ಬೆಂಗಳೂರು: ಕಳಸಾ ಬಂಡೂರಿ, ತುಪ್ರಿ ಹಳ್ಳ ನೀರಾವರಿ ಯೋಜನೆ, ಹುಬ್ಬಳ್ಳಿ– ಅಂಕೋಲಾ ರೈಲ್ವೆ ಹಳಿ, ಸಾರಿಗೆ ನಿಗಮಗಳ ಪುನರುಜ್ಜೀವನ, ವೈದ್ಯಕೀಯ ಕಾಲೇಜುಗಳಲ್ಲಿ ನೇಮಕಾತಿ ಹೀಗೆ ಹಲವು ವಿಚಾರವನ್ನು ಪ್ರಸ್ತಾಪಿಸಿ ರಾಜ್ಯ ಸರ್ಕಾರಕ್ಕೆ ಬಿಜೆಪಿಯ ಜಗದೀಶ ಶೆಟ್ಟರ್ ಬಿಸಿ ಮುಟ್ಟಿಸಿದ ಪ್ರಸಂಗ ವಿಧಾನ ಸಭೆಯಲ್ಲಿ ಬುಧವಾರ ನಡೆಯಿತು.
ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಚರ್ಚೆ ಮೇಲೆ ಮಾತನಾಡಿದ ಶೆಟ್ಟರ್, ತಾವು ಮುಖ್ಯಮಂತ್ರಿಯಾಗಿದ್ದಾಗ ತೆಗೆದುಕೊಂಡ ಕ್ರಮಗಳು ಮತ್ತು ಬೊಮ್ಮಾಯಿ ಸರ್ಕಾರದ ಕಾರ್ಯವೈಖರಿಯನ್ನು ತುಲನೆ ಮಾಡಿದರು.
‘ಮಹದಾಯಿ ವಿಚಾರದಲ್ಲಿ ಕರ್ನಾಟಕದ ಡಿಪಿಆರ್‌ಗೆ ತಡೆಯಾಜ್ಞೆ ನೀಡುವಂತೆ ಗೋವಾ ಸರ್ಕಾರ ಕೋರ್ಟ್ ಮೆಟ್ಟಿಲೇರಿತ್ತು. ಆದರೆ, ಗೋವಾದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ. ಡಿಪಿಆರ್‌ಗೆ ಒಪ್ಪಿಗೆ ಸಿಕ್ಕಿದೆ ಎಂದು ಕೈಕಟ್ಟಿ ಕುಳಿತರೆ ಯೋಜನೆ ವಿಳಂಬವಾಗಲಿದೆ. ಪರಿಸರ, ಅರಣ್ಯ ಇಲಾಖೆಯಿಂದ ಆದಷ್ಟು ಬೇಗ ಒಪ್ಪಿಗೆ ಪಡೆದು ಯೋಜನೆ ಜಾರಿಗೊಳಿಸಬೇಕು’ ಎಂದು ಆಗ್ರಹಿಸಿದರು.
‘ತುಪ್ರಿಹಳ್ಳ (ಪ್ರವಾಹ ನಿಯಂತ್ರಣ ಯೋಜನೆ) ಯೋಗೇಶ್ವರ ಏತ ನೀರಾವರಿ ಯೋಜನೆಯ ಮೊದಲ ಹಂತಕ್ಕೆ ₹ 318 ಕೋಟಿಗೆ ಸರ್ಕಾರ ಒಪ್ಪಿಗೆ ಕೊಟ್ಟಿದೆ. ಶೀಘ್ರ ಟೆಂಡರ್ ಪ್ರಕ್ರಿಯೆ ಮಾಡಿ ಅನುಷ್ಠಾನ ಆಗಬೇಕು. ಅದೇ ರೀತಿ ಬೆಣ್ಣಿ ಹಳ್ಳ ಪ್ರವಾಹ ನಿಯಂತ್ರಣ ಯೋಜನೆಗೆ ನಾನು ಮುಖ್ಯಮಂತ್ರಿ ಆಗಿದ್ದಾಗ ವರದಿ ತಯಾರಿಸಿದ್ದೆ. ₹ 1,378 ಕೋಟಿಯ ಯೋಜನೆ ಸಿದ್ಧವಿದೆ. ಆದರೆ, ಯೋಜನೆ ಜಾರಿಯಾಗುತ್ತಿಲ್ಲ’ ಎಂದು ಅಸಮಾಧಾನ ವ್ಯಕ್ತಪಡಿಸಿದರು.
‘ನಾನು ಕೈಗಾರಿಕೆ ಸಚಿವನಾಗಿದ್ದಾಗ ಹುಬ್ಬಳ್ಳಿ- ಅಂಕೋಲಾ ರೈಲ್ವೆ ಮಾರ್ಗ ಕುರಿತು ಕೇಂದ್ರ ಪರಿಸರ ಸಚಿವರನ್ನು ಹಲವು ಬಾರಿ ಭೇಟಿ ಮಾಡಿದ್ದೆ. ಇದೀಗ ಕೇಂದ್ರ ಪರಿಸರ ಸಚಿವರ ಅಧ್ಯಕ್ಷತೆಯಲ್ಲಿ ಅಧ್ಯಯನ ಮಾಡಿಸಿದ್ದು, ಹೆಚ್ಚು ಅರಣ್ಯ ನಾಶವಾಗದಂತೆ ಪುನರ್ ಪ್ರಸ್ತಾವನೆ ಸಲ್ಲಿಸಲು ಕೇಂದ್ರ ಸೂಚಿಸಿದೆ. ಹುಬ್ಬಳ್ಳಿಯಲ್ಲಿ ನೈರುತ್ಯ ರೈಲ್ವೆಗೆ ಅಟಲ್ ಬಿಹಾರಿ ವಾಜಪೇಯಿ ಅಡಿಗಲ್ಲು ಹಾಕಿದಂದಿನಿಂದ ಇಲ್ಲಿಯವರೆಗೂ ಯೋಜನೆ ನನೆಗುದಿಗೆ ಬಿದ್ದಿದೆ. ಇದಕ್ಕೆ ಚಾಲನೆ ಕೊಡಬೇಕು’ ಎಂದರು.
‘ಹುಬ್ಬಳ್ಳಿಯ ಕಿಮ್ಸ್ , ಹಾವೇರಿ ಮತ್ತು ಬಳ್ಳಾರಿ ವೈದ್ಯಕೀಯ ಕಾಲೇಜುಗಳಿಗೆ ಪ್ರಾಧ್ಯಾಪಕರ ನೇಮಕಾತಿ ವಿಳಂಬವಾಗುತ್ತಿದೆ. ಅರ್ಹರ ಪಟ್ಟಿ ಸಿದ್ಧವಾಗಿ ವರ್ಷ ಕಳೆದರೂ ನೇಮಕಾತಿ ಆದೇಶ ನೀಡಿಲ್ಲ. ಹೀಗಾದರೆ ಹೇಗೆ’ ಎಂದು ಪ್ರಶ್ನಿಸಿದರು. ಆಗ ಮಧ್ಯಪ್ರವೇಶಿಸಿದ ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ. ಸುಧಾಕರ್, ‘ಹಾವೇರಿ ವೈದ್ಯಕೀಯ ಕಾಲೇಜಿನ ನೇಮಕಾತಿ ಅಂತಿಮ ಪಟ್ಟಿ ಇನ್ನೂ ಬಂದಿಲ್ಲ. ಕಿಮ್ಸ್‌ಗೆ ಪ್ರಾಧ್ಯಾಪಕರ ನೇಮಕಾತಿ ಆದೇಶವನ್ನು ವಾರದೊಳಗೆ ಹೊರಡಿಸಲಾಗುವುದು’ ಎಂದು ಭರವಸೆ ನೀಡಿದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.