ಸೋಮವಾರ, ಮೇ 23, 2022
30 °C

ಸಿದ್ದರಾಮಯ್ಯ ಕಾಲಿಗೆ ಬಿದ್ದ ಬಿಜೆಪಿ ಶಾಸಕರು

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಬಿಜೆಪಿಯ ಇಬ್ಬರು ಶಾಸಕರು ಸೇರಿದಂತೆ ಹಲವರು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾಲಿಗೆ ಬಿದ್ದ ‍ಪ್ರಸಂಗ ವಿಧಾನಸಭೆ ಮೊಗಸಾಲೆಯಲ್ಲಿ ಮಂಗಳವಾರ ನಡೆಯಿತು.

ಕಲಾಪ ನಡೆಯುತ್ತಿದ್ದಾಗಲೇ ಚಹಾ ಕುಡಿಯುವ ಸಲುವಾಗಿ ವಿಧಾನಪರಿಷತ್ತಿನ ಸದಸ್ಯ ಸಿ.ಎಂ. ಇಬ್ರಾಹಿಂ ಜತೆಯಲ್ಲಿ ಸಿದ್ದರಾಮಯ್ಯ ಮೊಗಸಾಲೆಗೆ ಬಂದರು. ಆ ಹೊತ್ತಿನಲ್ಲಿ ಕಡೂರು ಶಾಸಕ ಬೆಳ್ಳಿ ಪ್ರಕಾಶ್‌ ಜತೆ ಬಿಜೆಪಿ, ಕಾಂಗ್ರೆಸ್ ಸದಸ್ಯರು ಹರಟೆ ಹೊಡೆಯುತ್ತಿದ್ದರು. ಸಿದ್ದರಾಮಯ್ಯ ಅವರನ್ನು ನೋಡುತ್ತಿದ್ದಂತೆ ಎಲ್ಲರೂ ಅವರ ಮುಂದೆ ನಿಂತರು.

ಆಗ, ಜಗಳೂರು ಕ್ಷೇತ್ರದ ಬಿಜೆಪಿ ಶಾಸಕ ಎಸ್‌.ವಿ. ರಾಮಚಂದ್ರ ಅವರು ಸಿದ್ದರಾಮಯ್ಯ ಅವರ ಪಾದದವರೆಗೆ ಬಗ್ಗಿ ನಮಸ್ಕರಿಸಿದರು. ಸುರಪುರದ ಬಿಜೆಪಿ ಶಾಸಕ ರಾಜೂಗೌಡ ಹಾಗೂ ಕೊಪ್ಪಳದ ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ ಕೂಡ ಅದೇ ಹಾದಿ ತುಳಿದರು. 

ದೇಶಪಾಂಡೆ ಆಕ್ಸಿಜನ್ ಪ್ರಮಾಣ 98
’ಕಾಂಗ್ರೆಸ್‌ನ ಹಿರಿಯ ಶಾಸಕ ಆರ್‌.ವಿ.ದೇಶಪಾಂಡೆ ಅವರ ರಕ್ತದಲ್ಲಿ ಆಕ್ಸಿಜನ್‌ ಪ್ರಮಾಣ 98 ಇದೆ. ಅವರು ನೂರು ವರ್ಷ ಬದುಕುವುದು ಖಚಿತ‘ ಎಂದು ಸಿದ್ದರಾಮಯ್ಯ ಹೇಳಿದಾಗ ವಿಧಾನಸಭೆಯಲ್ಲಿ ನಗುವಿನ ಅಲೆ ಎದ್ದಿತು. 

’ಕೋವಿಡ್‌ ಪೀಡಿತರ ರಕ್ತದಲ್ಲಿ ಆಕ್ಸಿಜನ್‌ ಪ್ರಮಾಣ 90ಕ್ಕಿಂತ ಕಡಿಮೆ ಇಳಿಯದಂತೆ ನೋಡಿಕೊಳ್ಳಬೇಕು. ರಕ್ತದಲ್ಲಿ ಆಕ್ಸಿಜನ್‌ ಪ್ರಮಾಣವನ್ನು ದಿನ ತಪಾಸಣೆ ನಡೆಸಬೇಕು. ಈಚೆಗೆ ತಪಾಸಣೆ ನಡೆಸಿದಾಗ ನಮ್ಮದ್ದೆಲ್ಲ 92–94ರ ಆಸುಪಾಸಿನಲ್ಲಿದ್ದರೆ, ದೇಶಪಾಂಡೆ ಅವರದ್ದು 98 ಇತ್ತು‘ ಎಂದರು. 

'ಕೆಪಿಸಿಸಿ’ಗೆ ನೇಮಕಾತಿ ಪ್ರಸ್ತಾವ!
ಪೌರಾಡಳಿತ ಇಲಾಖೆಯಲ್ಲಿ 560 ಸಿಬ್ಬಂದಿ ನೇಮಕಾತಿಗೆ ಕೆಪಿಸಿಸಿಗೆ (ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ) ಪ್ರಸ್ತಾವ ಕಳುಹಿಸಲಾಗಿದೆ ಎಂದು ಪೌರಾಡಳಿತ ಸಚಿವ ನಾರಾಯಣ ಗೌಡ ಮಂಗಳವಾರ ವಿಧಾನ ಪರಿಷತ್‌ನಲ್ಲಿ ಹೇಳಿದ್ದು ರಾಜಕೀಯ ಚರ್ಚೆಗೆ ಕಾರಣವಾಯಿತು.

ಸಚಿವರು, ‘ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್‌ಸಿ)’ ಎನ್ನುವ ಬದಲಿಗೆ ‘ಕೆಪಿಸಿಸಿ’ ಎಂದರು. ‘ಅವರು ಮುಂದೆ ಕೆಪಿಸಿಸಿಗೆ ಬರುತ್ತಾರೆ’ ಎಂದು ಕಾಂಗ್ರೆಸ್‌ ಸದಸ್ಯರು ಛೇಡಿಸಿದರು. ‘ಕೆಪಿಸಿಸಿ ಅಲ್ಲ, ಕೆಪಿಎಸ್‌ಸಿ’ ಎಂದು ಬಿಜೆಪಿ ಸದಸ್ಯರು ತಿದ್ದುಪಡಿ ಮಾಡಿದರು.

ಸಚಿವ ಸಿ.ಟಿ. ರವಿ ಪಾಠ
ಪೌರಾಡಳಿತ, ತೋಟಗಾರಿಕೆ ಮತ್ತು ರೇಷ್ಮೆ ಇಲಾಖೆಗಳಿಗೆ ಸಂಬಂಧಿಸಿದ ಹಲವು ಪ್ರಶ್ನೆಗಳು ಮಂಗಳವಾರದ ಪ್ರಶ್ನೋತ್ತರದಲ್ಲಿ ಇದ್ದವು. ಸಚಿವ ನಾರಾಯಣ ಗೌಡ ಉತ್ತರ ನೀಡಲು ಸದನದಲ್ಲಿ ಹಾಜರಿದ್ದರು. ಅವರ ಪ‍ಕ್ಕದಲ್ಲೇ ಬಂದು ಕುಳಿತ ಪ್ರವಾಸೋದ್ಯಮ ಸಚಿವ ಸಿ.ಟಿ. ರವಿ ಪ್ರತಿ ಪ್ರಶ್ನೆಗೂ ಉತ್ತರ ಹೇಳಿಕೊಡುತ್ತಿದ್ದರು. ಹಲವು ಪ್ರಶ್ನೆಗಳಿಗೆ ರವಿ ಅವರು ಹೇಳಿಕೊಟ್ಟ ಉತ್ತರವನ್ನೇ ನಾರಾಯಣಗೌಡ ಅವರು ಪುನರುಚ್ಛರಿಸುತ್ತಿದ್ದುದು ಕಂಡುಬಂತು.

ನಾರಾಯಣ ರಾವ್ ಸ್ಥಿತಿ ಗಂಭೀರ
’ಕೊರೊನಾ ಸೋಂಕು ತಗುಲಿ ನಗರದ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಬಸವಕಲ್ಯಾಣದ ಶಾಸಕ ನಾರಾಯಣ ರಾವ್‌ ಸ್ಥಿತಿ ಗಂಭೀರವಾಗಿದೆ‘ ಎಂದು ಸಿದ್ದರಾಮಯ್ಯ ಹೇಳಿದರು.

’ಅವರಿಗೆ ತೀವ್ರ ನಿಗಾ ಘಟಕದಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಈಗ ಸ್ವಲ್ಪ ಪರಿಸ್ಥಿತಿ ಸುಧಾರಣೆಯಾಗಿದೆ. ಆದರೆ, ಐಸಿಯುವಿನಲ್ಲಿ ಇರುವ ವರೆಗೆ ಏನೂ ಹೇಳಲು ಸಾಧ್ಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ‘ ಎಂದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು