ಬುಧವಾರ, ಮೇ 18, 2022
28 °C

ಸಂಸ್ಕೃತದ ಮಮತೆ ತುಳು–ಕೊಡವ ಭಾಷೆಗಳಿಗೂ ಕೊಡಿ: ಬಿ.ಕೆ.ಹರಿಪ್ರಸಾದ್‌

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ‘ಬಿಜೆಪಿ ಸರ್ಕಾರ ಕೇವಲ 24,821 ಮಂದಿ ಸಂಸ್ಕೃತ ಭಾಷಿಗರ ಮೇಲೆ ತೋರಿಸುತ್ತಿರುವ ಅಗಾಧ ಮಮತೆಯನ್ನು ರಾಜ್ಯದಲ್ಲಿ ಮೂಲೆಗುಂ‍ಪಾಗಿರುವ ತುಳು ಮತ್ತು ಕೊಡವ ಭಾಷೆಗಳ ಮೇಲೆ ತೋರಿಸಲಿ’ ಎಂದು ವಿಧಾನ ಪರಿಷತ್‌ ಸದಸ್ಯ ಬಿ.ಕೆ.ಹರಿಪ್ರಸಾದ್‌ ಆಗ್ರಹಿಸಿದ್ದಾರೆ.

‘2011ರ ಜನಗಣತಿ ಪ್ರಕಾರ ರಾಜ್ಯದಲ್ಲಿ ಒಟ್ಟು 18,46,427 ಮಂದಿ ತುಳು ಭಾಷೆ ಮಾತನಾಡುವವರು ಹಾಗೂ 1,13,857 ಮಂದಿ ಕೊಡವ ಭಾಷೆ ಮಾತನಾಡುವ ಜನರಿದ್ದಾರೆ. ಆದರೆ, ಇದಕ್ಕಿಂತಲೂ ಕಡಿಮೆ ಸಂಖ್ಯೆಯಲ್ಲಿರುವ ಸಂಸ್ಕೃತ ಭಾಷಿಗರ ಮೇಲೆ ಬಿಜೆಪಿ ಸರ್ಕಾರ ಅಗಾಧ ಪ್ರೀತಿ ತೋರಿಸುತ್ತಾ ಬಂದಿದೆ. ರಾಜ್ಯದಲ್ಲಿ ಸಂಸ್ಕೃತ ವಿಶ್ವವಿದ್ಯಾಲಯವಿದೆ, ಅದಕ್ಕೆ ಬೇಕಾದ ಎಲ್ಲ ಸೌಕರ್ಯಗಳನ್ನೂ ನೀಡಲಾಗಿದೆ. ಆದರೆ, ತುಳು ಮತ್ತು ಕೊಡವ ಭಾಷೆಗಳ ಅಭಿವೃದ್ದಿಯನ್ನು ನಿರ್ಲಕ್ಷ್ಯಿಸಲಾಗಿದೆ’ ಎಂದು ದೂರಿದ್ದಾರೆ.

‘ಭಾಷಾವಾರು ಪ್ರಾಂತ್ಯ ರಚನೆಯಾದಾಗ ಪ್ರಭಾವಿ ಪ್ರಾದೇಶಿಕ ಭಾಷೆಗಳಿಗೆ ಮಹತ್ವ ಬಂದವು. ಆದರೆ, ಅವುಗಳ ಆಶ್ರಯದಲ್ಲಿರುವ ಸಣ್ಣ ಭಾಷೆಗಳು ತೀವ್ರ ಉಪೇಕ್ಷೆಗೆ ಒಳಗಾಗಿವೆ. ದೇಶದಲ್ಲಿ ಹಲವಾರು ರಾಜ್ಯಗಳು ಒಂದಕ್ಕೂ ಹೆಚ್ಚು ಭಾಷೆಗಳನ್ನು ಅಧಿಕೃತವಾಗಿ ಘೋಷಿಸಿಕೊಂಡಿವೆ. ರಾಜ್ಯದಲ್ಲಿ ಕನ್ನಡ ಹೊರತುಪಡಿಸಿ ಬೇರೆ ಭಾಷೆಗಳಿಗೆ ಅಧಿಕೃತ ಸ್ಥಾನ ನೀಡಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

‘ಲಕ್ಷಾಂತರ ಮಂದಿ ಪ್ರತಿನಿತ್ಯ ಮಾತನಾಡುವ ಕೊಡವ, ತುಳು ಭಾಷೆಗಳನ್ನು ರಾಜ್ಯದ ಅಧಿಕೃತ ಭಾಷೆಗಳೆಂದು ಮಾನ್ಯ ಮಾಡಬೇಕು. ಸಂಸ್ಕೃತಕ್ಕೆ ನೀಡುತ್ತಿರುವಷ್ಟೇ ಮಹತ್ವವನ್ನು ಕನ್ನಡ, ತುಳು ಹಾಗೂ ಕೊಡವ ಭಾಷೆಗಳಿಗೂ ನೀಡಬೇಕು. ಆ ಮೂಲಕ ಒಂದು ಕಣ್ಣಿಗೆ ಸುಣ್ಣ, ಒಂದು ಕಣ್ಣಿಗೆ ಬೆಣ್ಣೆ ಎನ್ನುವ ನೀತಿಯನ್ನು ಬಿಡಬೇಕು. ನಮ್ಮ ಭಾಷೆಗಳ ಅಭಿವೃದ್ದಿಗೆ ಪ್ರೋತ್ಸಾಹ ನೀಡಬೇಕು’ ಎಂದೂ ಒತ್ತಾಯಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು