ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಬಿಜೆಪಿ ಸಾಧನೆ ಮತದಾರನ ಮುಟ್ಟಲಿ : ತೇಜಸ್ವಿ ಸೂರ್ಯ

ವಿಶೇಷ ಕಾರ್ಯಕಾರಿಣಿಯಲ್ಲಿ ಬಿಜೆಪಿ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕರೆ
Last Updated 22 ನವೆಂಬರ್ 2022, 14:14 IST
ಅಕ್ಷರ ಗಾತ್ರ

ಉಡುಪಿ: ಬಿಜೆಪಿ ಕೇಂದ್ರ ಹಾಗೂ ರಾಜ್ಯದಲ್ಲಿ ಅಧಿಕಾರ ಚುಕ್ಕಾಣಿ ಹಿಡಿದ ಬಳಿಕ ನಡೆದ ಅಭಿವೃದ್ಧಿ ಕಾರ್ಯಗಳು ಹಾಗೂ ಸಾಧನೆಗಳನ್ನು ಪ್ರತಿಯೊಬ್ಬ ಮತದಾರನಿಗೂ ತಿಳಿಯಬೇಕು ಎಂದು ಯುವ ಮೋರ್ಚಾ ಪದಾಧಿಕಾರಿಗಳಿಗೆ ರಾಷ್ಟ್ರೀಯ ಯುವ ಮೋರ್ಚಾ ಅಧ್ಯಕ್ಷ ತೇಜಸ್ವಿ ಸೂರ್ಯ ಕರೆ ನೀಡಿದರು.

ಮಣಿಪಾಲದ ಕಂಟ್ರಿ ಇನ್ ಹೋಟೆಲ್ ಸಭಾಂಗಣದಲ್ಲಿ ಮಂಗಳವಾರ ನಡೆದ ಬಿಜೆಪಿ ರಾಜ್ಯ ಯುವ ಮೋರ್ಚಾ ವಿಶೇಷ ಕಾರ್ಯಕಾರಿಣಿ ಉದ್ಘಾಟಿಸಿ ಮಾತನಾಡಿ, ಬಿಜೆಪಿ ಅಭಿವೃದ್ಧಿ ಮುಂದಿಟ್ಟುಕೊಂಡು ಜನರ ಬಳಿ ಹೋಗುತ್ತಿದೆ. ಸರ್ಕಾರದ ಸಾಧನೆಗಳು ಜನರಿಗೆ ತಿಳಿಯದಿದ್ದರೆ ಚುನಾವಣೆಯಲ್ಲಿ ಪಕ್ಷಕ್ಕೆ ನಷ್ಟವಾಗಲಿದೆ ಎಂದು ಕಿವಿಮಾತು ಹೇಳಿದರು.

ಸರ್ಕಾರದ ಸಾಧನೆ:

ದೇಶದಲ್ಲೇ ಅತಿ ಹೆಚ್ಚು ವಿದೇಶಿ ಬಂಡವಾಳವನ್ನು ಕರ್ನಾಟಕ ಆಕರ್ಷಿಸುತ್ತಿದೆ. ಫಾರ್ಚುನ್ 500 ಕಂಪನಿಗಳ ಪೈಕಿ 400 ಕಂಪನಿಗಳ ಕೇಂದ್ರ ಕಚೇರಿ ಹಾಗೂ ಸಂಶೋಧನಾ ಸಂಸ್ಥೆಗಳು, ಮೆಗಾ ಟೆಕ್ಸ್‌ಟೈಲ್‌ ಹಾಗೂ ಎಲೆಕ್ಟ್ರಿಕಲ್‌ ವಾಹನಗಳ ತಯಾರಿ ಪಾರ್ಕ್‌ ರಾಜ್ಯದಲ್ಲಿದೆ.

₹ 5 ಸಾವಿರ ಕೋಟಿ ವೆಚ್ಚದಲ್ಲಿ ನಿರ್ಮಾಣವಾಗಿರುವ ಬೆಂಗಳೂರಿನ ಟರ್ಮಿನಲ್‌ –2 ದೇಶದ ಅತ್ಯಂತ ಸುಂದರ ಹಾಗೂ ಅತ್ಯಾಧುನಿಕ ತಂತ್ರಜ್ಞಾನ ಹೊಂದಿರುವ ಏರ್‌ಪೋರ್ಟ್‌ ಎಂಬ ಹೆಗ್ಗಳಿಕೆ ಪಡೆದಿದೆ. ರಾಮಾಯಣ ಹಾಗೂ ಮಹಾಭಾರತಗಳಲ್ಲಿ ಉಲ್ಲೇಖವಾಗಿರುವ 2 ಸಾವಿರ ಸಸಿ ಹಾಗೂ ಔಷಧೀಯ ಸಸ್ಯಗಳು ಟರ್ಮಿನಲ್–2 ನಲ್ಲಿವೆ.

ರೈತರ ಹಾಗೂ ಜನರ ಬದುಕನ್ನು ಹಸನು ಮಾಡುವ ಬೃಹತ್ ನಿರಾವರಿ ಯೋಜನೆಗಳು ಜಾರಿಯಾಗುತ್ತಿವೆ. ಡಬಲ್ ಎಂಜಿನ್ ಸರ್ಕಾರ ಅಭಿವೃದ್ಧಿಗೆ ಪೂರಕವಾಗಿದೆ ಎಂದು ತೇಜಸ್ವಿ ಸೂರ್ಯ ಹೇಳಿದರು.

ಕೇಂದ್ರ ಸರ್ಕಾರದ ಯೋಜನೆಗಳು ಬಿಜೆಪಿಯೇತರ ರಾಜ್ಯಗಳಲ್ಲಿ ಸಮರ್ಪಕವಾಗಿ ಅನುಷ್ಠಾನವಾಗುತ್ತಿಲ್ಲ. ಗುಜರಾತ್‌ನಿಂದ ಮುಂಬೈಗೆ ಬುಲೆಟ್‌ ರೈಲು ಯೋಜನೆಗೆ ಹಿಂದಿನ ಶಿವಸೇನೆ ಸರ್ಕಾರ ಅಡ್ಡಿಯಾಗಿತ್ತು. ಆ ಸರ್ಕಾರ ಬಿದ್ದ 2 ತಿಂಗಳಲ್ಲೇ ಯೋಜನೆ ವೇಗವಾಗಿ ಅನುಷ್ಠಾನಗೊಳ್ಳುತ್ತಿದೆ.

ಕರ್ನಾಟಕದಲ್ಲೂ 40 ವರ್ಷಗಳಿಂದ ಸಬರ್‌ಬನ್‌ ರೈಲು ಯೋಜನೆ ನನೆಗುದಿಗೆ ಬಿದ್ದಿತ್ತು. ಕೇಂದ್ರದಲ್ಲಿ ಮೋದಿ, ರಾಜ್ಯದಲ್ಲಿ ಯಡಿಯೂರಪ್ಪ ಸರ್ಕಾರ ಅಧಿಕಾರಕ್ಕೆ ಬರುತ್ತಿದ್ದಂತೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿತು. 40 ತಿಂಗಳಲ್ಲಿ ಸಬರ್‌ಬನ್ ಯೋಜನೆ ಪೂರ್ಣಗೊಳ್ಳಲಿದೆ.

ಮುಂದಿನ 25 ವರ್ಷ ಪಂಚಾಯಿತಿಯಿಂದ ಪಾರ್ಲಿಮೆಂಟ್‌ವರೆಗೆ ಬಿಜೆಪಿ ಆಡಳಿತ ಬರಬೇಕು ಎಂಬ ಸಂಕಲ್ಪವನ್ನು ಯುವ ಮೋರ್ಚಾ ಕಾರ್ಯಕರ್ತರು ಮಾಡಿದರೆ ಪ್ರಧಾನಿ ಮೋದಿ ಅವರ 5 ಟ್ರಿಲಿಯನ್ ಡಾಲರ್‌ ಆರ್ಥಿಕತೆಗೆ ಕರ್ನಾಟಕ 1 ಟ್ರಿಲಿಯನ್ ಕೊಡುಗೆ ನೀಡುವುದರಲ್ಲಿ ಸಂಶಯವಿಲ್ಲ ಎಂದರು.

ದೇಶದಲ್ಲಿ ಕಾಂಗ್ರೆಸ್‌ ಸ್ಥಿತಿ ಅಯೋಮಯವಾಗಿದೆ. ಗುಜರಾತ್ ಹಿಮಾಚಲ ಪ್ರದೇಶಗಳ ಚುನಾವಣೆ ನಡೆಯುತ್ತಿದ್ದರೆ ರಾಹುಲ್ ಗಾಂಧಿ ಶಸ್ತ್ರತ್ಯಾಗ ಮಾಡಿ ಶರಣಾಗಿ ಕರ್ನಾಟಕ, ತೆಲಂಗಾಣದಲ್ಲಿ ವಾಕಿಂಗ್ ಮಾಡುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯ ಪ್ರಧಾನ ಕಾರ್ಯದರ್ಶಿ ಮಹೇಶ್‌ ಟೆಂಗಿನಕಾಯಿ ಮಾತನಾಡಿ, 2023ರ ಚುನಾವಣೆಯಲ್ಲಿ 150 ಕ್ಷೇತ್ರಗಳನ್ನು ಗೆಲ್ಲುವಲ್ಲಿ ಉಡುಪಿ ಜಿಲ್ಲೆಯ ಪಾತ್ರ ಮಹತ್ವದ್ದು ಎಂದರು.

ಶಾಸಕ ರಘುಪತಿ ಭಟ್‌ ಮಾತನಾಡಿ, ಉಡುಪಿ ಜಿಲ್ಲೆ ಹಲವು ವಿಚಾರಗಳಲ್ಲಿ ಪ್ರೇರಣಾದಾಯಿಯಾಗಿದೆ. 1968ರಲ್ಲಿ ದೆಹಲಿ ಹಾಗೂ ಉಡುಪಿಯಲ್ಲಿ ಜನಸಂಘ ಮೊದಲ ಬಾರಿಗೆ ಸ್ಥಳೀಯ ಆಡಳಿತದಲ್ಲಿ ಅಧಿಕಾರಕ್ಕೆ ಬಂದಿತ್ತು. ಮಲ ಹೊರುವ ಪದ್ಧತಿಯನ್ನು ಮೊದಲು ನಿಷೇಧವಾಗಿದ್ದು ಉಡುಪಿಯಲ್ಲಿ. ಈಗ ಉಡುಪಿಯಲ್ಲಿ ನಡೆಯುತ್ತಿರುವ ರಾಜ್ಯ ಯುವ ಮೋರ್ಚಾ ಕಾರ್ಯಕಾರಿಣಿ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನಗಳನ್ನು ಗೆಲ್ಲಲು ಸಹಕಾರಿಯಗಲಿದೆ ಎಂದರು.

ಎಎಪಿ ಧೂಳಿಪಟ: ತೇಜಸ್ವಿ ಸೂರ್ಯ

ಗುಜರಾತ್, ಹಿಮಾಚಲ ಪ್ರದೇಶದಲ್ಲಿ ಬಿಜೆಪಿಗೆ ಗೆಲುವು ಶತಃಸಿದ್ಧ. ಗುಜರಾತ್‌ನ 182 ಕ್ಷೇತ್ರಗಳ ಪೈಕಿ ಬಿಜೆಪಿ 130 ರಿಂದ 140 ಕ್ಷೇತ್ರಗಳಲ್ಲಿ ಗೆದ್ದರೆ ಅಚ್ಚರಿ ಪಡಬೇಕಿಲ್ಲ. ಹಿಮಾಚಲ ಪ್ರದೇಶದಲ್ಲೂ ಪೂರ್ಣ ಬಹುಮತದೊಂದಿಗೆ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬರಲಿದೆ. ಗುಜರಾತ್‌ನಲ್ಲಿ ಅಧಿಕಾರದ ಕನಸು ಕಾಣುತ್ತಿರುವ ಆಮ್ ಆದ್ಮಿ ಪಕ್ಷ ಎಲ್ಲ ಕ್ಷೇತ್ರಗಳಲ್ಲೂ ಠೇವಣಿ ಕಳೆದುಕೊಳ್ಳಲಿದೆ. ಆಮ್ ಆದ್ಮಿ ಪಾರ್ಟಿ ಜಮಾನತ್‌ ಜಪ್ತ್ ಪಕ್ಷವಾಗಲಿದೆ ಎಂದು ತೇಜಸ್ವಿ ಸೂರ್ಯ ಲೇವಡಿ ಮಾಡಿದರು.

ಮಲ್ಲಿಕಾರ್ಜನ ಬಾಳಿಕಾಯಿ, ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಶಾಸಕ ಕೆ.ರಘುಪತಿ ಭಟ್‌, ಜಿಲ್ಲಾ ಘಟಕದ ಅಧ್ಯಕ್ಷ ಕುಯಿಲಾಡಿ ಸುರೇಶ್ ನಾಯಕ್‌, ಯುವ ಮೋರ್ಚಾ ಜಿಲ್ಲಾಧ್ಯಕ್ಷ ವಿಖ್ಯಾತ್ ಶೆಟ್ಟಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT