ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಾಸನ | ಜೆಡಿಎಸ್- ಬಿಜೆಪಿ ಸಂಘರ್ಷ ತಾರಕಕ್ಕೆ; ಜಟಾಪಟಿಗೆ ಕಾರಣವಾದ ‘ಅಭಿವೃದ್ಧಿ’

Last Updated 13 ಮೇ 2022, 6:17 IST
ಅಕ್ಷರ ಗಾತ್ರ

ಹಾಸನ: ಹಾಸನ ವಿಧಾನಸಭಾ ಕ್ಷೇತ್ರದಲ್ಲಿ ಕೈಗೊಂಡಿರುವ ಅಭಿವೃದ್ಧಿ ಕಾಮಗಾರಿಗಳು, ಶಾಸಕರಾದ ಪ್ರೀತಂ ಗೌಡ ಮತ್ತು ಎಚ್.ಡಿ.ರೇವಣ್ಣ ನಡುವೆ ಬಹಿರಂಗ ವಾಕ್ಸಮರಕ್ಕೆ ಎಡೆಮಾಡಿಕೊಟ್ಟಿವೆ.

ಜಿಲ್ಲಾ ಕೇಂದ್ರವನ್ನು ಹಿಡಿತಕ್ಕೆ ತೆಗೆದುಕೊಳ್ಳಲೇಬೇಕೆಂದು ಹಠಕ್ಕೆ ಬಿದ್ದಿರುವ ಹೊಳೆನರಸೀಪುರ ಕ್ಷೇತ್ರದ ಶಾಸಕ ಎಚ್.ಡಿ.ರೇವಣ್ಣ, ಅಭಿವೃದ್ಧಿ ಕಾಮಗಾರಿ, ಚಟುವಟಿಕೆಗಳ ಮೇಲೆ ಹದ್ದಿನ ಕಣ್ಣಿಟ್ಟಿದ್ದಾರೆ. ‘ಹಾಸನ ತಾಲ್ಲೂಕಿನಎರಡು ಹೋಬಳಿ ಹೊಳೆನರಸೀಪುರ ಕ್ಷೇತ್ರಕ್ಕೂ ಸೇರಿದ್ದು, ನನಗೂ ಮಾತನಾಡುವಹಕ್ಕಿದೆ’ ಎಂದು ಪ್ರತಿಪಾದಿಸುತ್ತಿದ್ದಾರೆ.

ಎಚ್.ಡಿ.ಕುಮಾರಸ್ವಾಮಿ ಮುಖ್ಯಮಂತ್ರಿ ಆಗಿದ್ದಾಗ ನಗರದ ಚನ್ನಪಟ್ಟಣ ಕೆರೆ ಅಭಿವೃದ್ಧಿಗೆ ಮಂಜೂರಾಗಿದ್ದ ₹144 ಕೋಟಿ ಅನುದಾನವನ್ನು ಆರು‌ ಕೆರೆ, ಎಂಟು ಉದ್ಯಾನಗಳ ಅಭಿವೃದ್ಧಿಗೆ ಹಂಚಿರುವುದು ಅವರನ್ನು ಕೆರಳಿಸಿದೆ. ಕೆರೆ ವಿಚಾರದಿಂದ ಆರಂಭವಾದ ವಿರೋಧ, ತಾಲ್ಲೂಕು ಕಚೇರಿ ಕಟ್ಟಡದ ದಿಢೀರ್‌ ನೆಲಸಮ ವಿವಾದಕ್ಕೆ ಬಂದು ನಿಂತಿದೆ. ‘ಕಾಮಗಾರಿ ಮಾಡಿಯೇ ತೀರುತ್ತೇನೆ’ ಎಂದು ಪ್ರೀತಂ ಗೌಡರೂ ಹಠಕ್ಕೆ ಬಿದ್ದಿದ್ದಾರೆ.

ಕುಮಾರಸ್ವಾಮಿ ನೇತೃತ್ವದ ಜೆಡಿಎಸ್–ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದಲ್ಲಿಬಹುತೇಕ ಅಭಿವೃದ್ಧಿ ಕಾಮಗಾರಿಗಳು ಮಂಜೂರಾಗಿದ್ದವು. ಆ ನಂತರಅಧಿಕಾರಕ್ಕೆ ಬಂದ ಬಿಜೆಪಿ ಸರ್ಕಾರ ಅನುದಾನ ತಡೆ ಹಿಡಿದಿತ್ತು.‌ ನಂತರ ಪ್ರೀತಂ ಗೌಡರ ಸತತ ಪ್ರಯತ್ನದಿಂದ ಹಂತಹಂತವಾಗಿಅನುದಾನ ಬಿಡುಗಡೆ ಆಗಲಾರಂಭಿಸಿತ್ತು.

ಕ್ಷೇತ್ರದಲ್ಲಿ ನಡೆಯುತ್ತಿರುವ ಅಭಿವೃದ್ಧಿ ಕಾಮಗಾರಿಗಳ ಪೈಕಿ ಮಹಾರಾಜ ಉದ್ಯಾನ, ವಿಮಾನನಿಲ್ದಾಣ, ತಾಲ್ಲೂಕು ಕಚೇರಿ, ಟ್ರಕ್‌ ಟರ್ಮಿನಲ್, ಚನ್ನಪಟ್ಟಣ ಕೆರೆ ಅಭಿವೃದ್ಧಿ ಕಾಮಗಾರಿಗೆಜೆಡಿಎಸ್‌ ತೀವ್ರ ವಿರೋಧ ವ್ಯಕ್ತಪಡಿಸಿದೆ.

‘ಶಿವಮೊಗ್ಗದ ಮಾದರಿಯಲ್ಲಿ ವಿಮಾನ ನಿಲ್ದಾಣ ನಿರ್ಮಿಸದಿರುವುದು, ಸುಸ್ಥಿತಿಯಲ್ಲಿದ್ದತಾಲ್ಲೂಕು ಕಚೇರಿ ಕಟ್ಟಡ ಕೆಡವಿರುವುದು, ಪಾರ್ಕ್‌ನಲ್ಲಿ ಕಟ್ಟಡಗಳ ನಿರ್ಮಾಣ, ಹೇಮಗಂಗೋತ್ರಿ ವಿದ್ಯಾರ್ಥಿನಿಯರ ಹಾಸ್ಟೆಲ್ ಬಳಿ ಟ್ರಕ್‌ ಟರ್ಮಿನಲ್‌ ನಿರ್ಮಿಸುತ್ತಿರುವುದುಸರಿಯಲ್ಲ’ ಎಂಬುದು ಜೆಡಿಎಸ್ ವಾದ.

ಈ ನಡುವೆಯೇ ಹಾಸನ ತಾಲ್ಲೂಕು ಕಚೇರಿ ಕಟ್ಟಡವನ್ನು ರಾತ್ರೋರಾತ್ರಿ ನೆಲಸಮಗೊಳಿಸಲಾಯಿತು. ಹಳೆಯ ಕಟ್ಟಡ ಒಡೆಯದೆ ಹಿಂಭಾಗದ ಜಾಗದಲ್ಲಿ ಕಟ್ಟಡ ನಿರ್ಮಿಸಬೇಕೆಂದು ರೇವಣ್ಣಆಗ್ರಹಿಸಿದ್ದರು. ಟ್ರಕ್ ಟರ್ಮಿನಲ್‌ ನಿರ್ಮಾಣದ ಸಾಧಕ, ಬಾಧಕದ ಚರ್ಚೆಗಿಂತ ಶಾಸಕರ ನಡುವಿನಪ್ರತಿಷ್ಠೆಯೇ ಮೇಲುಗೈ ಪಡೆದಿದೆ. ಈ ವಿವಾದ ಈಗ ಮುಖ್ಯಮಂತ್ರಿ ಅಂಗಳದಲ್ಲಿದೆ.

‘ಕ್ಷೇತ್ರವು ಅಭಿವೃದ್ಧಿ ಹೊಂದಲಿದೆ ಎಂಬ ಕಾರಣಕ್ಕೆ ವಿರೋಧಿಸುವುದು ಸರಿಯಲ್ಲ. ವಿರೋಧಿಸುವವರು ಅಭಿವೃದ್ಧಿಯ ದೃಷ್ಟಿಕೋನದಲ್ಲೂ ಆಲೋಚಿಸಬೇಕು’ ಎಂದು ರಾಜಘಟ್ಟ ನಿವಾಸಿ ಗವಿರಂಗ ಅಭಿಪ್ರಾಯಪಟ್ಟರು.

ರಾಜಕೀಯವಾಗಿ ಸೂಕ್ಷ್ಮ ಜಿಲ್ಲೆಯಾಗಿರುವ ಹಾಸನದಲ್ಲಿ ವಿವಾದಗಳು ಸುಲಭವಾಗಿ ಸುಖಾಂತ್ಯಗೊಳ್ಳುವುದಿಲ್ಲ. ವಿಧಾನಸಭೆಗೆ ಚುನಾವಣೆ ಒಂದು ವರ್ಷವಿರುವಾಗಲೇ, ತಾರಕಕ್ಕೇರಿರುವ ಸಂಘರ್ಷ ಸದ್ಯ ಕೊನೆಗೊಳ್ಳುವ ಲಕ್ಷಣಗಳಂತೂ ಕಾಣುತ್ತಿಲ್ಲ.

*

ಅಭಿವೃದ್ಧಿ ಕಾಮಗಾರಿಗೆ ವಿರೋಧವಿಲ್ಲ. ಸುಸ್ಥಿತಿಯಲ್ಲಿದ್ದ ಕಟ್ಟಡವನ್ನು ಹಣ ಮಾಡಲೆಂದೇ ರಾತ್ರೋರಾತ್ರಿ ಉರುಳಿಸಲಾಗಿದೆ. ಜನರವಿರೋಧದ ನಡುವೆ ಕಾಮಗಾರಿ ಮಾಡುವುದು ಸರಿಯೇ?
-ಎಚ್.ಡಿ.ರೇವಣ್ಣ,ಹೊಳೆನರಸೀಪುರ ಕ್ಷೇತ್ರದ ಶಾಸಕ

*

ಅಭಿವೃದ್ಧಿ ಕಾರ್ಯಗಳನ್ನು ಜೆಡಿಎಸ್ ರಾಜಕೀಯ ದುರುದ್ದೇಶದಿಂದ ವಿರೋಧಿಸುತ್ತಿದೆ. ನನ್ನ ಕ್ಷೇತ್ರದಲ್ಲಿ ನನ್ನದೇ ನಿರ್ಧಾರ. ಕಮಿಷನ್ ಆರೋಪ ಆಧಾರರಹಿತ.
-ಪ್ರೀತಂ ಗೌಡ,ಹಾಸನ ಕ್ಷೇತ್ರದ ಶಾಸಕ

*

ಶೇ 40 ಕಮಿಷನ್‌ಗಾಗಿಯೇ ಶಾಸಕ ಪ್ರೀತಂ ಗೌಡ ಹಾಸನ ಹೊರವಲಯದಲ್ಲಿ ಟ್ರಕ್ ಟರ್ಮಿನಲ್ ನಿರ್ಮಾಣಕ್ಕೆ ಮುಂದಾಗಿದ್ದಾರೆ. ಸಾರ್ವಜನಿಕರ ಹಿತಕ್ಕಲ್ಲ .
-ಕೆ.ಪಿ.ಶಿವಕುಮಾರ್, ಆಮ್‌ ಆದ್ಮಿ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT