ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಶುಕ್ರವಾರ ದೇವನಹಳ್ಳಿ ರೆಸಾರ್ಟ್‌ನಲ್ಲಿ ಬಿಜೆಪಿ ಚಿಂತನ ಸಭೆ: RSS ನಾಯಕರೂ ಭಾಗಿ

Last Updated 14 ಜುಲೈ 2022, 16:10 IST
ಅಕ್ಷರ ಗಾತ್ರ

ಬೆಂಗಳೂರು: 2023 ರ ವಿಧಾನಸಭಾ ಚುನಾವಣೆಗೆ ತಯಾರಿ, ಅದಕ್ಕಾಗಿ ಪಕ್ಷದ ಸಂಘಟನೆ ಬಲಪಡಿಸುವ ಸಂಬಂಧ ಶುಕ್ರವಾರ ನಡೆಯುವ ಇಡೀ ದಿನದ ಚಿಂತನ ಸಭೆಯ ರೂಪುರೇಷೆಯ ಬಗ್ಗೆ ಗುರುವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ಸಿಂಗ್ ಮತ್ತು ಪಕ್ಷದ ರಾಜ್ಯ ಅಧ್ಯಕ್ಷ ನಳಿನ್‌ಕುಮಾರ್ ಕಟೀಲ್ ಚರ್ಚೆ ನಡೆಸಿದರು.

ದೇವನಹಳ್ಳಿ ಸಮೀಪದ ರೆಸಾರ್ಟ್‌ವೊಂದರಲ್ಲಿ ಬೆಳಿಗ್ಗೆ 9 ಕ್ಕೇ ಸಭೆ ಆರಂಭವಾಗಲಿದೆ. ಇದರಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಪ್ರಮುಖ ಮುಖಂಡರೂ ಭಾಗವಹಿಸಲಿದ್ದಾರೆ ಎಂದು ಬಿಜೆಪಿ ಮೂಲಗಳು ತಿಳಿಸಿವೆ.

ಪಕ್ಷದ ಕಚೇರಿಯಲ್ಲಿ ನಡೆದ ಪೂರ್ವಭಾವಿ ಸಭೆಯ ಬಳಿಕ ಸುದ್ದಿಗಾರರ ಜತೆ ಮಾತನಾಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ‘ನಾಳೆ ನಡೆಯುವ ಚಿಂತನ ಸಭೆಯ ಕುರಿತು ವಿಸ್ತೃತವಾಗಿ ಚರ್ಚಿಸಲಾಯಿತು. ಪಕ್ಷದ ಸಂಘಟನೆ ಬಲಪಡಿಸುವುದು, ಮುಂಬರುವ ಚುನಾವಣೆಗಳನ್ನು ಎದುರಿಸುವ ಕುರಿತು ಸಮಾಲೋಚಿಸಿ ಅಗತ್ಯ ತೀರ್ಮಾನಗಳನ್ನು ತೆಗೆದುಕೊಳ್ಳುತ್ತೇವೆ’ ಎಂದರು.

‘ಚುನಾವಣೆ ಮತ್ತು ಸಂಘಟನೆಯ ವಿಷಯವಲ್ಲದೇ, ಬೇರೆ ಬೇರೆ ವಿಷಯಗಳ ಬಗ್ಗೆಯೂ ಚರ್ಚೆ ನಡೆಸಲಾಗುವುದು. ಮುಕ್ತವಾಗಿ ಚಿಂತನೆಗೆ ಅವಕಾಶ ಮಾಡಿಕೊಟ್ಟಿದ್ದೇವೆ. ಸಭೆಯಲ್ಲಿ ಪಕ್ಷದ ಕೋರ್‌ ಕಮಿಟಿಯ ಸದಸ್ಯರು, ಸಚಿವ ಸಂಪುಟದ ಎಲ್ಲ ಸದಸ್ಯರು ಸೇರಿ 50 ಕ್ಕೂ ಹೆಚ್ಚು ಪ್ರಮುಖ ನಾಯಕರು ಭಾಗವಹಿಸಲಿದ್ದಾರೆ. ಸಭೆಯ ಬಳಿಕ ಸಂಪೂರ್ಣ ಚಿತ್ರಣ ಲಭಿಸಲಿದೆ’ ಎಂದು ಅವರು ತಿಳಿಸಿದರು.

ರಾಜ್ಯದಲ್ಲಿ ಸರ್ಕಾರದ ಕಾರ್ಯವೈಖರಿ, ಸರ್ಕಾರದ ಬಗ್ಗೆ ಜನರಿಗಿರುವ ಅಭಿಪ್ರಾಯ ಮತ್ತು ಬಿಜೆಪಿ ಚುನಾವಣೆ ಗೆಲ್ಲುವ ಸಾಮರ್ಥ್ಯ ಬಗ್ಗೆ ವಿವಿಧ ಮೂಲಗಳ ಮಾಹಿತಿಯನ್ನು ಸಭೆಯಲ್ಲಿ ಚರ್ಚಿಸಲಾಗುವುದು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸಲು ಸಾಧ್ಯವಾಗದೇ ಇದ್ದರೂ, ಲೋಕಸಭಾ ಚುನಾವಣೆಯಲ್ಲಿ 28 ರಲ್ಲಿ 25 ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತ್ತು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಬಹುಮತ ಸಾಧಿಸುವುದು ಮತ್ತು 2024 ಲೋಕಸಭಾ ಚುನಾವಣೆಯಲ್ಲಿ ಅತ್ಯಧಿಕ ಸ್ಥಾನಗಳನ್ನು ಗೆಲ್ಲುವ ರಣತಂತ್ರದ ಬಗ್ಗೆ ಚರ್ಚೆ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT