ಮಂಗಳವಾರ, 16 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಸರಣಿ ಟ್ವಿಟ್‌ ಮೂಲಕ ಬಿಜೆಪಿ ಶಾಸಕ, ನಾಯಕರ ವಿರುದ್ಧ ಹರಿಹಾಯ್ದ ಈರಣ್ಣ ಕಡಾಡಿ

ವ್ಯಕ್ತಿಯ ತೆವಲಿಗೆ ಪಕ್ಷ ಮಣೆ ಹಾಕಬಾರದು ಎಂದ ರಾಜ್ಯಸಭಾ ಸಂಸದ
Last Updated 2 ಮಾರ್ಚ್ 2023, 19:06 IST
ಅಕ್ಷರ ಗಾತ್ರ

ಬೆಳಗಾವಿ: ‘ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಮಣೆ ಹಾಕುವ ಅಗತ್ಯವಿಲ್ಲ. ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣಕುರುಡುತನ ತೋರುವ ನಾಯಕರೂ ಭಾರಿ ಬೆಲೆ ತೆರಬೇಕಾದೀತು’ ಎಂದು ರಾಜ್ಯಸಭೆ ಸದಸ್ಯ ಈರಣ್ಣ ಕಡಾಡಿ ಟ್ವಿಟ್‌ ಮೂಲಕ ಕಿಡಿ ಕಾರಿದ್ದಾರೆ.

ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಶಾಸಕ ರಮೇಶ ಜಾರಕಿಹೊಳಿ ಸೇರಿದಂತೆ ಯಾರ ಹೆಸರನ್ನೂ ಉಲ್ಲೇಖಿಸದೆ ಅವರು ಟ್ವಿಟರ್‌ನಲ್ಲಿ ದಾಳಿ ಮಾಡಿದ್ದಾರೆ.

‘ವಿರೋಧ ಪಕ್ಷದ ಶಾಸಕರೊಬ್ಬರು ಶಿಷ್ಟಾಚಾರ ಉಲ್ಲಂಘಟನೆ ಮಾಡಿದ್ದಾರೆ ಎಂದು ಟೀಕೆ ಮಾಡುವವರು, ತಮ್ಮದೇ ಪಕ್ಷದ ಸಂಸದರನ್ನು ಅದೇ ಕಾರ್ಯಕ್ರಮದಲ್ಲಿ ಜತೆಗೂಡಿಸಿಕೊಂಡು ಹೋಗದಿರುವ ಹೃದಯ ವೈಶಾಲ್ಯತೆಗೆ ಜನ ಏನಂದಾರು ಎಂಬ ಕನಿಷ್ಠ ಜ್ಞಾನವಿರಬೇಕು‌’ ಎಂದು ದೂರಿದ್ದಾರೆ.

‘ನಮ್ಮ ಕುಟುಂಬದ ಸದಸ್ಯರು, ನಮ್ಮ ಕಚೇರಿ ಸಿಬ್ಬಂದಿ ಸರ್ಕಾರಿ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಮಾಡಬಹುದು. ಆದರೆ, ನಾನು ಹೋದಲ್ಲೆಲ್ಲ ಚುನಾಯಿತ ಪ್ರತಿನಿಧಿಗಳಿಗೂ ಅವಕಾಶ ನೀಡದಿರುವ ನಮ್ಮ ಬಗ್ಗೆ ಜನ ಏನಂದಾರು? ಎಂಬ ಕನಿಷ್ಠ ವಿವೇಚನೆ ನಮಗಿರಬೇಕು’ ಎಂದೂ ಬರೆದಿದ್ದಾರೆ.

‘ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು. ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮಣೆ ಹಾಕುವ ಅಗತ್ಯವಿಲ್ಲ’ ಎಂದೂ ಬರೆದಿದ್ದಾರೆ.

ಗೋಕಾಕದಲ್ಲಿ ಬುಧವಾರ ಶಾಸಕ ರಮೇಶ ಜಾರಕಿಹೊಳಿ ಅವರು ಘಟ್ಟಿ ಬಸವಣ್ಣ ಏತ ನೀರಾವರಿ ಯೋಜನೆ ಉದ್ಘಾಟನಾ ಸಮಾರಂಭ ಮಾಡಿದ್ದಾರೆ. ಅದಕ್ಕೆ ಈರಣ್ಣ ಕಡಾಡಿ ಅವರನ್ನು ಆಹ್ವಾನಿಸಿಲ್ಲ ಎಂದು ಮೂಲಗಳು ತಿಳಿಸಿವೆ.

ಬೆಳಗಾವಿ ತಾಲ್ಲೂಕಿನ ರಾಜಹಂಸಗಡ ಕೋಟೆಯಲ್ಲಿ ನಡೆದ ಶಿವಾಜಿ ಮಹಾರಾಜರ ಪ್ರತಿಮೆ ಉದ್ಘಾಟನೆ ಸಮಾರಂಭದಲ್ಲೂ ಅವರು ಇರಲಿಲ್ಲ.

ಈ ಬಗ್ಗೆ ಮಾಧ್ಯಮದವರಿಗೆ ಪ್ರತಿಕ್ರಿಯೆ ನೀಡಿದ ಈರಣ್ಣ ಕಡಾಡಿ, ‘₹ 4 ಕೋಟಿ ವೆಚ್ಚದ ರಾಜಹಂಸಗಡ ಕೋಟೆ ಕಾಮಗಾರಿ ಉದ್ಘಾಟನೆಗೆ ಮುಖ್ಯಮಂತ್ರಿ ಅವರನ್ನು ಕರೆಸಿದ್ದಾರೆ. ₹ 2,000 ಕೋಟಿಯ ಯೋಜನೆಗಳ ಚಾಲನೆಗೆ ಪ್ರಧಾನಿ ನರೇಂದ್ರ ಮೋದಿ ಅವರನ್ನೇ ಕರೆಸಿದ್ದೇವೆ. ಆದರೆ, ₹900 ಕೋಟಿ ವೆಚ್ಚದ ಬೃಹತ್‌ ಯೋಜನೆಗೆ ಯಾರನ್ನೂ ಕರೆಸಿಲ್ಲ. ತಮ್ಮ ಮನೆಯ ಕಾರ್ಯಕ್ರಮ ಎಂಬಂತೆ ತಾವೇ ಮಾಡಿಕೊಂಡಿದ್ದಾರೆ. ಸೌಜನ್ಯಕ್ಕೂ ನನಗೆ ಆಹ್ವಾನ ನೀಡಿಲ್ಲ. ದೊಡ್ಡ ಯೋಜನೆಗೆ ದೊಡ್ಡ ನಾಯಕರನ್ನು ಕರೆಸಿ ಪಕ್ಷದ ವರ್ಚಸ್ಸು ಬೆಳೆಸಿಕೊಳ್ಳಬಹುದಿತ್ತು. ಅವರ (ರಮೇಶ ಜಾರಕಿಹೊಳಿ) ಈ ನಡೆಯಿಂದ ನನಗೆ ಹಕ್ಯುಚ್ಯುತಿ ಆಗಿದೆ’ ಎಂದರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT