ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ರಾಜ್ಯಸಭೆ ಸದಸ್ಯ ಅಶೋಕ ಗಸ್ತಿ ನಿಧನ

Last Updated 17 ಸೆಪ್ಟೆಂಬರ್ 2020, 19:18 IST
ಅಕ್ಷರ ಗಾತ್ರ

ಬೆಂಗಳೂರು: ಬಿಜೆಪಿಯ ರಾಜ್ಯಸಭಾ ಸದಸ್ಯ ಅಶೋಕ್‌ ಗಸ್ತಿ (55) ಕೋವಿಡ್‌–19 ಮತ್ತು ಬಹು ಅಂಗಾಂಗಳ ವೈಫಲ್ಯದಿಂದ ನಗರದ ಮಣಿಪಾಲ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ.

ಇದೇ 2 ರಂದು ಕೊರೊನಾ ಸೋಂಕಿನಿಂದ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದರು. ಕಳೆದ ಕೆಲವು ದಿನಗಳಿಂದ ಅವರನ್ನು ಜೀವ ರಕ್ಷಕ ವ್ಯವಸ್ಥೆಯಲ್ಲಿಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸದೇರಾತ್ರಿ 10.31ರ ವೇಳೆಗೆ ಕೊನೆಯುಸಿರೆಳೆದರು ಎಂದು ಆಸ್ಪತ್ರೆಯ ಪ್ರಕಟಣೆ ತಿಳಿಸಿದೆ.

ಅಶೋಕ ಗಸ್ತಿ ರಾಯಚೂರು ಜಿಲ್ಲೆಯವರು. ವಕೀಲರಾಗಿದ್ದ ಇವರು 1989ರಲ್ಲಿ ಬಿಜೆಪಿ ಸೇರ್ಪಡೆಯಾಗಿ, ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾದರು. 2009ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ, ನಂತರ ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾದರು. ಜಗದೀಶ ಶೆಟ್ಟರ್‌ ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದರು. ಕೊಪ್ಪಳ, ರಾಯಚೂರು ಮತ್ತು ಬಳ್ಳಾರಿ ಜಿಲ್ಲೆಗಳ ಪಕ್ಷದ ಪ್ರಭಾರಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದರು. ಸವಿತಾ ಸಮಾಜಕ್ಕೆ ಸೇರಿದ ಇವರನ್ನು ರಾಜ್ಯಸಭಾ ಸದಸ್ಯರನ್ನಾಗಿ ಮಾಡಲಾಗಿತ್ತು.

ವಿದ್ಯಾರ್ಥಿ ಪರಿಷತ್‌ ಮೂಲಕ ಸಂಘ ಪರಿವಾರಕ್ಕೆ
ರಾಯಚೂರು: ಜಿಲ್ಲೆಯ ಲಿಂಗಸುಗೂರಿನವರಾದ ಅಶೋಕ ಗಸ್ತಿ ಅವರು ಕಾಲೇಜು ಶಿಕ್ಷಣ ಹಂತದಲ್ಲಿಯೇ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಮೂಲಕ ಸಂಘ ಪರಿವಾರ ಸೇರಿದ್ದರು.

ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿ ರಾಯಚೂರಿನಲ್ಲಿ ವಕೀಲಿ ವೃತ್ತಿ ಆರಂಭಿಸಿದ್ದರು. ಇದರೊಂದಿಗೆ 1989 ರಿಂದ ಬಿಜೆಪಿಯಲ್ಲಿ ಸಕ್ರಿಯರಾಗಿದ್ದರು. 30 ವರ್ಷಗಳಿಂದ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿದ್ದರು. ಪಕ್ಷನಿಷ್ಠೆಯನ್ನು ಗುರುತಿಸಿದ ವರಿಷ್ಠರು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿದ್ದರು.

ಯುವ ಮೋರ್ಚಾ ಜಿಲ್ಲಾ ಘಟಕದ ಅಧ್ಯಕ್ಷರಾಗಿ, 2009 ರಲ್ಲಿ ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷರಾಗಿ, ಬಿಜೆಪಿ ಹಿಂದುಳಿದ ವರ್ಗಗಳ ರಾಜ್ಯ ಘಟಕದ ಪ್ರಧಾನ ಕಾರ್ಯದರ್ಶಿಯಾಗಿ ಜವಾಬ್ದಾರಿ ನಿರ್ವಹಿಸಿದ್ದಾರೆ. ಜಗದೀಶ್‌ ಶೆಟ್ಟರ್‌ ಅವರು ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದ ಅಧ್ಯಕ್ಷರಾಗಿಯೂ ಕೆಲವು ತಿಂಗಳು ಕಾರ್ಯನಿರ್ವಹಿಸಿದ್ದರು.
ದೇಶದಲ್ಲಿಯೇ ಸವಿತಾ ಸಮಾಜದಿಂದ ರಾಜ್ಯಸಭೆ ಪ್ರವೇಶಿಸಿದ ಮೊದಲ ವ್ಯಕ್ತಿ ಎನ್ನುವ ಹೆಗ್ಗಳಿಕೆಗೂ ಪಾತ್ರರಾಗಿದ್ದರು.

ಅಧಿಕಾರ ಹುಡುಕಿ ಬಂದರೂ ಅನುಭವಿಸಲಾಗಲಿಲ್ಲ
ರಾಯಚೂರು: ರಾಜಕೀಯದಲ್ಲಿ ಇದ್ದರೂ ಉನ್ನತ ಸ್ಥಾನಕ್ಕೆ ಸುಲಭವಾಗಿ ಹೋಗುತ್ತೇನೆ ಎನ್ನುವುದನ್ನು ಸ್ವತಃ ನಿರೀಕ್ಷೆ ಇಟ್ಟುಕೊಂಡಿರದ ಅಶೋಕ ಗಸ್ತಿ ಅವರನ್ನು ರಾಜ್ಯಸಭೆ ಸ್ಥಾನ ಹುಡುಕಿಕೊಂಡು ಬಂದಿತ್ತು. ಆದರೆ, ವಿಧಿಯಾಟಕ್ಕೆ ಶರಣಾದ ಅವರು ಅಧಿಕಾರ ಅನುಭವಿಸಲಾಗಲಿಲ್ಲ.

ಕಳೆದ ಜೂನ್‌ 12 ರಂದು ರಾಜ್ಯಸಭೆಗೆ ಅವಿರೋಧವಾಗಿ ಆಯ್ಕೆ ಮಾಡಿರುವುದನ್ನು ಬಿಜೆಪಿ ವರಿಷ್ಠರು ಘೋಷಿಸಿದ್ದರು. ಪಕ್ಷದೊಳಗೆ ಹಾಗೂ ಹೊರಗಡೆಯಲ್ಲೆಲ್ಲ ಅಶೋಕ ಗಸ್ತಿ ಅವರ ಆಯ್ಕೆಯು ಅಚ್ಚರಿಯನ್ನುಂಟು ಮಾಡಿತ್ತು. ಪ್ರಾಮಾಣಿಕ ದುಡಿಮೆ ಹಾಗೂ ಅಪೇಕ್ಷೆಯಿಲ್ಲದೆ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವವರನ್ನು ಬಿಜೆಪಿ ನಾಯಕರು ಗುರುತಿಸಿ ಸ್ಥಾನಮಾನ ಕೊಟ್ಟಿದ್ದಕ್ಕೆ ಅಚ್ಚರಿಯೊಂದಿಗೆ ಅಭಿನಂದನೆಗಳ ಮಹಾಪೂರವೇ ಹರಿದುಬಂದಿತ್ತು.

ರಾಜ್ಯಸಭೆಗೆ ಆಯ್ಕೆ ಮಾಡಿರುವ ಸುದ್ದಿ ಹೊರಬಿದ್ದಾಗ, ಅಶೋಕ ಗಸ್ತಿ ಅವರು ಬಳ್ಳಾರಿ ಲೋಕಸಭೆ ಕ್ಷೇತ್ರದಲ್ಲಿ ಪಕ್ಷದ ಕಾರ್ಯಕರ್ತರ ಸಭೆ ನಡೆಸುತ್ತಿದ್ದರು. ‘ಅಧಿಕಾರ ನೀಡುವಂತೆ ಯಾರಿಗೂ ಕೇಳಿರಲಿಲ್ಲ. ಆದರೆ, ಪಕ್ಷದ ವರಿಷ್ಠರು ಪ್ರಾಮಾಣಿಕತೆ ಹಾಗೂ ಬದ್ಧತೆಯನ್ನು ಗುರುತಿಸಿ ರಾಜ್ಯಸಭೆಗೆ ಹೋಗುವ ಅವಕಾಶ ಮಾಡಿದ್ದಾರೆ. ನಾಡಿನ ಸಮಸ್ಯೆಗಳನ್ನು ಸಂಸತ್‌ನಲ್ಲಿ ಬಿಂಬಿಸುವ ಪ್ರಾಮಾಣಿಕ ಕೆಲಸ ಮಾಡುತ್ತೇನೆ’ ಎಂದು ಗಸ್ತಿ ಅವರು ಪ್ರತಿಕ್ರಿಯೆ ನೀಡಿದ್ದರು. ಜುಲೈನಲ್ಲಿ ಸಂಸತ್‌ ಸದಸ್ಯರಾಗಿ ಪ್ರತಿಜ್ಞಾವಿಧಿ ಸ್ವೀಕರಿಸಿದ್ದರು.

ಅಧಿಕಾರ ಬಂದರೂ ಸರಳತೆಯನ್ನು ಬಿಟ್ಟುಕೊಡದೆ, ಸ್ನೇಹಿತರು, ಹಿತೈಷಿಗಳು ಹಾಗೂ ಆಹ್ವಾನಿಸಿದವರ ಮನೆಗಳಿಗೆ ಸ್ವತಃ ಭೇಟಿ ನೀಡುತ್ತಾ ಬಂದಿದ್ದರು. ರಾಯಚೂರು ಜಿಲ್ಲೆಯಲ್ಲಿ ನನೆಗುದಿಗೆ ಬಿದ್ದಿರುವ ಅಭಿವೃದ್ಧಿ ಕೆಲಸಗಳನ್ನು ಪೂರ್ಣ ಮಾಡುವುದಕ್ಕೆ ಕೇಂದ್ರ ಮತ್ತು ರಾಜ್ಯ ಸರ್ಕಾರಕ್ಕೆ ತಮ್ಮದೇ ಆದ ವ್ಯಾಪ್ತಿಯಲ್ಲಿ ಒತ್ತಾಯ ಮಾಡುತ್ತಾ ಬಂದಿದ್ದರು. ಜನಪರ ನಿಲುವು ಇಟ್ಟುಕೊಂಡಿದ್ದ ಅಶೋಕ ಗಸ್ತಿ ಅವರು ಇಷ್ಟು ಬೇಗ ವಿಧಿವಶ ಆಗಿರುವುದಕ್ಕೆ ಜನರಲ್ಲಿ ದುಃಖ ಮಡುಗಟ್ಟಿದೆ. ಮುಖ್ಯವಾಗಿ ಅವರ ಕುಟುಂಬದ ಸದಸ್ಯರಿಗೆ ಸರಣಿ ಸಾವುಗಳು ಆಘಾತವನ್ನುಂಟು ಮಾಡಿವೆ.

ಅಶೋಕ ಗಸ್ತಿ ಅವರು ರಾಜ್ಯಸಭೆಗೆ ಆಯ್ಕೆಯಾದ ಒಂದು ತಿಂಗಳಲ್ಲಿಯೇ ತಾಯಿಯನ್ನು ಕಳೆದುಕೊಂಡಿದ್ದರು. ಈ ದುಃಖದಲ್ಲಿ ಮುಳುಗಿರುವಾಗಲೇ ಆನಂತರದ 15 ದಿನಗಳಲ್ಲಿ ಅತ್ತೆ (ಪತ್ನಿಯ ತಾಯಿ) ಕೂಡಾ ಮೃತಪಟ್ಟರು. ಎರಡು ಸಾವುಗಳಿಂದ ಇನ್ನೂ ಅವರು ಸಾವರಿಸಿಕೊಂಡಿರಲಿಲ್ಲ. ಬಿಡುವಿಲ್ಲದ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುತ್ತಿದ್ದ ಅವರು ಜನಮಾನಸದಲ್ಲಿ ತಮ್ಮದೇ ಆದ ಸ್ಥಾನ ಪಡೆದಿದ್ದರು. ತಮ್ಮನ್ನು ಭೇಟಿ ಆಗುವುದಕ್ಕೆ ಬರುತ್ತಿದ್ದ ಜನರಿಂದ ದೂರ ಹೋಗುತ್ತಿರಲಿಲ್ಲ. ಅಭಿನಂದನೆಗಳನ್ನು ಸ್ವೀಕರಿಸುವ ಜೊತೆಗೆ ಕುಂದುಕೊರತೆಗಳನ್ನು ಹಾಗೂ ಬೇಡಿಕೆಗಳಿಗೆ ಕಿವಿಗೊಡುತ್ತಾ ಬಂದಿದ್ದರು. ಸಾಧ್ಯವಾದಷ್ಟು ಸ್ಪಂದಿಸಿ ಕೆಲಸ ಮಾಡುವುದಾಗಿ ಭರವಸೆ ನೀಡುತ್ತಿದ್ದರು. ಸ್ಪಂದಿಸುವ ಸದೃಹತೆಯನ್ನು ಮೆಚ್ಚಿಕೊಂಡಿದ್ದ ಸಾರ್ವಜನಿಕರು ಅವರಲ್ಲಿಗೆ ಹೋಗಿ ಕಷ್ಟಗಳನ್ನು ಹಂಚಿಕೊಳ್ಳುತ್ತಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT