ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

‘ಸಂಘ’ ನಿಷ್ಠ ಶಾಸಕರ ‘ಅತೃಪ್ತ’ ಸಭೆ!

ಬಿಎಸ್‌ವೈ ಕುಟುಂಬದ ಹಸ್ತಕ್ಷೇಪಕ್ಕೆ ಮುನಿಸು: ಮುಖ್ಯಮಂತ್ರಿಗೆ ಹೊಸ ತಲೆ ನೋವು
Last Updated 29 ಜನವರಿ 2021, 18:34 IST
ಅಕ್ಷರ ಗಾತ್ರ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ನೇತೃತ್ವದ ಸರ್ಕಾರದ ಕಾರ್ಯವೈಖರಿ ಬಗ್ಗೆ ಬೇಸತ್ತಿರುವ ಪಕ್ಷ ಮತ್ತು ಸಂಘ ನಿಷ್ಠರೆನಿಸಿಕೊಂಡ 15 ಕ್ಕೂ ಹೆಚ್ಚು ಬಿಜೆಪಿ ಶಾಸಕರು ಸರ್ಕಾರಕ್ಕೆ ಚುರುಕು ಮುಟ್ಟಿಸಲು ಮುಂದಾಗಿದ್ದು, ವಿಧಾನಮಂಡಲ ಕಲಾಪ ನಡೆಯುವ ಹೊತ್ತಿನಲ್ಲೇ ಪ್ರತ್ಯೇಕ ಸಭೆ ನಡೆಸಲು ಸಿದ್ಧತೆ ನಡೆಸಿದ್ದಾರೆ.

‘ಸರ್ಕಾರ ನಿರೀಕ್ಷಿತ ರೀತಿಯಲ್ಲಿ ಕಾರ್ಯ ನಿರ್ವಹಿಸದೇ ಇರುವುದು, ಸಂಪುಟ ವಿಸ್ತರಣೆಯಲ್ಲಿ ಭಾರಿ ಪ್ರಮಾಣದ ಅಸಮತೋಲನ ಆಗಿರುವ ಬಗ್ಗೆ ಈ ಶಾಸಕರು ಕಳವಳ ವ್ಯಕ್ತಪಡಿಸಿದ್ದು, ಶಾಸಕಾಂಗ ಪಕ್ಷದ ಸಭೆಯಲ್ಲಿ ತಮ್ಮ ಬೇಡಿಕೆಗಳನ್ನು ಮುಂದಿಡಲು ನಿರ್ಧರಿಸಿದ್ದಾರೆ’ ಎಂದು ಮೂಲಗಳು ತಿಳಿಸಿವೆ.

‘ಈಗಾಗಲೇ ಎರಡು ಸಭೆಗಳನ್ನು ನಡೆಸಿದ್ದು, ಸೋಮವಾರ(ಫೆ. 1) ಇನ್ನೊಂದು ಸಭೆಯನ್ನು ನಡೆಸಲಿದ್ದೇವೆ. ನಾವು ಬಂಡಾಯಗಾರರೂ ಅಲ್ಲ, ಪಕ್ಷ ವಿರೋಧಿ ಚಟುವಟಿಕೆಯನ್ನೂ ನಡೆಸುತ್ತಿಲ್ಲ. ಸರ್ಕಾರದ ವಿದ್ಯಮಾನಗಳು ತೃಪ್ತಿಕರವಾಗಿ ನಡೆಯಬೇಕು. ಪಕ್ಷ ಮತ್ತು ಸಂಘದ ಸಿದ್ಧಾಂತಕ್ಕೆ ಅನುಗುಣವಾಗಿರಬೇಕು ಎಂಬುದಷ್ಟೇ ನಮ್ಮ ಕಳಕಳಿ’ ಎಂದು ಹೆಸರು ಬಹಿರಂಗ ಪಡಿಸಲು ಇಚ್ಛಿಸದ ಶಾಸಕರೊಬ್ಬರು ಹೇಳಿದರು.

‘ಕಳೆದ ಚುನಾವಣೆಯಲ್ಲಿ ಬಹಳ ನಿರೀಕ್ಷೆ ಇಟ್ಟುಕೊಂಡಿದ್ದ ರಾಜ್ಯದ ಜನರು ಪಕ್ಷಕ್ಕೆ ಅತ್ಯಧಿಕ ಸ್ಥಾನಗಳನ್ನು ನೀಡಿದ್ದಾರೆ. ಆದರೆ, ಅದಕ್ಕೆ ತಕ್ಕಂತೆ ಆಡಳಿತ ನಡೆಯುತ್ತಿದೆಯೇ ಎಂಬ ಆತ್ಮ ವಿಮರ್ಶೆ ಮಾಡಿಕೊಳ್ಳಬೇಕಾಗಿದೆ. ಮತ ಹಾಕಿದ ಜನರು ಮತ್ತು ಅಧಿಕಾರಕ್ಕೆ ತರಲು ಶ್ರಮಿಸಿದ ಕಾರ್ಯಕರ್ತರಿಗೆ ತೃಪ್ತಿ ಆಗುವಂತೆ ಸರ್ಕಾರ ಹೆಜ್ಜೆ ಇಡುತ್ತಿದೆಯೇ ಎಂಬುದಷ್ಟೇ ನಮ್ಮ ಪ್ರಶ್ನೆ’ ಎಂದು ಹೇಳಿದರು.

‘ನಾವು ಮುಖ್ಯಮಂತ್ರಿ ಯಡಿಯೂರಪ್ಪ ಅಥವಾ ಪಕ್ಷದ ವಿರುದ್ಧ ಇಲ್ಲ. ಕೆಲವು ವಿಚಾರಗಳನ್ನು ಸರಿಪಡಿಸಬೇಕಾಗಿದೆ. ಸರ್ಕಾರ ಹಳಿಯ ಮೇಲೆ ಸಾಗಬೇಕಾಗಿದೆ. ನಾವು ಕೆಲವು ದಶಕಗಳಿಂದ ಪಕ್ಷಕ್ಕಾಗಿ ದುಡಿದಿದ್ದೇವೆ. ಆದರೆ, ನಮ್ಮ ಸರ್ಕಾರದ ನಡೆ ತೃಪ್ತಿಕರವಾಗಿಲ್ಲ ಎಂಬ ನೋವು ಇದೆ. ಸರ್ಕಾರ ಮತ್ತು ಪಕ್ಷದ ಸಂಘಟನೆ ಮಧ್ಯೆ ಸಾಮರಸ್ಯ ಇರಬೇಕು. ಪಕ್ಷ ಹಾಗೂ ಸಂಘಟನೆಯನ್ನು ನಿರ್ಲಕ್ಷಿಸಬಾರದು’ ಎಂದು ಅವರು ಹೇಳಿದರು.

ಪಕ್ಷ– ಸಂಘ ನಿಷ್ಠರ ಸಭೆಗಳಲ್ಲಿ ವಿ. ಸುನಿಲ್‌ ಕುಮಾರ್‌, ಅಪ್ಪಚ್ಚು ರಂಜನ್, ಅಭಯಪಾಟೀಲ, ಅರವಿಂದ ಬೆಲ್ಲದ, ಸತೀಶ್‌ ರೆಡ್ಡಿ ಸೇರಿ ಸುಮಾರು 15 ರಿಂದ 20 ಶಾಸಕರು ಭಾಗವಹಿಸಿದ್ದಾರೆ ಎಂದು ಮೂಲಗಳು ಹೇಳಿವೆ.

ಶಾಸಕರ ಬೇಡಿಕೆಗಳೇನು?

lಪ್ರಧಾನಿ ನರೇಂದ್ರ ಮೋದಿ ಮಾದರಿಯ ಆಡಳಿತವನ್ನು ರಾಜ್ಯದಲ್ಲೂ ನೀಡಬೇಕು. ಜಾತಿಗಳ ಓಲೈಕೆ ರಾಜಕಾರಣ ಬಿಟ್ಟು ರಾಜ್ಯದ ಸರ್ವ ಜನರ ಹಿತಕ್ಕಾಗಿ ಶ್ರಮಿಸಬೇಕು. ಅದಕ್ಕಾಗಿ ಕಾರ್ಯಕ್ರಮಗಳನ್ನು ರೂಪಿಸಬೇಕು. ಸಣ್ಣ ಪುಟ್ಟ ಜಾತಿಗಳ ಅಸಮಾಧಾನಕ್ಕೆ ಗುರಿಯಾಗಬಾರದು

lಭ್ರಷ್ಟಾಚಾರ ರಹಿತ, ಸ್ವಜನ ಪಕ್ಷಪಾತವಿಲ್ಲದ ಮತ್ತು ಕುಟುಂಬ ರಾಜಕಾರಣವನ್ನು ದೂರ ಇಡುವ ಕೆಲಸ ಆಗಬೇಕು. ಇತ್ತೀಚಿನ ದಿನಗಳಲ್ಲಿ ಭ್ರಷ್ಟಾಚಾರದ ಆರೋಪಗಳು ಕೇಳಿ ಬರುತ್ತಿವೆ. ಅದಕ್ಕೆ ಆಸ್ಪದ ನೀಡಬಾರದು. ಜನಹಿತಕ್ಕೆ ಸಂಬಂಧಿಸಿದ ನಿರ್ಧಾರ ಗಳನ್ನು ಮಾತ್ರ ಕೈಗೊಳ್ಳಬೇಕು. ಮುಖ್ಯಮಂತ್ರಿಯವರು ಕುಟುಂಬದ ಸದಸ್ಯರನ್ನು ದೂರ ಇಡಬೇಕು.

lಸರ್ಕಾರದಲ್ಲಿ ಎಲ್ಲ ಪ್ರದೇಶ ಮತ್ತು ಸಮುದಾಯ ಗಳಿಗೆ ಪ್ರಾತಿನಿಧ್ಯ ಸಮಾನವಾಗಿರಬೇಕಿತ್ತು. ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲ. ಈಗ ಸರ್ಕಾರ ಬೆಂಗಳೂರು– ಬೆಳಗಾವಿ, ಲಿಂಗಾಯತ– ಒಕ್ಕಲಿಗ ಕೇಂದ್ರಿತವಾಗಿದೆ. ಈ ಅಸಮಾನತೆಯನ್ನು ಸರಿಪಡಿಸಬೇಕು.

lಪಕ್ಷದಲ್ಲಿ ದುಡಿದ ಕಾರ್ಯಕರ್ತರಿಗೆ ನಿಗಮ–ಮಂಡಳಿಗಳಲ್ಲಿ ಅವಕಾಶ ನೀಡಬೇಕು. ಇಲ್ಲೂ ಪ್ರಾದೇಶಿಕ ಮತ್ತು ಜಾತಿ ಸಮತೋಲನಕಾಯ್ದುಕೊಳ್ಳಬೇಕು. ಈ ಮೂಲಕ ಪಕ್ಷ ನಿಷ್ಠರ ಹಿತ ಕಾಪಾಡಬೇಕು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT