ಗುರುವಾರ, 25 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೇಕೆದಾಟು ಅಣೆಕಟ್ಟೆ ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ ಸಾಧನೆ ಶೂನ್ಯ: ಬಿಜೆಪಿ

'ಶ್ರೀಕಿಯನ್ನು ಖಾಸಗಿ ವಿಮಾನದಲ್ಲಿ ಕಳಿಸಿದ್ದು ಎಲ್ಲಿಗೆ?' ರಾಜೀವ್‌ ಪ್ರಶ್ನೆ
Last Updated 15 ಫೆಬ್ರುವರಿ 2022, 11:43 IST
ಅಕ್ಷರ ಗಾತ್ರ

ಬೆಂಗಳೂರು: ‘ಮೇಕೆದಾಟು ಅಣೆಕಟ್ಟೆ ಯೋಜನೆ ವಿಚಾರದಲ್ಲಿ ಕಾಂಗ್ರೆಸ್‌ ಏನೇನೂ ಮಾಡಿಲ್ಲ. ಅದರ ಸಾಧನೆ ಶೂನ್ಯ. ಚುನಾವಣೆಯ ಮೇಲೆ ಕಣ್ಣಿಟ್ಟೇ ಪಾದಯಾತ್ರೆ ನಡೆಸಿದರು’ ಎಂದು ಬಿಜೆಪಿಯ ಪಿ.ರಾಜೀವ್‌ಆರೋಪ ಮಾಡಿದರು. ಇದಕ್ಕೆ ಕಾಂಗ್ರೆಸ್‌ ಸದಸ್ಯರು ವಾಗ್ದಾಳಿಯ ಮೂಲಕ ತಿರುಗೇಟು ನೀಡಿದರು.

ವಿಧಾನಸಭೆಯಲ್ಲಿ ಮಂಗಳವಾರ ರಾಜೀವ್‌ ಅವರು ರಾಜ್ಯಪಾಲರ ಭಾಷಣದ ಮೇಲಿನ ವಂದನಾ ನಿರ್ಣಯ ಪ್ರಸ್ತಾವನೆಯನ್ನು ಮಂಡಿಸಿ ಮಾತನಾಡಿ, ಇದೀಗ ಪಾದಯಾತ್ರೆ ಮಾಡಿರುವ ಕಾಂಗ್ರೆಸ್‌ಗೆ 5 ವರ್ಷಗಳ ಅಧಿಕಾರ ಇದ್ದಾಗ ಏನು ಮಾಡಿತ್ತು? ಅದರ ಫಲಶ್ರುತಿ ಏನು? ಆಗ ಮೇಕೆದಾಟು ಯೋಜನೆ ಆರಂಭಿಸುವ ಬಗ್ಗೆ ಇಚ್ಛಾಶಕ್ತಿ ಏಕೆ ಪ್ರದರ್ಶಿಸಲಿಲ್ಲ ಎಂದು ಪ್ರಶ್ನಿಸಿದರು.

ವಂದನಾ ನಿರ್ಣಯದ ಮೇಲಿನ ಮೊದಲ ದಿನದ ಆರಂಭಿಕ ಚರ್ಚೆಯಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ಯುವ ಮತ್ತು ಮೊದಲ ಬಾರಿ ಆಯ್ಕೆ ಆದ ಶಾಸಕರ ವಾಕ್ಸಾಮರವೇ ಜೋರಾಗಿತ್ತು.

ಇಂತಹದ್ದೊಂದು ಯೋಜನೆ ಆರಂಭಿಸುವಾಗ ನಾಲ್ಕು ಹಂತಗಳು ಇರುತ್ತವೆ. ಮೊದಲಿಗೆ ಡಿಪಿಆರ್‌, ಪರ್ಯಾಯ ಅರಣ್ಯ ಬೆಳೆಸಲು ಜಮೀನು ಗುರುತಿಸುವುದು, ಪರಿಸರ ಇಲಾಖೆ ಮತ್ತು ಕೇಂದ್ರ ಜಲಪ್ರಾಧಿಕಾರದಿಂದ ಅನಮೋದನೆ ಪಡೆಯಬೇಕು. ನಾಲ್ಕು ಹಂತಗಳಲ್ಲಿ ಡಿಪಿಆರ್‌ ಮಾಡಿ ಕಳಿಸಿತ್ತು. ಕೇಂದ್ರ ಸರ್ಕಾರ ಕೆಲವು ಸ್ಪಷ್ಟನೆಗಳನ್ನು ಕೇಳಿತ್ತು. ಎಚ್‌.ಡಿ.ಕುಮಾರಸ್ವಾಮಿ ನೇತೃತ್ವದ ಸರ್ಕಾರ ಬಂದ ಮೇಲೆ ಪೂರ್ಣ ಪ್ರಮಾಣದಲ್ಲಿ ವಿಸ್ತೃತ ಯೋಜನಾ ವರದಿ ಸಲ್ಲಿಕೆ ಆಯಿತು. ಹಾಗಿದ್ದರೆ ಕಾಂಗ್ರೆಸ್‌ ಸಾಧನೆ ಶೂನ್ಯವಲ್ಲವೆ ಎಂದು ಕಾಲೆಳೆದರು.

ರಾಜೀವ್‌ ಅವರ ಮಾತಿಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಕಾಂಗ್ರೆಸ್‌ ಉಪನಾಯಕ ಯು.ಟಿ.ಖಾದರ್‌, ಕಾಂಗ್ರೆಸ್‌ ಸರ್ಕಾರದ ಅವಧಿಯಲ್ಲೇ ಡಿಪಿಆರ್‌ ಆಗಿತ್ತು. ಸಮ್ಮಿಶ್ರ ಸರ್ಕಾರದ ಅವಧಿಯಲ್ಲಿ ಅದರ ಪರಿಷ್ಕರಣೆ ಆಯಿತು. ಈಗ ಕೇಂದ್ರ ಸರ್ಕಾರ ಯೋಜನೆಗೆ ಅನುಮತಿ ನೀಡಬೇಕು ಎಂದರು. ಕುಣಿಗಲ್‌ ಶಾಸಕ ಡಾ.ರಂಗನಾಥ್‌ ಇದಕ್ಕೆ ಧ್ವನಿಗೂಡಿಸಿ, ಕೇಂದ್ರದಲ್ಲಿ ನಿಮ್ಮದೇ ಸರ್ಕಾರ ಇರುವಾಗಿ ಪರಿಸರ ಇಲಾಖೆಯ ಅನುಮತಿ ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದರು.

ಖಾಸಗಿ ವಿಮಾನದಲ್ಲಿ ಶ್ರೀಕಿಯನ್ನು ಕಳಿಸಿದ್ದು ಯಾರು?
2017 ರಲ್ಲಿ ಯು.ಬಿ ಸಿಟಿ ಹೊಡೆದಾಟದ ಘಟನೆಯಲ್ಲಿ ಮೊಹಮ್ಮದ್ ನಲಪಾಡ್‌ ಬಂಧಿಸಿದ ಅಂದಿನ ಸರ್ಕಾರ ಹ್ಯಾಕರ್‌ ಶ್ರೀಕಿಯನ್ನು ಬಂಧಿಸದೇ ಖಾಸಗಿ ವಿಮಾನದಲ್ಲಿ ಎಲ್ಲಿಗೆ ಮತ್ತು ಯಾರು ಕಳುಹಿಸಿದ್ದು ಎಂದು ಪಿ.ರಾಜೀವ್‌ ಪ್ರಶ್ನಿಸಿದರು.

ಬಿಟ್‌ಕಾಯಿನ್‌ ವಿಚಾರ ಬಯಲಿಗೆ ಬರಬಾರದು ಎಂಬ ಕಾರಣಕ್ಕೆ ಶ್ರೀಕಿ ಪರಾರಿಯಾಗುವಂತೆ ಮಾಡಲಾಗಿತ್ತು ಎಂದು ದೂರಿದರು. ಇದಕ್ಕೆ ಧ್ವನಿಗೂಡಿಸಿದ ಜೆಡಿಎಸ್‌ ಶಾಸಕಾಂಗ ಪಕ್ಷದ ನಾಯಕ ಎಚ್‌.ಡಿ.ಕುಮಾರಸ್ವಾಮಿ, ಬಿಟ್‌ ಕಾಯಿನ್‌ ವಿಚಾರಕ್ಕೇ ಹೊಡೆದಾಟ ಆಗಿತ್ತು ಎಂದು ನಾನೇ ಹೇಳಿದ್ದೆ. ಅಂದಿನ ಸರ್ಕಾರ ಗಂಭೀರವಾಗಿ ಪರಿಗಣಿಸಲಿಲ್ಲ ಎಂದರು.

ಶ್ರೀಕಿಯನ್ನು ಅಡಗಿಸಲು ಕಾರಣವೇನು ಎಂಬುದು ಬಯಲಿಗೆ ಬರಬೇಕು ಎಂದು ಒತ್ತಾಯಿಸಿದರು. ರಾಜೀವ್‌ ಅವರು ಮಾತುಗಳ ಬಗ್ಗೆ ಕಾಂಗ್ರೆಸ್‌ ಸದಸ್ಯರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು. ನಮ್ಮ ಸರ್ಕಾರ ಬಂದ ಮೇಲೆ ಹೈಡ್ರೋಗಾಂಜಾ ಪ್ರಕರಣದಲ್ಲಿ ಶ್ರೀಕಿಯನ್ನು ಬಂಧಿಸಲಾಯಿತು ಎಂದು ರಾಜೀವ್‌ ಹೇಳಿದರು.

ದೀಪ, ಜಾಗಟೆ ಮೌಢ್ಯವಲ್ಲವೇ?
‘ಕೋವಿಡ್‌ ಲಾಕ್‌ಡೌನ್ ಸಂದರ್ಭದಲ್ಲಿ ಪ್ರಧಾನಿ ಮೋದಿ ಜನರಿಂದ ದೀಪ ಹಚ್ಚಿಸಿದರು, ಜಾಗಟೆ ಹೊಡೆಸಿ, ಚಪ್ಪಾಳೆ ತಟ್ಟಿಸಿದರು. ಇದರಿಂದ ಕೊರೊನಾ ಹೋಯ್ತೇ’ ಎಂದು ಕಾಂಗ್ರೆಸ್‌ನ ಪ್ರಿಯಾಂಕ ಖರ್ಗೆ ಪ್ರಶ್ನಿಸಿದರು. ‘ಇವರು ಮೂಢನಂಬಿಕೆ ಬಿತ್ತಿದ್ದು ಬಿಟ್ಟರೆ ಇನ್ನೇನೂ ಮಾಡಿಲ್ಲ’ ಎಂದು ವ್ಯಂಗ್ಯವಾಡಿದರು.

ಇದಕ್ಕೆ ತಿರುಗೇಟು ನೀಡಿದ ಕೊಳ್ಳೆಗಾಲದ ಶಾಸಕ ಎನ್‌.ಮಹೇಶ್‌ ಅವರು, ‘ದೀಪ ಹಚ್ಚುವುದು, ಜಾಗಟೆ ಮತ್ತು ಚಪ್ಪಾಳೆ ತಟ್ಟುವುದರಿಂದ ಕೋವಿಡ್‌ ಹೋಗುವುದಿಲ್ಲ ಎಂಬುದು ಮೋದಿ ಅವರಿಗೂ ಗೊತ್ತು. ಆದರೆ, ಕೋರೊನಾ ವಿರುದ್ಧದ ಹೋರಾಟಕ್ಕೆ ಜನರನ್ನು ಒಗ್ಗೂಡಿಸುವುದುದೇ ಅವರ ಉದ್ದೇಶವಾಗಿತ್ತು. ಗುಣಕ್ಕೆ, ಒಳ್ಳೆಯ ಕೆಲಸಗಳಿಗೆ ಮತ್ಸರಪಡಬೇಕಾಗಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT