ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ರಾಜ್ಯಸಭೆ ಚುನಾವಣೆ: ಲಹರ್‌ ಸಿಂಗ್‌ ಗೆಲುವಿಗೆ ಬಿಜೆಪಿ ತಂತ್ರಗಾರಿಕೆ

ಪಕ್ಷದ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ನೇತೃತ್ವದಲ್ಲಿ ಸರಣಿ ಸಭೆ
Last Updated 5 ಜೂನ್ 2022, 19:30 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯಸಭೆಯಲ್ಲಿ ಪಕ್ಷದ ಮೂರನೇ ಅಭ್ಯರ್ಥಿಯಾಗಿರುವ ಲಹರ್‌ ಸಿಂಗ್‌ ಸಿರೋಯ ಅವರನ್ನು ಗೆಲ್ಲಿಸಲೇಬೇಕೆಂಬ ಗುರಿಯೊಂದಿಗೆ ಬಿಜೆಪಿ ನಾಯಕರು ತಂತ್ರಗಾರಿಕೆ ಆರಂಭಿಸಿದ್ದಾರೆ. ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಮತ್ತು ರಾಜ್ಯಸಭೆ ಚುನಾವಣಾ ಉಸ್ತುವಾರಿ ಕಿಶನ್‌ ರೆಡ್ಡಿ, ಭಾನುವಾರ ಸರಣಿ ಸಭೆಗಳನ್ನು ನಡೆಸಿದರು.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್‌ ಹಾಗೂ ಚಿತ್ರನಟ ಜಗ್ಗೇಶ್ ಅವರನ್ನು ಮೊದಲ ಪ್ರಾಶಸ್ತ್ಯದ ಮತಗಳಿಂದ ಗೆಲ್ಲಿಸಿಕೊಂಡು, ಉಳಿದ ಮತಗಳಿಂದ ಲಹರ್‌ ಸಿಂಗ್‌ ಅವರನ್ನು ಗೆಲುವಿನ ದಡ ಮುಟ್ಟಿಸುವ ಕುರಿತು ಬಿಜೆಪಿ ನಾಯಕರು ತಂತ್ರ ಹೆಣೆಯುತ್ತಿದ್ದಾರೆ. ಅಭ್ಯರ್ಥಿಗಳಿಗೆ ಮತ ಚಲಾಯಿಸಬೇಕಾದ ಶಾಸಕರ ಪಟ್ಟಿ ಸಿದ್ಧಪಡಿಸುವುದು, ಅನ್ಯ ಪಕ್ಷಗಳ ಶಾಸಕರ ಮತ ಸೆಳೆಯುವುದು ಸೇರಿದಂತೆ ಹಲವು ವಿಚಾರಗಳ ಕುರಿತು ಸಭೆಗಳಲ್ಲಿ ಚರ್ಚಿಸಲಾಗಿದೆ ಎಂದು ಬಿಜೆಪಿ ಮೂಲಗಳು ಹೇಳಿವೆ.

ಪಕ್ಷದ ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌, ಕಂದಾಯ ಸಚಿವ ಆರ್‌. ಅಶೋಕ, ಲಹರ್‌ ಸಿಂಗ್‌ ಜತೆ ಬಿಜೆಪಿ ರಾಜ್ಯ ಘಟಕದ ಕಚೇರಿಯಲ್ಲಿ ಅರುಣ್‌ ಸಿಂಗ್‌ ಮತ್ತು ಕಿಶನ್‌ ರೆಡ್ಡಿ ಹಲವು ಸುತ್ತಿನ ಚರ್ಚೆ ನಡೆಸಿದರು. ಬಳಿಕ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ನಿವಾಸಕ್ಕೆ ಭೇಟಿ ನೀಡಿದ ಅರುಣ್‌ ಸಿಂಗ್‌ ಮತ್ತು ನಳಿನ್‌ ಕುಮಾರ್‌ ಕಟೀಲ್‌, ರಾಜ್ಯಸಭಾ ಚುನಾವಣೆಯ ಕುರಿತು ಸಮಾಲೋಚನೆ ನಡೆಸಿದರು. ಕೆಲಹೊತ್ತಿನ ಬಳಿಕ ಲಹರ್‌ ಸಿಂಗ್‌ ಅವರನ್ನೂ ಅಲ್ಲಿಗೆ ಕರೆಸಿಕೊಂಡು ಚರ್ಚಿಸಿದರು.

ಅಶೋಕ– ರೆಡ್ಡಿ ಪ್ರತ್ಯೇಕ ಚರ್ಚೆ: ಅಶೋಕ ಮತ್ತು ಕಿಶನ್ ರೆಡ್ಡಿ ಪ್ರತ್ಯೇಕವಾಗಿಯೂ ಚರ್ಚೆ ನಡೆಸಿದ್ದಾರೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಶಾಸಕರ ಮತಗಳನ್ನು ಸೆಳೆಯುವ ಸಾಧ್ಯತೆ ಕುರಿತೂ ಸಮಾಲೋಚನೆ ನಡೆಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ನಿರ್ಮಲಾ ಸೀತಾರಾಮನ್‌, ಜಗ್ಗೇಶ್‌ ಹಾಗೂ ಲಹರ್‌ ಸಿಂಗ್‌ ನಡುವೆ ಬಿಜೆಪಿ ಶಾಸಕರ ಮತಗಳ ಹಂಚಿಕೆಗೆ ಪಟ್ಟಿಯೊಂದನ್ನು ಸಿದ್ಧಪಡಿಸಲು ಸಭೆಯಲ್ಲಿ ನಿರ್ಧರಿಸಲಾಗಿದೆ. ಮೊದಲ ಎರಡು ಅಭ್ಯರ್ಥಿಗಳಿಗೆ ಪ್ರಥಮ ಪ್ರಾಶಸ್ತ್ಯದ ಮತಗಳನ್ನು ಚಲಾಯಿಸುವವರು ಕಡ್ಡಾಯವಾಗಿ ಎರಡನೇ ಪ್ರಾಶಸ್ತ್ಯದ ಮತವನ್ನು ಲಹರ್‌ ಸಿಂಗ್‌ ಅವರಿಗೆ ನೀಡುವಂತೆ ನಿರ್ದೇಶನ ನೀಡಲು ನಿರ್ಧರಿಸಲಾಗಿದೆ ಎಂದು ಗೊತ್ತಾಗಿದೆ.

ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಅಶೋಕ, ‘ನಮ್ಮ ಬಳಿ ಗೆಲುವಿಗೆ ಅಗತ್ಯವಿರುವಷ್ಟು ಮತಗಳಿರುವ ಕಾರಣದಿಂದಲೇ ಮೂವರು ಅಭ್ಯರ್ಥಿಗಳನ್ನು ಕಣಕ್ಕಿಳಿಸಿದ್ದೇವೆ. ನಮ್ಮ ಎಲ್ಲ ನಾಯಕರೂ ಚುನಾವಣಾ ತಂತ್ರಗಾರಿಕೆಯಲ್ಲಿ ನಿರತರಾಗಿದ್ದಾರೆ. ಬಿಜೆಪಿಯ ಮೂವರು ಅಭ್ಯರ್ಥಿಗಳೂ ರಾಜ್ಯಸಭೆಗೆ ಆಯ್ಕೆಯಾಗುವುದು ಖಚಿತ’ ಎಂದರು.

‘ಮೂವರ ಆಯ್ಕೆ ಖಚಿತ’
‘ರಾಜ್ಯಸಭೆ ಚುನಾವಣೆಗೆ ಬಿಜೆಪಿಯಿಂದ ಕಣಕ್ಕಿಳಿದಿರುವ ಮೂವರು ಅಭ್ಯರ್ಥಿಗಳೂ ಗೆಲುವು ಸಾಧಿಸುತ್ತಾರೆ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಹಾಗೂ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರ್ಕಾರದ ಸಾಧನೆಗಳನ್ನು ಬೆಂಬಲಿಸಿ ಶಾಸಕರು ಬಿಜೆಪಿ ಅಭ್ಯರ್ಥಿಗಳಿಗೆ ಮತ ಚಲಾಯಿಸುತ್ತಾರೆ’ ಎಂದು ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್‌ ಸಿಂಗ್‌ ಹೇಳಿದರು.

ಆತ್ಮಸಾಕ್ಷಿ ಮತ ಕೇಳಿದ್ದೇವೆ– ಡಿಕೆಶಿ
ಬೆಂಗಳೂರು:
‘ರಾಜ್ಯಸಭೆ ಚುನಾವಣೆ ವಿಚಾರದಲ್ಲಿ ಬೇರೆಯವರು ಏನು ಪ್ರಯತ್ನ ಮಾಡುತ್ತಿದ್ದಾರೋ ಗೊತ್ತಿಲ್ಲ. ನಾವು ಆತ್ಮಸಾಕ್ಷಿ ಮತ ಹಾಗೂ ಜಾತ್ಯತೀತ ಭಾವನೆ ಹೊಂದಿರುವವರು ನಮಗೆ ಮತ ನೀಡಬೇಕು ಎಂದು ಕೇಳಿದ್ದೇವೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿದರು.

ಸುದ್ದಿಗಾರರ ಜೊತೆ ಮಾತನಾಡಿದ ಅವರು ‘ನಾನು, ಸಿದ್ದರಾಮಯ್ಯ, ಮಲ್ಲಿಕಾರ್ಜುನ ಖರ್ಗೆ, ಬಿ.ಕೆ. ಹರಿಪ್ರಸಾದ್ ಹಾಗೂ ರಾಷ್ಟ್ರ ನಾಯಕರು ಸೇರಿ ಪಕ್ಷದಿಂದ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ತೀರ್ಮಾನಿಸಿದೆವು. ಕೆಲವು ಮಾಧ್ಯಮಗಳು ಖರ್ಗೆ ಅವರು ಜೆಡಿಎಸ್ ಜತೆ ಸಂಧಾನ ಮಾಡುತ್ತಿದ್ದಾರೆ ಎಂದು ವರದಿ ಮಾಡಿದ್ದು, ಇದು ಸತ್ಯಕ್ಕೆ ದೂರ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT