ಶುಕ್ರವಾರ, 19 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಪ್ಪು ಶಿಲೀಂಧ್ರ ಸೋಂಕು ಚಿಕಿತ್ಸೆಗೆ ಹತ್ತು ತೊಡಕು: ರೋಗಿಗಳ ಅಲೆದಾಟ

ಸಂಬಂಧಿಕರ ಪರದಾಟ
Last Updated 22 ಮೇ 2021, 19:45 IST
ಅಕ್ಷರ ಗಾತ್ರ

ಬೆಂಗಳೂರು: ರಾಜ್ಯದಲ್ಲಿ ಕಪ್ಪು ಶಿಲೀಂಧ್ರ(ಮ್ಯೂಕರ್‌ಮೈಕೊಸಿಸ್) ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು, ಚಿಕಿತ್ಸೆಗಾಗಿ ರೋಗಿಗಳು ಆಸ್ಪತ್ರೆಯಿಂದ ಆಸ್ಪತ್ರೆಗೆ ಅಲೆದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಇನ್ನೊಂದೆಡೆ ಅಗತ್ಯದಷ್ಟು ಔಷಧ ಪೂರೈಕೆ ಆಗದಿರುವುದರಿಂದ ಖಾಸಗಿ ಆಸ್ಪತ್ರೆಗಳು ರೋಗಿಗಳನ್ನು ದಾಖಲಿಸಿಕೊಳ್ಳಲು ಹಿಂದೇಟು ಹಾಕುತ್ತಿವೆ.

ಕೋವಿಡ್‌ ಎರಡನೇ ಅಲೆಯಲ್ಲಿ ರೋಗಿಗಳ ಏರಿಕೆ ಕಂಡ ಬಳಿಕ ಆಸ್ಪತ್ರೆಗಳಲ್ಲಿ ಐಸಿಯು ಹಾಗೂ ಆಮ್ಲಜನಕ ಸೌಲಭ್ಯ ಇರುವ ಹಾಸಿಗೆಗಳ ಕೊರತೆ ಎದುರಾಗಿ, ರೋಗಿಗಳು ಪರದಾಟ ಮುಂದುವರಿದಿದೆ. ಹಾಸಿಗೆ ಸಿಗದೇ ಕೆಲವರು ಮಾರ್ಗಮಧ್ಯದಲ್ಲಿಯೇ ಕೊನೆಯುಸಿರೆಳೆದಿದ್ದಾರೆ. ಈ ಅನಾಹುತಗಳಿಂದ ಪಾರಾಗಿ ಕೋವಿಡ್‌ ಗೆದ್ದು ಬಂದ ಕೆಲವರ ಮೇಲೆ ಕಪ್ಪು ಶಿಲೀಂಧ್ರ ಸೋಂಕು ಆಕ್ರಮಣ ಮಾಡುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

ರೋಗನಿರೋಧಕ ಶಕ್ತಿ ಕಡಿಮೆ ಇರುವವರಲ್ಲಿ ಕಾಣಿಸಿಕೊಳ್ಳುವ ಈ ಸೋಂಕು, ಮೂಗಿನಲ್ಲಿ ಉತ್ಪತ್ತಿಯಾಗಿ ಕಣ್ಣು ಹಾಗೂ ಮಿದುಳಿಗೆ ಹರಡುತ್ತಿದೆ. ಚಿಕಿತ್ಸೆ ವಿಳಂಬವಾದಲ್ಲಿ ಸೋಂಕು ಮಿದುಳನ್ನು ವ್ಯಾಪಿಸಿಕೊಂಡು, ವ್ಯಕ್ತಿಯ ಜೀವವನ್ನು ಕಸಿದುಕೊಳ್ಳುತ್ತದೆ.

ರಾಜ್ಯದ ವಿವಿಧ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ 200ಕ್ಕೂ ಅಧಿಕ ಮಂದಿ ಈ ಸೋಂಕಿಗೆ ಒಳಗಾಗಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾರೆ. 20ಕ್ಕೂ ಅಧಿಕ ಮಂದಿ ಮೃತಪಟ್ಟಿದ್ದು, ಹಲವರು ದೃಷ್ಟಿ ಕಳೆದುಕೊಂಡಿದ್ದಾರೆ. ರಾಜ್ಯದಲ್ಲಿ 400ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ. ಈ ಪ್ರಕರಣಗಳು ವರದಿಯಾದ ಬಳಿಕ ಸರ್ಕಾರಕ್ಕೆ ಮಾಹಿತಿ ಒದಗಿಸಬೇಕೆಂದು ಸೂಚಿಸಲಾಗಿದ್ದರೂ ಖಾಸಗಿ ಆಸ್ಪತ್ರೆಗಳು ವಿವರ ಸಲ್ಲಿಸುತ್ತಿಲ್ಲ. ಇದರಿಂದಾಗಿ ಕ್ರೋಡಿಕೃತ ಮಾಹಿತಿ ಸಂಗ್ರಹ ಪ್ರಕ್ರಿಯೆ ನಡೆಯುತ್ತಿಲ್ಲ. ಈವರೆಗೆ ಸರ್ಕಾರಿ ಆಸ್ಪತ್ರೆಗಳಲ್ಲಿಯೇ 250ಕ್ಕೂ ಅಧಿಕ ಪ್ರಕರಣಗಳು ವರದಿಯಾಗಿವೆ.

ಹಾಸಿಗೆ ಸಮಸ್ಯೆ: ಕೋವಿಡ್‌ನಿಂದ ಚೇತರಿಸಿಕೊಂಡು ಶಿಲೀಂಧ್ರ ಸೋಂಕಿಗೆ ಒಳಗಾದವರಿಗೆ ಚಿಕಿತ್ಸೆ ಒದಗಿಸಲು ಸರ್ಕಾರಿ ವ್ಯವಸ್ಥೆಯಡಿ ಬೌರಿಂಗ್ ಆಸ್ಪತ್ರೆ, ಮೈಸೂರು ವೈದ್ಯಕೀಯ ಕಾಲೇಜು, ಶಿವಮೊಗ್ಗ ವೈದ್ಯಕೀಯ ಕಾಲೇಜು, ಕಲಬುರ್ಗಿಯ ಜಿಮ್ಸ್, ಹುಬ್ಬಳ್ಳಿಯ ಕಿಮ್ಸ್, ಮಂಗಳೂರಿನ ವೆನ್ಲಾಕ್‌, ಉಡುಪಿಯ ಕೆಎಂಸಿ ಆಸ್ಪತ್ರೆಯನ್ನು ಗುರುತಿಸಲಾಗಿದೆ. ಜಿಲ್ಲಾ ಆಸ್ಪತ್ರೆಗಳಲ್ಲಿ ಕೂಡ ದಾಖಲಿಸಿಕೊಳ್ಳಲಾಗುತ್ತಿದೆ. ಆದರೆ, ಸೋಂಕಿಗೆ ಒಳಗಾಗುವವರ ಸಂಖ್ಯೆ ಹೆಚ್ಚಳವಾದ ಪರಿಣಾಮ ಹಾಸಿಗೆಗಳ ಸಮಸ್ಯೆ ಗಂಭೀರ ಸ್ವರೂಪ ಪಡೆದುಕೊಂಡಿದೆ.

ಸರ್ಕಾರಿ ಆಸ್ಪತ್ರೆಗಳಲ್ಲೂ ಔಷಧ ಅಭಾವ

‘ಲಿಪೋಸೋಮಲ್ ಆಂಫೊಟೆರಿಸಿನ್ ಬಿ’ ಔಷಧವು ವ್ಯಕ್ತಿಯೊಬ್ಬನಿಗೆ ಒಂದು ದಿನಕ್ಕೆ ನಾಲ್ಕು ಸೀಸೆಗಳು ಬೇಕಾಗುತ್ತವೆ. ಇದನ್ನು ಕನಿಷ್ಠ 15 ದಿನ ನೀಡಬೇಕಾಗುತ್ತದೆ. ಒಂದು ಸೀಸೆಗೆ ₹ 5 ಸಾವಿರದಿಂದ ₹ 7 ಸಾವಿರ ದರ ಇದೆ. ಹೀಗಾಗಿ, ‘ರೆಮ್‌ಡಿಸಿವಿರ್’ ಔಷಧದಂತೆಯೇ ಇದನ್ನೂ ಕೂಡ ಸರ್ಕಾರವು ರೋಗಿಗಳ ಅಗತ್ಯಕ್ಕೆ ಅನುಸಾರ ಹಂಚಿಕೆ ಮಾಡಬೇಕು ಎಂದು ಖಾಸಗಿ ಆಸ್ಪತ್ರೆಗಳು ಆಗ್ರಹಿಸುತ್ತಿವೆ. ಆದರೆ, ಈಗ ಸರ್ಕಾರಿ ಆಸ್ಪತ್ರೆಗಳಲ್ಲಿಯೇ ಅಭಾವ ಸೃಷ್ಟಿಯಾಗಿದೆ. ಇದೇ ಕಾರಣಕ್ಕೆ ಕೆಲ ಖಾಸಗಿ ಆಸ್ಪತ್ರೆಗಳು ಹೊಸ ದಾಖಲಾತಿಯನ್ನು ನಿರಾಕರಿಸಲಾರಂಭಿಸಿವೆ.

‘ರೋಗಿಗಳ ಸಂಖ್ಯೆ ಹೆಚ್ಚಳವಾದ ಪರಿಣಾಮ ಔಷಧದ ಕೊರತೆ ಎದುರಾಗಿದೆ. ಸದ್ಯ ಇರುವುದರಲ್ಲಿಯೇ ನಿರ್ವಹಿಸಲಾಗುತ್ತಿದೆ. ಔಷಧ ಪೂರೈಕೆಯಲ್ಲಿ ವ್ಯತ್ಯಾಸವಾದಲ್ಲಿ ರೋಗಿಗಳಿಗೆ ಸಮಸ್ಯೆಯಾಗಲಿದೆ’ ಎಂದು ಹೆಸರು ಬಹಿರಂಗಪಡಿಸಲು ಇಚ್ಛಿಸದ ಬೌರಿಂಗ್ ಆಸ್ಪತ್ರೆಯ ವೈದ್ಯರೊಬ್ಬರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT