‘ಎಸ್‌ಸಿ ಸಮುದಾಯಕ್ಕೆ ಯೋಜನೆ ತಲುಪಲಿ’
ಬೆಂಗಳೂರು: ‘ಪರಿಶಿಷ್ಟ ಜಾತಿ ಮತ್ತು ಪಂಗಡಗಳ ಉಪಯೋಜನೆ (ಎಸ್‌ಸಿಪಿ) ಹಾಗೂ ಬುಡಕಟ್ಟು ಉಪಯೋಜನೆ (ಟಿಎಸ್‌ಪಿ) ಕಾಯ್ದೆಯ ನಿಯಮಗಳನ್ನು ಸರ್ಕಾರ ಹಾಗೂ ಇಲಾಖೆಗಳು ಸಂಪೂರ್ಣವಾಗಿ ಪಾಲಿಸಬೇಕು’ ಎಂದು ಸಂಸದ ಎ.ನಾರಾಯಣಸ್ವಾಮಿ ತಿಳಿಸಿದರು.
ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ವತಿಯಿಂದ ಭಾನುವಾರ ಆಯೋಜಿಸಲಾಗಿದ್ದ ಬಜೆಟ್ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
‘ಈ ಕಾಯ್ದೆಯಲ್ಲಿರುವ 7ಡಿ ಭಾಗವು ಫಲಾನುಭವಿಗಳಿಗೆ ಮಾರಕವಾಗಿದ್ದು, ಅದನ್ನು ತೆಗೆದು ಹಾಕುವಂತೆ ಹಾಗೂ ಪರಿಶಿಷ್ಟ ಜಾತಿಯವರಿಗೆ ಪೂರಕವಾದ ಯೋಜನೆಗಳನ್ನು ರೂಪಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು’ ಎಂದು ಭರವಸೆ ನೀಡಿದರು.
‘ಕಾಯ್ದೆಯ ನಿಯಮಗಳಂತೆ ಪರಿಶಿಷ್ಟ ಜಾತಿ ಜನರಿಗೆ ಯೋಜನೆಗಳ ಅನುದಾನವನ್ನು ಪೂರ್ಣ ಪ್ರಮಾಣದಲ್ಲಿ ಬಳಸಬೇಕು. ಈ ಕರ್ತವ್ಯದಲ್ಲಿ ಲೋಪ ಎಸಗಿರುವ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು. ಈ ಮೂಲಕ ಪರಿಶಿಷ್ಟ ಜಾತಿಗಳ ಅಭಿವೃದ್ಧಿಗೆ ಸರ್ಕಾರ ನೆರವಾಗಬೇಕು’ ಎಂದರು.
ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಅಧ್ಯಕ್ಷ ಚಲವಾದಿ ನಾರಾಯಣಸ್ವಾಮಿ, ‘ಪರಿಶಿಷ್ಟ ಜಾತಿಗಳ ಅಭಿವೃದ್ಧಿಗಾಗಿ ಸರ್ಕಾರ ಪ್ರಸ್ತುತ ಕಾಲಕ್ಕೆ ತಕ್ಕ ಯೋಜನೆಗಳನ್ನು ಹೆಚ್ಚು ರೂಪಿಸಬೇಕು. ಈ ಬಜೆಟ್‌ನಲ್ಲಿ ಸಮುದಾಯಕ್ಕಾಗಿ ಹೆಚ್ಚಿನ ಅನುದಾನ ಮೀಸಲಿಡುವಂತೆ ಸರ್ಕಾರಕ್ಕೆ ಕೋರುತ್ತೇನೆ’ ಎಂದು ಹೇಳಿದರು.
ಎಸ್‌ಸಿ ಮೋರ್ಚಾದ ಕಾರ್ಯದರ್ಶಿ ಎಚ್.ವೆಂಕಟೇಶ ದೊಡ್ಡೇರಿ, ‘ಸ್ವಾತಂತ್ರ್ಯ ಬಂದಾಗಿನಿಂದಲೂ ಆಳಿದ ಸರ್ಕಾರಗಳು ಸಮುದಾಯಕ್ಕೆ ಕೋಳಿ, ಹಸು, ಎಮ್ಮೆ ನೀಡುವಂತಹ ಯೋಜನೆಗಳನ್ನು ಹೆಚ್ಚಾಗಿ ಜಾರಿಗೆ ತಂದಿವೆ. ಸಮುದಾಯಕ್ಕೆ ತೆಲಂಗಾಣ ಮಾದರಿಯಲ್ಲಿ ಇಂಗ್ಲಿಷ್ ಮಾಧ್ಯಮದ ವಸತಿ ಶಾಲೆಗಳನ್ನು ತೆರೆಯುವುದು ಹಾಗೂ ನವೋದ್ಯಮಗಳಿಗೆ ಆರ್ಥಿಕ ನೆರವು ನೀಡುವಂತಹ ಯೋಜನೆಗಳು ಜಾರಿಯಾದರೆ, ಸಮುದಾಯದಿಂದಲೂ ಮಹಾನ್ ವ್ಯಕ್ತಿಗಳು ಹೊರಹೊಮ್ಮಲಿದ್ದಾರೆ’ ಎಂದರು.
ಸಮುದಾಯದ ಮುಖಂಡರಾದ ಶಂಕರಪ್ಪ, ಬಾಬು ರಾವ್ ಮುಡಬಿ ಹಾಗೂ ಇತರರು ಭಾಗವಹಿಸಿದ್ದರು.
ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ
ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್
ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.