ಮಂಗಳವಾರ, 23 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಗೆ ಬಿಜೆಪಿ ಶಾಸಕರ ಅಹವಾಲು ಸಲ್ಲಿಕೆ

Last Updated 30 ಸೆಪ್ಟೆಂಬರ್ 2021, 15:37 IST
ಅಕ್ಷರ ಗಾತ್ರ

ಬೆಂಗಳೂರು: ‘ಕುಡಿಯುವ ನೀರು, ನರೇಗಾ, ಜಾನುವಾರುಗಳಿಗೆ ಮೇವು ಮತ್ತು ಕೆರೆಗಳಿಗೆ ನೀರು ತುಂಬಿಸುವ ಕಾಮಗಾರಿಗಳ ಪೈಕಿ ಅತ್ಯಗತ್ಯ ಕಾಮಗಾರಿಗಳಿಗೆ ಆದ್ಯತೆ ಮೇರೆಗೆ ಅನುದಾನ ಬಿಡುಗಡೆ ಮಾಡುತ್ತೇನೆ’ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಬಿಜೆಪಿ ಶಾಸಕರಿಗೆ ಭರವಸೆ ನೀಡಿದರು.

ಪಕ್ಷದ ಶಾಸಕರ ಅಹವಾಲು ಆಲಿಕೆಗೆ ಗುರುವಾರ ಅರ್ಧ ದಿನ ಮೀಸಲಿಟ್ಟ ಬೊಮ್ಮಾಯಿ, ಪ್ರತಿಯೊಬ್ಬರ ಬೇಡಿಕೆಯನ್ನು ಕೇಳಿಸಿಕೊಂಡರು.

‘ಕೋವಿಡ್‌ ಸಂಕಷ್ಟ ಮತ್ತು ಆರ್ಥಿಕ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಅತಿ ಮುಖ್ಯ ಕಾಮಗಾರಿಗಳ ಬೇಡಿಕೆಗಳ ಪಟ್ಟಿಯನ್ನು ಮಾತ್ರ ಸಲ್ಲಿಸಿದರೆ ಅದಕ್ಕೆ ಪೂರಕವಾಗಿ ಹಂತ– ಹಂತವಾಗಿ ಅನುದಾನ ಬಿಡುಗಡೆ ಮಾಡಲಾಗುವುದು’ ಎಂದು ಹೇಳಿದರು.

‘2023 ರಲ್ಲಿ ವಿಧಾನಸಭಾ ಚುನಾವಣೆ ಎದುರಿಸಬೇಕಾಗಿರುವುದರಿಂದಕುಡಿಯುವ ನೀರು, ಗ್ರಾಮೀಣ ರಸ್ತೆಗಳು, ವಿದ್ಯುತ್‌ ಮೂಲಸೌಕರ್ಯ, ಜಾನುವಾರುಗಳಿಗೆ ಮೇವು ಮತ್ತು ಕೆರೆಗಳಿಗೆ ನೀರು ತುಂಬಿಸುವುದೂ ಸೇರಿ ವಿವಿಧ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಅನುದಾನ ಬಿಡುಗಡೆ ಮಾಡಲೇಬೇಕು. ಇಲ್ಲವಾದರೆ ಕ್ಷೇತ್ರದ ಜನರಿಗೆ ಉತ್ತರ ಹೇಳುವುದು ಕಷ್ಟ’ ಎಂದು ಶಾಸಕರು ಮುಖ್ಯಮಂತ್ರಿಯವರ ಬಳಿ ಅಳಲು ತೋಡಿಕೊಂಡರು.

ಉತ್ತರ ಕರ್ನಾಟಕದ ಭಾಗಗಳೂ ಸೇರಿದಂತೆ ಕುಡಿಯುವ ನೀರಿನ ತೀವ್ರ ಸಮಸ್ಯೆ ಇರುವ ಪ್ರದೇಶಗಳಿಗೆ ಹೆಚ್ಚಿನ ಅನುದಾನದ ಅಗತ್ಯತೆ ಇದೆ. ನೀರಿನ ಲಭ್ಯತೆ, ನೀರು ಪೂರೈಕೆಗೆ ಬೇಕಾಗುವ ಮೊತ್ತದ ಬಗ್ಗೆ ವರದಿಯೊಂದನ್ನು ಸಿದ್ಧಪಡಿಸಿಕೊಂಡು ಜಿಲ್ಲಾಧಿಕಾರಿಗಳ ಜತೆ ಚರ್ಚಿಸಿ. ಅದಕ್ಕೆ ಪೂರಕವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಬೊಮ್ಮಾಯಿ ಹೇಳಿದರು.

‘ಶಾಸಕರ ಮಧ್ಯೆ ತಾರತಮ್ಯ ಮಾಡುವುದಿಲ್ಲ. ಯಾರನ್ನೂ ನಿರ್ಲಕ್ಷಿಸುವುದೂ ಇಲ್ಲ. ಎಲ್ಲ ಶಾಸಕರ ಕ್ಷೇತ್ರಗಳೂ ಅಭಿವೃದ್ಧಿ ಆಗಬೇಕು ಎಂಬುದು ನನ್ನ ಬಯಕೆ. ಕೆಲವೊಂದು ಕಾಮಗಾರಿಗಳಿಗೆ ತಕ್ಷಣವೇ ಅನುದಾನ ನೀಡಲು ಸಾಧ್ಯವಾಗದು. ಅಗತ್ಯವಾಗಿ ಆಗಲೇಬೇಕಾಗಿರುವ ಕಾಮಗಾರಿಗಳ ಪಟ್ಟಿ ನೀಡಿದರೆ ಕಾಲಮಿತಿಯಲ್ಲಿ ಹಣಕಾಸಿನ ಲಭ್ಯತೆ ನೋಡಿಕೊಂಡು ಅನುದಾನ ಬಿಡುಗಡೆಗೆ ಪ್ರಯತ್ನಿಸುತ್ತೇನೆ’ ಎಂದು ಭರವಸೆ ನೀಡಿದರು.

ಭರವಸೆಯಂತೆ ಸಭೆ

ತಾವು ರಾಜ್ಯದ ಯಾವುದೇ ಭಾಗದಲ್ಲಿದ್ದರೂಪ್ರತಿ ಗುರುವಾರ ಪಕ್ಷದ ಶಾಸಕರ ಭೇಟಿಗೆ ಸಮಯ ಮೀಸಲಿಡುವುದಾಗಿ ಶಾಸಕಾಂಗ ಪಕ್ಷದ ಸಭೆಯಲ್ಲಿ ಭರವಸೆ ನೀಡಿದ್ದರು. ಅಧಿವೇಶನದ ಬಳಿಕ ಮೊದಲ ಗುರುವಾರ ತಮ್ಮ ನಿವಾಸದಲ್ಲಿ ಅರ್ಧ ದಿನ ಶಾಸಕರಿಗಾಗಿ ಸಮಯ ಮೀಸಲಿಟ್ಟು ಅಹವಾಲು ಆಲಿಸಿದರು.

ಶಾಸಕರಾದ ಅಮೃತ ದೇಸಾಯಿ, ಮಸಾಲೆ ಜಯರಾಂ, ಬೆಳ್ಳಿ ಪ್ರಕಾಶ್‌, ಎಸ್‌.ರಘು, ರವಿಸುಬ್ರಹ್ಮಣ್ಯ, ಮಾಡಾಳು ವಿರೂಪಾಕ್ಷಪ್ಪ, ಉದಯ್ ಗರುಡಾಚಾರ್‌, ಸತೀಶ್‌ ರೆಡ್ಡಿ, ಉಮಾನಾಥ ಕೋಟ್ಯಾನ್‌, ಪ್ರೀತಂ ಗೌಡ, ರಘುಪತಿ ಭಟ್, ಪೂರ್ಣಿಮಾ ಶ್ರೀನಿವಾಸ್‌, ಪರಣ್ಣ ಮುನವಳ್ಳಿ, ವಿಧಾನಪರಿಷತ್‌ ಸದಸ್ಯ ಎಚ್‌.ವಿಶ್ವನಾಥ್‌ ಅವರೂ ಮುಖ್ಯಮಂತ್ರಿಯವರನ್ನು ಭೇಟಿಯಾದರು.

ಈ ಹಿಂದೆ ಯಡಿಯೂರಪ್ಪ ಮುಖ್ಯಮಂತ್ರಿ ಆಗಿದ್ದಾಗ ಶಾಸಕರ ಭೇಟಿಗೆ ಅವಕಾಶ ಸಿಗುತ್ತಿರಲಿಲ್ಲ. ಯಾವುದೇ ಕೆಲಸಕ್ಕಾದರೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಬಳಿಯೇ ಹೋಗಬೇಕಾಗುತ್ತಿತ್ತು ಎಂಬ ಅಸಮಾಧಾನ ಶಾಸಕರಲ್ಲಿತ್ತು. ಆ ಅಸಮಾಧಾನ ತೊಡೆದು ಹಾಕುವ ನಿಟ್ಟಿನಲ್ಲಿ ಪ್ರತಿ ಗುರುವಾರ ಶಾಸಕರ ಭೇಟಿಗೆ ಅವಕಾಶ ನೀಡಲಾಗಿದೆ.

ಬೆಂಗಳೂರು ವೀಕ್ಷಣೆಗೆ ಸಲಹೆ

ಬೆಂಗಳೂರು ನಗರದಲ್ಲಿ ರಸ್ತೆ ಮತ್ತು ಬೆಸ್ಕಾಂ ಕಾಮಗಾರಿಗಳನ್ನು ಮುಂದಿನ ಮಳೆಗಾಲಕ್ಕೆ ಮೊದಲೇ ಮುಗಿಸಬೇಕು. ನಗರದ ಸ್ಥಿತಿಗತಿಯನ್ನು ಅರಿತುಕೊಳ್ಳಲು ಬೆಂಗಳೂರು ವೀಕ್ಷಣೆ ಮಾಡಬೇಕು ಎಂದು ಮುಖ್ಯಮಂತ್ರಿಯವರಿಗೆ ಮನವಿ ಮಾಡಿದ್ದಾಗಿ ಶಾಸಕ ರವಿಸುಬ್ರಹ್ಮಣ್ಯ ‘ಪ್ರಜಾವಾಣಿ’ಗೆ ತಿಳಿಸಿದರು.

‘ಮುಖ್ಯಮಂತ್ರಿಯವರು ಶಾಸಕರ ಅಹವಾಲು ಕೇಳಲು ನಿರ್ದಿಷ್ಟ ದಿನ ನಿಗದಿ ಮಾಡಿರುವುದು ಒಳ್ಳೆಯದೇ ಆಗಿದೆ. ಕ್ಷೇತ್ರಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ನಾವು ಹೇಳಿಕೊಳ್ಳಬಹುದು. ಇದೊಂದು ಉತ್ತಮ ಬೆಳವಣಿಗೆ’ ಎಂದು ಅವರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT