ಉಸ್ತುವಾರಿಯನ್ನು ಪಕ್ಷದ ಉಪಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರಿಗೆ ನೀಡುವ ಸಾಧ್ಯತೆಯ ಬಗ್ಗೆಯೂ ಚರ್ಚೆ ನಡೆದಿದೆ. ವಿಜಯೇಂದ್ರ ಅವರಿಗೆ ಉಸ್ತುವಾರಿ ನೀಡಿದರೆ ಈ ಭಾಗದಲ್ಲಿ ಲಿಂಗಾಯತ ಸಮುದಾಯವನ್ನು ಸೆಳೆಯಲು ಅನುಕೂಲವಾಗುತ್ತದೆ ಎಂಬ ಲೆಕ್ಕಾಚಾರವೂ ಇದೆ. ಒಂದು ವೇಳೆ ಈ ಅಂಶವನ್ನು ವರಿಷ್ಠರು ಗಂಭೀರವಾಗಿ ಪರಿಗಣಿಸಿದರೆ, ಸಂಪುಟ ವಿಸ್ತರಣೆ ಸಂದರ್ಭದಲ್ಲಿ ಸ್ಥಾನ ಕಲ್ಪಿಸುವ ಸಾಧ್ಯತೆಯೂ ಇದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT