ಭಾನುವಾರ, ಮಾರ್ಚ್ 26, 2023
23 °C
ರಾಜ್ಯದಲ್ಲಿ ಸೋಂಕಿಗೆ ಸಾವಿಗೀಡಾದವರ ಸಂಖ್ಯೆ 303ಕ್ಕೆ ಏರಿಕೆ

ಕಪ್ಪು ಶಿಲೀಂಧ್ರ: ಮಕ್ಕಳಲ್ಲಿ ಮೊದಲ ಮರಣ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಬೆಂಗಳೂರು: ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರಲ್ಲಿ ಚಿತ್ರದುರ್ಗದ 11 ವರ್ಷದ ಬಾಲಕ ಮೃತಪಟ್ಟಿದ್ದಾನೆ. ಮಕ್ಕಳಲ್ಲಿ ವರದಿಯಾದ ರಾಜ್ಯದ ಮೊದಲ ಮರಣ ಪ್ರಕರಣ ಇದಾಗಿದೆ.

ಕಪ್ಪು ಶಿಲೀಂಧ್ರ ಸೋಂಕು ಕಾಣಿಸಿಕೊಂಡಿದ್ದ ಕಾರಣ ಬಾಲಕ ಕಳೆದ ಮೇ 30ರಂದು ಇಲ್ಲಿನ ಬೌರಿಂಗ್ ಆಸ್ಪತ್ರೆಗೆ ದಾಖಲಾಗಿದ್ದ. ಕೋವಿಡ್ ಪರೀಕ್ಷೆ ನಡೆಸಿದಾಗ ಕೊರೊನಾ ಸೋಂಕು ತಗಲಿರುವುದು ಕೂಡ ದೃಢಪಟ್ಟಿತ್ತು. ಮಧುಮೇಹ ಮತ್ತು ಬಹು ಅಂಗಾಂಗ ಉರಿಯೂತ ಸಮಸ್ಯೆಯನ್ನೂ (ಮೆಸ್ಸಿ) ಬಾಲಕ ಎದುರಿಸುತ್ತಿದ್ದ. ಒಂದು ತಿಂಗಳಿಗೂ ಅಧಿಕ ಅವಧಿ ಆಸ್ಪತ್ರೆಯಲ್ಲಿದ್ದ ಬಾಲಕ, ಚಿಕಿತ್ಸೆಗೆ ಸ್ಪಂದಿಸದೆಯೇ ಜು. 6ರಂದು ಮೃತಪಟ್ಟಿದ್ದಾನೆ.

‘ಶಿಲೀಂಧ್ರ ಸೋಂಕು ಬಾಲಕನ ಮಿದುಳಿಗೆ ಹರಡಬಾರದು ಎಂಬ ಕಾರಣಕ್ಕೆ ನಿಮ್ಹಾನ್ಸ್‌ಗೆ ಕಳುಹಿಸಿ, ಅಲ್ಲಿ ಕೂಡ ಚಿಕಿತ್ಸೆ ಕೊಡಿಸಲಾಗಿತ್ತು. ಅದಾಗಿಯೂ ಯಾವುದೇ ಪ್ರಯೋಜನ ಆಗಲಿಲ್ಲ. ಕೋವಿಡ್ ಹಾಗೂ ಕೋವಿಡೇತರ ಅನಾರೋಗ್ಯ ಸಮಸ್ಯೆಗಳು ಕೂಡ ಇರುವ ಕಾರಣ ಬಾಲಕನನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. 18 ವರ್ಷದೊಳಗಿನವರಲ್ಲಿ ವರದಿಯಾದ ಮೊದಲ ಮರಣ ಪ್ರಕರಣ ಇದಾಗಿದೆ’ ಎಂದು ಆಸ್ಪತ್ರೆಯ ವೈದ್ಯರು ತಿಳಿಸಿದ್ದಾರೆ.

303 ಮಂದಿ ಮರಣ: ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಮೃತಪಟ್ಟವರ ಸಂಖ್ಯೆ 303ಕ್ಕೆ ಏರಿಕೆ ಕಂಡಿದೆ. ರಾಜ್ಯದ 25 ಜಿಲ್ಲೆಗಳಲ್ಲಿ ಮರಣ ಪ್ರಕರಣಗಳು ವರದಿಯಾಗಿವೆ. ಬೆಂಗಳೂರಿನಲ್ಲಿ 104, ಕಲಬುರ್ಗಿಯಲ್ಲಿ 23, ಬಳ್ಳಾರಿಯಲ್ಲಿ 21, ದಕ್ಷಿಣ ಕನ್ನಡದಲ್ಲಿ 20, ದಾವಣಗೆರೆಯಲ್ಲಿ 19, ಮೈಸೂರಿನಲ್ಲಿ 17, ಧಾರವಾಡದಲ್ಲಿ 16, ಶಿವಮೊಗ್ಗದಲ್ಲಿ 14 ಹಾಗೂ ಬಾಗಲಕೋಟೆಯಲ್ಲಿ 11 ಮಂದಿ ಸಾವಿಗೀಡಾಗಿದ್ದಾರೆ. 16 ಜಿಲ್ಲೆಗಳಲ್ಲಿ ಈ ಸಂಖ್ಯೆ 10ಕ್ಕಿಂತ ಕಡಿಮೆಯಿದೆ.

3,491 ಮಂದಿಗೆ ಸೋಂಕು
ರಾಜ್ಯದಲ್ಲಿ ಕಪ್ಪು ಶಿಲೀಂಧ್ರ ಸೋಂಕಿಗೆ ಒಳಗಾದವರ ಸಂಖ್ಯೆ 3,491ಕ್ಕೆ ಏರಿಕೆಯಾಗಿದೆ. ಕೋವಿಡ್ ಪ್ರಕರಣಗಳ ಸಂಖ್ಯೆ ಇಳಿಕೆ ಹಾಗೂ ಅನಿಯಂತ್ರಿತ ಸ್ಟೆರಾಯ್ಡ್ ಬಳಕೆಗೆ ಕಡಿವಾಣದಿಂದಾಗಿ ಶಿಲೀಂಧ್ರ ಸೊಂಕು ಹೊಸ ಪ್ರಕರಣಗಳ ಸಂಖ್ಯೆ ಕೂಡ ಕೆಲ ದಿನಗಳಿಂದ ಇಳಿಕೆ ಕಂಡಿದೆ. ಬೆಂಗಳೂರಿನಲ್ಲಿ ಈವರೆಗೆ 1,109 ಮಂದಿ ಸೋಂಕಿತರಾಗಿದ್ದಾರೆ.

ಧಾರವಾಡದಲ್ಲಿ 279, ವಿಜಯಪುರದಲ್ಲಿ 208, ಕಲಬುರ್ಗಿಯಲ್ಲಿ 196, ಬೆಳಗಾವಿಯಲ್ಲಿ 159, ಚಿತ್ರದುರ್ಗದಲ್ಲಿ 143, ಬಳ್ಳಾರಿಯಲ್ಲಿ 138, ಮೈಸೂರಿನಲ್ಲಿ 128, ಬಾಗಲಕೋಟೆಯಲ್ಲಿ 126, ರಾಯಚೂರಿನಲ್ಲಿ 125, ದಾವಣಗೆರೆಯಲ್ಲಿ 117, ಕೋಲಾರದಲ್ಲಿ 107 ಪ್ರಕರಣಗಳು ದೃಢಪಟ್ಟಿವೆ. ಉಳಿದ ಜಿಲ್ಲೆಗಳಲ್ಲಿ ಈ ಪ್ರಕರಣಗಳ ಸಂಖ್ಯೆ ನೂರಕ್ಕಿಂತ ಕಡಿಮೆಯಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು