ಗುರುವಾರ , ಆಗಸ್ಟ್ 11, 2022
21 °C
ಹಿರಿಯರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳಲು ಬಿಜೆಪಿ ರಾಜ್ಯ ಉಸ್ತುವಾರಿ ಸಲಹೆ

ಬಿಎಸ್‌ವೈಗೆ ಬಿಸಿ ಮುಟ್ಟಿಸಿದ ಅರುಣ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಮಹತ್ವದ ಮತ್ತು ಅತಿ ಸೂಕ್ಷ್ಮ ವಿಷಯಗಳ ಬಗ್ಗೆ ನಿರ್ಣಯಗಳನ್ನು ಕೈಕೊಳ್ಳುವಾಗ ಏಕಪಕ್ಷೀಯವಾಗಿ ನಡೆದುಕೊಳ್ಳಬಾರದು. ಸಂಪುಟದ ಹಿರಿಯ ಸಹೋದ್ಯೋಗಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡೇ ತೀರ್ಮಾನ ತೆಗೆದುಕೊಳ್ಳಬೇಕು’ ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರಿಗೆ ಸೂಚನೆ ನೀಡಿರುವ ರಾಜ್ಯ ಬಿಜೆಪಿ ಉಸ್ತುವಾರಿ ಅರುಣ್‌ ಸಿಂಗ್‌, ‘ಎಲ್ಲವೂ ನೀವು ಹೇಳಿದಂತೆ ನಡೆಯದು’ ಎಂಬ ಎಚ್ಚರಿಕೆಯನ್ನೂ ನೀಡಿದ್ದಾರೆ.

ಬೆಳಗಾವಿಯಲ್ಲಿ ಶುಕ್ರವಾರ ರಾತ್ರಿ ನಡೆದ ಪಕ್ಷದ ಪ್ರಮುಖರ ಸಮಿತಿ ಸಭೆಯಲ್ಲಿ ಮಾತನಾಡಿದ ಅರುಣ್‌ ‘ಎಚ್ಚರಿಕೆ ಮತ್ತು ಸಮತೋಲನದಿಂದ ನಡೆದುಕೊಳ್ಳಬೇಕೆಂದು ಸೂಚನೆ ನೀಡಿ ದರು’ ಎಂದು ಮೂಲಗಳು ತಿಳಿಸಿವೆ.

ವಿಶೇಷವಾಗಿ ನಿಗಮ–ಮಂಡಳಿಗಳ ನೇಮಕ, ಹೊಸ ನಿಗಮ–ಮಂಡಳಿಗಳ ರಚನೆ, ವೀರಶೈವ– ಲಿಂಗಾಯತ ಸಮುದಾಯವನ್ನು ಕೇಂದ್ರದ ಒಬಿಸಿ ಪಟ್ಟಿಗೆ ಸೇರಿಸುವ ವಿಷಯವನ್ನು ಉದ್ದೇಶಿಸಿ ಅವರು ಮುಖ್ಯಮಂತ್ರಿಯವರಿಗೆ ಈ ವಿಷಯವನ್ನು ನೇರವಾಗಿ ಹೇಳಿದ್ದೂ ಅಲ್ಲದೆ, ಮುಂದಿನ ದಿನಗಳಲ್ಲಿ ಈ ಕುರಿತು ದೂರುಗಳು ಬಾರದಂತೆ ಎಚ್ಚರಿಕೆ ವಹಿಸಬೇಕು ಎಂದು ಸಲಹೆ ನೀಡಿದರು.

ಇತ್ತೀಚೆಗೆ ದೆಹಲಿಯಲ್ಲಿ ರಾಜ್ಯದ ಕೆಲವು ಸಚಿವರು ಮತ್ತು ಶಾಸಕರು ಭೇಟಿ ಮಾಡಿ ರಾಜ್ಯದ ವಿದ್ಯಮಾನಗಳನ್ನು ಅರುಣ್‌ ಸಿಂಗ್‌ ಅವರ ಗಮನಕ್ಕೆ ತಂದಿದ್ದರು. ಆಗ ಗೃಹಸಚಿವ ಅಮಿತ್‌ ಶಾ ಅವರು ಮಧ್ಯಪ್ರವೇಶಿಸಿದ್ದರಿಂದಾಗಿ, ವೀರಶೈವ–ಲಿಂಗಾಯತ ಸಮುದಾಯವನ್ನು ಒಬಿಸಿ ಪಟ್ಟಿಗೆ ಸೇರಿಸುವ ಸಂಬಂಧ ಸಚಿವ ಸಂಪುಟ ಸಭೆಯಲ್ಲಿ ತೆಗೆದುಕೊಳ್ಳಬೇಕಾದ ನಿರ್ಣಯವನ್ನು ತಡೆ ಹಿಡಿಯಲಾಗಿತ್ತು.

‘ನಿಗಮ–ಮಂಡಳಿಗಳಿಗೆ ನೇಮಕ ಮಾಡುವಾಗ ಪಕ್ಷದಲ್ಲಿ ಸಾಕಷ್ಟು ದೀರ್ಘ ಕಾಲದಿಂದ ದುಡಿದವರಿಗೆ ಆದ್ಯತೆ ನೀಡ ಬೇಕು. ಈ ಉದ್ದೇಶದಿಂದ ಪಕ್ಷ ಒಂದು ಪಟ್ಟಿಯನ್ನು ನೀಡುತ್ತದೆ. ಅದನ್ನು ಗಂಭೀರವಾಗಿ ಪರಿಗಣಿಸಬೇಕು.
ಪಕ್ಷದ ಅಧ್ಯಕ್ಷರ ಜತೆ ಕುಳಿತು ಚರ್ಚೆ ನಡೆಸಿದ ನಂತರವೇ ಪಟ್ಟಿ ಆಖೈರುಗೊಳಿ ಸಬೇಕು’ ಎಂದು ಹೇಳಿದ ಸಿಂಗ್‌, ಪರೋಕ್ಷವಾಗಿ ಯಡಿಯೂರಪ್ಪ ನಿರ್ಣ ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದರು.

ಆಡಳಿತವನ್ನು ಇನ್ನಷ್ಟು ಪರಿಣಾಮಕಾರಿಯಾಗಿಸಲು ಮತ್ತು ಪಕ್ಷವನ್ನು ಹೆಚ್ಚು ಶಕ್ತಿಶಾಲಿಯಾಗಿ ಮುನ್ನಡೆಸಬೇಕಾದರೆ ಪಕ್ಷ ಹಾಗೂ ಸರ್ಕಾರದ ಮಧ್ಯೆ ಸಮನ್ವಯವಿರಬೇಕು. ಇದಕ್ಕೆ ಹೆಚ್ಚಿನ ಒತ್ತು ನೀಡುವಂತೆ ಯಡಿಯೂರಪ್ಪ ಮತ್ತು ನಳಿನ್‌ ಕುಮಾರ್‌ ಕಟೀಲ್‌ ಅವ ರನ್ನು ಉದ್ದೇಶಿಸಿ ಹೇಳಿದರು ಎಂದು ಮೂಲಗಳು ತಿಳಿಸಿವೆ.

‘ಬಿಜೆಪಿಯು ವಿಧಾನಸಭಾ ಚುನಾವಣೆಗಳಲ್ಲಿ 100 ರಿಂದ 110 ಸ್ಥಾನಗಳ ಆಸುಪಾಸಿಗೆ ಬಂದು ನಿಲ್ಲುತ್ತಿದೆ. ಸ್ಪಷ್ಟ ಬಹುಮತದ ಸಂಖ್ಯೆ ಪಡೆಯಲು ಏಕೆ ಸಾಧ್ಯವಾಗುತ್ತಿಲ್ಲ ಎಂಬ ಬಗ್ಗೆ ಆತ್ಮಾ ವಲೋಕನ ಮಾಡಿಕೊಳ್ಳಬೇಕು. ವಿಶೇಷ ವಾಗಿ ಹಳೇ ಮೈಸೂರು ಭಾಗದಲ್ಲಿ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲು ಆದ್ಯತೆ ನೀಡಬೇಕು’ ಎಂದು ಸಿಂಗ್‌ ಹೇಳಿದರು.

ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ರಾಜ್ಯ ಕಾರ್ಯಕಾರಿಣಿ ಸಭೆ ಯಲ್ಲಿ ಮಾತನಾಡಿ, ‘ಏಕಪಕ್ಷೀಯ ನಿರ್ಣಯಗಳನ್ನು ತೆಗೆದುಕೊಳ್ಳಬಾರದು. ನಮ್ಮದು ರಾಷ್ಟ್ರೀಯ ಪಕ್ಷವೇ ಹೊರತು ಏಕವ್ಯಕ್ತಿಯ ಪಕ್ಷವಲ್ಲ’
ಎಂದರೆಂದು ಮೂಲಗಳು ತಿಳಿಸಿವೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು