ಶನಿವಾರ, ನವೆಂಬರ್ 28, 2020
25 °C

ಮೇಲ್ಮನೆ: ಬಿಜೆಪಿಗೆ ಬಹುಮತ ಸದ್ಯಕ್ಕಿಲ್ಲ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ವಿಧಾನ ಪರಿಷತ್ತು–ಸಂಗ್ರಹ ಚಿತ್ರ

ಬೆಂಗಳೂರು: ವಿಧಾನ ಪರಿಷತ್ತಿನ ನಾಲ್ಕು ಸ್ಥಾನಗಳಿಗೆ ನಡೆದ ಚುನಾವಣೆಯಲ್ಲಿ ಎಲ್ಲ ಸ್ಥಾನಗಳನ್ನೂ ಗೆದ್ದರೂ ಬಿಜೆಪಿ ಪರಿಷತ್ತಿನಲ್ಲಿ ಸದ್ಯಕ್ಕಂತೂ ಬಹುಮತ ಪಡೆಯಲು ಸಾಧ್ಯವಿಲ್ಲ.

ಪರಿಷತ್ತಿನ ಒಟ್ಟು ಸದಸ್ಯರ ಬಲ 75 ಸ್ಥಾನಗಳು. ಈಗ ಬಿಜೆಪಿ 27, ಕಾಂಗ್ರೆಸ್‌ 28 ಮತ್ತು ಜೆಡಿಎಸ್‌ 14 ಸದಸ್ಯರ ಬಲವನ್ನು ಹೊಂದಿವೆ. ಕಾಂಗ್ರೆಸ್‌ ಮತ್ತು ಜೆಡಿಎಸ್‌ ಸದಸ್ಯರ ಸಂಖ್ಯೆಯನ್ನು ಒಟ್ಟುಗೂಡಿಸಿದರೆ, ಬಿಜೆಪಿಗಿಂತಲೂ ಅಧಿಕ ಸ್ಥಾನವನ್ನು ಹೊಂದಿವೆ.

ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ನಾಲ್ಕೂ ಸ್ಥಾನಗಳನ್ನೂ ಗೆದ್ದರೂ ಮೇಲ್ಮನೆಯಲ್ಲಿ ಬಹುಮತ ಪಡೆಯಲು ಸಾಧ್ಯವಿಲ್ಲ. ಬಹುಮತಕ್ಕೆ 37 ಸ್ಥಾನಗಳ ಅಗತ್ಯವಿದ್ದು, ಸದ್ಯಕ್ಕೆ ಅದು ಸಾಕಾರವಾಗುವ ಸಾಧ್ಯತೆ ಇಲ್ಲ.

ವಿಧಾನಸಭೆಯಲ್ಲಿ ಬಹುಮತ ಹೊಂದಿರುವ ಬಿಜೆಪಿ ನೇತೃತ್ವದ ಸರ್ಕಾರ ಮಹತ್ವದ ಮಸೂದೆಗಳನ್ನು ಮೇಲ್ಮನೆಗೆ ತಂದಾಗ ವಿರೋಧ ಪಕ್ಷಗಳು ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಮಸೂದೆಗಳನ್ನು ಸೋಲಿಸಬಹುದು. ಕಳೆದ ಅಧಿವೇಶನದಲ್ಲಿ  ಮಹತ್ವದ ಮೂರು ಸುಗ್ರೀವಾಜ್ಞೆಯ ಮಸೂದೆಗಳು ಪರಿಷತ್ತಿನಲ್ಲಿ ಅಂಗೀಕಾರವಾಗದೇ ನಿರರ್ಥಕಗೊಂಡವು. ಅದರಲ್ಲಿ ಒಂದು ಮತದಾನದಲ್ಲಿ ಸೋಲಾದರೆ, ಉಳಿದ ಎರಡು ಮಸೂದೆಗಳು ಮಂಡನೆ ಆಗಲಿಲ್ಲ.

ಒಂದು ವೇಳೆ  ಬಿಜೆಪಿ ಮತ್ತು ಜೆಡಿಎಸ್ ಪರಸ್ಪರ ಕೈಜೋಡಿಸಿದರೆ ಮಾತ್ರ ಬಿಜೆಪಿ ಬಹುಮತ ಪಡೆಯಲು ಸಾಧ್ಯವಿದೆ. ಆಗ ಎರಡು ಪಕ್ಷಗಳು ಕೊಡು ಕೊಳ್ಳುವಿಕೆಗೆ ಮುಂದಾಗಬೇಕಾ ಗುತ್ತದೆ ಎಂದು ಮೂಲಗಳು ಹೇಳಿವೆ.

ರಾಜ್ಯ ನಾಯಕರ ಹೆಸರೆತ್ತದ ಯತ್ನಾಳ

ರಾಜ್ಯ ಮತ್ತು ದೇಶದ ವಿವಿಧ ರಾಜ್ಯಗಳಲ್ಲಿ ಬಿಜೆಪಿ ಗೆಲುವಿಗೆ ಹರ್ಷ ವ್ಯಕ್ತಪಡಿಸಿರುವ ಶಾಸನ ಬಸನಗೌಡ ಪಾಟೀಲ ಯತ್ನಾಳ, ರಾಜ್ಯದ ಉಪಚುನಾವಣೆಯ ಗೆಲುವಿಗೆ ರಾಜ್ಯದ ಯಾವುದೇ ನಾಯಕರನ್ನು ಅಭಿನಂದಿಸಿಲ್ಲ.

ಈ ಗೆಲುವಿಗೆ ಪ್ರಧಾನಿ ನರೇಂದ್ರಮೋದಿ, ಗೃಹ ಸಚಿವ ಅಮಿತ್ ಶಾ ಮತ್ತು ಪಕ್ಷದ ರಾಷ್ಟ್ರೀಯ ಅಧ್ಯಕ್ಷರಿಗೆ ಅಭಿನಂದನೆ ಸಲ್ಲಿಸಿದ್ದಾರೆ. ಆದರೆ, ಮುಖ್ಯಮಂತ್ರಿ ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ನಳಿನ್‌ ಕುಮಾರ್‌ ಕಟೀಲ್‌ ಅವರ ಹೆಸರನ್ನು ತಮ್ಮ ಟ್ವೀಟ್‌ನಲ್ಲಿ ಪ್ರಸ್ತಾಪಿಸಿಲ್ಲ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.

ಈ ವಿಭಾಗದಿಂದ ಇನ್ನಷ್ಟು