ಭಾನುವಾರ, ಏಪ್ರಿಲ್ 11, 2021
28 °C

ಬಿಎಸ್‌ವೈ ಆಡಳಿತದ ವಿರುದ್ಧ ಬಿಜೆಪಿ ಸಂಸದ ಶ್ರೀನಿವಾಸ ಪ್ರಸಾದ್‌ ವಾಗ್ದಾಳಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೈಸೂರು: ‘ಪಕ್ಷಕ್ಕಾಗಿ ದುಡಿಯೋದು ಯಾರೋ? ಸ್ವಾರ್ಥಕ್ಕೆ ಮಾಡಿಕೊಳ್ಳೋದು ಇನ್ಯಾರೋ? ತಮ್ಮ ಮನೆ ಬೆಳೆಸಿಕೊಳ್ಳೋದೇ ಆಯ್ತು. ತಮ್ಮ ಅವಧಿ ಮುಗಿಯಿತು ಎಂದು ತಪ್ಪು ಮಾಡಬಾರದು’ ಎಂದು ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌, ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೆಸರು ಪ್ರಸ್ತಾಪಿಸದೇ ಶುಕ್ರವಾರ ಇಲ್ಲಿ ಕಿಡಿಕಾರಿದರು.

ಮೈಸೂರು ಗ್ರಾಮಾಂತರ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿದರು.

‘ನಮ್ಮ ಬೆನ್ನನ್ನು ನಾವೇ ತಟ್ಟಿಕೊಳ್ಳುವುದಲ್ಲ. ನಮಗೆ ತೃಪ್ತಿ ಇರಬಹುದು. ಆದರೆ, ಜನರಲ್ಲಿ ಅತೃಪ್ತಿ ಇದೆ. ಅವರಲ್ಲಿ ಹತಾಶೆ, ನಿರಾಸೆ ಮೂಡಿದೆ. ಇದು ನನ್ನ ಅನುಭವಕ್ಕೂ ಬರುತ್ತಿದೆ. ಅಗತ್ಯ ವಸ್ತುಗಳ ಬೆಲೆ ಗಣನೀಯವಾಗಿ ಏರಿಕೆಯಾಗಿದ್ದು, ಇದು ಜನರಲ್ಲಿ ಆಡಳಿತ ವಿರೋಧಿ ಅಲೆ ಸೃಷ್ಟಿಯಾಗಲು ಕಾರಣವಾಗುತ್ತಿದೆ ಎಂಬ ವಿವೇಚನೆ ನಮ್ಮ ರಾಜ್ಯದ ಯಾವೊಬ್ಬ ನಾಯಕರಿಗೂ ಇಲ್ಲವಾಗಿದೆ. ಪಕ್ಷದ ಹಿತಕ್ಕಿಂತ ಸ್ವಾರ್ಥವೇ ಮುಖ್ಯವಾಗಿದೆ’ ಎಂದು ಅವರು ವಾಗ್ದಾಳಿ ನಡೆಸಿದರು.

ಚುನಾವಣೆಗೆ ಇನ್ನೂ ಸಮಯವಿದೆ ಎಂದುಕೊಂಡು ಜನರಿಗೆ ಕೊಟ್ಟ ಮಾತನ್ನು ಉಳಿಸಿಕೊಳ್ಳದೇ ಕಣ್ಮುಚ್ಚಿ ಕುಳಿತಿದ್ದರೆ,  ಅಧಿಕಾರದ ಅಮಲನ್ನು ತಲೆಗೇರಿಸಿಕೊಂಡರೆ ಜನರೇ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಶ್ರೀನಿವಾಸ ಪ್ರಸಾದ್‌ ಎಚ್ಚರಿಸಿದರು.

ರವಿಕುಮಾರ್‌ಗೆ ವೇದಿಕೆಯಲ್ಲೇ ತರಾಟೆ: ‘ನಾನೊಬ್ಬ ಬಿಜೆಪಿಯ ಸಕ್ರಿಯ ಕಾರ್ಯಕರ್ತ. ಕಾಂಗ್ರೆಸ್‌ನಲ್ಲಿದ್ದಾಗ ಕೆಪಿಸಿಸಿ ಅಧ್ಯಕ್ಷ ಆಗಲಿಲ್ಲ ಎಂಬುದೊಂದನ್ನು ಹೊರತುಪಡಿಸಿದರೆ ಇನ್ನುಳಿದ ಎಲ್ಲ ಜವಾಬ್ದಾರಿ ನಿಭಾಯಿಸಿ ಪಕ್ಷ ಸಂಘಟಿಸಿದವನು. ಇದುವರೆಗೆ, ನನ್ನನ್ನು ಒಂದೇ ಒಂದು ರಾಜ್ಯ ಕಾರ್ಯಕಾರಿಣಿಗೆ ಆಹ್ವಾನಿಸಿದ್ದೀರಾ? ನನ್ನ ಸಲಹೆ ಪಡೆದಿದ್ದೀರಾ?’ ಎಂದು ವೇದಿಕೆಯಲ್ಲಿದ್ದ ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಎನ್. ರವಿಕುಮಾರ್‌ ವಿರುದ್ಧ ಹರಿಹಾಯ್ದರು.

ನನಗೆ ವಿಶ್ರಾಂತಿಯ ಕಾಲ: ಹಲವು ವಿಷಯವಾಗಿ ತಮಗೆ ಬೇಸರವಾಗಿದ್ದು, ಏನನ್ನೂ ಹೇಳಿಕೊಳ್ಳುವುದಿಲ್ಲ; ಏನನ್ನೂ ಕೇಳುವುದೂ ಇಲ್ಲ ಎಂದ ಸಂಸದ ಪ್ರಸಾದ್, ‘ಈಗಾಗಲೇ ಎಲ್ಲ ಅಧಿಕಾರ ಅನುಭವಿಸಿರುವೆ. ನನಗೆ ಇನ್ನು ವಿಶ್ರಾಂತಿಯ ಕಾಲ. ಗೌರವದಿಂದ ನಿವೃತ್ತನಾಗುತ್ತೇನೆ’ ಎಂದರು.

‘ಮೈಸೂರಿನಲ್ಲಿ ನಿಮಗೆ ಗೆಲ್ಲುವ ವಿಶ್ವಾಸವಿದೆಯೇನ್ರೀ? ಸಂಘಟನೆ ಎಲ್ಲಿದೆ?’ ಎಂದು ಮತ್ತೊಮ್ಮೆ ರವಿಕುಮಾರ್‌ ಅವರನ್ನು ತರಾಟೆಗೆ ತೆಗೆದುಕೊಂಡರು.

ಕಾರ್ಯಕಾರಿಣಿಯಲ್ಲಿ ಹಾಜರಿದ್ದ ಪದಾಧಿಕಾರಿಗಳು ಸಂಸದರ ಮಾತಿಗೆ ಚಪ್ಪಾಳೆ ತಟ್ಟಿದರು.

***

ವಾಮ ಮಾರ್ಗದಿಂದ ಅಧಿಕಾರಕ್ಕೆ ಬಂದಿರುವುದನ್ನು ಒಪ್ಪಿಕೊಳ್ಳಬೇಕು. ಮತದಾರರು ಪ್ರಜ್ಞಾವಂತರಿದ್ದಾರೆ. ತಿದ್ದಿಕೊಳ್ಳದಿದ್ದರೆ ತಕ್ಕ ಪಾಠ ಕಲಿಸುತ್ತಾರೆ

-ಬಿಜೆಪಿ ಸಂಸದ ವಿ.ಶ್ರೀನಿವಾಸ ಪ್ರಸಾದ್‌

***

ಶ್ರೀನಿವಾಸ ಪ್ರಸಾದ್‌ ಬಿಜೆಪಿಯ ಸೌಭಾಗ್ಯ. ಅವರ ಭಾವನೆಗಳನ್ನು ವರಿಷ್ಠರ ಗಮನಕ್ಕೆ ತರುವೆ

-ಎನ್‌.ರವಿಕುಮಾರ್‌, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ

 

ಕೇಂದ್ರ ಬಜೆಟ್ 2021 ಪೂರ್ಣ ಮಾಹಿತಿ ಇಲ್ಲಿದೆ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು