ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ವಿಧಾನಸಭೆ ಚುನಾವಣೆ: ಮುಸ್ಲಿಮರ ಮೀಸಲಾತಿ ಕೈಬಿಡಲು ಯತ್ನಾಳ್, ಬೆಲ್ಲದ್ ಆಗ್ರಹ

Last Updated 13 ಅಕ್ಟೋಬರ್ 2022, 4:31 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಹಿಂದುಳಿದ ವರ್ಗಗಳ(ಒಬಿಸಿ) ಅಡಿಯಲ್ಲಿ ಮುಸ್ಲಿಮರಿಗೆ ಪ್ರತ್ಯೇಕವಾಗಿ ನೀಡಲಾದ ಶೇ 4ರಷ್ಟು ಮೀಸಲಾತಿಯನ್ನು ತೆಗೆದುಹಾಕಬೇಕೆಂಬ ಕೂಗು ಆಡಳಿತಾರೂಢ ಬಿಜೆಪಿಯಲ್ಲಿ ಹೆಚ್ಚಾಗುತ್ತಿದೆ.

ಪಾಪ್ಯುಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್‌ಐ) ಮೇಲಿನ ನಿಷೇಧದ ಬೆನ್ನಲ್ಲೇ, ರಾಜ್ಯದಲ್ಲಿ ಲಿಂಗಾಯತರು ಅಥವಾ ಬ್ರಾಹ್ಮಣರಿಗೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಮುಸ್ಲಿಮರಿಗೆ ನೀಡಲಾದ ಮೀಸಲಾತಿಯನ್ನು ತೆಗೆದುಹಾಕುವುದಕ್ಕೆ ಬಿಜೆಪಿ ಚಿಂತನೆ ನಡೆಸಿದೆ. ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಹಿನ್ನೆಲೆ ಮೀಸಲಾತಿ ನಿರ್ಧಾರ ಪಕ್ಷಕ್ಕೆ ಅನುಕೂಲವಾಗಲಿದೆ ಎನ್ನಲಾಗಿದೆ.

ಬಿಜೆಪಿಯ ಲಿಂಗಾಯತ ಶಾಸಕರಾದ ಅರವಿಂದ್ ಬೆಲ್ಲದ್ ಮತ್ತು ಬಸನಗೌಡ ಪಾಟೀಲಯತ್ನಾಳ್ ಅವರು ಮುಸ್ಲಿಮರ ಮೀಸಲಾತಿ ಕೋಟಾವನ್ನು ರದ್ದುಗೊಳಿಸುವಂತೆ ಒತ್ತಾಯಿಸಿರುವುದು ಮೀಸಲಾತಿ ಚರ್ಚೆ ಮತ್ತೆ ಮುನ್ನೆಲೆಗೆ ಬರಲು ಕಾರಣವಾಗಿದೆ.

ರಾಜ್ಯದ ಜನಸಂಖ್ಯೆಯಲ್ಲಿ ಮುಸ್ಲಿಮರ ಪಾಲು ಶೇ.16 ರಷ್ಟಿದೆ. ಮುಸ್ಲಿಮರನ್ನು ಹಿಂದುಳಿದ ವರ್ಗಗಳ 2ಬಿ ಅಡಿಯಲ್ಲಿ ವರ್ಗೀಕರಿಸಲಾಗಿದ್ದು, 17 ಉಪ ಪಂಗಡಗಳನ್ನು ಒಳಗೊಂಡಿರುವ ಸಮುದಾಯವು ಶಿಕ್ಷಣ ಮತ್ತು ಉದ್ಯೋಗಗಳಲ್ಲಿ ಶೇ 4ರಷ್ಟು ಮೀಸಲಾತಿಗೆ ಅರ್ಹರಾಗಿದ್ದಾರೆ.

ಪಂಚಮಸಾಲಿ ಲಿಂಗಾಯತರನ್ನು 2ಎ ಪ್ರವರ್ಗದಡಿ ಸೇರಿಸಲು ಒತ್ತಾಯಿಸುತ್ತಿರುವ ವಿಜಯಪುರ ನಗರದ ಬಿಜೆಪಿ ಶಾಸಕ ಯತ್ನಾಳ್, ಇತ್ತೀಚೆಗೆ ಬ್ರಾಹ್ಮಣರ ಪರ ಮಾತನಾಡುವ ವೇಳೆ ಮುಸ್ಲಿಮರ ಮೀಸಲಾತಿ ರದ್ದುಗೊಳಿಸುವಂತೆ ಮತ್ತೊಮ್ಮೆ ಸರ್ಕಾರಕ್ಕೆ ಆಗ್ರಹಿಸಿದ್ದರು.

ಮುಸ್ಲಿಂ ಮತ್ತು ಕ್ರಿಶ್ಚಿಯನ್ ಮೀಸಲಾತಿ ಕೋಟಾವನ್ನು ರದ್ದುಪಡಿಸಿ ಅದನ್ನು ಪಂಚಮಸಾಲಿ ಲಿಂಗಾಯತ, ಕುರುಬ ಮತ್ತು ಮರಾಠರಿಗೆ ನೀಡಬೇಕೆಂದು ಒತ್ತಾಯಿಸಿ ಹುಬ್ಬಳ್ಳಿ-ಧಾರವಾಡ ಪಶ್ಚಿಮ ಶಾಸಕ ಬೆಲ್ಲದ್ ಅವರು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.

ಹಿಂದುತ್ವದ ಆಧಾರದ ಮೇಲೆ ಮತದಾರರನ್ನು ಸೆಳೆಯಲು ಪಕ್ಷವು ಮುಂದಾಗಿದೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಈ ಎಲ್ಲ ಬೆಳವಣಿಗೆಗಳ ನಡುವೆ ಟಿಪ್ಪು ಎಕ್ಸ್‌ಪ್ರೆಸ್ ರೈಲಿನ ಹೆಸರನ್ನು ಒಡೆಯರ್ ಎಕ್ಸ್‌ಪ್ರೆಸ್ ಎಂದು ಮರುನಾಮಕರಣ ಮಾಡಿದ ಹಿನ್ನೆಲೆಯಲ್ಲಿ ಹುಬ್ಬಳ್ಳಿ–ನಿಜಾಮುದ್ದೀನ್‌ ರೈಲಿನ ಹೆಸರನ್ನು ಪಂಡಿತ್ ಸವಾಯಿ ಗಂಧರ್ವ (ರಾಮಚಂದ್ರ ಕುಂದಗೋಳ್ಕರ್) ಎಂದು ಮರುನಾಮಕರಣ ಮಾಡಬೇಕೆಂದು ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ ಒತ್ತಾಯಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಪ್ರಸ್ತುತ ಒಬಿಸಿ ಪಟ್ಟಿಯಲ್ಲಿರುವ ಯಾವುದೇ ಜಾತಿಗಳನ್ನು ಕೈಬಿಡುವುದು ಸರ್ಕಾರಕ್ಕೆ ಬಹುತೇಕ ಅಸಾಧ್ಯ ಎಂದು ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಮಾಜಿ ಅಧ್ಯಕ್ಷ ಡಾ.ಸಿ.ಎಸ್‌. ದ್ವಾರಕಾನಾಥ್‌ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT